ಗೃಹ ಸಚಿವ ಡಾ.ಜಿ. ಪರಮೇಶ್ವರ್ ತುಮಕೂರಿನಲ್ಲಿ ಹಲವು ಮಹತ್ವದ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಗುಬ್ಬಿ ಬಳಿ ಎಚ್‌ಎಎಲ್‌ಗೆ 300 ಎಕರೆ ಜಾಗ, ಬೆಂಗಳೂರು-ತುಮಕೂರು ಮೆಟ್ರೋಗೆ ಡಿಪಿಆರ್ ಸಿದ್ಧವಾಗಿರುವುದಾಗಿ ತಿಳಿಸಿದ್ದಾರೆ. ಜೊತೆಗೆ, ತಮಗೆ ಮುಖ್ಯಮಂತ್ರಿ ಹುದ್ದೆ ನಿಭಾಯಿಸುವ ಸಾಮರ್ಥ್ಯವಿದೆ ಎಂದು ಪುನರುಚ್ಚರಿಸಿದ್ದಾರೆ.
ತುಮಕೂರು: ಎಚ್‌ಎಎಲ್‌ನವರು ಲೈಟ್ ಕಂಪ್ಯಾಕ್ಟ್ ಹೆಲಿಕಾಪ್ಟರ್ ತಯಾರು ಮಾಡುವುದಕ್ಕೆ ಜಾಗ ಕೇಳಿದ್ದಾರೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಗುಬ್ಬಿ ಬಳಿಯಿರುವ ಎಚ್‌ಎಎಲ್ ಪಕ್ಕದಲ್ಲಿ 300 ಎಕರೆ ಜಾಗ ಗುರುತಿಸಿ ಕೊಡುತ್ತೀವೆಂದು ಸರ್ಕಾರ ಹೇಳಿದೆ. ಅದಕ್ಕೆ ಅವರು ಮುಂದೆ ಆ ಜಾಗ ಇಟ್ಟುಕೊಂಡು ಪ್ರಕ್ರಿಯೆ ಮಾಡಿಕೊಳ್ಳಬಹುದು ಎಂದರು. 6 ಸಾವಿರದಿಂದ 8 ಸಾವಿರದ ರವರೆಗೆ ಉದ್ಯೋಗ ಕೊಡುವುದಾಗಿ ಅವರು ಹೇಳಿದ್ದಾರೆ.

ಬೆಂಗಳೂರು-ತುಮಕೂರು ಮೆಟ್ರೋಗೆ ಡಿಪಿಆರ್ ಸಿದ್ದ
ಬೆಂಗಳೂರು-ತುಮಕೂರು ಮೆಟ್ರೋ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಸರ್ಕಾರಕ್ಕೆ ಡಿಪಿಆರ್ ಸಲ್ಲಿಕೆಯಾಗಿದೆ. ಅದನ್ನು ಕ್ಯಾಬಿನೆಟ್ ಮುಂದೆ ಇಟ್ಟುಕೊಂಡು ಚರ್ಚೆ ಮಾಡಿ ಟೆಂಡರ್ ಕರಿತಾರೆ ಎಂದರು. ಬೆಂಗಳೂರಿನ ಆನೇಕಲ್ ಬಳಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಸರ್ಕಾರದ ವತಿಯಿಂದ ಮಾಡಲಾಗುತ್ತಿದೆ. ತುಮಕೂರಿನಲ್ಲಿ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ಅವರು ಮಾಡುತ್ತಿರುವುದು. ಆನೇಕಲ್ ಹೊಸೂರು ಭಾಗದಲ್ಲಿ ತುಂಬಾ ದೊಡ್ಡದಾಗಿ ಮಾಡಬೇಕು ಅಂತ ಇದೆ ಎಂದರು.
ನನಗೆ ಸಿಎಂ ಹುದ್ದೆ ನಿಭಾಯಿಸುವ ಸಾಮರ್ಥ್ಯ ಇದೆ: ಪರಮೇಶ್ವರ್
ಮುಖ್ಯಮಂತ್ರಿ ಹುದ್ದೆ ಜವಾಬ್ದಾರಿ ನೀಡಿದರೆ, ಅದನ್ನು ನಿಭಾಯಿಸುವ ಸಾಮರ್ಥ್ಯ ನನಗಿದೆ. ಪಕ್ಷ ನೀಡುವ ಯಾವುದೇ ಜವಾಬ್ದಾರಿ ಹೊರಲು ಸಿದ್ಧನಿದ್ದೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪುನರುಚ್ಚರಿಸಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಂಪುಟ ಪುನಾರಚನೆಗೆ ಶಾಸಕರು ಒತ್ತಾಯ ಮಾಡುತ್ತಿರುವುದರಲ್ಲಿ ಯಾವುದೇ ತಪ್ಪಿಲ್ಲ. ಸಚಿವರಾಗಲು ನಮ್ಮ ಶಾಸಕರಿಗೂ ಸಾಮರ್ಥ್ಯ ಇದೆ. ಅವರು ಕೇಳುವುದು ಸಹಜ. ಆದರೆ, ಸಂವಿಧಾನದ ಪ್ರಕಾರ ಒಟ್ಟು ಶಾಸಕರ ಸಂಖ್ಯೆಯ ಶೇ.15ರಷ್ಟು ಮಂದಿಯನ್ನು ಮಾತ್ರ ಸಚಿವರನ್ನಾಗಿ ಮಾಡಲು ಅವಕಾಶವಿದೆ. ಹೀಗಾಗಿ ಸಂಖ್ಯೆಗಳು ಸೀಮಿತವಾಗಿರುತ್ತವೆ ಎಂದರು. ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು, ಯಾರನ್ನು ಕೈಬಿಡಬೇಕು ಎಂಬುದು ಹೈಕಮಾಂಡ್ ಮತ್ತು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಎಂದರು.
ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗಳು ಒಂದು ನಿರಂತರ ಪ್ರಕ್ರಿಯೆ. ಅದಕ್ಕೆ ಅಭ್ಯರ್ಥಿಗಳ ಆಯ್ಕೆಯನ್ನು ಅಧ್ಯಕ್ಷರು ಮತ್ತು ಮುಖ್ಯಮಂತ್ರಿಯವರು ಮಾಡಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


