ಮಡಿಕೇರಿ(ಮೇ.03): ಕಳೆದ ಒಂದೂವರೆ ತಿಂಗಳಿಂದ ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೆ ಮನೆಯಲ್ಲೇ ಕೂತಿದ್ದ ಕೊಡಗು ಜಿಲ್ಲೆಯ ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆ ನೆರವಾಗಿದೆ. ಉದ್ಯೋಗ ಖಾತ್ರಿ ಯೋಜನೆ ಮೂಲಕ ಜಿಲ್ಲೆಯ ಗ್ರಾ.ಪಂ.ಗಳಲ್ಲಿ ಹಲವು ಅಭಿವೃದ್ಧಿ ಕೆಲಸವಾಗುತ್ತಿದ್ದು, ಜಿಲ್ಲೆಯಲ್ಲಿ ಮೂರು ಸಾವಿರಕ್ಕೂ ಅಧಿಕ ಮಂದಿ ಕಾರ್ಮಿಕರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ.

ಕೊರೋನಾ ಸೋಂಕು ಹಿನ್ನೆಲೆ ಲಾಕ್‌ಡೌನ್‌ ಮಾಡಲಾಗಿದ್ದು, ಎಲ್ಲಿಗೂ ಹೋಗದಂತಹ ಪರಿಸ್ಥಿತಿಯಿದೆ. ಇದರಿಂದ ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಸಲಾಗುತ್ತಿದ್ದು, ಉದ್ಯೋಗ ಖಾತ್ರಿ ಯೋಜನೆ ಮೂಲಕ ತಮ್ಮ ವ್ಯಾಪ್ತಿಯ ಪಂಚಾಯಿತಿಯಲ್ಲೇ ಕಾರ್ಮಿಕರು ಉದ್ಯೋಗ ಪಡೆದುಕೊಳ್ಳುತ್ತಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಯನ್ನು 275 ರು.ಗೆ ಹೆಚ್ಚಳ ಮಾಡಲಾಗಿದೆ. ಈ ಹಿಂದೆ 249 ರು. ಕೂಲಿ ನೀಡಲಾಗುತ್ತಿತ್ತು.

ಮೂರು ದಶಕಗಳಷ್ಟು ಹಳೆಯ ಧಾರಾವಾಹಿ ಅಗ್ರಸ್ಥಾನ ಅಲಂಕರಿಸಿದ್ದು ಹೇಗೆ?

ಜಿಲ್ಲೆಯಲ್ಲಿ ಜೂನ್‌ ತಿಂಗಳಿನಿಂದ ಮುಂಗಾರು ಪ್ರವೇಶಿಸುವುದರಿಂದ ಉದ್ಯೋಗ ಖಾತ್ರಿ ಮೂಲಕ ಜಿಲ್ಲೆಯ ಹಲವು ಪಂಚಾಯಿತಿಗಳಲ್ಲಿ ಮಳೆಗಾಲದ ಮುಂಚಿತ ಕೆಲಸಗಳನ್ನು ಕೈಗೊಳ್ಳಲಾಗಿದೆ. ಕೊಡಗಿನಲ್ಲಿ ಕಳೆದೆರಡು ವರ್ಷ ಪ್ರಕೃತಿ ವಿಕೋಪ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಉದ್ಯೋಗ ಖಾತರಿಯಲ್ಲಿ ಹೂಳೆತ್ತುವ ಕೆಲಸಗಳು ಕೂಡ ನಡೆಯುತ್ತಿವೆ. ಇದಲ್ಲದೆ ಜಲ ಸಂರಕ್ಷಣೆ ಕಾಮಗಾರಿ, ವೈಯಕ್ತಿಕ ಜಮೀನು ಅಭಿವೃದ್ಧಿ ಕಾಮಗಾರಿ, ಸ್ವ-ಸಹಾಯ ಸಂಘಗಳಿಗೆ ಸಂಬಂಧಿಸಿದ ಕಾಮಗಾರಿ, ಗ್ರಾ.ಪಂ., ಅಂಗನವಾಡಿ ಕಟ್ಟಡ, ರಸ್ತೆ, ಚರಂಡಿ ಮೊದಲಾದ ಮೂಲ ಸೌಲಭ್ಯಗಳ ಕಾಮಗಾರಿಗಳು ಜಿಲ್ಲೆಯಲ್ಲಿ ನಡೆಯುತ್ತಿದೆ.

ಕೊಡಗಿನಲ್ಲಿ ಮಾ.19ರಂದು ಒಂದು ಕೊರೋನಾ ಪಾಸಿಟಿವ್‌ ಪ್ರಕರಣ ಕಂಡುಬಂದಿದ್ದ ಹಿನ್ನೆಲೆಯಲ್ಲಿ ಉದ್ಯೋಗ ಖಾತ್ರಿ ಕೆಲಸ ನಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಏ.15ರ ನಂತರ ಕೆಲಸಗಳು ಆರಂಭವಾಗಿದೆ. ಗ್ರಾ.ಪಂ.ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

38 ಕೆಜಿಯ ಮೀನು ತಿಂದವರಿಗೆ ಇಲಾಖೆಯಿಂದ ನೋಟಿಸ್..!

ಜಿಲ್ಲೆಯಲ್ಲಿ ಏಪ್ರಿಲ್‌ 15ರಿಂದ ಮೇ 2ರ ವರೆಗೆ 14,751 ಮಾನವ ದಿನಗಳ ಕೆಲಸವಾಗಿದೆ. ಮಡಿಕೇರಿ ತಾಲೂಕಿನ 26 ಗ್ರಾ.ಪಂ.ನಲ್ಲಿ 5,014, ವಿರಾಜಪೇಟೆ ತಾಲೂಕಿನ 38 ಗ್ರಾ.ಪಂ.ನಲ್ಲಿ 4,137 ಹಾಗೂ ಸೋಮವಾರಪೇಟೆ ತಾಲೂಕಿನ 40 ಗ್ರಾ.ಪಂ.ಗಳಲ್ಲಿ 5,600 ಮಾನವ ದಿನಗಳ ಕೆಲಸಗಳು ನಡೆದಿವೆ.

ಮಡಿಕೇರಿ ತಾಲೂಕಿನ ಭಾಗಮಂಡಲ ಗ್ರಾ.ಪಂ.ನಲ್ಲಿ 448, ಎಮ್ಮೆಮಾಡು 437, ಬೇಗೂರು 420, ಸೋಮವಾರಪೇಟೆ ತಾಲೂಕಿನ ವಾಲ್ನೂರು-ತ್ಯಾಗತ್ತೂರಿನಲ್ಲಿ 616, ಗರಗಂದೂರು 958, ವಿರಾಜಪೇಟೆ ತಾಲೂಕಿನ ಮಾಲ್ದಾರೆ 539, ಹಾತೂರು ಗ್ರಾ.ಪಂ.ನಲ್ಲಿ 417 ಮಾನವ ದಿನಗಳ ಕೆಲಸಗಳು ನಡೆದಿವೆ. ಆದರೆ ಹುದಿಕೇರಿ, ಕುಟ್ಟ, ಮಾಯಮುಡಿ, ಪಾಲಿಬೆಟ್ಟ, ಐಗೂರು, ಗಣಗೂರು, ಗರ್ವಾಲೆ, ಶಿರಂಗಾಲ ಪಂಚಾಯಿತಿಗಳಲ್ಲಿ ಈ ಯೋಜನೆಯಡಿ ಕೆಲಸ ಆರಂಭವಾಗಿಲ್ಲ.

ಕೆಲಸವೂ ಸಿಕ್ತು, ರಸ್ತೆಯೂ ಆಯ್ತು!

ನಾನು ಕೂಲಿ ಕಾರ್ಮಿಕಳಾಗಿದ್ದು, ಲಾಕ್‌ಡೌನ್‌ ಸಮಯದಲ್ಲಿ ಎಲ್ಲೂ ಕೆಲಸವಿಲ್ಲದೆ ಕಂಗಾಲಾಗಿದ್ದೆವು. ಅರಣ್ಯ ಹಕ್ಕು ಪತ್ರ ಪಡೆದಿರುವ ನಮ್ಮ ಮನೆಗಳಿಗೆ ಹೋಗಲು ಕಿರಿದಾದ ಕಾಲುದಾರಿ ಮಾತ್ರ ಇತ್ತೇ ಹೊರತು, ವಾಹನ ಹೋಗುವಂತಹ ರಸ್ತೆ ಇರಲಿಲ್ಲ. ಭಾಗಮಂಡಲ ಗ್ರಾ.ಪಂ. ನಮ್ಮ ಮನೆಗೆ ಹೋಗುವ ರಸ್ತೆಯನ್ನು ಉದ್ಯೋಗ ಖಾತ್ರಿ ಕ್ರೀಯಾಯೋಜನೆಯಲ್ಲಿ ಸೇರಿಸಿದ್ದರಿಂದ ನಾವೆಲ್ಲರೂ ಸೇರಿ ನಮ್ಮ ಮನೆಗಳಿಗೆ ರಸ್ತೆಯನ್ನು ಮಾಡಿದ್ದೇವೆ. ಲಾಕ್‌ಡೌನ್‌ ಸಮಯದಲ್ಲಿ ನಮಗೆ ಕೆಲಸ ಸಿಗುವುದರೊಂದಿಗೆ ನಮ್ಮ ಮನೆಗಳಿಗೆ ರಸ್ತೆಯೂ ಆಯಿತು ಎಂದು ಭಾಗಮಂಡಲ ಗ್ರಾ.ಪಂ. ವ್ಯಾಪ್ತಿಯ ತಣ್ಣಿಮಾನಿಯ ಕೆ.ಬಿ.ಸಬಿತಾ ಸಂತೋಷ ವ್ಯಕ್ತಪಡಿಸಿದರು.

ಹಾರಂಗಿ ಜಲಾಶಯ ಹಿನ್ನೀರಲ್ಲಿ ಗಾಳಕ್ಕೆ ಬಿತ್ತು ಬೃಹತ್ ಕಟ್ಲಾ ಮೀನು

ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ವೈಯಕ್ತಿಕ ಕಾಮಗಾರಿಗಳನ್ನು ತೆಗೆದುಕೊಳ್ಳಬೇಕೆಂದು ಸೂಚನೆಯಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಗ್ರಾ.ಪಂ.ಗಳಲ್ಲಿ ಮೂರು ಸಾವಿರಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಿದ್ದಾರೆ. ಸ್ಥಳದಲ್ಲೇ ಹೆಸರು ನೋಂದಣಿ ಮಾಡಿಕೊಂಡು ಕೆಲಸ ಮಾಡಬಹುದಾಗಿದೆ. ಹೂಳೆತ್ತುವ ಕಾರ್ಯ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳು ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿದೆ ಎಂದು ಕೊಡಗು ಜಿಪಂ ಉಪ ಕಾರ್ಯದರ್ಶಿ ಗುಡೂರ್‌ ಭೀಮಸೇನ ಹೇಳಿದ್ದಾರೆ.

ಲಾಕ್‌ಡೌನ್‌ ಅವಧಿಯಲ್ಲಿ ಜನರು ತಮ್ಮ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ದಿನವೊಂದಕ್ಕೆ 275 ರು.ನಂತೆ ಕೂಲಿ ಪಡೆದು ಕುಶಲ ಕೆಲಸದಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ತಮ್ಮ ವೈಯಕ್ತಿಕ ಜಾಮೀನು ಅಭಿವೃದ್ಧಿ ಹಾಗೂ ಊರಿನ ಸಾಂಪ್ರದಾಯಿಕ ಜಲಮೂಲಗಳ ಪುನಶ್ಚೇತನ ಕೆಲಸಗಳನ್ನು ಕೈಗೊಳ್ಳಬಹುದು. ಈಗಾಗಲೇ ಜಿಲ್ಲೆಯಲ್ಲಿ 14,000, ಮಡಿಕೇರಿ ತಾಲೂಕಿನಲ್ಲಿ 5,000ಕ್ಕಿಂತ ಹೆಚ್ಚಿನ ಮಾನವ ದಿನಗಳ ಕೆಲಸವಾಗಿದೆ ಎಂದು ಮಡಿಕೇರಿ ತಾ.ಪಂ.ಗ್ರಾಮೀಣ ಉದ್ಯೋಗ (ಪ್ರ) ಅಬ್ದುಲ್ಲ ಎ.ಎ ತಿಳಿಸಿದ್ದಾರೆ.

ವಿಘ್ನೇಶ್‌ ಎಂ. ಭೂತನಕಾಡು