Asianet Suvarna News Asianet Suvarna News

ಮೂರು ದಶಕಗಳಷ್ಟು ಹಳೆಯ ಧಾರಾವಾಹಿ ಅಗ್ರಸ್ಥಾನ ಅಲಂಕರಿಸಿದ್ದು ಹೇಗೆ?

ಬರೋಬ್ಬರಿ 33-34 ವರ್ಷ ಹಿಂದೆ ಪ್ರಸಾರವಾದ ಮಹಾನ್ ಪೌರಾಣಿಕ ಧಾರಾವಾಹಿ "ರಾಮಾಯಣ್", ಈಗ ಮತ್ತೆ ಸುದ್ದಿಯಲ್ಲಿದೆ. ಬರೀ ಸುದ್ದಿಯಲ್ಲಷ್ಟೇ ಇಲ್ಲ, ಅಗ್ರಸ್ಥಾನಕ್ಕೇರಿ ಮನೆ ಮಾತಾಗಿದೆ. ಕಂತೆ ಕಂತೆ ಮನರಂಜನಾ ವಾಹಿನಿಗಳ ನಡುವೆ ವೀಕ್ಷಕರಿಲ್ಲದೆ ಸೊರಗಿದ್ದ ದೂರದರ್ಶನ ರಾಷ್ಟ್ರೀಯ ವಾಹಿನಿಯನ್ನು ಕಳೆದ ಮೂರ್ನಾಲ್ಕು ವಾರಗಳಿಂದ ನಂ.1 ಪಟ್ಟಕ್ಕೇರಿಸಿ ಕೂರಿಸಿದೆ. ರಾಮ-ರಾವಣರ ಯುದ್ಧ ನಡೆಯುತ್ತಿದ್ದ ಏ.16ರಂದು ಒಂದೇ ದಿನ ಭಾರತವಷ್ಟೇ ಅಲ್ಲ, ವಿಶ್ವಾದ್ಯಂತ 7.7 ಕೋಟಿ ಜನರು ವೀಕ್ಷಿಸುವಂತಾಗಿ ಜಾಗತಿಕ ದಾಖಲೆ ನಿರ್ಮಿಸಿದೆ.

how DD national Ramanand Sagar Ramayana attracted present generation audience
Author
Bangalore, First Published May 3, 2020, 12:04 PM IST

- ರವಿಶಂಕರ್ ಭಟ್

ಈಗಿನಂತೆ ಹೈಡೆಫಿನೇಶನ್ ಕ್ಯಾಮರಾ ಆಗಲಿ, ಕಂಪ್ಯೂಟರ್ ಗ್ರಾಫಿಕ್ಸ್ ಮತ್ತಿತರ ಅತ್ಯಾಧುನಿಕ ತಂತ್ರಜ್ಞಾನ ಆಗಲಿ ಇಲ್ಲದ, ಕಣ್ಣು ಕೋರೈಸುವ ಅದ್ಧೂರಿ ಸೆಟ್ ಕೂಡ ಕಾಣಸಿಗದ, ಕೆಲವು ನಟರೇ ಕಣ್ಣಿಗೆ ರಾಚುವಂತೆ ಹಲವಾರು ಪಾತ್ರಗಳನ್ನು ನಿರ್ವಹಿಸಿದ, ಈಗಿನ ಕಾಲಮಾನದಲ್ಲಿ ಅತಿಹೆಚ್ಚು ಪ್ರಚಲಿತದಲ್ಲಿರುವ ಇಂಗ್ಲಿಷ್ ಚೌಚೌ ಸಂಭಾಷಣೆ ಹೊಂದಿರದ, ಇನ್ನೂ ಅನೇಕ ಇಲ್ಲಗಳಿರುವ ಪೌರಾಣಿಕ ಮೆಗಾ ಧಾರಾವಾಹಿ ಇದ್ದಕ್ಕಿದ್ದಂತೆ ನಂ.1 ಸ್ಥಾನಕ್ಕೇರಿದ್ದು ಹೇಗೆ? ತನ್ನ ವಾಹಿನಿಯನ್ನೂ ನಂ.1 ಪಟ್ಟಕ್ಕೇರಿಸಿ ಕೂರಿಸಿದ್ದು ಹೇಗೆ?

ಐದು ಪ್ರಮುಖ ಅಂಶಗಳ ಲೆಕ್ಕಾಚಾರ ಇಂತಿದೆ.

1. ಲಾಕ್ ಡೌನ್ ಕಾಲದ ಅತ್ಯಂತ ನಿಕಟ ಬಂಧು: ಮಾರ್ಚ್ 28ಕ್ಕೆ ಡಿಡಿ ನ್ಯಾಷನಲ್ ವಾಹಿನಿಯಲ್ಲಿ ರಾಮಾಯಣ ಪ್ರಸಾರ ಆರಂಭವಾಯಿತು. ಆಗಲೇ ಏ.14ರವರೆಗಿನ ಮೊದಲ ಹಂತದ ಲಾಕ್ ಡೌನ್ ಘೋಷಣೆ ಆಗಿತ್ತು. ಬಂದ್, ಮುಷ್ಕರ, ರಜೆಗಳನ್ನು ಮಾತ್ರ ನೋಡಿದ್ದ ಜನರಿಗೆ ಲಾಕ್ ಡೌನ್ ಎಂದರೇನು ಎಂಬ ಕಲ್ಪನೆಯೇ ಇರಲಿಲ್ಲ. ದಿಢೀರನೆ ಮನೆಯಲ್ಲಿ ಬಂಧಿಯಾಗಿ ದಿಕ್ಕೇ ತೋಚದಂತಾಗಿದ್ದ ಜನರು ಟೀವಿಗೆ ಜೋತು ಬಿದ್ದರು. ಆದರೆ, ಮೊನ್ನೆ ಮೊನ್ನೆಯಷ್ಟೇ ನೋಡಿದ ಧಾರಾವಾಹಿ, ರಿಯಾಲಿಟಿ ಶೋ ಮತ್ತಿತರೆ ಕಾರ್ಯಕ್ರಮಗಳ ರಿಪೀಟ್  ನೋಡುವುದರ ಬದಲು, "ಹೊಚ್ಚ ಹೊಸ" ರಾಮಾಯಣ ನೋಡಲು ಆರಂಭಿಸಿದರು.

ದೂರದರ್ಶನದಲ್ಲಿ ಪ್ರಸಾರವಾಗೋ ರಾಮಾಯಣ, ಬಾಲ್ಯದ ನೆನಪಿನ ಬುತ್ತಿ

2. ಹಳೇ ಧಾರಾವಾಹಿ ಹೊಸತು ಎನಿಸಿದ್ದು ಏಕೆ?: ದೂರದರ್ಶನದಲ್ಲಿ ರಾಮಾಯಣ ಪ್ರಸಾರವಾದದ್ದು ಸುಮಾರು ಮೂರು ದಶಕಗಳ ಹಿಂದೆ, 1987-88ರಲ್ಲಿ. ಆಗ ನೋಡಿದವರಿಗೆ ಈಗ ಮರೆತು ಹೋಗಿತ್ತು. ನೋಡದವರಿಗೆ ರಾಮಾಯಣ ಗೊತ್ತೇ ವಿನಃ ಅದು ಧಾರಾವಾಹಿ ರೂಪದಲ್ಲಿ ಹೇಗೆ ಬಂತೆಂಬುದರ ಕಲ್ಪನೆ ಇರಲಿಲ್ಲ. ಹಾಗಾಗಿ, ಧಾರಾವಾಹಿ 30 ವರ್ಷಗಳಷ್ಟು ಹಳೆಯದೇ ಆದರೂ, ಈಗಿನ ಕಾಲಕ್ಕೆ ಹೊಸತು ಎನಿಸಿಕೊಂಡಿತು. ಜನರನ್ನು ಅನಾಯಾಸವಾಗಿ ತನ್ನತ್ತ ಸೆಳೆಯಿತು. ಬಿಟ್ಟೂಬಿಡದೆ ನೋಡಿಸಿತು.

how DD national Ramanand Sagar Ramayana attracted present generation audience

3. ಮೂರು ಜನರೇಷನ್ನು ಟೀವಿ ಮುಂದೆ: ಮರುಪ್ರಸಾರವಾದ ರಾಮಾಯಣ ಧಾರಾವಾಹಿಯು  ಆಬಾಲವೃದ್ಧರಾದಿಯಾಗಿ ಮೂರು ತಲೆಮಾರುಗಳನ್ನು ಒಟ್ಟಿಗೇ ಕೂರಿಸಿ ನೋಡಿಸಿತು. ಒಂದು, 1987-88ರಲ್ಲಿ ಸುಮಾರು 30-50 ವರ್ಷ ವಯಸ್ಸಿನವರಾಗಿದ್ದು ಈಗ 65-85 ವರ್ಷದ ಆಸುಪಾಸಿನಲ್ಲಿರುವ, ಸಹಜವಾಗಿ ಅಧ್ಯಾತ್ಮದ ಕಡೆ ಒಲವು ಮೂಡಿರುವವರನ್ನು ಟೀವಿಯತ್ತ ಸೆಳೆಯಿತು. ಎರಡು, ಆಗ ಬಾಲ್ಯದಲ್ಲಿದ್ದು ಈಗ ಮಧ್ಯ ವಯಸ್ಸಿನ ಆಜುಬಾಜಿನಲ್ಲಿರುವವರನ್ನೂ ತನ್ನೆದುರು ಕೂರಿಸಿತು. ಮೂರು, ಮೊದಲ ಬಾರಿಗೆ ರಾಮಾಯಣ ಪ್ರಸಾರ ಆದಾಗ ಹುಟ್ಟಿಯೇ ಇರದವರನ್ನೂ ಆಕರ್ಷಿಸಿ ನೋಡುವಂತೆ ಮಾಡಿತು.

ನಿಜ ಜೀವನದಲ್ಲಿ ರಾಮನ ಭಕ್ತ ರಾವಣನ ಪಾತ್ರಧಾರಿ ತ್ರಿವೇದಿ ಬಗ್ಗೆ ಗೊತ್ತಿರದ ವಿಷಯಗಳು

4. ಅತ್ಯಂತ ವೇಗದ ಮೆಗಾ ಧಾರಾವಾಹಿ: ಆಗೆಲ್ಲ ರಾಮಾಯಣ ಪ್ರತಿ ಭಾನುವಾರ ಮಾತ್ರ ಪ್ರಸಾರವಾಗುತ್ತಿತ್ತು. ಬೆಳಗ್ಗೆ 10 ಗಂಟೆಗೆ ಆರಂಭವಾದರೆ ಪ್ರಸಾರವಾಗುವ 1 ತಾಸಿನಲ್ಲಿ ಜಾಹೀರಾತೂ ಇರುತ್ತಿತ್ತು. ಹಾಗೆ ಸರಿಸುಮಾರು 80 ಕಂತುಗಳಲ್ಲಿ ಒಂದೂವರೆ ವರ್ಷಗಳ ಕಾಲ ಪ್ರಸಾರವಾಯಿತು. ಆಮೇಲೆ 2000ನೇ ಇಸವಿಯ ಆಸುಪಾಸಿನಲ್ಲಿ ಸ್ಟಾರ್ ಟೀವಿಯ ಚಾನಲ್‌ಗಳಲ್ಲಿ ಪ್ರಸಾರವಾದದ್ದುಂಟು. ಆಗ ಹೊಸ ಹೊಸ ಚಾನಲ್‌ಗಳ ನವನವೀನ ಮನರಂಜನಾ ಕಾರ್ಯಕ್ರಮಗಳ ಭರಾಟೆಯ ನಡುವೆ ರಾಮಾಯಣವನ್ನು ಕೇಳುವವರಿರಲಿಲ್ಲ. ಆದರೆ, ಈ ಬಾರಿ ಹಾಗಾಗಲಿಲ್ಲ. ಬೆಳಗ್ಗೆ 9 ಹಾಗೂ ರಾತ್ರಿ 9ಕ್ಕೆ ತಲಾ 1 ತಾಸಿನ ದಿನಕ್ಕೆರಡು ಕಂತುಗಳು ವೀಕ್ಷಕರಿಗೆ ಫಾಸ್ಟ್ ಫುಡ್ ರೀತಿ ದೊರಕಿದವು. ಒಂದೂವರೆ ವರ್ಷ ಬಿತ್ತರಗೊಂಡಿದ್ದ ಮಹಾ ಧಾರಾವಾಹಿ, ಕೇವಲ 40 ದಿನಗಳಲ್ಲಿ ಪ್ರಸಾರವಾಗಿ ಮುಗಿದೇ ಹೋಯಿತು. ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಪ್ರಸಾರವಾದ ಮೆಗಾ ಧಾರಾವಾಹಿ ಪ್ರಾಯಶಃ ಇದೇ ಇರಬಹುದು.

how DD national Ramanand Sagar Ramayana attracted present generation audience

5. ಹಿರಿಯರಿಗೆ ಪುನರ್ಮನನ, ಮಕ್ಕಳಿಗೆ ನೈತಿಕ ಶಿಕ್ಷಣ: ಎಲ್ಲಕ್ಕಿಂತ ಮುಖ್ಯವಾಗಿ, ಈ ಹಿಂದೆ ನೋಡಿದವರೂ ಪುನರ್ಮನನಕ್ಕಾಗಿ ಮತ್ತೊಮ್ಮೆ ವೀಕ್ಷಿಸಿದರು. ರಾಮನ ವನವಾಸದ ಕೆಲವು ಉಪಕಥೆಗಳು, ರಾಮ-ರಾವಣ ಯುದ್ಧ, ಉತ್ತರ ರಾಮಾಯಣ... ಹೀಗೆ ಸ್ಮೃತಿಪಟಲದಿಂದ ಹಾರಿ ಹೋಗಿದ್ದ ಅನೇಕ ವಿಚಾರಗಳನ್ನು ನೆನಪಿಸಿಕೊಳ್ಳಲೆಂದೇ ನೋಡಿದರು. ಢಂ ಢಮಾರ್, ಡಿಶ್ಶುಂಡಿಶ್ಶುಂಗೆ ಮಾರು ಹೋಗಿರುವ ಈಗಿನ ಕಾಲದ ಮಕ್ಕಳನ್ನೂ ಕುಳಿತು ನೋಡುವಂತೆ ಮಾಡಿದರು. ಅಷ್ಟಕ್ಕೂ, ಬೇಸಿಗೆ ರಜೆ ಇರಬೇಕಿದ್ದ ಸಮಯದಲ್ಲಿ ರಾಮಾಯಣಕ್ಕಿಂತ ಉತ್ತಮ ನೈತಿಕ ಶಿಕ್ಷಣ ನೀಡುವಂಥ ಶಿಬಿರ ಬೇರೆ ಯಾವುದಿದ್ದೀತು, ಅಲ್ಲವೆ?

ರಾಮಾಯಣದ ದುಷ್ಟ ರಾವಣ ಹೇಳಿದ ಜೀವನ ಪಾಠಗಳು

ಇದಲ್ಲದೆ, ಪ್ರಸಾರ ಭಾರತಿಯ ಆ್ಯಪ್‌ನಲ್ಲಿ ಏಕಕಾಲಕ್ಕೆ ಪ್ರಸಾರ ಮಾಡಿದ್ದು, ರಾಮಾಯಣ ಪ್ರಸಾರವಾಗುತ್ತಿರುವ ಬಗ್ಗೆ ಸುದ್ದಿಮಾಧ್ಯಮಗಳಲ್ಲಿ ಪ್ರಚಾರ ಆದದ್ದು ಸೇರಿದಂತೆ ಹಲವು ಅಂಶಗಳೂ ಅದು ಮತ್ತೆ ಜನಪ್ರಿಯತೆಯ ಉತ್ತುಂಗಕ್ಕೇರಲು ಪೂರಕ ಎನಿಸಿದವು. ರಾಮಾಯಣವನ್ನು ಅಗ್ರಸ್ಥಾನದ ಸಿಂಹಾಸನಕ್ಕೇರಿಸಿದವು, ಅತ್ಯಂತ ಅರ್ಹವಾಗಿ ಕೂಡ.

Follow Us:
Download App:
  • android
  • ios