ಹೆಬ್ಬಾಳ ಜಂಕ್ಷನ್‌ ಅತಿ ಹೆಚ್ಚು ದಟ್ಟಣೆ ಇರುವ ಬೆಳಗ್ಗೆ 8 ಗಂಟೆಯಿಂದ 11.30ರವರೆಗೂ ಮತ್ತು ಸಂಜೆ 4ರಿಂದ ರಾತ್ರಿ 11ರವರೆಗೆ ಕೆಂಪಾಪುರದಿಂದ ಬ್ಯಾಪ್ಟಿಸ್ಟ್‌ ಆಸ್ಪತ್ರೆ ಸಮೀಪದ ಸಂಚಾರಿ ಪೊಲೀಸ್‌ ಠಾಣೆ ವರೆಗೂ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಈ ದಟ್ಟಣೆ ನಿವಾರಿಸಿಕೊಂಡು ಬರಲು ವಾಹನ ಸವಾರರು ಹರಸಾಹಸ ಪಡಲೇಬೇಕಾದ ಪರಿಸ್ಥಿತಿ ಇದೆ. 

ಸಂಪತ್‌ ತರೀಕೆರೆ

ಬೆಂಗಳೂರು(ಜು.01):  ಸಂಚಾರಿ ದಟ್ಟಣೆ ನಿವಾರಣೆಗೆ ಹೆಬ್ಬಾಳ ಜಂಕ್ಷನ್‌ ಉನ್ನತೀಕರಣ ಮಾಡಲು ಮುಂದಾಗಿರುವ ಬಿಡಿಎ, ವಿಮಾನ ನಿಲ್ದಾಣದಿಂದ ನಗರಕ್ಕೆ ಬರಲು ಈಗಿರುವ ಎರಡು ಪಥಕ್ಕೆ ಹೆಚ್ಚುವರಿಯಾಗಿ ಮೂರು ಪಥ ಸೇರ್ಪಡೆಗೊಳಿಸಿ ಒಟ್ಟು ಐದು ಪಥದ ರಸ್ತೆ ನಿರ್ಮಾಣ ಮಾಡುವ ಕಾಮಗಾರಿಗೆ ಚಾಲನೆ ನೀಡಿದೆ.

ಯಲಹಂಕ ಕಡೆಯಿಂದ ನಗರಕ್ಕೆ ಬರುವ ವಾಹನಗಳ ಸುಗಮ ಸಂಚಾರಕ್ಕಾಗಿ ಬಿಡಿಎ, ಮೇಲ್ಸೇತುವೆಗೆ ಹೆಚ್ಚುವರಿಯಾಗಿ ಮೂರು ಪಥಗಳನ್ನು ಅಳವಡಿಸಿ ವಿಸ್ತರಿಸಲು ಯೋಜಿಸಿತ್ತು. ಪಥ ವಿಸ್ತರಣೆಗೆ 2016ರಲ್ಲಿಯೇ ಟೆಂಡರ್‌ ಪ್ರಕ್ರಿಯೆ ಅಂತಿಮಗೊಳಿಸಿ, ಕಾರ್ಯಾದೇಶ ಸಹ ನೀಡಲಾಯಿತು. 2017ರಲ್ಲಿ ಕೆಲಸ ಆರಂಭಿಸಿ, ಕಂಬಗಳ ನಿರ್ಮಾಣಕ್ಕೆ ಅಡಿಪಾಯವನ್ನೂ ಹಾಕಲಾಯಿತು.

ಸಿಲ್ಕ್‌ ಬೋರ್ಡ್ ಟು ಹೆಬ್ಬಾಳ ರಸ್ತೆಯ ಟ್ರಾಫಿಕ್‌ಗೆ ಮುಕ್ತಿ: ಸರ್ವಿಸ್‌ ರೋಡ್‌ ಸಂಪೂರ್ಣ ಬಳಕೆ

ಹಾಗೆಯೇ ತುಮಕೂರು ರಸ್ತೆ ಕಡೆಯಿಂದ ಕೆ.ಆರ್‌.ಪುರ ಕಡೆ ಚಲಿಸುವ ವಾಹನ ಸವಾರರ ಅನುಕೂಲಕ್ಕಾಗಿ ಹೊರವರ್ತುಲ ರಸ್ತೆಯಲ್ಲಿ ಏಕಮುಖ ಸಂಚಾರದ 320 ಮೀಟರ್‌ ಉದ್ದದ ಕೆಳಸೇತುವೆ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಅಂಡರ್‌ಪಾಸ್‌ಗೆ .30 ಕೋಟಿ ಮತ್ತು ಮೇಲ್ಸೇತುವೆಗೆ .37 ಕೋಟಿ ಸೇರಿದಂತೆ ಒಟ್ಟು .87 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಯಿತು. ಈ ಮಧ್ಯೆ ಹೆಬ್ಬಾಳದಲ್ಲಿ ಮೆಟ್ರೋ, ಉಪನಗರ ರೈಲು, ಬಸ್‌ ನಿಲ್ದಾಣ, ಎಲಿವೇಟೆಡ್‌ ಕಾರಿಡಾರ್‌ ಸಂಪರ್ಕ ಎಲ್ಲವೂ ಒಂದೇ ಸೂರಿನಡಿ ಪ್ರಯಾಣಿಕರಿಗೆ ಸಿಗುವಂತೆ ಮಾಡುವ ಯೋಜನೆಯನ್ನು ರೂಪಿಸುವ ಪ್ರಸ್ತಾವ ಸಿದ್ಧಪಡಿಸಲಾಯಿತು. ಇದರಿಂದಾಗಿ ಮೇಲ್ಸೇತುವೆ ಪಥ ವಿಸ್ತರಣೆ ಕಾಮಗಾರಿ ಸ್ಥಗಿತಗೊಂಡಿತು.

ಇದೀಗ ಮೆಟ್ರೋ ರೈಲು ಯೋಜನೆಯಲ್ಲಿ ಬದಲಾವಣೆ ಆಗಿರುವ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್‌ ಈ ಹಿಂದೆ ಉದ್ದೇಶಿಸಿದಂತೆ ವಿಮಾನ ನಿಲ್ದಾಣ ಮಾರ್ಗದಿಂದ ಬ್ಯಾಪ್ಟಿಸ್ಟ್‌ ಆಸ್ಪತ್ರೆ ವರೆಗಿನ ಮೂರು ಪಥದ ರಸ್ತೆ ಕಾಮಗಾರಿ ಕೈಗೊಳ್ಳಲು ಬಿಡಿಎಗೆ ತಿಳಿಸಿತ್ತು. ಹೀಗಾಗಿ ಇದೀಗ ಕಾಮಗಾರಿ ಆರಂಭಿಸಲಾಗಿದೆ ಎಂದು ಬಿಡಿಎ ಎಂಜಿನಿಯರ್‌ ಸುರೇಶ್‌ ಅವರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ವಾಹನ ಸವಾರರ ಹರಸಾಹಸ:

ಹೆಬ್ಬಾಳ ಜಂಕ್ಷನ್‌ ಅತಿ ಹೆಚ್ಚು ದಟ್ಟಣೆ ಇರುವ ಬೆಳಗ್ಗೆ 8 ಗಂಟೆಯಿಂದ 11.30ರವರೆಗೂ ಮತ್ತು ಸಂಜೆ 4ರಿಂದ ರಾತ್ರಿ 11ರವರೆಗೆ ಕೆಂಪಾಪುರದಿಂದ ಬ್ಯಾಪ್ಟಿಸ್ಟ್‌ ಆಸ್ಪತ್ರೆ ಸಮೀಪದ ಸಂಚಾರಿ ಪೊಲೀಸ್‌ ಠಾಣೆ ವರೆಗೂ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಈ ದಟ್ಟಣೆ ನಿವಾರಿಸಿಕೊಂಡು ಬರಲು ವಾಹನ ಸವಾರರು ಹರಸಾಹಸ ಪಡಲೇಬೇಕಾದ ಪರಿಸ್ಥಿತಿ ಇದೆ. ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಅತಿ ಉದ್ದದ 5.35 ಕಿ.ಮೀ. ಮೇಲ್ಸೇತುವೆಯಲ್ಲಿ ಸಂಚರಿಸಲು ಕೇವಲ 20 ನಿಮಿಷ ಸಾಕು. ಅದೇ 700 ಮೀಟರ್‌ ಉದ್ದವಿರುವ ಹೆಬ್ಬಾಳ ಮೇಲ್ಸೇತುವೆ ದಾಟಲು ಕನಿಷ್ಠ 30 ನಿಮಿಷ ಬೇಕಾಗುತ್ತದೆ.

ಪ್ರಸ್ತುತ ಇರುವ ಎರಡು ಪಥದ ರಸ್ತೆಗೆ ಮೂರು ಪಥವನ್ನು ಸೇರಿಸಿ ಒಟ್ಟು 5 ಪಥದ ರಸ್ತೆಯನ್ನಾಗಿ ಮೇಲ್ದರ್ಜೆಗೆ ಏರಿಸಿದರೆ ವಿಮಾನ ನಿಲ್ದಾಣದ ರಸ್ತೆಯಲ್ಲಿ ವಾಹನ ದಟ್ಟಣೆ ಕಡಿಮೆಯಾಗಲಿದೆ. ಆದರೆ, ಇದೀಗ ಮಳೆಗಾಲ ಆರಂಭಗೊಂಡಿರುವ ಸಂದರ್ಭದಲ್ಲೇ ಕಾಮಗಾರಿಗೆ ಚಾಲನೆ ನೀಡಿರುವುದರಿಂದ ಜನಸಾಮಾನ್ಯರಿಗೆ ಮತ್ತು ವಾಹನ ಸವಾರರಿಗೆ ಸಮಸ್ಯೆಯಾಗುವ ಭೀತಿಯೂ ಎದುರಾಗಿದೆ. 

Bengaluru News: ಹೆಬ್ಬಾಳ ಫ್ಲೈಓವರ್‌ ವಿಸ್ತರಣೆ ಕೊನೆಗೂ ಶುರು

ಸರ್ವೀಸ್‌ ರಸ್ತೆ ಬಂದ್‌

ಹೆಬ್ಬಾಳ ಬಸ್‌ ನಿಲ್ದಾಣ ಸಮೀಪದಲ್ಲಿ ಈ ಹಿಂದೆ ಕಂಬಗಳ ನಿರ್ಮಾಣಕ್ಕೆಂದು ಹಾಕಲಾಗಿದ್ದ ಅಡಿಪಾಯವನ್ನು ಜೆಸಿಬಿ ಮೂಲಕ ತೆರೆಯುವ ಕಾರ್ಯವನ್ನು ಆರಂಭಿಸಲಾಗಿದೆ. ಹೀಗಾಗಿ ಭೂಪಸಂದ್ರ, ವಿ.ನಾಗೇನಹಳ್ಳಿ ಕಡೆಯಿಂದ ಹೆಬ್ಬಾಳದ ಕಡೆಗೆ ಸಾಗುವ ಸವೀರ್‍ಸ್‌ ರಸ್ತೆಯನ್ನು ಬ್ಯಾರಿಕೇಡ್‌ನಿಂದ ಮುಚ್ಚಲಾಗಿದೆ. ಇದರಿಂದಾಗಿ ಬೆಳಗ್ಗೆ ಮತ್ತು ಸಂಜೆ ದಟ್ಟಣೆ ಸಂದರ್ಭದಲ್ಲಿ ವಾಹನ ಸವಾರರು ಪರದಾಡುವಂತ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಸಲುವಾಗಿ ಕಳೆದ ನಾಲ್ಕೈದು ತಿಂಗಳಿನಿಂದ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಯಲಹಂಕ ಕಡೆಯಿಂದ ನಗರಕ್ಕೆ ಬರುವ ಬಸ್‌ಗಳು ನಾಡಕಚೇರಿ ಸಮೀಪ ನಿಲ್ಲದಂತೆ ಸಂಚಾರಿ ಪೊಲೀಸರು ನಿರ್ಬಂಧಿಸಿದ್ದರು. ಇದೀಗ ಸವೀರ್‍ಸ್‌ ರಸ್ತೆ ಬಂದ್‌ ಮಾಡಿದ್ದು, ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳನ್ನು ಹತ್ತಲು, ಇಳಿಯಲು ಪ್ರಯಾಣಿಕರು ಪರದಾಡುವಂತ ಪರಿಸ್ಥಿತಿ ನಿರ್ಮಾಣಗೊಂಡಿದೆ.