ಮಂಡ್ಯ(ಜು.29): ಕಬ್ಬು ಅರೆಯುವಿಕೆ ಸ್ಥಗಿತಗೊಳಿಸಿರುವ ಮೈಷುಗರ್‌ ಮೂರು ತಿಂಗಳಲ್ಲಿ ಮೂವರು ವ್ಯವಸ್ಥಾಪಕ ನಿರ್ದೇಶಕರನ್ನು ಕಂಡಿದೆ. ಕಾರ್ಖಾನೆಗೆ ಆರಂಭದ ಭಾಗ್ಯ ಕರುಣಿಸದ ಸರ್ಕಾರ, ಎಂಡಿಗಳ ಬದಲಾವಣೆ ಭಾಗ್ಯವನ್ನು ಪ್ರತಿ ತಿಂಗಳೂ ಕರುಣಿಸುತ್ತಲೇ ಇದೆ.

ಈ ಮೊದಲು ಆರು ತಿಂಗಳಿಗೊಮ್ಮೆ ಮೂರು ತಿಂಗಳಿಗೊಮ್ಮೆ ವ್ಯವಸ್ಥಾಪಕ ನಿರ್ದೇಶಕರು ಬದಲಾಗುತ್ತಿದ್ದರು. ಈ ಬದಲಾವಣೆ ಪ್ರಕ್ರಿಯೆಯನ್ನು ಸರ್ಕಾರ ಈಗ ಪ್ರತಿ ತಿಂಗಳಿಗೆ ಇಳಿಸಿದೆ. ಮೈಷುಗರ್‌ ವ್ಯವಸ್ಥಾಪಕರಾಗಿ ಶಾಂತಾರಾಂ ನಿವೃತ್ತರಾದ ಬಳಿಕ ಇಬ್ಬರು ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ನೇಮಕಗೊಂಡರೂ ಅವರು ಒಂದು ತಿಂಗಳ ಮಟ್ಟಿಗೂ ಉಳಿಯದಿರುವುದು ದುರಂತದ ಸಂಗತಿ.

10 ದಿನ ಊರು ಸಂಪೂರ್ಣ ಸೀಲ್‌ಡೌನ್: ಗ್ರಾಮಸ್ಥರ ದಿಟ್ಟ ನಿರ್ಧಾರ

ಮೈಷುಗರ್‌ ವ್ಯವಸ್ಥಾಪಕ ಹುದ್ದೆ ವಹಿಸಿಕೊಳ್ಳುವುದಕ್ಕೆ ಐಎಎಸ್‌ ಅಧಿಕಾರಿಗಳು ಧೈರ್ಯ ಮಾಡುತ್ತಿಲ್ಲ. ರೋಗಗ್ರಸ್ಥ ಕಾರ್ಖಾನೆಯ ಉಸಾಬರಿಯೇ ನಮಗೆ ಬೇಡವೆಂದು ನೇಮಕಗೊಂಡ ಕೆಲವೇ ದಿನಗಳಲ್ಲಿ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಿದ್ದಾರೆ.

ಶಾಂತಾರಾಂ ಅವರು ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಿಂದ ನಿರ್ಗಮಿಸಿದ ಬಳಿಕ ಆ ಸ್ಥಾನಕ್ಕೆ ವಸಂತಕುಮಾರ್‌ ಅವರನ್ನು ಸರ್ಕಾರ ನೇಮಕ ಮಾಡಿತು. ಕಾರ್ಖಾನೆಯತ್ತ ಒಮ್ಮೆಯೂ ಮುಖ ಮಾಡದೆ ಅವರು ವರ್ಗಾವಣೆ ಮಾಡಿಸಿಕೊಂಡರು. ಆನಂತರ ಆ ಹುದ್ದೆಗೆ ಡಾ.ಬಿ.ಆರ್‌.ಮಮತಾ ಅವರನ್ನು ನೇಮಿಸಿತು. ಅವರೂ ಸಹ ಕಾರ್ಖಾನೆಗೆ ಕಾಲಿಡಲೇ ಇಲ್ಲ. ಇದೀಗ ಅವರನ್ನು ಸಕಾಲ ಮಿಷನ್‌ಗೆ ಅಡಿಷನಲ್‌ ಮಿಷನ್‌ ಡೈರೆಕ್ಟರ್‌ ಆಗಿ ವರ್ಗಾವಣೆ ಮಾಡಿರುವ ಸರ್ಕಾರ, ಹುದ್ದೆಯ ನಿರೀಕ್ಷೆಯಲ್ಲಿದ್ದ ಡಾ.ಹೆಚ್‌.ಎನ್‌.ಗೋಪಾಲಕೃಷ್ಣ ಅವರನ್ನು ಮೈಷುಗರ್‌ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಿದೆ. ಇವರು ಎಷ್ಟುದಿನಗಳವರೆಗೆ ಹುದ್ದೆಯಲ್ಲಿರುವರೋ ಗೊತ್ತಿಲ್ಲ.

ಯಾವುದೇ ಸರ್ಕಾರ ನನ್ನ ಕೈ, ಬರವಣಿಗೆ ಕಟ್ಟಿಹಾಕಲು ಅಸಾಧ್ಯ ಎಂದ 'ಹಳ್ಳಿಹಕ್ಕಿ'

ರಾಜ್ಯಸರ್ಕಾರ ಮೈಷುಗರ್‌ ಕಾರ್ಖಾನೆಯನ್ನು ಒ ಆ್ಯಂಡ್‌ ಎಂ ಮೂಲಕ ಆರಂಭಿಸುವುದಾಗಿ ನಿರ್ಧಾರ ಕೈಗೊಂಡಿದೆ. ಹೀಗೆ ತಿಂಗಳಿಗೊಮ್ಮೆ ವ್ಯವಸ್ಥಾಪಕ ನಿರ್ದೇಶಕರನ್ನು ಬದಲಾಯಿಸುತ್ತಿದ್ದರೆ ಕಾರ್ಖಾನೆಯ ಆರಂಭದ ಪ್ರಕ್ರಿಯೆಗಳು ಸುಗಮವಾಗಿ ನಡೆಯಲು ಹೇಗೆ ಸಾಧ್ಯ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಮೈಷುಗರ್‌ ಕಾರ್ಖಾನೆಯ ಆಸ್ತಿ ರಕ್ಷಣೆಗೆ ಐಎಎಸ್‌ ಅಧಿಕಾರಿಯೊಬ್ಬರನ್ನು ಶಾಶ್ವತ ಎಂಡಿಯಾಗಿ ನೀಡಲಾಗುವುದು ಎಂದು ಸಕ್ಕರೆ ಸಚಿವ ಶಿವರಾಂ ಹೆಬ್ಬಾರ್‌ ಅವರು ಮಂಡ್ಯ ವೇಳೆ ಭರವಸೆ ನೀಡಿದ್ದರು. ಆದರೆ, ಈವರೆಗೆ ಅದು ಈಡೇರಿಲ್ಲ. ಮುಂದಿನ ದಿನಗಳಲ್ಲಿ ಶಾಶ್ವತ ಎಂಡಿಯೊಬ್ಬರು ಮೈಷುಗರ್‌ಗೆ ಸಿಗುವರೇ ಎಂಬುದನ್ನು ಕಾದುನೋಡಬೇಕಿದೆ.