ಮಂಡ್ಯ (ಅ.16):  ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಅ.20ರಂದು ನಿಗದಿಯಾಗಿರುವ ಬೆನ್ನಲ್ಲೇ ಮೂವರು ಪಕ್ಷೇತರ ಸದಸ್ಯರು ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಚುನಾವಣೆಯಲ್ಲಿ 18 ಜೆಡಿಎಸ್‌ ಸದಸ್ಯರು ಗೆಲುವು ಸಾಧಿಸುವುದರೊಂದಿಗೆ ನಿಚ್ಚಳ ಬಹುಮತ ಸಾಧಿಸಿತ್ತು. ಇದೀಗ ಮೂವರು ಸದಸ್ಯರ ಸೇರ್ಪಡೆಯಿಂದ ಜೆಡಿಎಸ್‌ ಶಕ್ತಿ ಮತ್ತಷ್ಟುಹೆಚ್ಚಿದಂತಾಗಿದೆ. ಆದರೆ, ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಆಕಾಂಕ್ಷಿತರ ದೊಡ್ಡ ದಂಡೇ ಇರುವುದು ಕುತೂಹಲ ಕೆರಳಿಸುವಂತೆ ಮಾಡಿದೆ.

ನಗರದ ಕರ್ನಾಟಕ ಸಂಘದ ಇಂಡುವಾಳು ಹೊನ್ನಯ್ಯ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ ಸಂಬಂಧ ಶಾಸಕ ಎಂ.ಶ್ರೀನಿವಾಸ್‌ ನೇತೃತ್ವದಲ್ಲಿ ಗುರುವಾರ ಎಲ್ಲ ಸದಸ್ಯರ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಿ ಆಕಾಂಕ್ಷಿತರು ಯಾರು ಎಂಬ ಬಗ್ಗೆ ವಿವರ ಪಡೆದುಕೊಂಡರು.

RR ನಗರ ರಣಕಣದಲ್ಲಿ ಗೌಡ್ರ ಗದ್ದಲ: ಯಾರಿಗೆ ಒಲಿಯುತ್ತಾಳೆ ರಾಜರಾಜೇಶ್ವರಿ? ..

ನಂತರ ಮಾತನಾಡಿದ ಶಾಸಕ ಎಂ.ಶ್ರೀನಿವಾಸ್‌, ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಸಂಬಂಧ ಸದಸ್ಯರ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಪಕ್ಷ ಸೂಚಿಸುವ ಅಭ್ಯರ್ಥಿಗಳ ಪರವಾಗಿ ನಿಷ್ಠರಾಗಿರುವುದಾಗಿ ಸದಸ್ಯರು ಭರವಸೆ ನೀಡಿದ್ದಾರೆ. ಇವರೆಲ್ಲರ ಅಭಿಪ್ರಾಯ ಪಡೆದು ಆಕಾಂಕ್ಷಿತರ ಪಟ್ಟಿಯೊಂದಿಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಗಮನಕ್ಕೆ ತಂದು ಅಂತಿಮವಾಗಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.

ಇದೇ ಸಮಯದಲ್ಲಿ ಪಕ್ಷೇತರ ಸದಸ್ಯರಾದ 2ನೇ ವಾರ್ಡ್‌ನ ಮಂಜುಳಾ, 28ನೇ ವಾರ್ಡ್‌ನ ಸೌಭಾಗ್ಯ, 34ನೇ ವಾರ್ಡ್‌ನ ಪೂರ್ಣಚಂದ್ರ ಅವರು ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನು ಬೆಂಬಲಿಸಿ ಜೆಡಿಎಸ್‌ ಪಕ್ಷ ಸೇರಿದ್ದಾರೆ ಜೆಡಿಎಸ್‌ ಪರವಾಗಿ ಅವರನ್ನು ಸ್ವಾಗತಿಸುತ್ತೇನೆ. ನಮ್ಮನ್ನು ನಂಬಿ ಬಂದಿರುವ ಅವರನ್ನು ಕೊನೆಯತನಕ ಉಳಿಸಿಕೊಳ್ಳುವುದಾಗಿ ಭರವಸೆ ನೀಡಿದರು.

ಜಿಲ್ಲಾಧ್ಯಕ್ಷ ಡಿ.ರಮೇಶ್‌, ನಗರ ಘಟಕದ ಅಧ್ಯಕ್ಷ ಎಸ್‌.ಪಿ.ಗೌರೀಶ್‌, ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್‌, ಜಿಪಂ ಸದಸ್ಯ ಹೆಚ್‌.ಎನ್‌.ಯೋಗೇಶ್‌, ಜೆಡಿಎಸ್‌ ಮುಖಂಡ ಲೋಕೇಶ್‌, ಎಂ.ಆರ್‌.ಮಂಜು ಇದ್ದರು. ಸಭೆಯಲ್ಲಿ ಜೆಡಿಎಸ್‌ ಸದಸ್ಯರೆಲ್ಲರೂ ಹಾಜರಿದ್ದರು.