ಮಂಗಳೂರು(ಜು.05): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಮರಣ ಮೃದಂಗವೂ ಸೋಂಕಿತರ ಸಂಖ್ಯೆಯೂ ಏರುಗತಿಯಲ್ಲೇ ಸಾಗಿವೆ. ಮೂವರು ಕೊರೋನಾ ಸೋಂಕಿತರು ಮೃತಪಟ್ಟಿದ್ದು, ಇದುವರೆಗೆ ಜಿಲ್ಲೆಯಲ್ಲಿ ಕೋರೋನಾಕ್ಕೆ ಬಲಿಯಾದವರ ಸಂಖ್ಯೆ 22ಕ್ಕೆ ಏರಿದೆ. ಶನಿವಾರ 75 ಮಂದಿಗೆ ಹೊಸದಾಗಿ ಸೋಂಕು ತಗುಲಿದೆ. 13 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡು​ಗಡೆ ಆಗಿದ್ದಾರೆ.

ಮೃತಪಟ್ಟವರಲ್ಲಿ ಇಬ್ಬರು ಮಂಗಳೂರು ತಾಲೂಕು ನಿವಾಸಿಗಳಾಗಿದ್ದರೆ, ಒಬ್ಬರು ಸುಳ್ಯದವರು. ಮಂಗಳೂರು ನಿವಾಸಿ 65 ವರ್ಷದ ಮಹಿಳೆ ಅಧಿಕ ರಕ್ತದೊತ್ತಡ, ಮಧುಮೇಹ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದು, ಖಾಸಗಿ ಆಸ್ಪತ್ರೆಯಿಂದ ಶುಕ್ರವಾರವಷ್ಟೆಕೋವಿಡ್‌ ಆಸ್ಪತ್ರೆಗೆ ಸ್ಥಳಾಂತರಿಸಿ ಐಸಿಯುನಲ್ಲಿಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮಧ್ಯಾಹ್ನವೇ ಮೃತಪಟ್ಟಿದ್ದಾರೆ. ಇನ್ನೊಬ್ಬರು 67 ವರ್ಷದ ವ್ಯಕ್ತಿ ಕೂಡ ಅಧಿಕ ರಕ್ತದೊತ್ತಡ, ಮಧುಮೇಹ, ನ್ಯುಮೋನಿಯಾದಿಂದ ಬಳಲುತ್ತಿದ್ದು, ಜು.2ರಂದು ಖಾಸಗಿ ಆಸ್ಪತ್ರೆಯಿಂದ ಕೋವಿಡ್‌ ಆಸ್ಪತ್ರೆಗೆ ಕರೆತರಲಾಗಿತ್ತು, ಅದೇ ದಿನ ರಾತ್ರಿ ಅವರು ಮೃತಪಟ್ಟಿದ್ದಾರೆ. ಸುಳ್ಯ ತಾಲೂಕಿನ 60 ವರ್ಷದ ಮಹಿಳೆಯೂ ಅಧಿಕ ರಕ್ತದೊತ್ತಡ, ಮಧುಮೇಹ, ನ್ಯುಮೋನಿಯಾ ಮಾತ್ರವಲ್ಲದೆ ಹೃದಯ ರೋಗದಿಂದಲೂ ಬಳಲುತ್ತಿದ್ದರು. ಜು.2ರಂದು ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಶುಕ್ರವಾರ ಸಾವಿಗೀಡಾಗಿದ್ದಾರೆ.

ಸಾರಿ, ಐಎಲ್‌ಐ ಕೇಸ್‌ಗಳೇ ಅಧಿಕ!:

ಶನಿವಾರ ಒಂದೇ ದಿನ ಸೋಂಕು ತಗುಲಿದ 75 ಮಂದಿಯಲ್ಲಿ ಉಸಿರಾಟ ಸಂಬಂಧಿ ತೊಂದರೆಯುಳ್ಳ ‘ಸಾರಿ’ ಮತ್ತು ‘ಐಎಲ್‌ಐ’ ಪ್ರಕರಣಗಳೇ ಅತ್ಯಧಿಕ (35 ಪ್ರಕರಣ)ವಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಉಳಿದಂತೆ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ 25 ಮಂದಿ ಹೊಸದಾಗಿ ಸೋಂಕಿಗೆ ತುತ್ತಾಗಿದ್ದರೆ, ವಿದೇಶಗಳಿಂದ ಆಗಮಿಸಿದ 11 ಮಂದಿಯಲ್ಲಿ ಪಾಸಿಟಿವ್‌ ದೃಢಪಟ್ಟಿದೆ. ಸೋಂಕಿನ ಮೂಲವೇ ಗೊತ್ತಿಲ್ಲದ ಮೂರು ಮಂದಿಗೂ ಪಾಸಿಟಿವ್‌ ಬಂದಿದೆ. ವಿಶೇಷ ಪ್ರಕರಣವೊಂದರಲ್ಲಿ 26 ವರ್ಷದ ಮಹಿಳೆಗೆ ಹೆರಿಗೆ ಬಳಿಕ ಪಾಸಿಟಿವ್‌ ಇರುವುದು ಗೊತ್ತಾಗಿದೆ. ಒಬ್ಬರಿಗೆ ಸೋಂಕಿತರ ದ್ವಿತೀಯ ಸಂಪರ್ಕದಿಂದ ಹರಡಿದೆ.

ದುಬೈ, ಕುವೈಟ್‌ನಿಂದ ಬಂತು 3 ವಿಮಾನ: 423 ಮಂದಿ ಆಗಮನ

ಹೊಸ ಸೋಂಕಿತರಲ್ಲಿ ಬಹುತೇಕರು 55 ವರ್ಷದೊಳಗಿನವರೇ ಆಗಿದ್ದಾರೆ. 9 ಮಂದಿ 15 ವರ್ಷದೊಳಗಿನ ಮಕ್ಕಳು. ಇವರಲ್ಲಿ ಒಂದು, 3,7 ವರ್ಷದ ಮಕ್ಕಳೂ ಸೇರಿದ್ದಾರೆ. 84 ವರ್ಷ ವಯಸ್ಸಿನ ವೃದ್ಧೆಗೂ ಸೋಂಕು ಹರಡಿದೆ.

13 ಮಂದಿ ಡಿಸ್ಚಾರ್ಜ್‌:

ಆಶಾದಾಯಕ ಬೆಳವಣಿಗೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 13 ಮಂದಿ ಆಸ್ಪತ್ರೆಯಿಂದ ಬಿಡು​ಗಡೆ ಆಗಿ ಮನೆಗೆ ಮರಳಿದ್ದಾರೆ. ಇವರಲ್ಲಿ 70 ವರ್ಷದ ಮಹಿಳೆಯೂ ಸೇರಿದ್ದಾರೆ.

ಮಾಸ್ಕ್‌ ಧರಿಸದವರಿಗೆ ದಂಡ

ಮಾಸ್ಕ್‌ ಧರಿಸದೆ ಓಡಾಡುತ್ತಿರುವವರ ವಿರುದ್ಧ ಕಾರ್ಯಾಚರಣೆ ಆರಂಭವಾಗಿದ್ದು, ಶುಕ್ರವಾರ 25 ಮಂದಿಗೆ ದಂಡ ವಿಧಿಸಲಾಗಿದೆ. ಒಬ್ಬರಿಗೆ ತಲಾ 200 ರೂಪಾಯಿ ದಂಡ ವಿಧಿಸಲಾಗಿದ್ದು, ಒಟ್ಟು 5 ಸಾವಿರ ರು. ವಸೂಲಿ ಮಾಡಲಾಗಿದೆ. ಇದೇ ವೇಳೆ ಯುವಕನೊಬ್ಬ ದಂಡ ಕಟ್ಟಲು ನಿರಾಕರಿಸಿದ್ದರಿಂದ ಆರೋಗ್ಯ ಇಲಾಖೆಯ ಅಧಿಕಾರಿಗಳು ಕದ್ರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ದಂಡ ಕಟ್ಟದ ಯುವಕ ಬಳಿಕ ಠಾಣೆಗೆ ಹೋಗಿ ದಂಡ ಪಾವತಿಸಬೇಕಾಯಿತು.

ಬಿಜೆಪಿ ಮುಖಂಡಗೂ ಕೊರೋನಾ

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಸೂರಜ್‌ ಜೈನ್‌ ಮಾರ್ನಾಡ್‌ ಅವರಿಗೂ ಕೊರೋನಾ ಪಾಸಿಟಿವ್‌ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಅವರೇ ಅದನ್ನು ಬಹಿರಂಗಪಡಿಸಿದ್ದಾರೆ. ಎರಡು ದಿನಗಳ ಹಿಂದೆಯಷ್ಟೆಮಂಗಳೂರು ಉತ್ತರ ಶಾಸಕ ಭರತ್‌ ಶೆಟ್ಟಿ, ದ.ಕ.ಜಿಲ್ಲಾ ಆರೋಗ್ಯ ಇಲಾಖೆಯ ಮೂವರು ಹಿರಿಯ ಅಧಿಕಾರಿಗಳಿಗೂ ಕೊರೋನಾ ಬಾಧಿಸಿತ್ತು. ಇದುವರೆಗೆ 10ಕ್ಕೂ ಅಧಿಕ ವೈದ್ಯರು, 14ಕ್ಕೂ ಅಧಿಕ ಪೊಲೀಸರಿಗೂ ಕೊರೋನಾ ಬಂದಿದೆ.

ಮೂಲ ಪತ್ತೆಯಾಗದ ಪ್ರಕರಣಗಳ ಏರಿಕೆ!

ದ.ಕ. ಜಿಲ್ಲೆಯಲ್ಲಿ ಕೊರೋನಾ ಆರಂಭ ಕಾಲದಲ್ಲಿ ಅಂತಾರಾಷ್ಟ್ರೀಯ ಮತ್ತು ಅಂತಾರಾಜ್ಯ ಪ್ರಯಾಣ ಇತಿಹಾಸ ಇರುವವರಲ್ಲೇ ಬಹುತೇಕ ಸೋಂಕು ಕಂಡುಬಂದಿದ್ದರೆ, ಇದೀಗ ಬೇಕಾಬಿಟ್ಟಿಹರಡಲು ಆರಂಭವಾಗಿದೆ. ಅದರಲ್ಲೂ, ಯಾವುದೇ ಸೋಂಕಿತರ ಸಂಪರ್ಕವಿಲ್ಲದೆ ಸೋಂಕು ಹರಡುತ್ತಿರುವವರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ.

ಕುಕ್ಕೆ ಸುಬ್ರಮಣ್ಯ ದೇವಾಲಯದ ಸಿಬ್ಬಂದಿಗೆ ಕ್ವಾರೆಂಟೈನ್..!

ಇನ್ಫೂ$್ಲ್ಯಯೆನ್ಜಾ ಲೈಕ್‌ ಇಲ್ನೆಸ್‌ (ಐಎಲ್‌ಐ), ಸಿವಿಯರ್‌ ಅಕ್ಯೂಟ್‌ ರೆಸ್ಪಿರೇಟರಿ ಇನ್ಫೆಕ್ಷನ್‌ (ಸಾರಿ) ಕೇಸ್‌ಗಳು ಜಿಲ್ಲೆಯಲ್ಲಿ ಅತ್ಯಧಿಕವಾಗಿವೆ. ಜತೆಗೆ ಸೋಂಕಿನ ಮೂಲವೇ ಗೊತ್ತಿಲ್ಲದೆ ಹರಡುತ್ತಿರುವ ಪ್ರಮಾಣವೂ ಹೆಚ್ಚಿದೆ. ಅಷ್ಟೇ ಅಲ್ಲದೆ, ಕಳೆದ 13 ದಿನಗಳಲ್ಲಿ 750ಕ್ಕೂ ಅಧಿಕ ಮಂದಿ ಸೋಂಕಿಗೆ ಈಡಾಗಿರುವುದು ಆರೋಗ್ಯ ಅಧಿಕಾರಿಗಳನ್ನೇ ತೀವ್ರ ಆತಂಕಕ್ಕೀಡು ಮಾಡಿದೆ. ಜೂನ್‌ 21ರಿಂದ ಜುಲೈ 3 ರವರೆಗೆ ಐಎಲ್ಐ 132 ಪ್ರಕರಣಗಳು, ಸಾರಿ- 33, ಸೋಂಕಿನ ಮೂಲವೇ ಗೊತ್ತಿಲ್ಲದ 88 ಪ್ರಕರಣಗಳು ವರದಿಯಾಗಿವೆ.

ದ.ಕ. ಕೊರೋನಾ ಲೆಕ್ಕ

ಒಟ್ಟು ಸೋಂಕಿತರು- 1095

ಗುಣಮುಖರು- 516

ಮೃತರು- 22

ಚಿಕಿತ್ಸೆ ಪಡೆಯುತ್ತಿರುವವರು- 557