ಬೆಂಗಳೂರು[ಆ.09]:  ವರ ಮಹಾಲಕ್ಷ್ಮೀ ಹಬ್ಬದ ಅಂಗವಾಗಿ ‘ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌’ ಸಹಯೋಗದಲ್ಲಿ ರಾಜರಾಜೇಶ್ವರಿ ನಗರದಲ್ಲಿ ಶುಕ್ರವಾರದಿಂದ ಮೂರು ದಿನಗಳ ‘ಆರ್‌ ಆರ್‌ ನಗರ ಸಂಭ್ರಮ’ ಕಾರ್ಯಕ್ರಮ ಆಯೋಜಿಸಲಾಗಿದೆ.

ರಾಜರಾಜೇಶ್ವರಿನಗರದ ಬಾಲಕೃಷ್ಣ ಬಯಲು ರಂಗಮಂದಿರದಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ಕುರುಕ್ಷೇತ್ರ ಚಿತ್ರತಂಡ ಶುಕ್ರವಾರ ಸಂಜೆ 7 ಗಂಟೆಗೆ ಚಾಲನೆ ನೀಡಲಿದೆ. ನಾಯಕ ನಟರಾದ ಕ್ರೇಜಿಸ್ಟಾರ್‌ ರವಿಚಂದ್ರನ್‌, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ನಟಿ ಅಮೂಲ್ಯ ಹಾಗೂ ಚಿತ್ರ ನಿರ್ಮಾಪಕ ಮುನಿರತ್ನ ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮದಲ್ಲಿ ಮೂರು ದಿನಗಳು ಹತ್ತಾರು ಬಗೆಯ ಸ್ಪರ್ಧೆಗಳು ಹಾಗೂ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಫುಡ್‌ ಫೆಸ್ಟಿವಲ್‌ ಕೂಡ ಆಯೋಜಿಸಲಾಗಿದೆ. ಘಮ ಘಮಿಸುವ ದೇಸೀ ತಿಂಡಿಗಳು ದೊರೆಯಲಿವೆ. ಇದರ ಜತೆಗೆ ಹತ್ತಾರು ಬಗೆಯ ಆಟೋಟ ಸ್ಪರ್ಧೆಗಳು, ಮಕ್ಕಳಿಗಾಗಿ ವೇಷಭೂಷಣ ಸ್ಪರ್ಧೆ, ಮಹಿಳೆಯರಿಗಾಗಿ ಅಡುಗೆ ಮಹಾರಾಣಿ, ನೃತ್ಯ ಸ್ಪರ್ಧೆ, ಬೆಂಕಿ ರಹಿತ ಅಡುಗೆ, ಚಿತ್ರಕಲಾ ಸ್ಪರ್ಧೆ, ನಮ್ಮೂರು ಮುದ್ದು ಮಗು, ಬೊಂಬಾಟ್‌ ಜೋಡಿ, ಫ್ಯಾಮಿಲಿ ಫ್ಯಾಷನ್‌ ಶೋ ಸೇರಿದಂತೆ ಹತ್ತಾರು ಬಗೆಯ ಸ್ಪರ್ಧೆಗಳು ನಡೆಯಲಿವೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ.

ಮಿಮಿಕ್ರಿ ಗೋಪಿ ಹಾಗೂ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಕಲಾವಿದರು ವಿವಿಧ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದ್ದಾರೆ. ಅಡುಗೆ ಸ್ಪರ್ಧೆ ವಿಜೇತರನ್ನು ನಟ ಸಿಹಿ-ಕಹಿ ಚಂದ್ರು ಆಯ್ಕೆ ಮಾಡಲಿದ್ದಾರೆ. ಇದರ ಜತೆ ಜತೆಗೆ ಹಾಸ್ಯದ ಮೂಲಕ ಮನರಂಜಿಸಲಿದ್ದಾರೆ. ಒಟ್ಟಾರೆ ಮೂರು ದಿನಗಳ ಕಾಲ ಬೆಳಗ್ಗೆಯಿಂದ ಸಂಜೆಯವರೆಗೂ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿವೆ. ವಾರಾಂತ್ಯದಲ್ಲಿ ಒಂದಿಷ್ಟುಎಂಜಾಯ್‌ ಮಾಡಲು ಆರ್‌.ಆರ್‌. ನಗರ ಸಂಭ್ರಮದಲ್ಲಿ ಪಾಲ್ಗೊಳ್ಳಬಹುದು.