ಚಿತ್ರದುರ್ಗ(ಏ.08): ಮೊಳಕಾಲ್ಮುರು ಪಟ್ಟಣದ ಕಲ್ಗೋಡು ಮೊಹಲ್ಲಾ ಸಮೀಪದ ಗುಡ್ಡದಲ್ಲಿ ಸೋಮವಾರ ರಾತ್ರಿ ಚಿರತೆಗಳು ಪ್ರತ್ಯಕ್ಷವಾಗಿದ್ದು ಇದರಿಂದಾಗಿ ಸ್ಥಳೀಯ ನಿವಾಸಿಗಳು ತೀವ್ರ ಆತಂಕಕ್ಕೊಳಗಾಗಿದ್ದಾರೆ.

ಪಟ್ಟಣಕ್ಕೆ ಹೊಂದಿಕೊಂಡಂತಿರುವ ಇಲ್ಲಿನ ಗುಡ್ಡ ಚಿರತೆಗಳ ಆವಾಸಸ್ಥಾನ ಎನ್ನಲಾಗಿದೆ. ಕಳೆದೆರಡು ದಿನಗಳಿಂದ ರಾತ್ರಿ ಸಮಯದಲ್ಲಿ ಮೂರು ಚಿರತೆಗಳು ಗುಡ್ಡದಲ್ಲಿ ಸಂಚರಿಸುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಯಲ್ಲಾಪುರ ಪಟ್ಟಣದಲ್ಲಿ ಹಂದಿಗಳ ಅಸಹಜ ಸಾವು

ಸಾರ್ವಜನಿಕರು ಚಿರತೆಗಳು ಓಡಾಟವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಚಿರತೆ ಸೆರೆಹಿಡಿಯಲು ಗುಡ್ಡದ ಕೆಳ ಭಾಗದಲ್ಲಿ ಬೋನನ್ನಿರಿಸಿದ್ದಾರೆ. ರಾತ್ರಿ ಸಮಯದಲ್ಲಿ ಮನೆಯಿಂದ ಯಾರೂ ಹೊರಬಾರದಂತೆ ಧ್ವನಿವರ್ಧಕದಲ್ಲಿ ಸ್ಥಳೀಯ ನಿವಾಸಿಗಳಿಗೆ ಮಾಹಿತಿ ನೀಡಲಾಗಿದೆ. ಜತೆಗೆ ಗುಡ್ಡಕ್ಕೆ ತೆರಳದಂತೆ ತಿಳಿಸಿದ್ದು, ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ವಲಯ ಅರಣ್ಯಾಧಿಕಾರಿ ನಾಗೇಂದ್ರ ನಾಯಕ, ಉಪ ವಲಯ ಅರಣ್ಯಾಧಿಕಾರಿ ಹಸನ್‌ ಬಾಷ, ವನಪಾಲಕರಾದ ಚಾಂದ್‌ ಬಾಷ, ಸುನಿಲ್‌, ಶಿವರಾಜ್‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.