ಬೆಂಗಳೂರು(ಡಿ.16): ಸ್ವಯಂ ಘೋಷಣೆ ಆಸ್ತಿ ತೆರಿಗೆ ಪಾವತಿಯಡಿ ಆಸ್ತಿ ಮಾಲೀಕರು ಘೋಷಿಸಿಕೊಂಡ ಆಸ್ತಿಯಲ್ಲಿ 3.90 ಲಕ್ಷ ಆಸ್ತಿ ಮಾಲಿಕರು ತಪ್ಪು ಮಾಹಿತಿ ನೀಡಿ ಆಸ್ತಿ ತೆರಿಗೆ ವಂಚನೆ ಮಾಡಿರುವುದು ಪತ್ತೆಯಾಗಿದ್ದು, ಡಿ.14ರಿಂದ ನೋಟಿಸ್‌ ನೀಡಿ ದಂಡ ಸಹಿತ ಬಾಕಿ ಮೊತ್ತ ವಸೂಲಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 17 ಲಕ್ಷ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಒಳಪಟ್ಟಿವೆ. ಈ ಪೈಕಿ 3.90 ಲಕ್ಷ ಮಂದಿ ಆಸ್ತಿ ವಿವರವನ್ನು ತಪ್ಪಾಗಿ ನಮೂದಿಸಿ ಬಿಬಿಎಂಪಿಗೆ ಆಸ್ತಿ ತೆರಿಗೆ ವಂಚನೆ ಮಾಡುತ್ತಿರುವುದು ಕಂಡು ಬಂದಿದೆ.

ಇನ್ನು ಕೆಲವು ಆಸ್ತಿ ಮಾಲಿಕರು ಕಟ್ಟಡ ಅಥವಾ ನಿವೇಶನವನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದರೂ ವಸತಿ ಮತ್ತು ಸ್ವಂತಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದಾಗಿ ನಮೂದಿಸಿದ್ದಾರೆ. ಇದರಿಂದ ಬಿಬಿಎಂಪಿಗೆ ಕೋಟ್ಯಂತರ ರು. ಆಸ್ತಿ ತೆರಿಗೆ ನಷ್ಟವಾಗುತ್ತಿದೆ ಎಂದರು.

ಬಿಬಿಎಂಪಿಯ ವ್ಯಾಪ್ತಿ 1 ಕಿ.ಮೀ. ಹೆಚ್ಚಳ..!

6 ವಲಯಗಳಾಗಿ ವಿಭಾಗ:

ಈಗ ಹೊಸದಾಗಿ ಪಾಲಿಕೆ ವ್ಯಾಪ್ತಿಯ ಎಲ್ಲ ಆಸ್ತಿಗಳನ್ನು ಗೈಡೆನ್ಸ್‌ ವ್ಯಾಲ್ಯೂ (ಪ್ರಸ್ತುತ ಮಾರುಕಟ್ಟೆ ಬೆಲೆ) ಆಧರಿಸಿ ಎ, ಬಿ, ಸಿ, ಡಿ, ಇ ಹಾಗೂ ಜಿ ಎಂದು ಆರು ವಲಯಗಳಾಗಿ ವಿಭಾಗಿಸಿ ಜಿಐಎಸ್‌ ಮ್ಯಾಪಿಂಗ್‌ ಮಾಡಲಾಗಿದೆ. ಜನರು ವಲಯಕ್ಕೆ ಅನುಗುಣವಾಗಿ ಸ್ವಯಂ ಆಸ್ತಿ ಘೋಷಣೆಯಲ್ಲಿ ಸೂಕ್ತ ಮಾಹಿತಿ ಭರ್ತಿ ಮಾಡಲು ಅವಕಾಶ ನೀಡಲಾಗಿದೆ. ವಲಯ ವರ್ಗೀಕರಣವನ್ನು ಬಿಬಿಎಂಪಿ ಕಂದಾಯ ಅಧಿಕಾರಿಗಳಾಗಲೀ ಅಥವಾ ಆಸ್ತಿ ಮಾಲಿಕರಾಗಲೀ ಬದಲಾವಣೆ ಮಾಡಲು ಅವಕಾಶ ಇರುವುದಿಲ್ಲ. ವಲಯಕ್ಕೆ ನಿಗದಿ ಪಡಿಸಿದ ದರದಲ್ಲಿಯೇ ಆಸ್ತಿ ತೆರಿಗೆ ಪಾವತಿ ಮಾಡಬೇಕು ಎಂದು ವಿವರಿಸಿದರು.

ದುಪ್ಪಟ್ಟು ತೆರಿಗೆ ವಸೂಲಿ

ಈ ರೀತಿ ತಪ್ಪು ಮಾಹಿತಿ ನೀಡಿದ 3.90 ಲಕ್ಷ ಆಸ್ತಿ ಮಾಲಿಕರ ಪಟ್ಟಿಯನ್ನು ವಲಯ ಹಾಗೂ ವಾರ್ಡ್‌ ವಾರು ಸಿದ್ಧಪಡಿಸಲಾಗಿದ್ದು, ಡಿ.14ರ ಸೋಮವಾರದಿಂದ ನೋಟಿಸ್‌ ನೀಡಲಾಗುತ್ತಿದೆ. ಈ ರೀತಿ ತೆರಿಗೆ ವಂಚನೆ ಮಾಡಿದವರಿಗೆ 2016 ರಿಂದ ನೈಜ ವಿಸ್ತೀರ್ಣದ ತೆರಿಗೆ ಆಧರಿಸಿ ದುಪ್ಪಟ್ಟು ತೆರಿಗೆ ಮತ್ತು ಮಾಸಿಕ ಶೇ.2 ಬಡ್ಡಿಯನ್ನು ವಸೂಲಿ ಮಾಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.