ಚಿಕ್ಕಮಗಳೂರು(ಜು.09): ಕೊರೋನಾ ವೈರಸ್‌ ದಿನೇ ದಿನೇ ಕಾಫಿಯ ನಾಡನ್ನು ತಲ್ಲಣಗೊಳಿಸುತ್ತಿದ್ದು, ಬುಧವಾರ ಒಂದೇ ದಿನ 23 ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ಅತಿ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಇನ್ನು ಕೊರೋನಾದಿಂದ ಚಿಕ್ಕಮಗಳೂರು ನಗರದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಕೋವೀಡ್‌ನಿಂದ ಮೃತಪಟ್ಟವರ ಸಂಖ್ಯೆ ಎರಡಕ್ಕೆ ಏರಿದೆ.

ಕೊರೋನಾ ಸೋಂಕಿತ ವಿಧಾನಪರಿಷತ್‌ ಸದಸ್ಯ ಎಂ.ಕೆ.ಪ್ರಾಣೇಶ್‌ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಪರೀಕ್ಷೆಗೆ ಒಳಪಡಿಸಿದಾಗ ಎಸ್‌.ಎಲ್‌.ಭೋಜೇಗೌಡ ಅವರಿಗೆ ಸೋಂಕು ತಗಲಿರುವುದು ಪತ್ತೆಯಾಗಿದೆ. ಪ್ರಾಣೇಶ್‌ ಅವರ ಸಂಪರ್ಕದಲ್ಲಿರುವ ಸಚಿವ ಸಿ.ಟಿ.ರವಿ, ಮಾಜಿ ಸಚಿವ ಡಿ.ಎನ್‌.ಜೀವರಾಜ್‌, ಕಡೂರು ಶಾಸಕ ಬೆಳ್ಳಿ ಪ್ರಕಾಶ್‌ ಸೇರಿ ಹಲವು ಬಿಜೆಪಿ ಮುಖಂಡರು ಹಾಗೂ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಅವರ ಗಂಟಲ ದ್ರವವನ್ನು ತೆಗೆದು ಮಂಗಳವಾರ ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು, ಎಸ್‌.ಎಲ್‌.ಭೋಜೇಗೌಡ ಹೊರತುಪಡಿಸಿ ಪ್ರಾಣೇಶ್‌ ಅವರ ಸಂಪರ್ಕದಲ್ಲಿರುವ ಎಲ್ಲರ ವರದಿಗಳು ನೆಗೆಟಿವ್‌ ಬಂದಿವೆ.

123 ಪ್ರಕರಣ:

ಬುಧವಾರ ಚಿಕ್ಕಮಗಳೂರು ತಾಲೂಕಿನಲ್ಲಿ 12, ಕೊಪ್ಪ-1, ಕಡೂರು-8, ಎನ್‌.ಆರ್‌.ಪುರ-1 ಹಾಗೂ ಅಜ್ಜಂಪುರ ತಾಲೂಕಿನಲ್ಲಿ 1 ಪ್ರಕರಣ ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 123ಕ್ಕೆ ಏರಿದೆ. ಈ ಪೈಕಿ 51 ಮಂದಿ ಗುಣಮುಖರಾಗಿ ಮನೆಗಳಿಗೆ ತೆರಳಿದ್ದಾರೆ. 54 ಸಕ್ರಿಯ ಪ್ರಕರಣಗಳಿದ್ದು, ಬುಧವಾರ 16 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಸೋಂಕಿತ ಮಹಿಳೆ ಸಾವು:

ಜಿಲ್ಲೆಯಲ್ಲಿ ಮರಣ ಹೊಂದಿದವರಿಗೂ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿದ್ದು, ಇದೇ ರೀತಿ ಬುಧವಾರ ಮೃತಪಟ್ಟಮೂವರ ಪರೀಕ್ಷೆ ನಡೆಸಿದಾಗ ಚಿಕ್ಕಮಗಳೂರಿನ ಉಪ್ಪಳ್ಳಿ ಬಡಾವಣೆಯ 52 ವರ್ಷದ ಮಹಿಳೆ ಕೊವೀಡ್‌ನಿಂದ ಮೃತಪಟ್ಟಿರುವುದು ದೃಢಪಟ್ಟಿದೆ. ಅವರು ಬೆಂಗಳೂರಿನಿಂದ ಬಂದಿದ್ದು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಮಂಗಳವಾರ ನಿಧನರಾಗಿದ್ದರು.

ಲ್ಯಾಬ್‌ ರಿಪೋರ್ಟ್‌:

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈವರೆಗೆ 9582 ಮಂದಿಯ ಗಂಟಲ ದ್ರವ ಮಾದರಿ ಸಂಗ್ರಹಿಸಿ ಹಾಸನ, ಬೆಂಗಳೂರಿನ ಲ್ಯಾಬ್‌ಗಳಿಗೆ ಕಳುಹಿಸಲಾಗಿದ್ದು, ಈವರೆಗೆ 7479 ಮಂದಿಯ ವರದಿ ಮಾತ್ರ ಬಂದಿದೆ. ಇನ್ನು 2103 ಮಂದಿಯ ವರದಿ ಬಾಕಿ ಇದೆ. ಈ ನಡುವೆ ಬೆಂಗಳೂರಿನ ನಿಮ್ಹಾನ್ಸ್‌ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತಿರುವ ಮಾದರಿಗಳ ವರದಿ ಬೇಗ ಬರುತ್ತಿದ್ದು, ಹಾಸನಕ್ಕೆ ಲ್ಯಾಬ್‌ನ ವರದಿ ತಡವಾಗುತ್ತಿದೆ. ಈ ವಿಳಂಬದಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನಲಾಗಿದೆ.

ಕಡೂರಲ್ಲಿ 8 ಪ್ರಕರಣ:

ಕಡೂರು: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ 8 ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ ಎಂದು ತಾಲೂಕು ವೈದ್ಯಾಧಿಕಾರಿ ರವಿಕುಮಾರ್‌ ತಿಳಿಸಿದ್ದಾರೆ.

ಕೊರೋನಾಗೆ ಶಿವಮೊಗ್ಗ ನಗರದಲ್ಲಿ ವೃದ್ದ ಬಲಿ..!

ಕಡೂರು ಪಟ್ಟಣದಲ್ಲಿ 3, ಚಿಕ್ಕ ದೇವನೂರಿನಲ್ಲಿ 2 ಹಾಗೂ ತಾಲೂಕಿನ ಪಂಚನಹಳ್ಳಿ ಹೋಬಳಿಯಲ್ಲಿ 3 ಪ್ರಕರಣಗಳು ಧೃಢಪಟ್ಟಿದ್ದು, ಕಡೂರು ಪಟ್ಟಣದ ಕೆ.ವಿ.ಕಾಲೋನಿಗೆ ಬೆಂಗಳೂರಿನಿಂದ ಬಂದಿದ್ದ 37 ವರ್ಷದ ಪುರುಷ, ಫ್ಯಾನ್ಸಿ ಸ್ಟೋರ್‌ನ ಮಾಲೀಕ, ಸೋಂಕಿತ ವ್ಯಕ್ತಿಯೊಬ್ಬರ ಪತ್ನಿ ಮತ್ತು ಪುತ್ರನಿಗೆ ಪಾಸಿಟಿವ್‌ ಬಂದಿದೆ. ಚಿಕ್ಕಮಗಳೂರಿನ ಸೋಂಕಿತನ ಪ್ರಾಥಮಿಕ ಸಂಪರ್ಕ ಹೊಂದಿದ್ದ ಚಿಕ್ಕದೇವನೂರಿನ ತಾಯಿ, ಮಗನಿಗೂ ಸೋಂಕು ದೃಢಪಟ್ಟಿದೆ.

ಹರಿಯಾಣದಿಂದ ಬಂದ ವ್ಯಕ್ತಿಗೆ ಪಾಸಿಟಿವ್‌:

ನರಸಿಂಹರಾಜಪುರ: ಇಲ್ಲಿನ ಮೆಣಸೂರು ಬೈಪಾಸ್‌ ರಸ್ತೆಯಲ್ಲಿ ವಾಸ ಮಾಡುತ್ತಿದ್ದ 58 ವರ್ಷದ ವ್ಯಕ್ತಿಯೊಬ್ಬನಿಗೆ ಕೊರೋನಾ ಪಾಸಿಟಿವ್‌ ದೃಢಪಟ್ಟಿದ್ದು, ಹರಿಯಾಣದ ತನ್ನ ಮಗಳ ಮನೆಗೆ ಹೋಗಿದ್ದ ಈ ವ್ಯಕ್ತಿಯು ದೆಹಲಿ, ಬೆಂಗಳೂರು, ಶಿವಮೊಗ್ಗದ ಮೂಲಕ ಜೂನ್‌ 30ರಂದು ನರಸಿಂಹರಾಜಪುರಕ್ಕೆ ಬಂದಿದ್ದರು. ಅವರನ್ನು ಹೋಂ ಕ್ವಾರಂಟೈನ್‌ ಮಾಡಲಾಗಿತ್ತು. 4 ದಿನಗಳ ಹಿಂದೆ ಜ್ವರ, ಶೀತದ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಗಂಟಲುದ್ರವ ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಬುಧವಾರ ಸೋಂಕಿರುವುದು ದೃಢಪಟ್ಟಿದೆ.

ಗ್ರಾಮ ಸಹಾಯಕನಿಗೂ ಸೋಂಕು:

ಕೊಪ್ಪ: ಗ್ರಾಮ ಸಹಾಯಕರೊಬ್ಬರಿಗೆ ಕೋವಿಡ್‌ ಪಾಸಿಟಿವ್‌ ದೃಢಪಟ್ಟಹಿನ್ನೆಲೆಯಲ್ಲಿ ಹುಲುಮಕ್ಕಿಯ ಸೋಂಕಿತ ವ್ಯಕ್ತಿಯ ಮನೆ ಸೇರಿ ನೂರು ಮೀಟರ್‌ ಸುತ್ತಳತೆಯ ಪ್ರದೇಶವನ್ನು ಅಧಿಕಾರಿಗಳು ಬುಧವಾರ ಸೀಲ್‌ಡೌನ್‌ ಮಾಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಬಾಳಗಡಿಯ ಕಂದಾಯ ನಿರೀಕ್ಷಕರ ಕಚೇರಿಗೂ ಬೀಗ ಹಾಕಲಾಗಿದೆ. ಸೋಂಕಿತ ಆಟೋ ಚಾಲಕನಾಗಿಯೂ ಕಾರ್ಯನಿರ್ವಹಿಸುತ್ತಿದ್ದ. ಇದೀಗ ಈತನ ಆಟೋದಲ್ಲಿ ಪ್ರಯಾಣಿಸಿದವರ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಪತ್ನಿಯ ಗಂಟಲ ದ್ರವ ಪರೀಕ್ಷೆಗೆ ಕಳಿಸಿ ಕ್ವಾರಂಟೈನ್‌ ಮಾಡಲಾಗಿದೆ.