ಚರ್ಮ​ಗಂಟು ರೋಗಕ್ಕೆ ಜಾನು​ವಾ​ರು​ಗಳು ಬಲಿ..!

ಕೇವಲ ಒಂದು ತಿಂಗ​ಳಲ್ಲಿ 29 ಜಾನು​ವಾ​ರು​ಗಳ ಸಾವು, ರಾಮನಗರ ಜಿಲ್ಲೆಯ ನಾಲ್ಕು ತಾಲೂ​ಕು​ಗ​ಳಲ್ಲಿಯೂ ಹರ​ಡಿ​ರುವ ಸೋಂಕು, ರೋಗ​ದಿಂದ ಬಳ​ಲು​ತ್ತಿ​ರುವ 191 ಜಾನು​ವಾ​ರು​ಗಳ ಸ್ಥಿತಿ ಚಿಂತಾ​ಜ​ನ​ಕ

29 Cattle Dies Due to Lumpy Skin Disease in Ramanagara grg

ಎಂ.ಅ​ಫ್ರೋಜ್‌ ಖಾನ್‌

ರಾಮ​ನ​ಗರ(ನ.03):  ನಿರಂತರ ಮಳೆಯಿಂದ ಬೆಳೆ ಹಾನಿಯಾಗಿ ಅಪಾರ ನಷ್ಟಅನುಭವಿಸುತ್ತಿರುವ ರೈತರು ಇದೀಗ ಜಾನುವಾರುಗಳಿಗೆ ತಗಲಿರುವ ಚರ್ಮಗಂಟು ರೋಗದಿಂದ ಮತ್ತಷ್ಟುಕಂಗಾಲಾಗಿದ್ದಾರೆ. ಈವ​ರೆಗೆ ಜಿಲ್ಲೆ​ಯಲ್ಲಿ ಕೇವಲ ಒಂದು ತಿಂಗ​ಳಲ್ಲಿ 29 ಜಾನು​ವಾ​ರು​ಗಳು ಈ ರೋಗಕ್ಕೆ ತುತ್ತಾಗಿವೆ. ಹೈನು​ಗಾ​ರಿಕೆಯನ್ನೇ ನಂಬಿ ಜೀವನ ಸಾಗಿ​ಸು​ತ್ತಿ​ರುವ ಕುಟುಂಬ​ಗಳು ರಾಸು​ಗ​ಳನ್ನು ಕಳೆ​ದು​ಕೊಂಡು ಕಣ್ಣೀ​ರಿ​ನಲ್ಲಿ ಕೈ ತೊಳೆ​ಯು​ವಂತಾ​ಗಿ​ದೆ. ಒಂದು ಹಸುವಿನಿಂದ ಮತ್ತೊಂದು ಹಸುವಿಗೆ ಬೇಗನೇ ಹರಡುವ ಈ ಚರ್ಮಗಂಟು ರೋಗ ಬಂದೊಡನೆ ಹಸುಗಳಲ್ಲಿ ಹಾಲು ಉತ್ಪಾದನೆ ಕಡಿಮೆಯಾಗುತ್ತಿದೆ. ಜೊತೆಗೆ ಆಹಾರ ಸೇವಿ​ಸು​ವು​ದನ್ನು ಬಿಟ್ಟು ಏಕಾಏಕಿ ಹಸುಗಳು ಬಡಕಲಾಗುತ್ತಿವೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡಿಸದಿದ್ದರೆ ರೋಗ ಉಲ್ಪಣವಾಗಿ ಸಾವನ್ನಪ್ಪುತ್ತಿವೆ.

ರೋಗ ಹತೋಟಿಗೆ ತರಲು ಸಾವಿರಾರು ರುಪಾಯಿ ಖರ್ಚು ಮಾಡಿದರೂ ಲಕ್ಷಾಂತರ ರುಪಾಯಿ ಬೆಲೆ ಬಾಳುವ ಹಸು​, ಎತ್ತುಗಳು ಪ್ರತಿನಿತ್ಯ ಸಾವನ್ನಪ್ಪುತ್ತಿವೆ. ಸದ್ಯಕ್ಕೆ ಜಿಲ್ಲೆ​ಯಲ್ಲಿ (ಅ​ಕ್ಟೋಬರ್‌ 31ರವ​ರೆ​ಗೆ​)351 ಜಾನು​ವಾ​ರು​ಗ​ಳಲ್ಲಿ ರೋಗ ಕಾಣಿ​ಸಿ​ಕೊಂಡಿದ್ದು, 131 ಜಾನು​ವಾ​ರು​ಗಳು ಗುಣ​ಮು​ಖ​ವಾ​ಗು​ತ್ತಿವೆ. 191 ಜಾನು​ವಾ​ರು​ಗ​ಳ ಸ್ಥಿತಿ ಚಿಂತಾ​ಜ​ನ​ಕ​ವಾ​ಗಿದೆ.

ಕೊರಟಗೆರೆಯಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ: ರೈತರಲ್ಲಿ ಆತಂಕ

ತಮಿಳುನಾಡಿನ ಗಡಿಗಳಿಗೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಕಂಡು ಬಂದಿದ್ದ ಚರ್ಮ ಗಂಟುರೋಗ ಈಗ ಹತ್ತಾರು ಗ್ರಾಮ​ಗ​ಳಿಗೆ ವ್ಯಾಪಿ​ಸಿದೆ. ರಾಮ​ನ​ಗರ ತಾಲೂ​ಕಿ​ನಲ್ಲಿ 5, ಚನ್ನ​ಪ​ಟ್ಟಣ - 02, ಮಾಗಡಿ - 01 ಹಾಗೂ ಕನ​ಕ​ಪುರ ತಾಲೂ​ಕಿ​ನಲ್ಲಿ 21 ಸೇರಿ 29 ಜಾನು​ವಾ​ರು​ಗಳು ಬಲಿ​ಯಾ​ಗಿ​ವೆ. ಇವು​ಗಳ ಸಂಖ್ಯೆ ಮತ್ತಷ್ಟುಹೆಚ್ಚಾ​ಗುವ ಆತಂಕ ಎದು​ರಾ​ಗಿ​ದೆ.

ರೋಗ ನಿಯಂತ್ರಣ ಮತ್ತು ಮುನ್ನೆ​ಚ್ಚ​ರಿಕೆ ಸಲು​ವಾಗಿ ಜಿಲ್ಲಾಡಳಿತ ಒಂದು ತಿಂಗಳ ಕಾಲ ಜಾತ್ರೆ, ಧನಗಳ ಸಂತೆ ಮತ್ತು ಜಾನುವಾರಗಳ ಸಾಗಾಣಿಕೆಯನ್ನು ನಿಷೇಧ ಮಾಡಿದ್ದರೂ ಸಹ ರೋಗ ಹರ​ಡು​ವಿಕೆ ಪ್ರಮಾಣ ನಿಯಂತ್ರ​ಣಕ್ಕೆ ಬರು​ತ್ತಿ​ಲ್ಲ. ಜಾನುವಾರುಗಳಿಗೆ ತೀವ್ರವಾಗಿ ತಗಲುತ್ತಿರುವ ಗಂಟುರೋಗಕ್ಕೆ ನಿರ್ದಿಷ್ಟವಾಗಿ ಲಸಿಕೆ ಇಲ್ಲದಿರುವುದು ಪಶು ವೈದ್ಯಾಧಿಕಾರಿಗಳಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಸರ್ಕಾರ ಈ ಕುರಿತು ಕೂಡಲೇ ಲಸಿಕೆ ಬಿಡುಗಡೆಗೊಳಿಸಿ ನಮ್ಮ ಸಂಕಷ್ಟವನ್ನು ದೂರ ಮಾಡಬೇಕು ಎನ್ನುತ್ತಿದ್ದಾ​ರೆ ರೈತ​ರು.

ಸಾಮೂಹಿಕವಾಗಿ ಲಸಿಕೆ ವಿತ​ರ​ಣೆ :

ಜಿಲ್ಲೆ​ಯಲ್ಲಿ ಸರಿ​ಸು​ಮಾರು 2,87,502 ಜಾನು​ವಾ​ರು​ಗ​ಳಿದ್ದು, ಇಲ್ಲಿ​ವ​ರೆಗೆ 51,477 ಜಾನು​ವಾ​ರು​ಗ​ಳಿಗೆ ಲಸಿಕೆ ಹಾಕ​ಲಾ​ಗಿದೆ. ಪಶು ಪಾಲನಾ ಇಲಾ​ಖೆ​ಯಿಂದ 50 ಸಾವಿರ, ಕೆಎಂಎಫ್‌ ನಿಂದ 19,229 ಸೇರಿ ಒಟ್ಟು 69,229 ಲಸಿಕೆ ಪೂರೈ​ಕೆ​ಯಾ​ಗಿದ್ದು, ಹೆಚ್ಚಿನ ಲಸಿ​ಕೆ​ಗಾಗಿ ಬೇಡಿಕೆ ಸಲ್ಲಿ​ಸ​ಲಾ​ಗಿದೆ.

ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡುವ ಮೂಲಕ ರೋಗ ನಿಯಂತ್ರಣಕ್ಕೆ ತರಲು ಪ್ರಯತ್ನ ನಡೆಸಲಾಗುತ್ತಿದೆ. ರೋಗ ಕಂಡು ಬಂದ ಗ್ರಾಮದ ಸುತ್ತ ಮುತ್ತಲ 5 ಕಿಲೋಮೀಟರ್‌ ವ್ಯಾಪ್ತಿಯ ಹಸುಗಳಿಗೆ ಹಾಗೂ ಜಾನುವಾರುಗಳಿಗೆ ಲಸಿಕೆ ಹಾಕುವ ಕೆಲಸವೂ ಆರಂಭವಾಗಿದೆ ಎಂದು ಪಶು ಪಾಲನೆ ಮತ್ತು ಪಶು ವೈದ್ಯ​ಕೀಯ ಸೇವಾ ಇಲಾಖೆ ಉಪ​ನಿ​ರ್ದೇ​ಶಕ ಆಂಜ​ನಪ್ಪ ಕನ್ನ​ಡ​ಪ್ರ​ಭಕ್ಕೆ ಪ್ರತಿ​ಕ್ರಿಯೆ ನೀಡಿ​ದರು.

ಯಾವ್ಯಾವ ಹಳ್ಳಿ​ಗ​ಳಲ್ಲಿ ರೋಗ ಉಲ್ಬಣ:

ರಾಮ​ನ​ಗರ ಜಿಲ್ಲೆ​ಯಲ್ಲಿ ಅತಿ ಹೆಚ್ಚು ಕನ​ಕ​ಪುರ ತಾಲೂ​ಕಿ​ನಲ್ಲಿ 147 ಹಾಗೂ ಅತಿ ಕಡಿಮೆ ಮಾಗಡಿ ತಾಲೂ​ಕಿ​ನಲ್ಲಿ 48 ಜಾನು​ವಾ​ರು​ಗಳು ರೋಗಕ್ಕೆ ತುತ್ತಾ​ಗಿವೆ. ಉಳಿ​ದಂತೆ ರಾಮ​ನ​ಗರ ತಾಲೂ​ಕಿ​ನಲ್ಲಿ 83, ಚನ್ನ​ಪ​ಟ್ಟಣ ತಾಲೂ​ಕಿ​ನಲ್ಲಿ 73 ಜಾನು​ವಾ​ರು​ಗ​ಳಿಗೆ ರೋಗ ತಗು​ಲಿ​ದೆ.

ಬಿಡಾಡಿ ದನಗಳಿಗೂ ಒಕ್ಕರಿಸಿದ ಚರ್ಮಗಂಟು ರೋಗ, ಆತಂಕ

ರಾಮ​ನ​ಗರ ತಾಲೂ​ಕಿನ ಲಕ್ಷ್ಮೀ​ಪುರ, ಲಕ್ಕ​ನ​ದೊಡ್ಡಿ, ಚನ್ನಾ​ಪು​ರ​ದೊಡ್ಡಿ, ಬಸ​ವ​ನ​ಪುರ, ಪಾಲ​ಭೋ​ವಿ​ದೊಡ್ಡಿ, ಮಾಯ​ಗಾ​ನ​ಹ​ಳ್ಳಿ, ಕೆಂಪೇ​ಗೌ​ಡ​ನ​ದೊಡ್ಡಿ, ಅಂಕ​ನ​ಹಳ್ಳಿ, ಮುತ್ತು​ರಾ​ಯ​ನ​ಗು​ಡಿ​ಪಾಳ್ಯ, ಕಗ್ಗ​ಲ​ಹಳ್ಳಿ, ವಿಭೂ​ತಿ​ಕೆರೆ, ಕಾಡ​ನ​ಕು​ಪ್ಪೆ , ಸುಗ್ಗ​ನ​ಹ​ಳ್ಳಿ, ಗಾಣ​ಕಲ್ಲು , ಹಳ್ಳಿ​ಮಾಳ, ಅಣ್ಣ​ಹಳ್ಳಿ, ವಾಜ​ರ​ಹಳ್ಳಿ, ಕೆಂಚ​ನ​ಕುಪ್ಪೆ, ಗಿರಿ​ನ​ಗರ, ಕಲ್ಲು​ಗೋ​ಪ​ಹಳ್ಳಿ, ಬಿ.ಬ​ನ್ನಿ​ಕುಪ್ಪೆ ಗ್ರಾಮ​ಗಳ ಜಾನು​ವಾ​ರು​ಗ​ಳಲ್ಲಿ ರೋಗ ಕಾಣಿ​ಸಿ​ಕೊಂಡಿದೆ.

ಚನ್ನ​ಪಟ್ಟಣ ತಾಲೂ​ಕಿನ ಕೋಡಂಬಳ್ಳಿ, ವಡ್ಡ​ರ​ಹಳ್ಳಿ, ಕೊಂಡಾ​ಪುರ, ಬಾಣಂತ​ಹಳ್ಳಿ, ಮಾಕಳಿ, ಗೊಲ್ಲ​ರ​ದೊಡ್ಡಿ, ರಾಂಪುರ, ಕನ್ನ​ಮಂಗಲ, ದಶ​ವಾರ, ಮಂಗಾ​ಡ​ಹಳ್ಳಿ, ಬಲ್ಲಾ​ಪ​ಟ್ಟಣ, ಎಚ್‌.ಮೊ​ಗೇ​ನ​ಹಳ್ಳಿ, ತೌಟ​ನ​ಹಳ್ಳಿ, ನಾಗ​ವಾರ, ಆಣಿ​ಗೆರೆ, ದೇವ​ರ​ಹಳ್ಳಿ, ಮುದ​ಗೆರೆ ಗ್ರಾಮ​ಗಳಲ್ಲಿ ರೋಗ ಹರ​ಡಿದೆ.
 

Latest Videos
Follow Us:
Download App:
  • android
  • ios