ಬಳ್ಳಾರಿ: ಕೊಟ್ಟೂರೇಶ್ವರ ಸ್ವಾಮಿ ಹುಂಡಿಯಲ್ಲಿ 25 ಲಕ್ಷ ಸಂಗ್ರಹ
ಶ್ರೀಗುರು ಕೊಟ್ಟೂರೇಶ್ವರ (ಬಸವೇಶ್ವರ) ದೇವಸ್ಥಾನದ ಭಕ್ತರ ಕಾಣಿಕೆ ಹುಂಡಿಗಳಲ್ಲಿ 25,59,861 ಹಣ ಸಂಗ್ರಹ| ಬೆಳಗ್ಗೆ 12 ಗಂಟೆಯಿಂದ ಆರಂಭಗೊಂಡ ಎಣಿಕೆ ಕಾರ್ಯ ರಾತ್ರಿ 7.30ರವರೆಗೂ ನಡೆದ ಎಣಿಕೆ ಕಾರ್ಯ| ಬಳ್ಳಾರಿ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿರವ ಶ್ರೀಗುರು ಕೊಟ್ಟೂರೇಶ್ವರ ದೇವಸ್ಥಾನ|
ಕೊಟ್ಟೂರು(ಜ.17): ಇಲ್ಲಿನ ಪ್ರಸಿದ್ಧ ಶ್ರೀಗುರು ಕೊಟ್ಟೂರೇಶ್ವರ (ಬಸವೇಶ್ವರ) ದೇವಸ್ಥಾನದ ಭಕ್ತರ ಕಾಣಿಕೆ ಹುಂಡಿಗಳಲ್ಲಿ 25,59,861 ಹಣ ಸಂಗ್ರಹವಾಗಿದೆ.
ಇಲ್ಲಿನ ಶ್ರೀಸ್ವಾಮಿ ಹಿರೇಮಠದಲ್ಲಿನ ಮೂರು ಖಾಯಂ ಮತ್ತು ತಾತ್ಕಾಲಿಕ ಹುಂಡಿಗಳಲ್ಲಿ ಇಷ್ಟು ಪ್ರಮಾಣದ ಹಣ ಸಂಗ್ರಹಗೊಂಡಿರುವುದು ಗುರುವಾರ ನಡೆದ ಎಣಿಕೆ ಕಾರ್ಯದಲ್ಲಿ ತಿಳಿದುಬಂದಿದೆ. ಬೆಳಗ್ಗೆ 12 ಗಂಟೆಯಿಂದ ಆರಂಭಗೊಂಡ ಎಣಿಕೆ ಕಾರ್ಯ ರಾತ್ರಿ 7.30ರವರೆಗೂ ನಿರಂತರ ನಡೆಯಿತು.
ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ಮತ್ತು ದೇವಸ್ಥಾನದ ಆಯಾಗಾರ ಬಳಗದವರೊಂದಿಗೆ ಮತ್ತಿತರರು ಎಣಿಕೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಕಳೆದ ಮೂರು ತಿಂಗಳಲ್ಲಿ ಇಷ್ಟು ಪ್ರಮಾಣದ ಹಣ ಸಂಗ್ರಹಗೊಂಡಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್. ಪ್ರಕಾಶರಾವ್ ತಿಳಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್. ಪ್ರಕಾಶ ರಾವ್, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಧೀಕ್ಷಕ ಮಲ್ಲಪ್ಪ, ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ಸಿದ್ದಲಿಂಗನಗೌಡ, ದೇವಸ್ಥಾನದ ಧರ್ಮಕರ್ತ ಸಿ.ಎಚ್.ಎಂ. ಗಂಗಾಧರ, ಆಯಾಗಾರ ಬಳಗದ ದೇವರಮನಿ ಕರಿಯಪ್ಪ, ಮರಬದ ನಾಗರಾಜ, ಪ್ರೇಮಾನಂದಗೌಡ, ಕೆ.ಎಸ್. ನಾಗರಾಜ್‌ಗೌಡ, ಹಂಪಜ್ಜರ ಪ್ರಕಾಶ, ಮತ್ತಿತರರು ಎಣಿಕ ಕಾರ್ಯ ನಡೆಯುವಾಗ ಹಾಜರಿದ್ದರು.
ಕಾಣಿಕೆ ಹುಂಡಿಗಳಲ್ಲಿ ಹಣದ ಜೊತೆಗೆ ಕೆಲ ಭಕ್ತರು ಚಿನ್ನ, ಬೆಳ್ಳಿ ಮತ್ತಿತರ ಸಣ್ಣ ಪ್ರಮಾಣದ ಆಭರಣಗಳನ್ನು ಕಾಣಿಕೆ ರೂಪವಾಗಿ ಹಾಕಿದ್ದರು. ಹೀಗೆ ಸಿಕ್ಕ ಚಿನ್ನ, ಬೆಳ್ಳಿ, ಮತ್ತಿತರ ಕಾಣಿಕೆಗಳನ್ನು ಮತ್ತೆ ಕಾಣಿಕೆ ಹುಂಡಿಗಳಲ್ಲಿ ಇರಿಸಿ ಬೀಗ ಜಡಿಯಲಾಗಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದರು.
18 ರಂದು ಪೂರ್ವಭಾವಿ ಸಭೆ:
ಅಸಂಖ್ಯಾತ ಭಕ್ತರ ದೈವ ಶ್ರೀಗುರುಬಸವೇಶ್ವರ (ಕೊಟ್ಟೂರೇಶ್ವರ) ಸ್ವಾಮಿಯ ಮಹಾರಥೋತ್ಸವ ಫೆಬ್ರವರಿ 18ರಂದು ಜರುಗುವ ನಿಮಿತ್ತ ಜಾತ್ರೋತ್ಸವದ ಪೂರ್ವಭಾವಿ ತಯಾರಿ ಸಿದ್ಧತೆ ಕೈಗೊಳ್ಳಲು ಜನವರಿ 18ರ ಶನಿವಾರ ದೇವಸ್ಥಾನದ ಬಳಿ ಇರುವ ಕಲ್ಯಾಣ ಮಂಟಪದಲ್ಲಿ ಸಭೆ ಕರೆಯಲಾಗಿದ್ದು ಶಾಸಕ ಎಸ್. ಭೀಮಾನಾಯ್ಕ ಸಭೆಯ ನೇತೃತ್ವ ವಹಿಸಲಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಲೋಕೇಶ ಸೇರಿದಂತೆ ಇತರ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು ತಮ್ಮ ತಮ್ಮ ಇಲಾಖೆಗಳಿಂದ ಯಶಸ್ವಿ ಜಾತ್ರೋತ್ಸವಕ್ಕೆ ಹಮ್ಮಿಕೊಂಡಿರುವ ಸಿದ್ಧತೆಗಳನ್ನು ವಿವರಿಸಲಿದ್ದಾರೆ. ಸಾರ್ವಜನಿಕರು ಈ ಸಭೆಗೆ ಆಗಮಿಸಿ ಸಲಹೆ ಸೂಚನೆಗಳನ್ನು ನೀಡಬೇಕೆಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್.ಪ್ರಕಾಶ ರಾವ್ ತಿಳಿಸಿದರು.