ಕೊಪ್ಪಳದ ಗವಿಮಠ ಜಾತ್ರೆ: 25 ಲಕ್ಷ ಭಕ್ತರಿಗೆ ಪ್ರಸಾದ ವಿತರಣೆ

ಗವಿಮಠಕ್ಕೆ ಸಹಸ್ರಾರು ಭಕ್ತರ ಭೇಟಿ, ಪ್ರಸಾದ ಸ್ವೀಕಾರ| ಜಾತ್ರೆ ಪ್ರಾರಂಭದಿಂದ ಇಲ್ಲಿಯವರಿಗೆ 25 ಲಕ್ಷ ಭಕ್ತರಿಗೆ ಪ್ರಸಾದ ವಿತರಣೆ| ಪ್ರಸಾದ ವಿತರಿಸುವ ಸೇವೆಗೈದ ಯುವಕರು, ಮಹಿಳೆಯರು, ಸಂಘ-ಸಂಸ್ಥೆಗಳು|  ಪೌರ ಸೇವಾ ಕಾರ್ಮಿಕರಿಗೆ ಉಪಾಹಾರ ವ್ಯವಸ್ಥೆ|

25 Lakh Devotees Have Prasada During Gavimath Fair in Koppal

ಕೊಪ್ಪಳ(ಜ.25): ಶುಕ್ರವಾರ ಅಮಾವಾಸ್ಯೆಯ ದಿನವಾದ್ದರಿಂದ ಸಹಸ್ರಾರು ಭಕ್ತರು ಶ್ರೀಗವಿಸಿದ್ದೇಶ್ವರ ಮಠಕ್ಕೆ ಆಗಮಿಸಿ ಕರ್ತೃ ಗದ್ದುಗೆಯ ದರ್ಶನ ಪಡೆದಿದ್ದಾರೆ. ಬೆಳಗ್ಗೆಯಿಂದಲೇ ಭಕ್ತರು ಎತ್ತಿನ ಬಂಡಿ, ಟ್ರ್ಯಾಕ್ಟರ್ ಹಾಗೂ ಲಘು ವಾಹನಗಳೊಂದಿಗೆ ಆಗಮಿಸಿದ್ದರು. ಇದರಿಂದಾಗಿ ಶ್ರೀಮಠದ ಆವರಣದಲ್ಲಿ ಮತ್ತೊಂದು ಜಾತ್ರೆಯಷ್ಟು ಜನರು ಸೇರಿದ್ದು ವಿಶೇಷವಾಗಿತ್ತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ವಿಶೇಷತೆಗಳಲ್ಲಿ ಒಂದಾದ ಮಹಾದಾಸೋಹದಲ್ಲಿ ರಥೋತ್ಸವ ದಿನದಿಂದ ಹಿಡಿದು ಇಂದಿನ ಅಮಾವಾಸ್ಯೆಯವರೆಗೂ ಸುಮಾರು 25 ಲಕ್ಷ ಭಕ್ತ ಜನರು ಪ್ರಸಾದ ಸ್ವೀಕರಿಸಿದ್ದಾರೆ ಎಂದು ಮಹಾದಾಸೋಹದ ಉಸ್ತುವಾರಿದಾರರಾದ ರಾಮನಗೌಡರ ತಿಳಿಸಿದ್ದಾರೆ. ಅಲ್ಲದೇ ಇದುವರೆಗೂ ಮಹಾದಾಸೋಹದಲ್ಲಿ 14 ಲಕ್ಷ ರೊಟ್ಟಿ, 700 ಕ್ವಿಂಟಲ್ ಅಕ್ಕಿ, 600 ಕ್ವಿಂಟಲ್ ಸಿಹಿ, 200 ಕ್ವಿಂಟಲ್ ತರಕಾರಿ, 250 ಕ್ವಿಂಟಲ್ ದ್ವಿದಳ ಧಾನ್ಯಗಳು, 10 ಸಾವಿರ ಲೀಟರ್ ಹಾಲು, 1000 ಕೆ.ಜಿ. ತುಪ್ಪ, 5000 ಕೆ.ಜಿ. ಉಪ್ಪಿನಕಾಯಿ, 15 ಕ್ವಿಂಟಲ್ ಪುಠಾಣಿ ಚಟ್ನಿ, 5 ಕ್ವಿಂಟಲ್ ಕೆಂಪುಚಟ್ನಿ, 18 ಲಕ್ಷ ಕಡ್ಲಿಹಿಟ್ಟಿನ ಮಿರ್ಚಿ ಹಾಗೂ ಇತರೆ ಸಾಮಗ್ರಿಗಳು ಖರ್ಚಾಗಿರುತ್ತವೆ. 
ಶುಕ್ರವಾರ ಮಹಾದಾಸೋಹದಲ್ಲಿ ಗೋದಿ ಹುಗ್ಗಿ, ಅನ್ನ, ಸಾಂಬಾರು, ಬಾಜಿ ಇವೆಲ್ಲಾ ಭಕ್ತರಿಗೆ ಪ್ರಸಾದ ರೂಪದಲ್ಲಿ ದೊರೆತವು. ಶ್ರೀಗವಿಸಿದ್ಧೇಶ್ವರ ಮಹಾವಿದ್ಯಾಲಯ, ಶಾರದಮ್ಮ ವ್ಹಿ. ಕೊತಬಾಳ ಕಾಲೇಜು ಹಾಗೂ ವಿವಿಧ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು, ಸಂಘ-ಸಂಸ್ಥೆಯವರು, ವಿವಿಧ ಗ್ರಾಮಗಳಿಂದ ಆಗಮಿಸಿದ ಯುವಕರು, ಮಹಿಳೆಯರು, ಸಂಘ-ಸಂಸ್ಥೆಯವರು ಪ್ರಸಾದ ವಿತರಿಸುವ ಸೇವೆಗೈದರು. 

ಪೌರ ಸೇವಾ ಕಾರ್ಮಿಕರಿಗೆ ಉಪಾಹಾರ: 

ಜಾತ್ರಾ ಮಹೋತ್ಸವದ ಆವರಣದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ ಪೌರ ಕಾರ್ಮಿಕರಿಗೆ ಕಲಬುರ್ಗಿ ಮೂಲದ 17 ಅಂಗಡಿಕಾರರು ಕೂಡಿಕೊಂಡು ಉಪಾಹಾರದ ವ್ಯವಸ್ಥೆ ಮಾಡಿಸಿದ್ದರು. ಇಂದು ಎಸ್.ಜಿ. ಟ್ರಸ್ಟ್‌ ಸದಸ್ಯರು ಆದ ಸಂಜಯ ಕೊತಬಾಳ ಮತ್ತು ಉದ್ದಿಮೆದಾರರಾದ ಮಹೇಶ ಮುದುಗಲ್ ಪ್ರಸಾದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
 

Latest Videos
Follow Us:
Download App:
  • android
  • ios