ಕೊಪ್ಪಳ: ಒಂದೇ ದಿನ 248 ಜನ ಕೊರೋನಾದಿಂದ ಗುಣಮುಖರಾಗಿ ಡಿಸ್ಚಾರ್ಜ್
ಒಂದೇ ದಿನ ಅತ್ಯಧಿಕ ಗುಣಮುಖರಾದ ದಿನ| ಶುಕ್ರವಾರ ಮತ್ತೆ 15 ಜನರಿಗೆ ಕೊರೋನಾ| 431 ಜನರ ಪೈಕಿ 248 ಜನರು ಈಗಾಗಲೇ ಗುಣಮುಖ|ಕೊಪ್ಪಳ ಜಿಲ್ಲೆಯಲ್ಲಿ ಇದುವರೆಗೂ 17519 ಜನರಿಗೆ ಟೆಸ್ಟ್| ಈ ಪೈಕಿ ಈಗಾಗಲೇ 16202 ವರದಿ ಬಂದಿವೆ| ಇನ್ನು 1317 ವರದಿ ಬರಬೇಕಾಗಿದೆ. ಈ ಪೈಕಿ 431ಜನರಿಗೆ ಕೊರೋನಾ ದೃಢ|
ಕೊಪ್ಪಳ(ಜು. 18): ಜಿಲ್ಲೆಯಲ್ಲಿ ಕೊರೋನಾ ಹೆಮ್ಮಾರಿಯ ಅಟ್ಟಹಾಸ ನಿಲ್ಲುತ್ತಿಲ್ಲವಾದರೂ ಈಗಾಗಲೇ 248 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಹೋಗಿದ್ದಾರೆ. ಜಿಲ್ಲೆಯಲ್ಲಿ ಶುಕ್ರವಾರದವರೆಗೂ 431 ಜನರಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ ಕೇವಲ 9 ಜನರು ಸಾವನ್ನಪ್ಪಿದ್ದು, ಉಳಿದವರ ಪೈಕಿ 248 ಜನರು ಗುಣಮುಖವಾಗಿದ್ದಾರೆ. ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಂದಿಲ್ಲೊಂದು ಕಾಯಿಲೆ
ಜಿಲ್ಲೆಯಲ್ಲಿ ಇದುವರೆಗೂ ಕೊರೋನಾದಿಂದಲೇ ಯಾರು ಸತ್ತಿಲ್ಲ. ಬೇರೆ ನಾನಾ ಕಾಯಿಲೆ ಇರುವವರಿಗೂ ಸೋಂಕು ಬಂದಿದೆ. ಅಂಥವರು ಮೃತಪಟ್ಟಿದ್ದಾರೆಯೇ ವಿನಃ ಇದುವರೆಗೂ ಕೇವಲ ಕೊರೋನಾ ಬಂದಿದ್ದರಿಂದ ಮೃತಪಟ್ಟಿದ್ದಾರೆ ಎನ್ನುವ ಒಂದೇ ಒಂದು ಪ್ರಕರಣವೂ ಇಲ್ಲ.
ಕೊಪ್ಪಳ: ಹನುಮಸಾಗರ ಸ್ವಯಂ ಘೋಷಿತ ಲಾಕ್ಡೌನ್
ಮೃತಪಟ್ಟವರ ಪೈಕಿ ಈಗಾಗಲೇ ಹಾಸಿಗೆ ಹಿಡಿದವರು, ಇಲ್ಲವೇ ಗಂಭೀರ ಕಾಯಿಲೆಯಿಂದಲೇ ಸುಮಾರು ದಿನಗಳಿಂದ ಚಿಕಿತ್ಸೆ ಪಡೆಯುವಂತಹವರು ಆಗಿದ್ದಾರೆ. ಕೆಲವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹೀಗಾಗಿ, ಕೊರೋನಾದಿಂದಲೇ ಸಾಯುತ್ತಾರೆ ಎನ್ನುವ ಆತಂಕವನ್ನು ಯಾರೂ ಪಡುವ ಅಗತ್ಯವಿಲ್ಲ.
ಕೇವಲ 15 ಜನರಿಗೆ
ಜಿಲ್ಲೆಯಲ್ಲಿ ಶುಕ್ರವಾರ ಕೇವಲ 15 ಜನರಿಗೆ ಮಾತ್ರ ಸೋಂಕು ದೃಢಪಟ್ಟಿದೆ. ಹೀಗಾಗಿ, ಸೋಂಕಿತರ ಸಂಖ್ಯೆ 431ಕ್ಕೆ ಏರಿಕೆಯಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ಇದ್ದ ಅಬ್ಬರ ನಿಧಾನಕ್ಕೆ ಕಡಿಮೆಯಾಗುತ್ತಿದ್ದು, ಸೋಂಕು ಇದೆ ಎನ್ನುವ ಅನುಮಾನ ಇದ್ದವರಿಗೂ ಸೋಂಕು ಇರುವುದು ತೀರಾ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಇದುವರೆಗೂ 17519 ಜನರಿಗೆ ಟೆಸ್ಟ್ ಮಾಡಲಾಗಿದ್ದು, ಈ ಪೈಕಿ ಈಗಾಗಲೇ 16202 ವರದಿ ಬಂದಿವೆ. ಇನ್ನು 1317 ವರದಿ ಬರಬೇಕಾಗಿದೆ. ಈ ಪೈಕಿ 431ಜನರಿಗೆ ಕೊರೋನಾ ದೃಢಪಟ್ಟಿದೆ.
ಅಮಾನವೀಯವಾಗಿ ವರ್ತನೆ
ಕೊರೋನಾ ಬಂದವರನ್ನು ಹಾಗೂ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ತೀರಾ ಅಮಾನವೀಯವಾಗಿ ಕಾಣುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಪರಿಸ್ಥಿತಿಯನ್ನು ಗ್ರಾಮೀಣ ಪ್ರದೇಶದಲ್ಲಿ ಸುಧಾರಣೆ ಮಾಡುವ ಅಗತ್ಯವಿದೆ ಎನ್ನಲಾಗುತ್ತಿದೆ.
ಕೊರೋನಾ ಸೋಂಕಿತರ ಸಂಬಂಧಿಕರು ಹಾಗೂ ಅವರ ಮನೆಯವರನ್ನು ತೀರಾ ಕೆಟ್ಟದೃಷ್ಟಿಯಿಂದ ನೋಡಲಾಗುತ್ತಿದೆ. ಅನೇಕರು ಅವರು ಮನೆಯಿಂದ ಆಚೆ ಬರದಂತೆ ಮಾಡಲಾಗುತ್ತದೆ. ಅಕ್ಕಪಕ್ಕದ ಮನೆಯವರು ಮನೆ ತೊರೆಯುವುದು ಸೇರಿದಂತೆ ಮೊದಲಾದ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದರಿಂದ ಜರ್ಜರಿತರಾಗಿದ್ದಾರೆ.
ಇನ್ನು ಸ್ಥಳೀಯ ಆಸ್ಪತ್ರೆಯ ಸಿಬ್ಬಂದಿ ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿಗಳೂ ಏರಿಯಾಗಳನ್ನು ಸೀಲ್‌ಡೌನ್ ಮಾಡುವ ನೆಪದಲ್ಲಿ ಕೆಟ್ಟದಾಗಿ ನೋಡುತ್ತಿರುವ ಅನೇಕ ಘಟನೆಗಳು ನಡೆಯುತ್ತಿವೆ. ಈ ಕುರಿತು ಜಿಲ್ಲಾಡಳಿತವೇ ಜಾಗೃತಿಯನ್ನು ವಹಿಸಬೇಕಾಗಿದೆ.