Asianet Suvarna News Asianet Suvarna News

ಧಾರವಾಡ ಜಿಲ್ಲೆಯಲ್ಲಿ 23 ಗ್ರಾಮಗಳು ಕೊರೋನಾ ಮುಕ್ತ..!

* ನಿರಂತರ ಜಾಗೃತಿ, ಟಾಸ್ಕ್‌ಫೋರ್ಸ್‌ ಕಮಿಟಿ ಯಶಸ್ವಿ ಕಾರ್ಯದಿಂದ ಮುಕ್ತ
* 85ಕ್ಕೂ ಹೆಚ್ಚು ಕೋವಿಡ್‌ ಕಾಳಜಿ ಕೇಂದ್ರ ಓಪನ್‌ 
* ಕಾರ್ಮಿಕರು ಹಳ್ಳಿಗಳತ್ತ ವಾಪಸ್‌ ಬರುತ್ತಿದ್ದಂತೆ ಹಳ್ಳಿಗಳಲ್ಲೂ ಕೊರೋನಾ ಹಬ್ಬಲು ಶುರು

23 Villages Corona Free in Dharwad district grg
Author
Bengaluru, First Published Jun 4, 2021, 12:34 PM IST

ಶಿವಾನಂದ ಗೊಂಬಿ

ಹುಬ್ಬಳ್ಳಿ(ಜೂ.04): ಗ್ರಾಪಂ, ತಾಲೂಕು ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆಗಳ ಸಂಘಟಿತ ಕೆಲಸದ ಪರಿಣಾಮವಾಗಿ ಧಾರವಾಡ ಜಿಲ್ಲೆಯಲ್ಲಿ ಬರೋಬ್ಬರಿ 23 ಗ್ರಾಮಗಳು ಕೊರೋನಾ ಮುಕ್ತ ಗ್ರಾಮಗಳಾಗಿ ಹೊರಹೊಮ್ಮಿವೆ.

ಕೊರೋನಾ 2ನೇ ಅಲೆ ಪ್ರಾರಂಭದಲ್ಲಿ ಎಂದರೆ ಮಾರ್ಚ್‌ ಕೊನೆ ಹಾಗೂ ಏಪ್ರಿಲ್‌ ಮಾಸದಲ್ಲಿ ನಗರಕ್ಕೆ ಸೀಮಿತವಾಗಿತ್ತು. ನಂತರ ವಲಸೆ ಕಾರ್ಮಿಕರು ಹಳ್ಳಿಗಳತ್ತ ವಾಪಸ್‌ ಬರುತ್ತಿದ್ದಂತೆ ಹಳ್ಳಿಗಳಲ್ಲೂ ಕೊರೋನಾ ಸಣ್ಣದಾಗಿ ಹಬ್ಬಲು ಶುರುವಾಯಿತು. ನೋಡು ನೋಡುತ್ತಿದ್ದಂತೆ ಹಳ್ಳಿಗಳಲ್ಲಿ ಹೆಚ್ಚಿನ ಸಂಖ್ಯೆ ಕಾಣಿಸಲು ಶುರುವಾಯಿತು. ಇದು ಅಕ್ಷರಶಃ ಜಿಲ್ಲಾಡಳಿತವನ್ನು ತಲ್ಲಣಗೊಳಿಸಿತ್ತು.

ಎಷ್ಟು, ಯಾವ್ಯಾವ ಗ್ರಾಮ?:

ಜಿಲ್ಲೆಯಲ್ಲಿ 144 ಗ್ರಾಪಂಗ​ಳಿವೆ. 388 ಗ್ರಾಮಗಳಿವೆ. ಇವುಗಳ ಪೈಕಿ ಅಣ್ಣಿಗೇರಿ ತಾಲೂಕಿನ ಸಾಸ್ವಿಹಳ್ಳಿ ಗ್ರಾಪಂಯ ಸೈದಾಪುರ, ಕೊಂಡಿಕೊಪ್ಪ, ಧಾರವಾಡ ತಾಲೂಕಿನ ಮಂಡಿಹಾಳ ಪಂಚಾಯಿತಿಯ ನಾಗಲಾವಿ, ನಿಗದಿ ಪಂಚಾಯಿತಿಯ ಬೆನಕಟ್ಟಿ ಗ್ರಾಮಗಳು ಕೊರೋನಾ ಮುಕ್ತವಾದರೆ, ಹುಬ್ಬಳ್ಳಿ ತಾಲೂಕಿನ ದೇವರಗುಡಿಹಾಳ ಪಂಚಾಯಿತಿಯ ದೇವರಗುಡಿಹಾಳ, ಪರಸಾಪುರ, ರೇವಡಿಹಾಳ, ಹೆಬಸೂರು ಪಂಚಾಯಿತಿಯ ಹೆಬಸೂರು, ಬೆಳಗಲಿ ಪಂಚಾಯಿತಿಯ ಪಾಳೆ ಗ್ರಾಮಗಳು, ಕಲಘಟಗಿ ತಾಲೂಕಿನ ಮುಕ್ಕಲ್‌ದ ಬಿದರಕಟ್ಟಿ, ಹುಣಸಿಕಟ್ಟಿ, ಗುಡ್ಡದ ಹುಲಿಕಟ್ಟಿಪಂಚಾಯಿತಿಯ ಬಿ.ಹುಲಿಕಟ್ಟಿ, ತಂಬೂರು ಗ್ರಾಪಂನ ತಂಬೂರ, ಸಂಗಟಿಕೊಪ್ಪ, ಜುಂಜನಬೈಲ್‌, ಶಿಂಗನಹಳ್ಳಿ, ಹುಲಗಿನಕೊಪ್ಪ, ಕುಂದಗೋಳ ತಾಲೂಕಿನ ಚಾಕಲಬ್ಬಿ ಪಂಚಾಯಿತಿಯ ಹಸರಳ್ಳಿ, ಬರದ್ವಾಡ, ನವಲಗುಂದ ತಾಲೂಕಿನ ಕಾಲವಾಡ ಪಂಚಾಯಿತಿಯ ಕಾಲವಾಡ, ಕರ್ಲವಾಡ, ಶಿರೂರು ಪಂಚಾಯಿತಿಯ ಶಿರೂರು, ಆಹೆಟ್ಟಿ ಗ್ರಾಮಗಳು ಕೊರೋನಾ ಮುಕ್ತ ಗ್ರಾಮಗಳಾಗಿ ಹೊರಹೊಮ್ಮಿವೆ.

ನವಲಗುಂದದಲ್ಲಿ 1 ಕೋಟಿ ವೆಚ್ಚದಲ್ಲಿ ಆಕ್ಸಿಜನ್‌ ಪ್ಲಾಂಟ್‌

ಹಾಗಂತ ಈ ಗ್ರಾಮಗಳಲ್ಲಿ ಕೊರೋನಾ ಸೋಂಕು ಬಂದಿರಲೇ ಇಲ್ಲ ಅಂತೇನೂ ಅಲ್ಲ. ಒಂದೊಂದು ಗ್ರಾಮದಲ್ಲೂ ಕನಿಷ್ಠವೆಂದರೂ 4 ಗರಿಷ್ಠವೆಂದರೆ 12ಜನರಿಗೆ ಸೋಂಕು ತಗುಲಿದ್ದ ಗ್ರಾಮಗಳಿವೆ. ಆದರೆ, ಸಕಾಲದಲ್ಲಿ ಸರಿಯಾದ ಚಿಕಿತ್ಸೆ, ಕಾಳಜಿ ಕೇಂದ್ರದಲ್ಲಿ ದಾಖಲು, ಕ್ವಾರಂಟೈನ್‌ ಮಾಡುವ ಸೋಂಕಿತರೆಲ್ಲರೂ ಇದೀಗ ಗುಣಮುಖರಾಗಿದ್ದಾರೆ.

ಕಾರ್ಯತಂತ್ರ:

ಹೇಗಾದರೂ ಮಾಡಿ ಹಳ್ಳಿಗಳಲ್ಲಿ ಹಬ್ಬುತ್ತಿರುವ ಕೊರೋನಾವನ್ನು ಕಡಿಮೆ ಮಾಡಲೇಬೇಕು. ಇಲ್ಲದಿದ್ದಲ್ಲಿ ಪರಿಸ್ಥಿತಿ ಗಂಭೀರವಾಗುತ್ತದೆ ಎಂಬುದನ್ನು ಅರಿತುಕೊಂಡ ಸರ್ಕಾರ, ಕೊರೋನಾ ಮುಕ್ತ ಗ್ರಾಮ ಅಭಿಯಾನಕ್ಕೆ ಚಾಲನೆ ನೀಡಿತ್ತು. ಜೊತೆಗೆ ಪಂಚಾಯಿತಿ ಮಟ್ಟದಲ್ಲಿ ಸೀಲ್‌ಡೌನ್‌, ಸಂಪೂರ್ಣ ಲಾಕ್‌ಡೌನ್‌ ಮಾಡಲು ಅಧಿಕಾರ ನೀಡಲಾಯಿತು. ಇದರ ಪರಿಣಾಮವಾಗಿ ಕೆಲ ಪಂಚಾಯತಿಗಳು ಸ್ವಯಂ ಸೀಲ್‌ಡೌನ್‌ ಮಾಡಿಕೊಂಡವು. ಕೆಲವು ಪಂಚಾಯಿತಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡವು. ಇನ್ನು ಜಿಪಂಯೂ ಗ್ರಾಪಂ ಪಿಡಿಒ, ತಾಪಂ ಇಒಗಳ ಸಭೆ ನಡೆಸಿ ಟಾಸ್ಕ್‌ಪೋರ್ಸ್‌ಗಳನ್ನು ರಚಿಸಿತು. ಈ ಟಾಸ್ಕ್‌ಪೋಸ್‌ಗಳಲ್ಲಿ ಪಂಚಾ​ಯಿತಿ ಸಿಬ್ಬಂದಿಗಳಷ್ಟೇ ಅಲ್ಲದೇ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಗಳ ಕೆಲ ಹಿರಿಯರು ಹೀಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸಿತು.

ಗ್ರಾಮಗಳಲ್ಲಿ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಯಿತು. ಕೆಲ ಗ್ರಾಪಂಗಳಂತೂ ಇಡೀ ಊರೆಲ್ಲ ಸ್ಯಾನಿಟೈಸ್‌ ಮಾಡಿಸಿದವು. ಕೆಲವರು ಜನತೆ ಗುಂಪುಗೂಡದಂತೆ ಕಟ್ಟೆಗಳ ಮೇಲೆ ಸುಟ್ಟ ಆಯಿಲ್‌ ಹಾಕಲು ಪ್ರಾರಂಭಿಸಿದವು. 85ಕ್ಕೂ ಹೆಚ್ಚು ಕೋವಿಡ್‌ ಕಾಳಜಿ ಕೇಂದ್ರಗಳನ್ನು ತೆರೆಯಲಾಯಿತು. ಮೊದ ಮೊದಲಿಗೆ ಕಾಳಜಿ ಕೇಂದ್ರಕ್ಕೆ ಜನತೆ ಬರಲು ಹಿಂಜರಿಯುತ್ತಿದ್ದರು. ಬಳಿಕ ಅವರ ಮನವೋಲಿಸಿ ಹೋಂ ಐಸೋಲೇಷನ್‌ಗಳಲ್ಲಿದ್ದ ಸೋಂಕಿತರನ್ನು ಕಾಳಜಿ ಕೇಂದ್ರಗಳಿಗೆ ಶಿಫ್ಟ್‌ ಮಾಡಲಾಯಿತು. ಇವೆಲ್ಲ ಪರಿಣಾಮದಿಂದಾಗಿ ಸಣ್ಣದಾಗಿ ಕೊರೋನಾ ಮುಕ್ತ ಗ್ರಾಮಗಳಾಗಿ ಹೊರಹೊಮ್ಮಲು ಶುರುವಾಯಿತು. ಇದರ ಪರಿಣಾಮವಾಗಿ ಕೊರೋನಾ ಮುಕ್ತ ಗ್ರಾಮಗಳಾಗಿ ಹೊರಹೊಮ್ಮಿವೆ.

ಧಾರವಾಡ: ಲಕ​ಮಾ​ಪು​ರ​ದಲ್ಲಿ ಕೊರೋನಾ ಮಧ್ಯೆ ಚಿಕೂನ್‌ ಗುನ್ಯಾ ಕಾಟ..!

388 ಗ್ರಾಮಗಳ ಪೈಕಿ ಸದ್ಯ 22 ಗ್ರಾಮಗಳು ಕೊರೋನಾ ಮುಕ್ತವಾಗಿವೆ. ಶೀಘ್ರದಲ್ಲೇ ಉಳಿದ ಗ್ರಾಮಗಳನ್ನು ಕೊರೋನಾ ಮುಕ್ತಗೊಳಿಸುತ್ತೇವೆ ಎಂಬ ವಿಶ್ವಾಸ ಪಂಚಾಯಿತಿ ಮಟ್ಟದ ಅಧಿಕಾರಿಗಳದ್ದು. ಒಟ್ಟಿನಲ್ಲಿ ಕೊರೋನಾ ಮುಕ್ತ ಗ್ರಾಮಗಳಾಗಿರುವುದು ಜನರಲ್ಲಿ ಸಂತಸವನ್ನುಂಟು ಮಾಡಿರುವುದಂತೂ ಸತ್ಯ.

ನಮ್ಮ ಗ್ರಾಪಂ ಪಿಡಿಒಗಳ ಶ್ರಮ ಬಹಳಷ್ಟಿದೆ. ಇವರಿಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಪಂಚಾಯಿತಿ ಸದಸ್ಯರು ಸಹಕಾರ ನೀಡಿ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಕಾಳಜಿ ಕೇಂದ್ರಗಳನ್ನು ತೆರೆದು ಆ ಮೂಲಕ ಚಿಕಿತ್ಸೆ ನೀಡಲಾಗಿದೆ. ಈ ಎಲ್ಲ ಕಾರಣಗಳಿಂದ 23 ಗ್ರಾಮಗಳು ಕೊರೋನಾ ಮುಕ್ತವಾಗಿ ಹೊರಹೊಮ್ಮಿವೆ. ಉಳಿದವುಗಳನ್ನು ಶೀಘ್ರವೇ ಕೊರೋನಾ ಮುಕ್ತ ಮಾಡುತ್ತೇವೆ ಎಂದು ಧಾರವಾಡ ಜಿಪಂ ಉಪಕಾರ್ಯದರ್ಶಿ, ರೇಖಾ ಡೊಳ್ಳಿನ ತಿಳಿಸಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios