Asianet Suvarna News Asianet Suvarna News

ಇಂದಿರಾ ಕ್ಯಾಂಟೀನ್‌ಗಳಿಗೆ ಬೀಗ..!

ದಿನದಿಂದ ದಿನಕ್ಕೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್‌ಗಳ ಬಗ್ಗೆ ನಿರಾಸಕ್ತಿ ಹೆಚ್ಚಾಗುತ್ತಿದೆ. ನಿರ್ವಹಣೆ ಕೊರತೆ ಹಾಗೂ ಆಹಾರ ಪೂರೈಕೆದಾರರಿಗೆ ಬಿಲ್‌ ಪಾವತಿ ಸಮಸ್ಯೆಯಿಂದಾಗಿ ಕ್ಯಾಂಟೀನ್‌ಗಳಿಗೆ ಬೀಗ ಹಾಕಲಾಗುತ್ತಿದೆ. 

23 Indira Canteens Closed in Bengaluru grg
Author
First Published Oct 13, 2023, 6:22 AM IST

ಗಿರೀಶ್‌ ಗರಗ

ಬೆಂಗಳೂರು(ಅ.13):  ರಾಜ್ಯ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್‌ ಮರುಚಾಲನೆಗೆ ಇನ್ನೂ ಕಾಲ ಕೂಡಿಬಂದಿಲ್ಲ. ಹೀಗಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರ್ವಹಣೆ ಕೊರತೆಯಿಂದಾಗಿ 23 ಕ್ಯಾಂಟೀನ್‌ಗಳಿಗೆ ಬೀಗಮುದ್ರೆ ಹಾಕಲಾಗಿದೆ.

ದಿನದಿಂದ ದಿನಕ್ಕೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್‌ಗಳ ಬಗ್ಗೆ ನಿರಾಸಕ್ತಿ ಹೆಚ್ಚಾಗುತ್ತಿದೆ. ನಿರ್ವಹಣೆ ಕೊರತೆ ಹಾಗೂ ಆಹಾರ ಪೂರೈಕೆದಾರರಿಗೆ ಬಿಲ್‌ ಪಾವತಿ ಸಮಸ್ಯೆಯಿಂದಾಗಿ ಕ್ಯಾಂಟೀನ್‌ಗಳಿಗೆ ಬೀಗ ಹಾಕಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 175 ಶಾಶ್ವತ ಕಟ್ಟಡ ಹೊಂದಿರುವ ಇಂದಿರಾ ಕ್ಯಾಂಟೀನ್‌ಗಳು ಹಾಗೂ 24 ಮೊಬೈಲ್‌ ಕ್ಯಾಂಟೀನ್‌ಗಳಿದ್ದವು. ಅವುಗಳಲ್ಲಿ ಸದ್ಯ 6 ಶಾಶ್ವತ ಕ್ಯಾಂಟೀನ್‌ಗಳು, 17 ಮೊಬೈಲ್‌ ಕ್ಯಾಂಟೀನ್‌ಗಳು ಸೇರಿದಂತೆ ಒಟ್ಟು 23 ಕ್ಯಾಂಟೀನ್‌ಗಳ ಕಾರ್ಯನಿರ್ವಹಣೆ ಸ್ಥಗಿತಗೊಳಿಸಲಾಗಿದೆ.

ಹಾವೇರಿಯಲ್ಲಿ ಇಂದಿರಾ ಕ್ಯಾಂಟೀನ್‌ಗಳು ಬಂದ್.. ಬಡವರ ಪರದಾಟ

ಕ್ಯಾಂಟೀನ್ ಸ್ಥಗಿತಕ್ಕೆ ನಾನಾ ಕಾರಣಗಳು:

ಕ್ಯಾಂಟೀನ್‌ ಆಹಾರ ಪೂರೈಕೆ ಸ್ಥಗಿತಗೊಳಿಸಿದ್ದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಅಧಿಕಾರಿಗಳು ನಾನಾ ಕಾರಣಗಳನ್ನು ನೀಡುತ್ತಿದ್ದಾರೆ. ಅದರಂತೆ ಕಟ್ಟಡದಲ್ಲಿ ನಡೆಯುತ್ತಿದ್ದ 6 ಕ್ಯಾಂಟೀನ್‌ ಸ್ಥಗಿತಕ್ಕೆ ಸಂಬಂಧಿಸಿದಂತೆ ಮಾರತಹಳ್ಳಿ ಕ್ಯಾಂಟೀನ್‌ನ ಕಟ್ಟಡವನ್ನು ಮೆಟ್ರೋ ಕಾಮಗಾರಿಗಾಗಿ ಒಡೆದು ಹಾಕಲಾಗಿದೆ. ಅದಾದ ನಂತರ ಅದನ್ನು ಮರುಸ್ಥಾಪನೆಗೆ ಬಿಬಿಎಂಪಿ ಅಥವಾ ಬಿಎಂಆರ್‌ಸಿಎಲ್‌ ಮುಂದಾಗಿಲ್ಲ. ಅದೇ ರೀತಿ ಹನುಮಂತನಗರ ಕ್ಯಾಂಟೀನ್‌ನಲ್ಲಿ ಆಹಾರ ಸೇವನೆಗೆ ಬರುವವರ ಸಂಖ್ಯೆ ಕಡಿಮೆಯಿದೆ ಎಂದು, ಕುಮಾರಸ್ವಾಮಿ ಲೇಔಟ್‌ ಕ್ಯಾಂಟೀನನ್ನು ಸ್ಥಳೀಯ ಶಾಸಕರ ಸೂಚನೆ ಮೇರೆಗೆ ಬೇರೆ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಅದರ ಜತೆಗೆ ಪದ್ಮನಾಭನಗರ ಕ್ಯಾಂಟೀನ್‌ಗೆ ವಿದ್ಯುತ್‌ ಮತ್ತು ನೀರಿನ ಸಂಪರ್ಕ ಕಡಿತಗೊಂಡಿದ್ದು, ಕ್ಯಾಂಟೀನ್‌ ಸ್ಥಗಿತಗೊಳಿಸಲಾಗಿದೆ ಎಂಬ ಉತ್ತರ ನೀಡಲಾಗಿದೆ.

ಅಲ್ಲದೆ, 24 ಮೊಬೈಲ್‌ ಕ್ಯಾಂಟೀನ್‌ಗಳ ಪೈಕಿ ಮಲ್ಲೇಶ್ವರ ಸೇರಿದಂತೆ ಕೇವಲ 7 ಕಡೆ ಮಾತ್ರ ಮೊಬೈಲ್‌ ಕ್ಯಾಂಟೀನ್‌ ಕಾರ್ಯನಿರ್ವಹಿಸುತ್ತಿವೆ. ಉಳಿದ 17 ಮೊಬೈಲ್‌ ಕ್ಯಾಂಟೀನ್‌ಗಳ ವಾಹನಗಳ ನಿರ್ವಹಣೆ ಸಮಸ್ಯೆಯಿಂದಾಗಿ ಅವುಗಳು ಸಂಚರಿಸುವುದು ಸಾಧ್ಯವಾಗದೆ ಸ್ಥಗಿತಗೊಂಡಿವೆ.

50 ಕ್ಯಾಂಟೀನ್‌ಗಳಿಗೆ ಬೇಕು ದುರಸ್ತಿ ಭಾಗ್ಯ

ಸದ್ಯ ಚಾಲ್ತಿಯಲ್ಲಿರುವ 176 ಕ್ಯಾಂಟೀನ್‌ಗಳ ಪೈಕಿ 7 ಮೊಬೈಲ್‌ ಕ್ಯಾಂಟೀನ್‌ಗಳಾಗಿವೆ. ಈ ಮೊಬೈಲ್‌ ಕ್ಯಾಂಟೀನ್‌ಗಳ ವಾಹನಗಳನ್ನು ದುರಸ್ತಿ ಮಾಡಿಸಬೇಕಿದೆ. ಅದರ ಜತೆಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ 169 ಕ್ಯಾಂಟೀನ್‌ಗಳ ಪೈಕಿ 50ಕ್ಕೂ ಹೆಚ್ಚಿನ ಕ್ಯಾಂಟೀನ್‌ಗಳು ದುರಸ್ತಿಗೆ ಒಳಗಾಗಬೇಕಿದೆ. ಪ್ರಮುಖವಾಗಿ ಒಳಚರಂಡಿ ವ್ಯವಸ್ಥೆ, ಕ್ಯಾಂಟೀನ್‌ ಆವರಣದಲ್ಲಿ ಸ್ವಚ್ಛತಾ ಕಾರ್ಯ ಸೇರಿದಂತೆ ಇನ್ನಿತರ ದುರಸ್ತಿ ಕಾಮಗಾರಿಗಳು ನಡೆಯಬೇಕು. ಅದಕ್ಕೆಲ್ಲ ಅನುದಾನದ ಅವಶ್ಯಕತೆಯಿದ್ದು, ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಅಡುಗೆ ಮನೆಗಳಿಗೂ ಬೀಗ

ಕ್ಯಾಂಟೀನ್‌ಗಳಷ್ಟೇ ಅಲ್ಲದೆ ಅಡುಗೆ ಮನೆಗಳಿಗೂ ಬೀಗ ಹಾಕಲಾಗಿದೆ. ಒಟ್ಟು 199 ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆ ಮಾಡಲು ಒಟ್ಟು 19 ಅಡುಗೆ ಮನೆಗಳನ್ನು ನಿರ್ಮಿಸಲಾಗಿದೆ. ಆ ಅಡುಗೆ ಮನೆಗಳಲ್ಲಿ ಕೇವಲ 8 ಮಾತ್ರ ಅಡುಗೆ ಸಿದ್ಧಪಡಿಸುತ್ತಿದ್ದು, ಉಳಿದ 11 ಸ್ಥಗಿತಗೊಂಡಿವೆ. ಅದರಲ್ಲಿ ದೊಡ್ಡನೆಕುಂದಿಯ ಅಡುಗೆ ಮನೆ 2020ರ ನವೆಂಬರ್‌ 11ರಿಂದಲೇ ಸ್ಥಗಿತಗೊಂಡಿದ್ದರೂ, ಅದನ್ನು ಮತ್ತೆ ಆರಂಭಿಸದೆ ನಿರ್ಲಕ್ಷ್ಯ ತೋರಲಾಗಿದೆ.

ಬಡವರು ಪಾಲಿಗೆ ಆಸರೆಯಾಗಿದ್ದ ಇಂದಿರಾ ಕ್ಯಾಂಟೀನ್‌ ದಿಢೀರ್‌ ಬಂದ್‌..!

ಹೊಸ ಕ್ಯಾಂಟೀನ್‌ಗಳು ಮತ್ತಷ್ಟು ವಿಳಂಬ

ವಿಧಾನಸೌಧ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಕಾಲೇಜು-ಆಸ್ಪತ್ರೆಗಳಲ್ಲೂ ಹೊಸದಾಗಿ ಇಂದಿರಾ ಕ್ಯಾಂಟೀನ್‌ಗಳನ್ನು ತೆರೆಯುವ ಕುರಿತಂತೆ ಬಿಬಿಎಂಪಿ ಯೋಜನೆ ರೂಪಿಸಿತ್ತು. ಅದಕ್ಕಾಗಿ ₹50 ಕೋಟಿಗೂ ಹೆಚ್ಚಿನ ಅನುದಾನ ಬೇಕಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ರಾಜ್ಯ ಸರ್ಕಾರದಿಂದ ಅದಕ್ಕಾಗಿ ಅನುದಾನ ಸಿಗದ ಕಾರಣ, ಅವುಗಳ ಆರಂಭ ಮತ್ತಷ್ಟು ವಿಳಂಬವಾಗುತ್ತಿದೆ. ಅದರ ಜತೆಗೆ ಹಳೇ ಕ್ಯಾಂಟೀನ್‌ಗಳ ದುರಸ್ತಿಯೂ ಸಾಧ್ಯವಾಗುತ್ತಿಲ್ಲ.

ಕ್ಯಾಂಟೀನ್‌ ಸ್ಥಗಿತದ ವಿವರ: ನಿರ್ವಹಣಾ ಸಂಸ್ಥೆ ನಿರ್ವಹಣೆಯಲ್ಲಿರುವ ಕ್ಯಾಂಟೀನ್‌ ಸ್ಥಗಿತಗೊಂಡ ಕ್ಯಾಂಟೀನ್‌

ಅದಮ್ಯ ಚೇತನ 40 4
ಶೆಫ್‌ ಟಾಕ್‌ 90 15
ರಿವಾರ್ಡ್ಸ್‌ 46 4
ಒಟ್ಟು 176 23

Follow Us:
Download App:
  • android
  • ios