ಮಂಡ್ಯ ಜಿಲ್ಲೆಯಲ್ಲಿ 21,899 ಹೆಕ್ಟೇರ್ ಮಣ್ಣು ಫಲವತ್ತತೆ ಕ್ಷೀಣ..!
ಫಲವತ್ತತೆ ಕಳೆದುಕೊಂಡಿರುವ ಮಣ್ಣಿನ ಸುಧಾರಣೆಗಾಗಿ ಕಾಡಾ ವತಿಯಿಂದ ವಾರ್ಷಿಕ ಕಾರ್ಯಕ್ರಮಗಳ ಅಂಗವಾಗಿ ಭೂಮಿಯ ಮೇಲ್ಮೈ ಕೆಳಗಿನ ಬಸಿಗಾಲುವೆ ನಿರ್ಮಾಣ ಕಾಮಗಾರಿಗಳನ್ನು ನಿರ್ವಹಿಸುತ್ತಿರುವುದಾಗಿ ತಿಳಿಸಿದ ಸಚಿವ ಚಲುವರಾಯಸ್ವಾಮಿ.
ಮಂಡ್ಯ(ಜು.22): ಜಿಲ್ಲೆಯ ಕಾವೇರಿ ಅಚ್ಚುಕಟ್ಟು ಪ್ರದೇಶದ 21896 ಹೆಕ್ಟೇರ್‌ನಲ್ಲಿ ಮಣ್ಣಿನ ಫಲವತ್ತತೆ (ಉಪ್ಪು, ಕ್ಷಾರ, ಜೌಗು) ಕ್ಷೀಣಿಸಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಾಹಿತಿ ನೀಡಿದರು. ವಿಧಾನಪರಿಷತ್‌ನಲ್ಲಿ ಸದಸ್ಯ ಮಧು ಜಿ.ಮಾದೇಗೌಡರ ಚುಕ್ಕೆ ಪ್ರಶ್ನೆಗೆ ಉತ್ತರಿಸಿರುವ ಚಲುವರಾಯಸ್ವಾಮಿ, ಫಲವತ್ತತೆ ಕಳೆದುಕೊಂಡಿರುವ ಮಣ್ಣಿನ ಸುಧಾರಣೆಗಾಗಿ ಕಾಡಾ ವತಿಯಿಂದ ವಾರ್ಷಿಕ ಕಾರ್ಯಕ್ರಮಗಳ ಅಂಗವಾಗಿ ಭೂಮಿಯ ಮೇಲ್ಮೈ ಕೆಳಗಿನ ಬಸಿಗಾಲುವೆ ನಿರ್ಮಾಣ ಕಾಮಗಾರಿಗಳನ್ನು ನಿರ್ವಹಿಸುತ್ತಿರುವುದಾಗಿ ಉತ್ತರಿಸಿದ್ದಾರೆ.
2018-19ನೇ ಸಾಲಿನಲ್ಲಿ ಮಳವಳ್ಳಿ ತಾಲೂಕಿನಲ್ಲಿ 37 ಹೆಕ್ಟೇರ್, 2019-20ನೇ ಸಾಲಿನಲ್ಲಿ 14 ಹೆಕ್ಟೇರ್, 2021-22ನೇ ಸಾಲಿನಲ್ಲಿ 25.72 ಹೆಕ್ಟೇರ್, ಶ್ರೀರಂಗಪಟ್ಟಣ ತಾಲೂಕಿನಲ್ಲಿ 6.76 ಹೆಕ್ಟೇರ್, 2022-23ನೇ ಸಾಲಿನಲ್ಲಿ ಮಂಡ್ಯ ತಾಲೂಕಿನಲ್ಲಿ 16.25 ಹೆಕ್ಟೇರ್ ಫಲವತ್ತತೆ ಕಳೆದುಕೊಂಡಿರುವ ಮಣ್ಣಿನ ಪ್ರದೇಶದಲ್ಲಿ ಸುಧಾರಣೆ ತರಲಾಗಿದೆ ಎಂದಿದ್ದಾರೆ.
ಜಿಲ್ಲೆಯಲ್ಲಿ ಮಣ್ಣಿನ ಫಲವತ್ತತೆ ಹೆಚ್ಚಿಸಲು ರೈತರು ಬಳಸುತ್ತಿರುವ ಹಸಿರೆಲೆ ಗೊಬ್ಬರ ಬೀಜ (ಡಯಾಂಚ) ಕೊರತೆ ಇಲ್ಲ. ಕಳೆದ ಐದು ವರ್ಷಗಳಲ್ಲಿ 1898 ಕ್ವಿಂಟಾಲ್ ಹಸಿರೆಲೆ ಗೊಬ್ಬರ ಬೀಜ ಸರಬರಾಜಾಗಿದೆ. 2023-24ನೇ ಸಾಲಿನಲ್ಲಿ ಜಿಲ್ಲೆಗೆ ಆಹಾರ ಮತ್ತು ಪೌಷ್ಟಿಕ ಭದ್ರತೆ ಯೋಜನೆಯಡಿ 58 ಲಕ್ಷ ರು. ಅನುದಾನವನ್ನು ನಿಗದಿಪಡಿಸಲಾಗಿದೆ. ಈಗಾಗಲೇ 1547 ಕ್ವಿಂಟಾಲ್ ಡಯಾಂಚ ಸರಬರಾಜಾಗಿರುತ್ತದೆ. ಸಾವಯವ ಇಂಗಾಲ ಹೆಚ್ಚಿಸುವ ಅಭಿಯಾನದಡಿ ಮಾಚ್‌ರ್-2023ರ ಅಂತ್ಯದಲ್ಲಿ 31.95 ಲಕ್ಷ ರು. ಹೆಚ್ಚುವರಿ ಅನುದಾನವನ್ನು ಹಂಚಿಕೆ ಮಾಡಿದ್ದು ಪ್ರಸಕ್ತ ಸಾಲಿಗೆ 710 ಕ್ವಿಂಟಾಲ್ ಸರಬರಾಜು ಸೇರಿ ಒಟ್ಟು 2257 ಕ್ವಿಂಟಾಲ್ ಡಯಾಂಚ ಸರಬರಾಜು ಮಾಡಿರುವುದಾಗಿ ಕೃಷಿ ಸಚಿವರು ತಿಳಿಸಿದ್ದಾರೆ.
ಭೂಮಿಯ ಫಲವತ್ತತೆ ಮತ್ತು ಉತ್ತಮ ಇಳುವರಿ ದೃಷ್ಟಿಯಿಂದ ಬೆಳೆ ಪದ್ಧತಿ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯ ಬೆಳೆ ಪದ್ಧತಿ ಆಧಾರಿತ ತರಬೇತಿಗಳ ಮುಖಾಂತರ ಹಾಗೂ ಸಾಂಸ್ಥಿಕ ತರಬೇತಿಗಳ ಮುಖಾಂತರ ಯಾವ ಬೆಳೆ ನಂತರ ಯಾವ ಬೆಳೆ ಬೆಳೆಯಬೇಕು ಎಂಬ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗುತ್ತಿದೆ ಎಂದಿದ್ದಾರೆ.
ಏಕದಳ ಧಾನ್ಯಗಳ ನಂತರ ದ್ವಿದಳ ಧಾನ್ಯ/ಎಣ್ಣೆಕಾಳು ಬೆಳೆಯುವಂತೆ ಬೆಳೆ ಪರಿವರ್ತನೆ ಮಾಡಲು ರೈತರಿಗೆ ತಿಳಿಸಲಾಗುತ್ತಿದೆ. ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಹಾಗೂ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ಕಾರ್ಯಕ್ರಮಗಳಡಿ ಭತ್ತದ ಕಟಾವಿನ ನಂತರ ಅನುಕ್ರಮವಾಗಿ ದ್ವಿದಳ ಧಾನ್ಯ ಹಾಗೂ ಎಣ್ಣೆಕಾಳು ಬೆಳೆಗಳನ್ನು ಬೆಳೆಯುವುದಕ್ಕೆ ಕಾರ್ಯಕ್ರಮವಿದ್ದು, ಅದರಂತೆ ರೈತರಿಗೆ ಕಡಿಮೆ ಅವಧಿಯಲ್ಲಿ ಆದಾಯದ ಜೊತೆಗೆ ಮಣ್ಣಿನಲ್ಲಿ ಸಾರಜನಕ ಸ್ಥಿತೀಕರಣದಿಂದ ಮಣ್ಣಿನ ಫಲವತ್ತತೆ ಹಾಗೂ ಸಾವಯವ ಇಂಗಾಲ ಹೆಚ್ಚಿಸಬಹುದೆಂದು ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಶಾಸಕರು ತಾಳ್ಮೆಯಿಂದ ಕೆಲಸ ಮಾಡಬೇಕು: ಸಚಿವ ಚಲುವರಾಯಸ್ವಾಮಿ
ಜಿಲ್ಲೆಯಲ್ಲಿರುವ ಮಳೆ ಮಾಪನ ಕೇಂದ್ರಗಳು
ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 243 ಟೆಲಿ ಮೆಟ್ರಿಕ್ ಮಳೆ ಮಾಪನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮಂಡ್ಯ-48, ಮದ್ದೂರು-43, ಮಳವಳ್ಳಿ-40, ಶ್ರೀರಂಗಪಟ್ಟಣ-22, ಪಾಂಡವಪುರ-25, ಕೆ.ಆರ್.ಪೇಟೆ-35, ನಾಗಮಂಗಲ ತಾಲೂಕಿನಲ್ಲಿ 30 ಮಳೆ ಮಾಪನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ವಿವರಿಸಿದ್ದಾರೆ.
ಜಿಲ್ಲೆಯಲ್ಲಿರುವ ಸಮಸ್ಯಾತ್ಮಕ ಮಣ್ಣು ಪ್ರದೇಶದ ವಿವರ: ತಾಲೂಕು ಸಮಸ್ಯಾತ್ಮಕ ಮಣ್ಣು ಪ್ರದೇಶ(ಹೆಕ್ಟೇರ್‌ಗಳಲ್ಲಿ)
ಮಂಡ್ಯ 2824
ಮದ್ದೂರು 9273
ಮಳವಳ್ಳಿ 3942
ಶ್ರೀರಂಗಪಟ್ಟಣ 1443
ಪಾಂಡವಪುರ 1582
ಕೆ.ಆರ್.ಪೇಟೆ 1996
ನಾಗಮಂಗಲ 839
ಒಟ್ಟು 21899