ನಮ್ಮ ಮೆಟ್ರೋದ ಹಸಿರು ಮಾರ್ಗದಲ್ಲಿ ಆರಂಭಿಕ ಹಂತದಲ್ಲಿ (ಪೇಸ್‌-1) ಕಾರ್ಯಾಚರಣೆಯಲ್ಲಿದ್ದ 17 ರೈಲುಗಳು ನೇರಳೆ ಮಾರ್ಗಕ್ಕೆ ಸ್ಥಳಾಂತರ ಆಗಲಿವೆ. ಹಾಗೂ ಹಸಿರು ಮಾರ್ಗಕ್ಕೆ ಹೊಸದಾಗಿ 21 ರೈಲುಗಳು ನಿಯೋಜನೆ ಆಗಲಿದ್ದು, ರೈಲುಗಳ ಓಡಾಟ ವೇಗಗೊಂಡು ಪ್ರಯಾಣಿಕರಿಗೆ ಅನುಕೂಲ ಆಗಲಿದೆ.

ಮಯೂರ್‌ ಹೆಗಡೆ

ಬೆಂಗಳೂರು : ನಮ್ಮ ಮೆಟ್ರೋದ ಹಸಿರು ಮಾರ್ಗದಲ್ಲಿ ಆರಂಭಿಕ ಹಂತದಲ್ಲಿ (ಪೇಸ್‌-1) ಕಾರ್ಯಾಚರಣೆಯಲ್ಲಿದ್ದ 17 ರೈಲುಗಳು ನೇರಳೆ ಮಾರ್ಗಕ್ಕೆ ಸ್ಥಳಾಂತರ ಆಗಲಿವೆ. ಹಾಗೂ ಹಸಿರು ಮಾರ್ಗಕ್ಕೆ ಹೊಸದಾಗಿ 21 ರೈಲುಗಳು ನಿಯೋಜನೆ ಆಗಲಿದ್ದು, ರೈಲುಗಳ ಓಡಾಟ ವೇಗಗೊಂಡು ಪ್ರಯಾಣಿಕರಿಗೆ ಅನುಕೂಲ ಆಗಲಿದೆ.

ನಗರದ ಉತ್ತರ - ದಕ್ಷಿಣ ಕಾರಿಡಾರ್ (33.5 ಕಿ.ಮೀ) ಮಾದಾವರದಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್‌ ನಲ್ಲಿ ಕೊನೆಗೊಳ್ಳುವ ಹಸಿರು ಮಾರ್ಗವು ಹೊಸ ರೈಲುಗಳನ್ನು ಕಾಣಲಿದೆ. ಇಲ್ಲಿರುವ ರೈಲುಗಳು ಹಂತ ಹಂತವಾಗಿ ಪೂರ್ವ-ಪಶ್ಚಿಮ ಕಾರಿಡಾರ್ (43.49 ಕಿ.ಮೀ) ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣದಿಂದ ಚಲ್ಲಘಟ್ಟ ಟರ್ಮಿನಲ್‌ವರೆಗಿನ ಮಾರ್ಗಕ್ಕೆ ಸೇರ್ಪಡೆ ಆಗಲಿವೆ.

2019-20ರ ಒಪ್ಪಂದದಂತೆ ಡಿಟಿಜಿ (ಡಿಸ್ಟೆನ್ಸ್‌ ಟು ಗೋ) ತಂತ್ರಜ್ಞಾನದ 21 ಮೆಟ್ರೋ ರೈಲನ್ನು (126 ಬೋಗಿ) ನೇರಳೆ, ಹಸಿರು ಮಾರ್ಗಕ್ಕಾಗಿ ಕೋಲ್ಕತ್ತಾದ ಟಿಟಾಘರ್ ರೈಲ್‌ ಸಿಸ್ಟಂ ಲಿ. (ಟಿಆರ್‌ಎಸ್‌ಎಲ್‌) ಕಂಪನಿ ಜತೆಗೂಡಿ ಚೀನಾದ ಸಿಆರ್‌ಆರ್‌ಸಿ ಒದಗಿಸಬೇಕಿದೆ. ಈ ಪೈಕಿ 1 ಪ್ರೊಟೊಟೈಪ್‌ ರೈಲು ಚೀನಾದಿಂದ (ಬಂದಿದೆ) ಹಾಗೂ 20 ರೈಲುಗಳು ಕೋಲ್ಕತ್ತಾದಿಂದ ಪೂರೈಕೆ ಆಗಲಿದೆ.

ಚೀನಾದ ಸಿಆರ್‌ಆರ್‌ಸಿ ಕಂಪನಿ ನೇರಳೆ ಮಾರ್ಗಕ್ಕೆ ನಿರ್ಮಿಸಿದ ಡಿಟಿಜಿ ತಂತ್ರಜ್ಞಾನದ ಪ್ರೊಟೊಟೈಪ್‌ ರೈಲು ಕಳೆದ ಜನವರಿಯಲ್ಲೆ ಬೆಂಗಳೂರು ತಲುಪಿತ್ತು. ಆದರೆ, ಇದನ್ನಿನ್ನೂ ಸೇವೆಗೆ ಸೇರ್ಪಡೆ ಮಾಡಿರಲಿಲ್ಲ. ಈಗ ಈ ರೈಲನ್ನು ಹಸಿರು ಮಾರ್ಗಕ್ಕೆ ಸೇರ್ಪಡೆ ಮಾಡಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆರ್‌ಡಿಎಸ್‌ಒ (ರಿಸರ್ಚ್‌ ಡಿಸೈನ್ಸ್‌ ಆ್ಯಂಡ್‌ ಸ್ಟ್ಯಾಂಡರ್ಡ್‌ ಆರ್ಗನೈಸೆಶನ್‌) ಸಿಬ್ಬಂದಿ ಸಮ್ಮುಖದಲ್ಲಿ ರಾತ್ರಿ 11.30ರಿಂದ ಬೆಳಗಿನ ಜಾವ 3.30ರವರೆಗೆ ಹಸಿರು ಮಾರ್ಗದ ಜಾಲಹಳ್ಳಿ - ಮಂತ್ರಿ ಸ್ಕ್ವೇರ್‌ ಸಂಪಿಗೆ ರಸ್ತೆ ನಿಲ್ದಾಣದವರೆಗೆ ಪ್ರಾಯೋಗಿಕ, ತಪಾಸಣೆಯ ಸಂಚಾರ ನಡೆಸಲಾಗುತ್ತಿದೆ.

ಒಪ್ಪಿಗೆ ಅಗತ್ಯ:

ಮುಂದಿನ ಒಂದೆರಡು ವಾರದಲ್ಲಿ ತಪಾಸಣೆ ಮುಗಿಯಲಿದೆ. ರೈಲಿನ ವಾಣಿಜ್ಯ ಸಂಚಾರ ನಡೆಸಲು ಆರ್‌ಡಿಎಸ್‌ಒ, ರೈಲ್ವೆ ಸುರಕ್ಷತಾ ಪ್ರಧಾನ ಆಯುಕ್ತಾಲಯ, ರೈಲ್ವೆ ಮಂಡಳಿಯ ಅನುಮೋದನೆ ಅಗತ್ಯ. ಮಾರ್ಚ್‌ ಒಳಗಾಗಿ ರೈಲ್ವೆ ಮಂಡಳಿಯಿಂದ ಒಪ್ಪಿಗೆ ಪಡೆಯಲಾಗುವುದು. ಒಪ್ಪಿಗೆ ದೊರೆತ ಬಳಿಕ ಈ ರೈಲನ್ನು ಹಸಿರು ಮಾರ್ಗಕ್ಕೆ ನಿಯೋಜಿಸಲಾಗುವುದು. ಅಲ್ಲಿನ ಒಂದು ರೈಲನ್ನು ನೇರಳೆ ಮಾರ್ಗಕ್ಕೆ ಬದಲಿಸಲಿದ್ದೇವೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚುವರಿ ರೈಲು:

ಬಳಿಕ ಹಂತ ಹಂತವಾಗಿ ಕೋಲ್ಕತ್ತಾದಿಂದ ರೈಲುಗಳು ಬರುತ್ತಿದ್ದಂತೆ ಹಸಿರು ಮಾರ್ಗದಲ್ಲಿ ಆರಂಭಿಕ ಹಂತದಲ್ಲಿ (ಪೇಸ್‌-1) ಕಾರ್ಯಾಚರಣೆಯಲ್ಲಿದ್ದ ಎಲ್ಲ 17 ರೈಲುಗಳು ನೇರಳೆ ಮಾರ್ಗಕ್ಕೆ ಸ್ಥಳಾಂತರ ಆಗಲಿವೆ. ಇದರಿಂದ ನೇರಳೆ ಮಾರ್ಗಕ್ಕೆ ಹೆಚ್ಚುವರಿ 17 ರೈಲುಗಳು ಹಾಗೂ ಹಸಿರು ಮಾರ್ಗಕ್ಕೆ ಹೆಚ್ಚುವರಿ 4 ರೈಲು ಸೇರ್ಪಡೆ ಆಗಲಿವೆ.

ನಮ್ಮ ಮೆಟ್ರೋಗೆ ಮೂರರಿಂದ ನಾಲ್ಕು ನಿಮಿಷಗಳ ಸೂಕ್ತ ಆವರ್ತನ ಕಾಯ್ದುಕೊಳ್ಳಲು ಪ್ರತಿ ಕಿಲೋಮೀಟರಿಗೆ ಒಂದು ರೈಲು ಬೇಕಾಗುತ್ತದೆ. ಆದಾಗ್ಯೂ, ನೇರಳೆ ಮತ್ತು ಹಸಿರು ಮಾರ್ಗಗಳು ಈಗ ಒಟ್ಟಾಗಿ 57 ರೈಲುಗಳೊಂದಿಗೆ ಮಾತ್ರ ಕಾರ್ಯನಿರ್ವಹಿಸುತ್ತವೆ. ಹೆಚ್ಚಿನ ರೈಲು ಸೇರ್ಪಡೆಯಿಂದ ಈ ಅವಧಿ ಕಡಿತವಾಗಲಿದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಕಾರಣವೇನು?

ಹೊಸದಾಗಿ ಬರುವ ರೈಲುಗಳ ಸುಲಭ ನಿರ್ವಹಣೆಗೆ ಅನುಕೂಲವಾಗಲು ಎಲ್ಲ ರೈಲುಗಳನ್ನು ಹಸಿರು ಮಾರ್ಗಕ್ಕೆ ನಿಯೋಜಿಸುತ್ತಿದ್ದೇವೆ. ಹೊಸ ಹಾಗೂ ಹಳೆ ರೈಲುಗಳನ್ನು ಎರಡು ಡಿಪೋಗಳಲ್ಲಿ ನಿರ್ವಹಣೆ ಮಾಡಲು ಕಷ್ಟವಾಗುತ್ತದೆ. ಹೀಗಾಗಿ ಹಸಿರು ಮಾರ್ಗದ ಪೀಣ್ಯದಲ್ಲಿ ಇವುಗಳ ನಿರ್ವಹಣೆಗೆ ಅಗತ್ಯವಾದ ಎಲ್ಲ ಮೂಲಸೌಕರ್ಯವನ್ನು ನಿರ್ಮಿಸಿಕೊಂಡು ಅಲ್ಲಿಂದಲೆ ಕಾರ್ಯಾಚರಣೆ ಮಾಡಲಾಗುವುದು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದರು.ಇವು ಡಿಟಿಜಿ ರೈಲುಗಳಾದರೂ ಕೂಡ ಈಗ ಹಳದಿ ಮಾರ್ಗದಲ್ಲಿರುವಂತೆಯೇ ಹೊಸ ರೈಲುಗಳ ವಿನ್ಯಾಸ ಇರಲಿದೆ. ಹೆಚ್ಚಿನ ಪ್ರಯಾಣಿಕ ಸೌಕರ್ಯಗಳು, ರಿಯಲ್‌ ಟೈಮ್‌ ಟ್ರೈನ್‌ ಲೊಕೇಶನ್‌, ಎಲ್‌ಸಿಡಿ ಸ್ಕ್ರೀನ್‌ ಸೇರಿ ಇತರ ಸೌಲಭ್ಯ ಇರಲಿದೆ.