ಇಲ್ಲಿನ ಯಲಹಂಕದಲ್ಲಿ ಚೀನಾದ ಹ್ಯಾಂಗ್‌ಝೌ ಮಾದರಿಯಲ್ಲಿ ಎಲಿವೆಟೆಡ್‌ ರೈಲ್ವೆ ಟರ್ಮಿನಲ್‌ ನಿರ್ಮಿಸಲು ರೈಲ್ವೆ ಮಂಡಳಿಗೆ ನೈಋತ್ಯ ರೈಲ್ವೆ ವಲಯವು ಪ್ರಸ್ತಾವನೆ ಸಲ್ಲಿಸಿದೆ. 20 ಎಕರೆ ಜಾಗದಲ್ಲಿ ಅಂದಾಜು ₹6,000 ಕೋಟಿ ವೆಚ್ಚದಲ್ಲಿ ನಿರ್ಮಿಸಲು ರೂಪುರೇಷೆ

ಬೆಂಗಳೂರು : ಇಲ್ಲಿನ ಯಲಹಂಕದಲ್ಲಿ ಚೀನಾದ ಹ್ಯಾಂಗ್‌ಝೌ ಮಾದರಿಯಲ್ಲಿ ಎಲಿವೆಟೆಡ್‌ ರೈಲ್ವೆ ಟರ್ಮಿನಲ್‌ ನಿರ್ಮಿಸಲು ರೈಲ್ವೆ ಮಂಡಳಿಗೆ ನೈಋತ್ಯ ರೈಲ್ವೆ ವಲಯವು ಪ್ರಸ್ತಾವನೆ ಸಲ್ಲಿಸಿದೆ. ದೇಶದ ಮೊದಲ ಸಂಪೂರ್ಣ ಎಲಿವೆಟೆಡ್‌ ರೈಲ್ವೆ ನಿಲ್ದಾಣ ಇದಾಗಿರಲಿದ್ದು ಸುಮಾರು 20 ಎಕರೆ ಜಾಗದಲ್ಲಿ ಅಂದಾಜು ₹6,000 ಕೋಟಿ ವೆಚ್ಚದಲ್ಲಿ ನಿರ್ಮಿಸಲು ರೂಪುರೇಷೆ ಸಿದ್ಧವಾಗಿದೆ.

ಈ ಮೊದಲು ದೇವನಹಳ್ಳಿಯಲ್ಲಿ ಈ ಟರ್ಮಿನಲ್ ನಿರ್ಮಿಸಲು ಯೋಜಿಸಲಾಗಿತ್ತು. ಸರ್ಕ್ಯೂಲರ್‌ ರೈಲ್ವೆ ಜೊತೆಗೆ ಬೆಸೆಯುವ ಉದ್ದೇಶವಿತ್ತು. ಆದರೆ, ಆ ಯೋಜನೆ ದುಬಾರಿ ಆಗಿರುವುದು ಹಾಗೂ ಈಗಾಗಲೆ ಲಭ್ಯವಿರುವ ರೈಲ್ವೆ ಭೂಮಿ ಬಳಸಿಕೊಳ್ಳುವ ಉದ್ದೇಶದಿಂದ ಯಲಹಂಕದಲ್ಲಿ ಟರ್ಮಿನಲ್‌ ಮಾಡಲು ಮುಂದಾಗಿರುವುದಾಗಿ ಮೂಲಗಳು ತಿಳಿಸಿವೆ.

ಯಲಹಂಕದಲ್ಲಿರುವ ರೈಲ್ವೆ ವೀಲ್ ಫ್ಯಾಕ್ಟರಿ (ಆರ್‌ಡಬ್ಲೂಎಫ್‌) ವ್ಯಾಪ್ತಿಯಲ್ಲಿ 192 ಎಕರೆ ಜಾಗವಿದ್ದು, ಅದರಲ್ಲಿ 15ಎಕರೆ ಭೂಮಿಯನ್ನು ನಿಲ್ದಾಣಕ್ಕೆ ಕೇಳಲಾಗುವುದು. ಜತೆಗೆ ಈಗಿನ ಯಲಹಂಕ ನಿಲ್ದಾಣದ ಯಾರ್ಡ್ ಮತ್ತು ಸಿಬ್ಬಂದಿ ಕ್ವಾರ್ಟರ್ಸ್ ಜಾಗವನ್ನೂ ಬಳಸಿಕೊಳ್ಳಲಾಗುತ್ತದೆ. ಒಟ್ಟೂ 20 ಎಕರೆಯಲ್ಲಿ ಟರ್ಮಿನಲ್ ನಿರ್ಮಿಸಲು ಉದ್ದೇಶಿಸಿದ್ದೇವೆ. ಯಲಹಂಕದಲ್ಲಿ ಸ್ಥಳಾವಕಾಶದ ಕೊರತೆ ಇರುವುದರಿಂದ ಎಲಿವೆಟೆಡ್‌ ಟರ್ಮಿನಲ್‌ ನಿರ್ಮಿಸುವ ರೂಪುರೇಷೆ ಮಾಡಿಕೊಂಡಿದ್ದಾಗಿ ಎಂದು ಮೂಲಗಳು ತಿಳಿಸಿವೆ.

16 ಪ್ಲಾಟ್‌ಫಾರ್ಮ್‌:

ಸದ್ಯ ಯಲಹಂಕ ರೈಲ್ವೆ ನಿಲ್ದಾಣ 5 ಪ್ಲಾಟ್‌ಫಾರ್ಮ್‌ ಹೊಂದಿದೆ. ಉದ್ದೇಶಿತ ನಿಲ್ದಾಣವು 16 ಪ್ಲಾಟ್‌ಫಾರ್ಮ್‌ಗಳು ನಿರ್ಮಿಸಲು ಅವಕಾಶ ಇಟ್ಟುಕೊಳ್ಳಲಾಗುವುದು. ಜತೆಗೆ 15 ಸ್ಟ್ಯಾಬ್ಲಿಂಗ್‌ ಲೈನ್‌, 10 ಪಿಟ್‌ಲೈನ್‌ ಇಟ್ಟುಕೊಳ್ಳಲಾಗುವುದು. ರೈಲು ಹಳಿಗಳು ನೆಲಮಹಡಿ ಮತ್ತು ಬೇಸ್‌ಮೆಂಟ್‌ ಮಟ್ಟದಲ್ಲಿ ಹಾದುಹೋಗಲಿವೆ. ಇದಕ್ಕಾಗಿಯೇ ಟರ್ಮಿನಲ್‌ನ್ನು ‘ಎಲಿವೇಟೆಡ್ ಟರ್ಮಿನಲ್’ ಎಂದು ಕರೆಯಲಾಗುತ್ತಿದೆ.

ಎಲಿವೆಟೆಡ್‌ ನಿಲ್ದಾಣಕ್ಕೆ ₹6,000 ಕೋಟಿ ವೆಚ್ಚ ಅಂದಾಜಿಸಲಾಗಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಅಥವಾ ಡಿಫೋಟ್‌ (ವಿನ್ಯಾಸ, ನಿರ್ಮಾಣ, ಹಣಕಾಸು, ನಿರ್ವಹಣೆ ಮತ್ತು ವರ್ಗಾವಣೆ) ಮಾದರಿಯಲ್ಲಿ ಕೈಗೊಳ್ಳುವ ಸಾಧ್ಯತೆಯಿದೆ.

ಐದು ಹಂತದ ಕಟ್ಟಡ ಮಾದರಿಯ ರೈಲ್ವೆ ಟರ್ಮಿನಲ್ ಪ್ರಸ್ತಾಪಿಸಲಾಗಿದೆ. ನೆಲಮಾಳಿಗೆ, ನೆಲ ಮಹಡಿ, ಹಂತ 1, ಹಂತ 2 ಮತ್ತು ಹಂತ 3 - ಒಂದು ಸಮೂಹ, ಕಾನ್‌ಕಾರ್ಸ್‌ ಪ್ಲಾಟ್‌ಫಾರ್ಮ್‌ ಮತ್ತು ಭೂಗತ ನೆಲಮಾಳಿಗೆ ಒಳಗೊಂಡಿದೆ. ರೈಲು ಹಳಿಗಳು ನೆಲಮಾಳಿಗೆ ಮತ್ತು ನೆಲಮಹಡಿ ಮಟ್ಟದಲ್ಲಿ ಚಲಿಸುತ್ತವೆ. ದೇಶದ ಮೊದಲ ಸಂಪೂರ್ಣ ಎತ್ತರದ ರೈಲ್ವೆ ಟರ್ಮಿನಲ್ ಆಗಿರಲಿದೆ ಎಂದು ನೈಋತ್ಯ ರೈಲ್ವೆ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಮೆಟ್ರೋಗೆ ಸಂಪರ್ಕ:

ಇದಲ್ಲದೆ ಪ್ರಯಾಣಿಕರ ಅನುಕೂಲಕ್ಕಾಗಿ ಈ ಟರ್ಮಿನಲ್ ನ್ನು ಮೆಟ್ರೋ ನೀಲಿ ಮಾರ್ಗದ ಹತ್ತಿರದ ‘ಕೋಗಿಲು ಕ್ರಾಸ್’ ಮೆಟ್ರೋ ನಿಲ್ದಾಣದೊಂದಿಗೆ ಎಲಿವೇಟೆಡ್ ರಸ್ತೆಯ ಮೂಲಕ ಸಂಪರ್ಕಿಸಲಾಗುತ್ತದೆ. ಪ್ರಮುಖ ಪ್ರವೇಶ ದ್ವಾರವು ಯಲಹಂಕ-ದೊಡ್ಡಬಳ್ಳಾಪುರ ಹೆದ್ದಾರಿಯಿಂದ ಇರಲಿದೆ.

ಪ್ರಾಥಮಿಕ ಹಂತ:

ಬೆಂಗಳೂರು ವಿಭಾಗೀಯ ರೈಲ್ವೆ ಉನ್ನತಾಧಿಕಾರಿಗಳು ಮಾತನಾಡಿ, ಯಲಹಂಕದ ಈ ಮೆಗಾ ಟರ್ಮಿನಲ್ ಪ್ರಸ್ತಾವನೆ ಪ್ರಾಥಮಿಕ ಹಂತದಲ್ಲಿದೆ. ರೈಲ್ವೆ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಪ್ಪಿಗೆ ಸಿಕ್ಕ ಬಳಿಕ ಮುಂದಿನ ಪ್ರಕ್ರಿಯೆ ನಡೆಯಲಿವೆ ಎಂದು ಅವರು ತಿಳಿಸಿದ್ದಾರೆ.

ಕೆಎಸ್‌ಆರ್‌ (ಮೆಜೆಸ್ಟಿಕ್‌) ರೈಲ್ವೆ ನಿಲ್ದಾಣ, ಬೈಯಪ್ಪನಹಳ್ಳಿಯ ಎಸ್‌ಎಂವಿಟಿ, ಯಶವಂತಪುರ ನಿಲ್ದಾಣದ ಬಳಿಕ ನಗರದಲ್ಲಿ ನಿರ್ಮಾಣ ಆಗಲಿರುವ ನಾಲ್ಕನೇ ಬೃಹತ್‌ ಟರ್ಮಿನಲ್‌ ಆಗಿದೆ. ಯೋಜನೆ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು ಸಾಧ್ಯಸಾಧ್ಯತೆಯ ಬಗ್ಗೆ ವಿಸ್ತ್ರತ ಪರಿಶೀಲನೆ ಆಗಲಿದೆ.

ಹ್ಯಾಂಗ್‌ಝೌ ಮಾದರಿ

ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರು ಮೈನಸ್ - ಒನ್ ಮಟ್ಟದಲ್ಲಿ ಇಳಿದು ಕೆಳಗಿನ ನೆಲಮಾಳಿಗೆಯ ಮೂಲಕ ನಿರ್ಗಮಿಸುತ್ತಾರೆ, ಆದರೆ ನಿರ್ಗಮಿಸುವ ಪ್ರಯಾಣಿಕರು ಕಾನ್‌ಕಾರ್ಸ್‌ ಮೂಲಕ ಪ್ರವೇಶಿಸಿ, ಟಿಕೆಟ್ ಮತ್ತು ಕಾಯುವ ಪ್ರದೇಶ ಪ್ರವೇಶಿಸಿ, ನಂತರ ಪ್ಲಾಟ್‌ಫಾರ್ಮ್‌ಗಳಿಗೆ ಹೋಗುತ್ತಾರೆ. ಈ ವಿನ್ಯಾಸವು ಚೀನಾದ ಹ್ಯಾಂಗ್‌ಝೌ ರೈಲ್ವೆ ಟರ್ಮಿನಲ್‌ನಿಂದ ಪ್ರೇರಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.