ಬೆಂಗಳೂರಿನ ಮಲ್ಲೇಶ್ವರಂನ ಸ್ಯಾಂಕಿ ಕೆರೆಗೆ ಹಾರಿ 20 ವರ್ಷದ ವಿದ್ಯಾರ್ಥಿನಿ ತೇಜು ಆತ್ಮ*ತ್ಯೆ ಮಾಡಿಕೊಂಡಿದ್ದಾಳೆ. ಸಾವಿಗೂ ಮುನ್ನ ತನ್ನ ಪ್ರಿಯಕರನಿಗೆ 'ಸಾಯುತ್ತಿದ್ದೇನೆ' ಎಂದು ಸಂದೇಶ ಕಳುಹಿಸಿದ್ದು, ಪ್ರೇಮ ವೈಫಲ್ಯ ಹಾಗೂ ಕೌಟುಂಬಿಕ ಸಮಸ್ಯೆಗಳು ಸಾವಿಗೆ ಕಾರಣವೆಂದು ಶಂಕಿಸಲಾಗಿದೆ. ಸದಾಶಿವನಗರ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು: ಸಿಲಿಕಾನ್ ಸಿಟಿಯ ಮಲ್ಲೇಶ್ವರಂನಲ್ಲಿರುವ ಪ್ರಸಿದ್ಧ ಸ್ಯಾಂಕಿ ಕೆರೆಗೆ ಹಾರಿ ಯುವತಿಯೊಬ್ಬಳು ಸಾವಿಗೆ ಶರಣಾಗಿದ್ದಾಳೆ, ಮೃತ ಯುವತಿಯನ್ನು ಬೆಂಗಳೂರಿನ ಚಿಕ್ಕಬಾಣವಾರ ಭಾಗದಲ್ಲಿ ವಾಸವಿದ್ದ 20 ವರ್ಷದ ವಿದ್ಯಾರ್ಥಿನಿ ತೇಜು ಎಂದು ಗುರುತಿಸಲಾಗಿದೆ. ಮೇಲ್ನೋಟಕ್ಕೆ ಇದು ಪ್ರೇಮ ವೈಫಲ್ಯ ಇರಬಹುದು ಎಂದು ಶಂಕಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾತ್ರಿ ವೇಳೆ ಒಬ್ಬಳೇ ಬಂದು ನೀರಿಗೆ ಜಿಗಿದ ಯುವತಿ!

ಪೊಲೀಸ್ ಮೂಲಗಳ ಪ್ರಕಾರ, ತೇಜು ಸೋಮವಾರ ರಾತ್ರಿ ವೇಳೆ ಸ್ಯಾಂಕಿ ಕೆರೆಯ ಬಳಿ ಒಬ್ಬಳೇ ಬಂದಿದ್ದಾಳೆ. ಕೆರೆಯ ಆವರಣದೊಳಗೆ ಪ್ರವೇಶಿಸಿ, ಯಾರೂ ಇಲ್ಲದ ಸಂದರ್ಭವನ್ನು ನೋಡಿಕೊಂಡು ನೀರಿಗೆ ಹಾರಿ ಸಾವು ಕಂಡಿದ್ದಾಳೆ. ಮಂಗಳವಾರ ಬೆಳಿಗ್ಗೆ ಕೆರೆಯಲ್ಲಿ ಯುವತಿಯ ಶವ ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸಾಯುವ ಮುನ್ನ ಪ್ರಿಯಕರನಿಗೆ ಮೆಸೇಜ್ ಮಾಡಿದ್ದ ತೇಜು!

ಈಕೆಗೆ ಪ್ರೇಮ ಪ್ರಸಂಗದ ಹಿನ್ನೆಲೆ ಇರುವುದು ಬೆಳಕಿಗೆ ಬಂದಿದೆ. ಸಾವಿಗೆ ಶರಣಾಗುವ ಮುನ್ನ ತೇಜು ತನ್ನ ಬಾಯ್‌ಫ್ರೆಂಡ್‌ಗೆ "ನಾನು ಸಾಯುತ್ತಿದ್ದೇನೆ" ಎಂದು ಮೊಬೈಲ್‌ನಲ್ಲಿ ಮೆಸೇಜ್ ಕಳುಹಿಸಿದ್ದಳು. ಇದನ್ನು ಕಂಡು ಆತಂಕಗೊಂಡ ಪ್ರಿಯಕರ, ತಕ್ಷಣವೇ ಆ ಮೆಸೇಜ್ ಅನ್ನು ಯುವತಿಯ ತಾಯಿಗೆ ಫಾರ್ವರ್ಡ್ ಮಾಡಿ ವಿಷಯ ತಿಳಿಸಿದ್ದಾನೆ. ಆದರೆ, ಅಷ್ಟರಲ್ಲಾಗಲೇ ತೇಜು ಸ್ಯಾಂಕಿ ಕೆರೆಗೆ ಹಾರಿ ತನ್ನ ಜೀವನ ಮುಗಿಸಿಕೊಂಡಿದ್ದಾಳೆ.

ತೇಜು ಅವರ ತಂದೆ ಮತ್ತು ತಾಯಿ ಕೆಲ ವರ್ಷಗಳ ಹಿಂದೆಯೇ ವಿಚ್ಛೇದನ (ಡೈವೋರ್ಸ್) ಪಡೆದು ದೂರಾಗಿದ್ದರು ಎನ್ನಲಾಗಿದೆ. ತಾಯಿ ಮೆಟ್ರೋ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಮಗಳನ್ನು ಸಾಕಿ ಸಲಹುತ್ತಿದ್ದರು. ಹೆತ್ತವರ ವಿಚ್ಛೇದನ ಹಾಗೂ ಪ್ರೇಮ ಜೀವನದಲ್ಲಾದ ಏರುಪೇರು ಯುವತಿಯನ್ನು ತೀವ್ರ ಮಾನಸಿಕ ಖಿನ್ನತೆಗೆ ದೂಡಿರಬಹುದು ಎಂದು ಶಂಕಿಸಲಾಗಿದೆ.

ಸ್ಥಳಕ್ಕೆ ಸದಾಶಿವನಗರ ಪೊಲೀಸರ ಭೇಟಿ

ಘಟನಾ ಸ್ಥಳಕ್ಕೆ ಸದಾಶಿವನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆರೆಯಿಂದ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪೊಲೀಸರು ಈಗಾಗಲೇ ಯುವತಿಯ ಪೋಷಕರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ಪೋಷಕರು ಆಸ್ಪತ್ರೆ ಹಾಗೂ ಪೊಲೀಸ್ ಠಾಣೆಗೆ ಬರುವುದಕ್ಕಾಗಿ ಕಾಯುತ್ತಿದ್ದಾರೆ.

ಯುವತಿಯ ಮೊಬೈಲ್ ಕರೆಗಳ ವಿವರ (CDR) ಹಾಗೂ ಆಕೆ ಪ್ರಿಯಕರನಿಗೆ ಕಳುಹಿಸಿದ್ದ ಮೆಸೇಜ್‌ಗಳನ್ನು ಆಧರಿಸಿ ಸದಾಶಿವನಗರ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಸಾವಿಗೆ ನಿಖರವಾದ ಕಾರಣವೇನು ಎಂಬುದರ ಸಂಪೂರ್ಣ ಮಾಹಿತಿ ವಿಚಾರಣೆಯ ಬಳಿಕವಷ್ಟೇ ಬೆಳಕಿಗೆ ಬರಬೇಕಿದೆ.