ಕೆ.ಆರ್‌. ಕ್ಷೇತ್ರ ವ್ಯಾಪ್ತಿಯನ್ನು ಬೋರ್‌ವೆಲ್‌ ಮುಕ್ತ ಕ್ಷೇತ್ರವಾಗಿಸುವ ನಿಟ್ಟಿನಲ್ಲಿ ಕಂಡಿದ್ದ ಕನಸು ನನಸಾಗುತ್ತಿದ್ದು, ಏ. 20 ರಿಂದ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ 20 ಎಂಎಲ್‌ಡಿ ನೀರು ಹರಿದುಬರಲಿದೆ ಎಂದು ಶಾಸಕ ಎಸ್‌.ಎ. ರಾಮದಾಸ್‌ ತಿಳಿಸಿದರು.

ಮೈಸೂರು : ಕೆ.ಆರ್‌. ಕ್ಷೇತ್ರ ವ್ಯಾಪ್ತಿಯನ್ನು ಬೋರ್‌ವೆಲ್‌ ಮುಕ್ತ ಕ್ಷೇತ್ರವಾಗಿಸುವ ನಿಟ್ಟಿನಲ್ಲಿ ಕಂಡಿದ್ದ ಕನಸು ನನಸಾಗುತ್ತಿದ್ದು, ಏ. 20 ರಿಂದ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ 20 ಎಂಎಲ್‌ಡಿ ನೀರು ಹರಿದುಬರಲಿದೆ ಎಂದು ಶಾಸಕ ಎಸ್‌.ಎ. ರಾಮದಾಸ್‌ ತಿಳಿಸಿದರು.

ಬಿದರಗೂಡು ಸಮೀಪ ಇರುವ ಕಬಿನಿ ಜಲಾ ಸಂಗ್ರಹಗಾರಕ್ಕೆ ಗುರುವಾರ ನಗರಪಾಲಿಕೆ ಆಯುಕ್ತರು, ವಾಣಿವಿಲಾಸ, ಜಲಮಂಡಳಿ, ವಿದ್ಯುತ್‌ ಇಲಾಖೆ, ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.

ಪ್ರಸ್ತುತ ಕ್ಷೇತ್ರಕ್ಕೆ 60 ಎಂಎಲ್‌ ಡಿ ನೀರು ಬರುತ್ತಿದೆ. 30 ಎಂಎಲ್‌ಡಿ ನೀರನ್ನು ಹೆಚ್ಚುವರಿಯಾಗಿ ತರುವ ಮೂಲಕ ಕ್ಷೇತ್ರವನ್ನು ಬೋರ್‌ವೆಲ್‌ ಮುಕ್ತ ಮಾಡುವ ಸಂಕಲ್ಪ ಮಾಡಲಾಗಿತ್ತು. ಅಂದುಕೊಂಡಂತೆ ಯೋಜನೆ ಭಾಗಶಃ ಪೂರ್ಣವಾಗಿದ್ದು, ಏ. 20 ರಂದು ಕ್ಷೇತ್ರಕ್ಕೆ ಕಬಿನಿ ನೀರು ಹರಿಯಲಿದೆ ಎಂದು ಹೇಳಿದರು.

3 ತಿಂಗಳ ನಂತರ ಇನ್ನೂ 30 ಎಂಎಲ್‌ಡಿ ನೀರು ಹೆಚ್ಚುವರಿಯಾಗಿ ಬರಲಿದೆ. ಒಟ್ಟು 120 ಎಂಎಲ್‌ಡಿ ನೀರು ದೊರೆಯಲಿದೆ. ನೀರಿನ ಹರಿವಿನ ಲೆಕ್ಕಾಚಾರ ಮಾಡಬೇಕಾದ ಹಿನ್ನೆಲೆಯಲ್ಲಿ ಮಾ. 27ರಂದು ಕ್ಷೇತ್ರದಲ್ಲಿ 8 ಗಂಟೆಗಳ ಕಾಲ ನೀರಿನ ಸೇವೆಯಲ್ಲಿ ವ್ಯತ್ಯಯ ಆಗಲಿದೆ. ಅಂದು ಸಹಕರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡುವುದಾಗಿ ಹೇಳಿದರು.

ಬೋರ್‌ವೆಲ್‌ ಮುಕ್ತ ಕ್ಷೇತ್ರ ಮಾಡಬೇಕೆಂಬ ನನ್ನ ಕನಸು ಹಾಗೂ ನನ್ನ ಕ್ಷೇತ್ರದ ಜನರ ಕನಸು ಈ ಮೂಲಕ ಈಡೇರಿದೆ ಎಂದರು.

ಈ ವೇಳೆ ನಗರಪಾಲಿಕೆ ಆಯುಕ್ತ ಜಿ. ಲಕ್ಷ್ಮಿಕಾಂತರೆಡ್ಡಿ, ಉಪ ಮೇಯರ್‌ ಡಾ.ಜಿ. ರೂಪಾ ಮೊದಲಾದವರು ಇದ್ದರು.