ಗೊರೂರು ಜಲಾಶಯದಿಂದ ಬುಗುಡನಹಳ್ಳಿ ಕೆರೆಗೆ 2 ಟಿಎಂಸಿ ನೀರು

ಹೇಮಾವತಿ ನಾಲೆಯಿಂದ ಬುಗುಡನಹಳ್ಳಿಯಲ್ಲಿ ಸಂಗ್ರಹವಾಗುವ ನೀರು ಮುಂಬರುವ ಸೆಪ್ಟೆಂಬರ್‌ವರೆಗೆ ನಗರಕ್ಕೆ ಪೂರೈಕೆ ಮಾಡಬಹುದಾಗಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದರು.

2 TMC water from Goruru reservoir to Bugudanahalli lake snr

 ತುಮಕೂರು :  ಹೇಮಾವತಿ ನಾಲೆಯಿಂದ ಬುಗುಡನಹಳ್ಳಿಯಲ್ಲಿ ಸಂಗ್ರಹವಾಗುವ ನೀರು ಮುಂಬರುವ ಸೆಪ್ಟೆಂಬರ್‌ವರೆಗೆ ನಗರಕ್ಕೆ ಪೂರೈಕೆ ಮಾಡಬಹುದಾಗಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದರು.

ತುಮಕೂರು ನಗರದ ಬುಗುಡನಹಳ್ಳಿ ಕೆರೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿ ದ ಅವರು ಗೊರೂರು ಜಲಾಶಯದಿಂದ ಹೇಮಾವತಿ ನಾಲೆಗೆ ಮಾರ್ಚ್ 12 ರಂದು ನೀರು ಬಿಟ್ಟಿದ್ದು, ಗುರುವಾರ ರಾತ್ರಿ ಬುಗಡನಹಳ್ಳಿ ಕೆರೆಗೆ ನೀರು ತಲುಪಿದೆ. ನಗರದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗುತ್ತಿರುವ ಬಗ್ಗೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರಿಗೆ ಕನಿಷ್ಠ 2 ಟಿಎಂಸಿ ನೀರನ್ನು ನೀಡಲು ಮನವಿ ಮಾಡಿದಾಗ ಅವರು ಒಪ್ಪಿ 2.5 ಟಿಎಂಸಿ ನೀರು ಬಿಟ್ಟಿದ್ದಾರೆ. ಜಿಲ್ಲೆಗೆ ನೀರು ಹರಿಸಲು ಸಹಕರಿಸಿದ ಹಾಸನದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸಿದರು.

ಪಾಲಿಕೆಯಿಂದ 3 ದಿನಕ್ಕೊಮ್ಮೆ ನಗರಕ್ಕೆ ನೀರು ಸರಬರಾಜು ಮಾಡಿ ಮಿತವಾಗಿ ಬಳಸಿದ್ದರಿಂದ ಈವರೆಗೂ ನೀರು ಸರಬರಾಜು ಮಾಡಲು ಸಾಧ್ಯವಾಯಿತು. ಮುಂದಿನ 8-10 ದಿನಗಳಿಗೆ ಮಾತ್ರ ಪೂರೈಕೆ ಮಾಡುವಷ್ಟು ಮಾತ್ರ ಕೆರೆಯಲ್ಲಿ ನೀರು ಲಭ್ಯವಿತ್ತು. ಮುಂದಾಲೋಚನೆಯಿಂದ ಹೇಮಾವತಿ ನೀರು ತರಿಸದೇ ಹೋಗಿದ್ದರೆ ತುಮಕೂರು ಸೇರಿದಂತೆ ಶಿರಾ, ಕೊರಟಗೆರೆ, ಮಧುಗಿರಿ, ಪಟ್ಟಣಗಳ ನಾಗರಿಕರಿಗೆ ನೀರಿನ ಅಭಾವ ಉಂಟಾಗುತ್ತಿತ್ತು. ಮಿತವಾಗಿ ನೀರು ಬಳಸಿ ಎಂದು ಜನರಲ್ಲಿ ಮನವಿ ಮಾಡಿದರು.

ಹೇಮಾವತಿ ನಾಲೆಗೆ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಹರಿಯ ಬಿಟ್ಟಿರುವುದರಿಂದ ಕೃಷಿ ಮತ್ತಿತರ ಚಟುವಟಿಕೆಗಳಿಗೆ ಬಳಸದಂತೆ ನಿಗಾ ವಹಿಸಲು ಪೊಲೀಸ್ ಗಸ್ತಿಗೆ ಸೂಚಿಸಲಾಗಿದೆ. ರೈತರು ಸಹಕರಿಸಬೇಕೆಂದು ಮನವಿ ಮಾಡಿದರು.

ಮಧುಗಿರಿ ತಾಲೂಕಿನ ಸುಮಾರು 65 ರಿಂದ 70 ಕೆರೆ ಹಾಗೂ ಕೊರಟಗೆರೆ ಕ್ಷೇತ್ರದ 65 ಕೆರೆಗಳಿಗೆ ನೀರು ತುಂಬಿಸುವ ಬೆಳ್ಳಾವಿ-ಕೋರ ಏತ ನೀರಾವರಿ ಯೋಜನೆಯ ಪ್ರಸ್ತಾವನೆ ಸರ್ಕಾರದ ಮುಂದಿದ್ದು, ಸುಮಾರು 500 ಕೋಟಿ ರು.ಗಳ ಅಂದಾಜು ವೆಚ್ಚದಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರಕ್ಕೆ ಎಷ್ಟು ಬಾರಿ ಮನವಿ ಮಾಡಿದರೂ ಎನ್.ಡಿ.ಆರ್.ಎಫ್.ನಡಿ ಯಾವುದೇ ಹಣ ಬಿಡುಗಡೆ ಮಾಡದೆ ಮಲತಾಯಿ ಧೋರಣೆ ತೋರುತ್ತಿದೆ. ಬೆಳೆ ನಷ್ಟ, ಜಾನುವಾರು ನಷ್ಟ ಸೇರಿದಂತೆ ಬರ ಪರಿಸ್ಥಿತಿಯಿಂದ ರಾಜ್ಯದಲ್ಲಿ 36ಸಾವಿರ ಕೋಟಿ ರು. ನಷ್ಟ ಉಂಟಾಗಿದೆ. ಎನ್‌ಡಿಆರ್‌ಎಫ್‌ನಡಿ 17,900 ಕೋಟಿ ರು.ಗಳ ಹಣವನ್ನು ಮಾತ್ರ ಒದಗಿಸಬೇಕೆಂದು ಪ್ರಸ್ತಾವನೆ ಸಲ್ಲಿಸಿದ್ದರೂ ನಯಾ ಪೈಸೆ ನೀಡಿಲ್ಲವೆಂದರು.

ಮೇವಿಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಅಗತ್ಯ ಪ್ರದೇಶಗಳಲ್ಲಿ ಗೋ ಶಾಲೆ ಸ್ಥಾಪಿಸಲಾಗಿದೆ. ರೈತರಿಗೆ ಮೇವಿನ ಕಿಟ್ ನೀಡಿ ಮೇವು ಉತ್ಪಾದನೆ ಮಾಡಲು ಉತ್ತೇಜನ ನೀಡಲಾಗಿತ್ತು. ಬಿತ್ತಿದ ಮೇವಿನ ಬೀಜದಿಂದ ಮೇವಿನ ಬೆಳೆ ಕಟಾವಿಗೆ ಬಂದಿದ್ದು ಜಿಲ್ಲೆಯಲ್ಲಿ ಮೇವಿನ ಸಮಸ್ಯೆ ಸುಧಾರಿಸಲಿದೆ ಎಂದು ತಿಳಿಸಿದರು.

ಕೆರೆ ಭೇಟಿ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಪಂಚಾಯಿತಿ ಸಿಇಒ ಜಿ. ಪ್ರಭು, ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ, ಮಹಾನಗರ ಪಾಲಿಕೆ ಆಯುಕ್ತರಾದ ಬಿ.ವಿ. ಆಶ್ವೀಜ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಹೇಮಾವತಿ ಯೋಜನೆಯ ಮುಖ್ಯ ಇಂಜಿನಿಯರ್ ಫಣಿರಾಜ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Latest Videos
Follow Us:
Download App:
  • android
  • ios