ಶಿಗ್ಗಾಂವಿ ಉಪಚುನಾವಣಾ ಫಲಿತಾಂಶ: ಭರತ್‌, ಪಠಾಣ್‌ ರಾಜಕೀಯ ಭವಿಷ್ಯ ಇಂದು ನಿರ್ಧಾರ!

ಶಿಗ್ಗಾಂವಿ ಉಪಚುನಾವಣೆಯ ಕ್ಲೈಮ್ಯಾಕ್ಸ್‌ ಹಂತವಾದ ಮತ ಎಣಿಕೆಗೆ ಕ್ಷಣ ಗಣನೆ ಆರಂಭವಾಗಿದೆ. ಬಿಜೆಪಿ ಅಭ್ಯರ್ಥಿ ಭರತ್‌ ಬೊಮ್ಮಾಯಿ ಮತ್ತು ಕಾಂಗ್ರೆಸ್ಸಿನ ಯಾಸೀರ್‌ಖಾನ್ ಪಠಾಣ್ ನಡುವೆ ಯಾರು ಗೆಲ್ಲುತ್ತಾರೆ ಎಂಬ ಕುತೂಹಲಕ್ಕೆ ಶನಿವಾರ ತೆರೆ ಬೀಳಲಿದೆ.

Karnataka assembly by-poll election results 2024 Preparation for counting of votes in Shiggavi constituency rav

ನಾರಾಯಣ ಹೆಗಡೆ

 ಹಾವೇರಿ (ನ.23): ಶಿಗ್ಗಾಂವಿ ಉಪಚುನಾವಣೆಯ ಕ್ಲೈಮ್ಯಾಕ್ಸ್‌ ಹಂತವಾದ ಮತ ಎಣಿಕೆಗೆ ಕ್ಷಣ ಗಣನೆ ಆರಂಭವಾಗಿದೆ. ಬಿಜೆಪಿ ಅಭ್ಯರ್ಥಿ ಭರತ್‌ ಬೊಮ್ಮಾಯಿ ಮತ್ತು ಕಾಂಗ್ರೆಸ್ಸಿನ ಯಾಸೀರ್‌ಖಾನ್ ಪಠಾಣ್ ನಡುವೆ ಯಾರು ಗೆಲ್ಲುತ್ತಾರೆ ಎಂಬ ಕುತೂಹಲಕ್ಕೆ ಶನಿವಾರ ತೆರೆ ಬೀಳಲಿದೆ.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆಯಿಂದ ತೆರವಾಗಿದ್ದ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಕ್ಕೆ ಕಳೆದ ನ. 13ರಂದು ಮತದಾನ ನಡೆದಿದ್ದು, ನ. 23ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಬಿಜೆಪಿಯಿಂದ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್‌ ಅದೃಷ್ಟ ಪರೀಕ್ಷೆಗಿಳಿದಿದ್ದರೆ, ಕಾಂಗ್ರೆಸ್‌ನಿಂದ ಯಾಸೀರ್‌ಖಾನ್ ಪಠಾಣ್ ಕಣಕ್ಕಿಳಿದಿದ್ದಾರೆ. ಇವರಿಬ್ಬರ ನಡುವೆ ನೇರ ಹಣಾಹಣಿ ನಡೆದಿದ್ದು, ಎರಡೂ ಪಕ್ಷಗಳು ಅಬ್ಬರದ ಪ್ರಚಾರ ನಡೆಸಿ ಮತದಾರರನ್ನು ಸೆಳೆಯಲು ಕಸರತ್ತು ನಡೆಸಿದ್ದವು. ಈಗ ಮತದಾರರ ತೀರ್ಪು ಯಾರ ಕಡೆ ಎಂಬ ಕುತೂಹಲಕಾರಿ ಹಂತಕ್ಕೆ ಬಂದಿದ್ದು, ಶನಿವಾರ ಮಧ್ಯಾಹ್ನದೊಳಗಾಗಿ ಶಿಗ್ಗಾಂವಿ ಶಾಸಕ ಯಾರು? ಎಂಬುದು ಬಹಿರಂಗವಾಗಲಿದೆ.
ನೇರ ಹಣಾಹಣಿ: ಭರತ್‌ ಹಾಗೂ ಪಠಾಣ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದು, ಯಾರು ಗೆದ್ದರೂ 5 ಸಾವಿರ ಮತಗಳ ಒಳಗೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್‌ ಟಿಕೆಟ್‌ ಹಂಚಿಕೆ ವೇಳೆ ಅಜ್ಜಂಪೀರ್ ಖಾದ್ರಿ ಬಂಡಾಯದ ಕಹಳೆಯೂದಿ ಬಳಿಕ ಪಕ್ಷದ ನಾಯಕರ ಸಂಧಾನದ ಬಳಿಕ ಭಿನ್ನಮತ ಬದಿಗಿಟ್ಟು ಯಾಸೀರ್‌ಖಾನ್ ಪಠಾಣ್‌ ಪರ ಪ್ರಚಾರ ನಡೆಸಿದ್ದರು. ಆರಂಭಿಕ ಗೊಂದಲದ ಬಳಿಕ ಕಾಂಗ್ರೆಸ್‌ ಭರ್ಜರಿ ಪ್ರಚಾರ ನಡೆಸಿತು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ಸೇರಿದಂತೆ ಹಲವು ಮಂತ್ರಿಗಳು ಕ್ಷೇತ್ರದಲ್ಲೇ ಠಿಕಾಣಿ ಹೂಡಿ ಚುನಾವಣಾ ರಣತಂತ್ರ ರೂಪಿಸಿದ್ದರು. ಪ್ರತಿಯೊಂದು ಸಮುದಾಯದ ಜನರನ್ನು ತಲುಪಲು ಎಲ್ಲ ರೀತಿಯ ಪ್ರಯತ್ನ ನಡೆಸಿದ್ದರು. ಜತೆಗೆ, ಅಜ್ಜಂಪೀರ್ ಖಾದ್ರಿ ಪಕ್ಷದ ಪರವಾಗಿ ಕೆಲಸ ಮಾಡಿರುವುದರಿಂದ ಪಠಾಣ್‌ಗೆ ಫಲಿತಾಂಶದ ಮೇಲೆ ಭಾರಿ ಭರವಸೆ ಬಂದಿದೆ.

ಟೆನ್ಶನ್ ಹೆಚ್ಚಿಸಿದ ಚನ್ನಪಟ್ಟಣ ಚುನಾವಣಾ ಫಲಿತಾಂಶ, ಗೆಲ್ಲುವ ಕುದುರೆ ಇವರೇ ನೋಡಿ!

ಇನ್ನು ಬಿಜೆಪಿಯಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಪುತ್ರ ಭರತನ ಪಟ್ಟಾಭಿಷೇಕಕ್ಕೆ ಎಲ್ಲ ರೀತಿಯ ಪ್ರಯತ್ನ ನಡೆಸಿದ್ದಾರೆ. ನಾಲ್ಕು ಬಾರಿ ಶಾಸಕರಾಗಿದ್ದ ಬೊಮ್ಮಾಯಿ ಕ್ಷೇತ್ರ ಉಳಿಸಿಕೊಳ್ಳುವುದರೊಂದಿಗೆ ಪುತ್ರನ ರಾಜಕೀಯ ಭವಿಷ್ಯ ಭದ್ರಗೊಳಿಸಲು ಸರ್ವ ರೀತಿಯ ಪಟ್ಟು ಹಾಕಿದ್ದಾರೆ. ಯಡಿಯೂರಪ್ಪ, ವಿಜಯೇಂದ್ರ, ಪ್ರಹ್ಲಾದ ಜೋಶಿ ಸೇರಿದಂತೆ ಬಿಜೆಪಿಯ ಅನೇಕ ನಾಯಕರು ಪ್ರಚಾರ ನಡೆಸಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಕ್ಷೇತ್ರದ ಪ್ರತಿ ಗ್ರಾಮದ ಪರಿಚಯ ಇರುವ ಬೊಮ್ಮಾಯಿ ಪುತ್ರನ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ್ದಾರೆ. ಕ್ಷೇತ್ರದ ಒಳಹೊರ ಅರಿತಿರುವ ಬೊಮ್ಮಾಯಿ ಈ ಸಲವೂ ಕಮಲ ಅರಳಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.
ಹೀಗೆ ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಗಳು ತಮ್ಮ ಅಭ್ಯರ್ಥಿ ಗೆಲ್ಲುವ ನಿರೀಕ್ಷೆಯಲ್ಲಿವೆ. ಮತದಾರರ ಯಾರ ಕಡೆ ಒಲವು ತೋರಿದ್ದಾರೆ ಎಂಬ ಕುತೂಹಲಕ್ಕೆ ಶನಿವಾರ ತೆರೆ ಬೀಳಲಿದೆ.

ಭರ್ಜರಿ ಬೆಟ್ಟಿಂಗ್‌: ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿನ ಬಗ್ಗೆ ಆಯಾ ಪಕ್ಷಗಳ ಕಾರ್ಯಕರ್ತರು, ಅಭಿಮಾನಿಗಳು ಬೆಟ್ಟಿಂಗ್‌ ಕಟ್ಟಿಕೊಳ್ಳುತ್ತಿದ್ದಾರೆ. ಭರತ್‌ ಬೊಮ್ಮಾಯಿ ಗೆಲುವು ನಿಶ್ಚಿತ ಎಂದು ಅನೇಕರು ಬಿಜೆಪಿ ಪರವಾಗಿ ಬೆಟ್ಟಿಂಗ್‌ ಕಟ್ಟಿದ್ದರೆ, ಈ ಸಲ ಕೈ ಅಭ್ಯರ್ಥಿ ಪಠಾಣ್‌ ಗೆಲ್ಲುತ್ತಾರೆ ಎಂದು ಹಣ ಪಣಕ್ಕಿಡುತ್ತಿದ್ದಾರೆ. ಸವಣೂರಿನ ಗ್ರಾಮವೊಂದರಲ್ಲಿ ತಾವು ಸಾಕಿದ ಎತ್ತುಗಳನ್ನೇ ಪಣಕ್ಕಿಟ್ಟಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಇಂದು ಬೆಳಗ್ಗೆ 8ರಿಂದ ಮತ ಎಣಿಕೆ ಆರಂಭ: ಶಿಗ್ಗಾಂವಿ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ನ. ೨೩ರಂದು ಬೆಳಗ್ಗೆ ೮ ಗಂಟೆಯಿಂದ ದೇವಗಿರಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ. ಇವಿಎಂ ಮತಗಳ ಎಣಿಕೆ ಕಾರ್ಯಕ್ಕೆ ೧೪ ಟೇಬಲ್, ಅಂಚೆ ಮತಪತ್ರ ಎಣಿಕೆಗೆ ೧ ಟೇಬಲ್ ಹಾಗೂ ಸೇವಾ ಮತದಾರರ ಅಂಚೆ ಮತಪತ್ರ ಎಣಿಕೆಗಾಗಿ ೧ ಟೇಬಲ್ ಸಿದ್ದಪಡಿಸಲಾಗಿದೆ. ಪ್ರತಿ ಟೇಬಲ್‌ಗೆ ಒಬ್ಬರು ಎಣಿಕೆ ಮೇಲ್ವಿಚಾರಕರು, ಒಬ್ಬರು ಎಣಿಕೆ ಸಹಾಯಕರು ಹಾಗೂ ಒಬ್ಬರು ಎಣಿಕೆ ಮೈಕ್ರೋ ಅಬ್ಸರವರ್ ನೇಮಕ ಮಾಡಲಾಗಿದೆ.

ಪೊಲೀಸ್ ಬಂದೋಬಸ್ತ್:ಎಣಿಕೆ ಕೇಂದ್ರದ ಬಂದೋಬಸ್ತ್‌ಗೆ ಪೊಲೀಸ್ ಇಲಾಖೆಯಿಂದ ನಾಲ್ಕು ಡಿಎಸ್‌ಪಿ, ಒಂಭತ್ತು ಸಿಪಿಐ, ೨೫-ಪಿಎಸ್‌ಐ, ೨೯-ಎಎಸ್‌ಐ, ೨೫೦-ಹೆಚ್.ಸಿ/ಪಿ.ಸಿ ಹಾಗೂ ಕೆಎಸ್‌ಆರ್‌ಪಿಯ ಎರಡು ತುಕಡಿಗಳನ್ನು ಮತ್ತು ನಾಲ್ಕು ಡಿ.ಆರ್. ತುಕಡಿಗಳು ಭದ್ರತೆಗಾಗಿ ನಿಯೋಜಿಸಲಾಗಿದೆ.

ಸಂಡೂರು ವಿಧಾನಸಭೆ ಉಪಚುನಾವಣೆ ಫಲಿತಾಂಶ: ಮತ ಎಣಿಕೆಗೆ ಸಕಲ ಸಿದ್ಧತೆ, ಯಾರಿಗೆ ಗೆಲುವಿನ ಹಾರ?

ಗುರುತೀನ ಚೀಟಿ: ಮತ ಎಣಿಕೆ ಕಾರ್ಯಕ್ಕಾಗಿ ಆಗಮಿಸುವ ಏಜೆಂಟರುಗಳಿಗಾಗಿ ಗುರುತೀನ ಚೀಟಿ ವಿತರಿಸಲಾಗಿದ್ದು, ಸೂಕ್ತ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಎಣಿಕೆ ಕೇಂದ್ರ ೨೦೦ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.ಮತ ಎಣಿಕೆ ಕೇಂದ್ರಕ್ಕೆ ಬರುವ ಚುನಾವಣಾ ಏಜೆಂಟರುಗಳು ಪೆನ್ ಮತ್ತು ಹಾಳೆಗಳನ್ನು ತರಲು ಅವಕಾಶವನ್ನು ಕಲ್ಪಿಸಲಾಗಿದೆ. ಇನ್ನುಳಿದಂತೆ ನೀರಿನ ಬಾಟಲಿ, ಕತ್ತರಿ, ಚಾಕು ಅಥವಾ ಇನ್ನಿತರೆ ಹರಿತವಾದ ವಸ್ತಗಳು, ಲೈಟರ್, ಬೆಂಕಿ ಪೊಟ್ಟಣ, ಗುಟ್ಕಾ, ತಂಬಾಕು, ಸಿಗರೇಟ್ ಹಾಗೂ ಸ್ಫೋಟಕ ಸಾಮಗ್ರಿಗಳು ಮತ್ತು ಪ್ರತಿಬಂಧಿಸಲ್ಪಟ್ಟ ವಸ್ತುಗಳನ್ನು ಹಾಗೂ ಮೊಬೈಲ್ ನಿಷೇಧಿಸಲಾಗಿದೆ. ಮತ ಎಣಿಕೆ ಕೇಂದ್ರಕ್ಕೆ ಬರುವ ಎಲ್ಲಾ ಅಧಿಕಾರಿ/ ಸಿಬ್ಬಂದಿ ವರ್ಗದವರಿಗೆ ಮತ್ತು ಎಣಿಕೆ ಏಜೆಂಟರುಗಳಿಗೆ ಬೆಳಗ್ಗೆ ಉಪಹಾರ, ಮಧ್ಯಾಹ್ನದ ಊಟ ವ್ಯವಸ್ಥೆ ಮಾಡಲಾಗಿದೆ.

ಶೇ. 80.48 ಮತದಾನ: ಶಿಗ್ಗಾಂವಿ ಉಪಚುನಾವಣೆಗೆ ಶೇ. 80.48ರಷ್ಟು ಮತದಾನವಾಗಿದೆ. 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಶಿಗ್ಗಾಂವಿ ಕ್ಷೇತ್ರದಲ್ಲಿ ಶೇ. ೭೯.೯೪ರಷ್ಟು ಮತದಾನವಾಗಿತ್ತು. ೯೮,೬೪೨ ಪುರುಷರು, ೯೨,೫೨೨ ಮಹಿಳೆಯರು, ಇತರೆ ಇಬ್ಬರು ಸೇರಿ ೧,೯೧,೧೬೬ ಮತದಾರರು ಹಕ್ಕು ಚಲಾಯಿಸಿದ್ದು, ಶೇ. ೮೦.೪೮ರಷ್ಟು ಮತದಾನವಾಗಿದೆ.

ಬಿಜೆಪಿ, ಕಾಂಗ್ರೆಸ್‌, ಕೆಆರ್‌ಎಸ್‌ನ ರವಿಕೃಷ್ಣಾ ರೆಡ್ಡಿ ಸೇರಿದಂತೆ ಒಟ್ಟು ೮ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

Latest Videos
Follow Us:
Download App:
  • android
  • ios