ಬಾಗಲಕೋಟೆ: ಕಾಂಗ್ರೆಸ್ ಅಧಿಕಾರಕ್ಕೆ ಯುಕೆಪಿಗೆ 2 ಲಕ್ಷ ಕೋಟಿ, ಸಿದ್ದರಾಮಯ್ಯ
ಈ ಹಿಂದೆ ಕೂಡಲಸಂಗಮದ ಪಾದಯಾತ್ರೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಅಂದು ಪ್ರತಿವರ್ಷ 10 ಸಾವಿರ ಕೋಟಿ ಹಣವನ್ನು ಕೃಷ್ಣಾ ಯೋಜನೆಯ ಅನುಷ್ಠಾನಕ್ಕೆ ನೀಡಿದ್ದೇವೆ ಇನ್ನೂ ಹೆಚ್ಚಿಗೆಯೇ ನೀಡಿದ್ದೇವೆ. ನಂತರ ಬಂದ ಬಿಜೆಪಿ ಸರ್ಕಾರ ಯೋಜನೆಗೆ ಎಷ್ಟು ಹಣ ನೀಡಿದೆ? ಎಂದ ಸಿದ್ದು
ಬಾಗಲಕೋಟೆ(ಜು.16): ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು 5 ವರ್ಷಗಳಲ್ಲಿ . 2 ಲಕ್ಷ ಕೋಟಿ ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಶುಕ್ರವಾರ ಕಾಂಗ್ರೆಸ್ ಪಕ್ಷದ ಚಿಂತನಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ಕೂಡಲಸಂಗಮದ ಪಾದಯಾತ್ರೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಅಂದು ಪ್ರತಿವರ್ಷ 10 ಸಾವಿರ ಕೋಟಿ ಹಣವನ್ನು ಕೃಷ್ಣಾ ಯೋಜನೆಯ ಅನುಷ್ಠಾನಕ್ಕೆ ನೀಡಿದ್ದೇವೆ ಇನ್ನೂ ಹೆಚ್ಚಿಗೆಯೇ ನೀಡಿದ್ದೇವೆ. ನಂತರ ಬಂದ ಬಿಜೆಪಿ ಸರ್ಕಾರ ಯೋಜನೆಗೆ ಎಷ್ಟು ಹಣ ನೀಡಿದೆ? ಎಂದು ಪ್ರಶ್ನಿಸಿದರು.
ಐದು ವರ್ಷಗಳಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಪೂರ್ಣ ಪ್ರಮಾಣದ ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್‌ನಿರ್ಮಾಣದ ಕಾರ್ಯಕ್ಕಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ನಿಶ್ಚಿತವಾಗಿ ಯೋಜನೆ ಪೂರ್ಣಗೊಳಿಸಲು 2 ಲಕ್ಷ ಕೋಟಿ ನೀಡುವ ವಾಗ್ದಾನ ನಮ್ಮದಾಗಿದೆ ಎಂದರು.
ಬಾಗಲಕೋಟೆಯಲ್ಲಿ ಹೈಡ್ರಾಮಾ: ಪರಿಹಾರ ಧನವನ್ನೇ ವಾಪಸ್ ಎಸೆದ ಮಹಿಳೆ, ಮುಜುಗರಕ್ಕೀಡಾದ ಸಿದ್ದು..!
ಕೃಷ್ಣಾ ಮೇಲ್ದಂಡೆ ಯೋಜನೆಯ ಅನುಷ್ಠಾನದ ಕುರಿತು ನ್ಯಾಯಮಂಡಳಿ ತೀರ್ಪು ಬಂದರು ಇನ್ನೂ ಅಧಿಸೂಚನೆಯನ್ನು ಕೇಂದ್ರ ಹೊರಡಿಸಿಲ್ಲ. ಈ ಹಿಂದೆ ಮಹದಾಯಿ ಕುರಿತು ಚರ್ಚಿಸಲು ಪ್ರಧಾನಿ ಬಳಿ ತೆರಳಿದಾಗ ರಾಜ್ಯದ ಯಾವ ಬಿಜೆಪಿ ಮುಖಂಡರು ಮಾತನಾಡುವ ಧೈರ್ಯ ತೋರಲಿಲ್ಲ. ಇಂತಹ ಸಂದರ್ಭಗಳಲ್ಲಿ ಪ್ರಧಾನಿಯಾದವರು ಎಲ್ಲ ರಾಜ್ಯಗಳ ವಿಶ್ವಾಸ ಪಡೆದು ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಹೇಳಿದರು.
ಕೃಷ್ಣಾ ಯೋಜನೆಗೆ 1994ರಿಂದ 99ರವರೆಗೆ ನಾನು ಹಣಕಾಸು ಸಚಿವನಾಗಿ ಸಾಕಷ್ಟುನೆರವು ನೀಡಿದೆ. ಆದರೆ ಅದರ ಉಪಯೋಗವನ್ನು ದೇವೇಗೌಡರು ಪಡೆದುಕೊಂಡರು. ಸಿದ್ದರಾಮಯ್ಯ ಅಂದು ಬಾಂಡ್ ಮೂಲಕ ಹಣ ಸಂಗ್ರಹಿಸಿದ್ದರ ಪರಿಣಾಮ ಆಲಮಟ್ಟಿಅಣೆಕಟ್ಟು 519 ಎತ್ತರಕ್ಕೆ ಕಾರಣವಾಯಿತು ಎಂದರು.
ಬಿಜೆಪಿಗರ ಮೋಸದ ಮಾತಿಗೆ ತಿರುಗೇಟು ನೀಡಿ:
ತಮ್ಮ ಭಾಷಣದೂದ್ದಕ್ಕೂ ಬಿಜೆಪಿಯವರನ್ನು ಮೋಸಗಾರರು ಎಂದು ಮಾತನಾಡಿದ ಸಿದ್ದರಾಮಯ್ಯ, ಸುಳ್ಳು ಹೇಳಿ ನಿಜ ಎಂಬಂತೆ ಬಿಂಬಿಸುವ ಅವರ ವಿರುದ್ಧ ಕಾಂಗ್ರೆಸಿಗರು ಸಹ ಅಗ್ರೇಸಿವ್ ಆಗಿ ಮಾತನಾಡಬೇಕಿದೆ. ನಾನು ಮಾತನಾಡಿದರೆ 30 ಜನ ಮುಗಿ ಬೀಳುತ್ತಾರೆ. ನೀವು ಸಹ ಬಿಜೆಪಿಗರ ಸುಳ್ಳಿಗೆ ಪ್ರತ್ಯುತ್ತರ ನೀಡಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.
ಸಂಘ ಪರಿವಾರ, ಜಾತಿ, ಧರ್ಮಗಳ ನಡುವೆ ಕಂದಕ ತರುತ್ತಿದೆ, ಕೇಂದ್ರದ ಬಿಜೆಪಿ ಸರ್ಕಾರ ಎಲ್ಲ ಹಂತಗಳಲ್ಲಿಯು ಆರ್ಥಿಕ ವೈಫಲ್ಯ ಎದುರಿಸುತ್ತಿದ್ದರೂ ಸುಳ್ಳು ಜಾಹೀರಾತು ನೀಡಿ ವಂಚಿಸುತ್ತಿದೆ. ರಾಜ್ಯದ ತೆರಿಗೆ ಪಡೆದು ಕೇವಲ ನೆಪ ಮಾತ್ರದ ನೆರವು ನೀಡುವ ಕೇಂದ್ರದ ವಿರುದ್ಧ ಅಂಕಿ ಅಂಶಗಳ ಮೂಲಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಕಳೆದ 8 ವರ್ಷದಲ್ಲಿ ರಾಜ್ಯದಿಂದ . 19 ಲಕ್ಷ ಕೋಟಿ ತೆರಿಗೆ ಹೋದರೆ ಅವರು ಕೊಟ್ಟಿದ್ದು . 1 ಲಕ್ಷ 29 ಸಾವಿರ ಕೋಟಿ ಮಾತ್ರ ಹೀಗಿದ್ದರೂ ಅವರನ್ನು ಪ್ರಶ್ನಿಸುವ ಎದೆಗಾರಿಕೆ ರಾಜ್ಯದ ಬಿಜೆಪಿಗರಿಗೆ ಇಲ್ಲ ಎಂದು ದೂರಿದರು.
8 ವರ್ಷಗಳ ಮೋದಿ ಆಡಳಿತ ವೈಫಲ್ಯದ ಕುರಿತು ಪುಸ್ತಕ ಹೊರತರುತ್ತಿರುವುದಾಗಿ ಹೇಳಿದ ಸಿದ್ದರಾಮಯ್ಯ ಮಾತೆತ್ತಿದರೆ ನಾ ಖಾವೋಂಗಾ ಎನ್ನುವ ಮೋದಿಯವರ ವೈಫಲ್ಯವನ್ನು ಅಂಕಿಅಂಶಗಳ ಮೂಲಕ ಹೇಳುವುದಾಗಿ ತಿಳಿಸಿದರು.
ರಾಜಕೀಯ ನಿವೃತ್ತಿಯ ಸವಾಲು:
ರಾಜ್ಯ ಸರ್ಕಾರದ ಭ್ರಷ್ಟಾಚಾರದ ಕುರಿತು ಮಾತನಾಡಿದ ಸಿದ್ದರಾಮಯ್ಯ, ಶೇ. 40 ಸರ್ಕಾರ ಇದಾಗಿದೆ. ಗುತ್ತಿಗೆದಾರರ ಸಂಘ ದಾಖಲೆ ಸಹಿತ ಆರೋಪ ಮಾಡಿದೆ. ಈ ಹಿಂದೆ ನನ್ನ ಅವಧಿಯಲ್ಲಿ ಯಾವ ಭ್ರಷ್ಟಾಚಾರ ಇಲ್ಲದಿದ್ದರೂ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಶೇ. 10ರ ಸರ್ಕಾರ ಎಂದು ಆರೋಪಿಸಿದ್ದರು. ಆದರೆ ಇದೀಗ ಈ ಸರ್ಕಾರದ ಬಂಡವಾಳ ಎಲ್ಲರಿಗೂ ತಿಳಿದಿದೆ. ನನ್ನ ಅವಧಿಯಲ್ಲಿ ಕಾಮಗಾರಿಗೆ ಹಣ ಬಿಡುಗಡೆಗೆ ಸಂಬಂಧಿಸಿದಂತೆ (ಎಲ್‌ಓಸಿ) ಯಾರಾದರೂ ಹಣ ನೀಡಿದ್ದಾರೆಂದು ಹೇಳಿದರೆ ರಾಜಕೀಯ ನಿವೃತ್ತಿಗೂ ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.
ಮಾನವೀಯ ದೃಷ್ಟಿಯಿಂದ ಹಣ ನೀಡಿದ್ದೆ, ಆಕೆಯನ್ನು ಯಾರೋ ಎತ್ತಿಕಟ್ಟಿದ್ದಾರೆ!
ದೇಶಕ್ಕೆ ಕಾಂಗ್ರೆಸ್ ಅಗತ್ಯ:
ದೇಶದ ಪ್ರಜಾಪ್ರಭುತ್ವ, ಸಂವಿಧಾನ ರಕ್ಷಿಸಬೇಕಾದರೆ ಕಾಂಗ್ರೆಸ್ ಪಕ್ಷದ ಅಗತ್ಯತೆ ಇದೆ ಎಂದು ಹೇಳಿದ ಸಿದ್ದರಾಮಯ್ಯ ಸಂವಿಧಾನ ಉಳಿದರೆ ನಾವೆಲ್ಲ ಉಳಿಯಲು ಸಾಧ್ಯ. ದೇಶ ಉಳಿಯಬೇಕಾದರೆ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಬಹುಮುಖ್ಯವಾಗುತ್ತಿದೆ. ಈ ದೇಶಕ್ಕೆ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ, ಸಂವಿಧಾನ ನೀಡಿದ್ದು ಕಾಂಗ್ರೆಸ್ ಪಕ್ಷ ಎಂದು ಸಿದ್ದರಾಮಯ್ಯ ತಿಳಿಸಿದರು.
ದಲಿತ ಪ್ರತಿನಿಧಿಯಾಗಿರುವ ಕಾರಜೋಳ ಬಿಜೆಪಿ ಸರ್ಕಾರದಲ್ಲಿ ಸುಳ್ಳು ಹೇಳುತ್ತಾ ಕಾಲಕಳೆಯುತ್ತಿದ್ದಾರೆ. ಬಜೆಟ್ ಘೋಷಣೆಯಲ್ಲಿ ದಲಿತ ಕಾರ್ಯಕ್ರಮಗಳಿಗೆ ಅನುದಾನ ಕಡಿತಗೊಳಿಸಲಾಗಿದೆ. ಹಿಂದೆ ನನ್ನ ಅಧಿಕಾರವಧಿಯಲ್ಲಿ ನಿಗದಿಪಡಿಸಲಾದ ಎಸ್‌ಇಪಿ ಮತ್ತು ಟಿಎಸ್‌ಪಿ ಯೋಜನೆಯ ಹಣ ಕಡಿತವಾದರೂ ಮಾತೆತ್ತದ ಕಾರಜೋಳ ಸುಳ್ಳು ಹೇಳುವುದರಲ್ಲಿಯೇ ಇದ್ದಾರೆ ಎಂದು ಟೀಕಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳದ ಪರಿಣಾಮ ಇಂದು ಎಲ್ಲ ವೈಫಲ್ಯಗಳು ಕಾಣುತ್ತಿವೆ. ರೈತರ ಆದಾಯ ದ್ವಿಗುಣಗೊಳಿಸುವ ಮಾತು ಎಲ್ಲಿ ಹೋಯಿತು? ಎಂದು ಪ್ರಶ್ನಿಸಿದರಲ್ಲದೆ ನಿರುದ್ಯೋಗ ಸಮಸ್ಯೆ ತಾಂಡವ ವಾಡುತ್ತಿದೆ, ಪ್ರತಿ ವ್ಯಕ್ತಿಯ ಮೇಲೆ . 1 ಲಕ್ಷ 78 ಸಾವಿರ ಸಾಲ ಕಾಣುತ್ತಿದೆ. ರಾಜ್ಯದ ಸಾಲ ಹೆಚ್ಚಾಗಿದೆ ಇವುಗಳ ಬಗ್ಗೆ ಅರಿವಿಲ್ಲದೆ ಕೆಲವು ಬಿಜೆಪಿಗರಾದ ಸಿ.ಟಿ. ರವಿ ಹಾಗೂ ಈಶ್ವರಪ್ಪನಂತರವರು ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಸರ್ಕಾರದ ಭ್ರಷ್ಟಾಚಾರ ಯಾವ ಹಂತಕ್ಕೆ ಬಂದಿದೆ ಎಂದರೆ ಹಿರಿಯ ಅಧಿಕಾರಿಗಳ ವರ್ಗಾವಣೆಗೆ ಉಪಹಾರ ಮಂದಿರದ ದರಗಳಂತೆ ಮಾರಾಟವಾಗುತ್ತಿವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಶಾಸಕರಾದ ಆನಂದ ನ್ಯಾಮಗೌಡ, ಪ್ರಕಾಶ ಹುಕ್ಕೇರಿ, ಮಾಜಿ ಸಚಿವರಾದ ಎಚ್.ವೈ. ಮೇಟಿ, ಮಲ್ಲಿಕಾರ್ಜುನ ನಾಗಪ್ಪ, ಉಮಾಶ್ರೀ, ಅಜಯಕುಮಾರ ಸರನಾಯಕ, ಆರ್.ಬಿ. ತಿಮ್ಮಾಪೂರ, ಮಾಜಿ ಶಾಸಕರಾದ ಜೆ.ಟಿ.ಪಾಟೀಲ, ವಿಜಯಾನಂದ ಕಾಶಪ್ಪನವರ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.