ಬೆಂಗಳೂರು(ಏ.16): ಕೋವಿಡ್‌ ರೌದ್ರ ನರ್ತನ ಹಾಗೂ ಆ್ಯಂಬುಲೆನ್ಸ್‌ ಕೊರತೆ ಹಿನ್ನೆಲೆಯಲ್ಲಿ ಸೋಂಕಿನಿಂದ ಮೃತಪಟ್ಟ ಇಬ್ಬರ ಪಾರ್ಥೀವ ಶರೀರವನ್ನು ಆಸ್ಪತ್ರೆಯಿಂದ ಚಿತಾಗಾರಕ್ಕೆ ಒಂದೇ ಆ್ಯಂಬುಲೆನ್ಸ್‌ನಲ್ಲಿ ಸಾಗಿಸಿದ ಘಟನೆ ನಗರದಲ್ಲಿ ಗುರುವಾರ ನಡೆದಿದೆ.

ನಗರದ ವಿಕ್ಟೋರಿಯಾ ಆಸ್ಪತ್ರೆಯಿಂದ ಸುಮ್ಮನಹಳ್ಳಿ ಚಿತಾಗಾರಕ್ಕೆ ಒಂದೇ ಆ್ಯಂಬುಲೆನ್ಸ್‌ನಲ್ಲಿ ಇಬ್ಬರು ಸೋಂಕಿತರ ಪಾರ್ಥೀವ ಶರೀರವನ್ನು ಸಾಗಿಸಲಾಗಿದೆ. ತುರ್ತಾಗಿ ಶವಾಗಾರಕ್ಕೆ ಮೃತ ದೇಹವನ್ನು ಕಳುಹಿಸಬೇಕಾಗಿದ್ದರಿಂದ ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿ ಈ ಕೃತ್ಯ ಎಸೆಗಿದ್ದಾರೆ ಎಂದು ಮೂಲಗಳು ಹೇಳಿವೆ.

ಕೊರೋನಾಗೆ ಕಂಪಿಸಿದ ಕರ್ನಾಟಕ: ಶವ ಹೊತ್ತು ಚಿತಾಗಾರದಲ್ಲಿ ಕಾಯುತ್ತಿದೆ ಆ್ಯಂಬುಲೆನ್ಸ್!

ಈ ಕುರಿತು ಮಾತನಾಡಿದ ಮೃತರ ಸಂಬಂಧಿ, ವಿಕ್ಟೋರಿಯಾ ಆಸ್ಪತ್ರೆಯಿಂದ ಸುಮ್ಮನಹಳ್ಳಿ ಶವಾಗಾರಕ್ಕೆ ಮೃತ ದೇಹವನ್ನು ಸಾಗಿಸಲು ಖಾಸಗಿ ಆ್ಯಂಬುಲೆನ್ಸ್‌ನವರು 12 ಸಾವಿರ ಕೇಳಿದರು. ತಕ್ಷಣವೇ ನಾವು ಆರೋಗ್ಯಾಧಿಕಾರಿಗೆ ಕರೆ ಮಾಡಿ ವಿಷಯ ತಿಳಿಸಿದೆವು. ನಮ್ಮ ಮನವಿಗೆ ಸ್ಪಂದಿಸಿದ ಅಧಿಕಾರಿಗಳು, ಯಾವುದೇ ಕಾರಣಕ್ಕೂ ಖಾಸಗಿ ಆ್ಯಂಬುಲೆನ್ಸ್‌ಗಳಿಗೆ ದುಪ್ಪಟ್ಟು ಹಣ ನೀಡಬೇಡಿ. ಆಸ್ಪತ್ರೆ ವತಿಯಿಂದಲೇ ಉಚಿತವಾಗಿ ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಆದರೆ, ನಾವು ಶವಾಗಾರಕ್ಕೆ ಬರುವಷ್ಟರಲ್ಲಿ ಒಂದೇ ಆ್ಯಂಬುಲೆನ್ಸ್‌ನಲ್ಲಿ ಎರಡು ಶವಗಳನ್ನು ಸಾಗಿಸಲಾಗಿದೆ ಎಂದು ತಿಳಿಸಿದರು.

‘ಈ ಬಗ್ಗೆ ಆ್ಯಂಬುಲೆನ್ಸ್‌ ಚಾಲಕನನ್ನು ಪ್ರಶ್ನಿಸಿದಾಗ, ‘ನನಗೆ ಗೊತ್ತಿಲ್ಲ. ಚಾಲನೆ ಮಾಡುವುದಷ್ಟೇ ನನ್ನ ಕೆಲಸ’ ಎಂದಷ್ಟೇ ಪ್ರತಿಕ್ರಿಯಿಸಿದರು. ಇಂತಹ ಕರುಣಾಜನಕ ಸ್ಥಿತಿಯನ್ನು ನೋಡಿ ನಿಜಕ್ಕೂ ನೋವಾಯಿತು. ನಮ್ಮ ಕಷ್ಟಗಳನ್ನು ಯಾರಿಗೆ ಹೇಳುವುದು? ಇಂತಹ ಸಾವು ಯಾರಿಗೂ ಬೇಡ’ ಎಂದು ಅಳಲು ತೋಡಿಕೊಂಡರು.