ಬೆಂಗಳೂರು[ಜ.10]: ಅಪಾರ್ಟ್‌ಮೆಂಟ್‌ಗಳಲ್ಲಿ ಫ್ಲ್ಯಾಟ್‌ ಖರೀದಿಸಿರುವುದಾಗಿ ಗ್ರಾಹಕರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ನಗರದ ವಿವಿಧ ಬ್ಯಾಂಕ್‌ಗಳಿಂದ ಸುಮಾರು 20 ಕೋಟಿ ರು. ಸಾಲ ಪಡೆದು ಟೋಪಿ ಹಾಕಿದ್ದ ಇಬ್ಬರು ಚಾಲಾಕಿ ವಂಚಕರು ಸಿಸಿಬಿ ಬಲೆಗೆ ಬಿದ್ದಿದ್ದಾರೆ.

ಬಸವೇಶ್ವರ ನಗರದ ನಿವಾಸಿ ಮಂಜುನಾಥ್‌ ಹಾಗೂ ಕೆಂಗೇರಿ ದೊಡ್ಡಬೆಲೆಯ ಪ್ರಾವಿಡೆಂಟ್‌ ಸನ್‌ ವತ್‌ರ್‍ ಅಪಾರ್ಟ್‌ಮೆಂಟ್‌ ನಿವಾಸಿ ರಂಗನಾಥ್‌ ಬಂಧಿತರಾಗಿದ್ದು, ಆರೋಪಿಗಳಿಂದ ಆಡಿ ಸೇರಿದಂತೆ ಎರಡು ಐಷಾರಾಮಿ ಕಾರುಗಳು ಹಾಗೂ ಲ್ಯಾಪ್‌ಟಾಪ್‌ ವಶಪಡಿಸಿಕೊಳ್ಳಲಾಗಿದೆ.

ಕೆಲವು ದಿನಗಳ ಹಿಂದೆ ಮಿಲ್ಲ​ರ್ಸ್ ರಸ್ತೆಯ ಸಿಂಡಿಕೇಟ್‌ ಬ್ಯಾಂಕ್‌ಗೆ ಫ್ಲಾಟ್‌ ಖರೀದಿಗೆ ಸಾಲ ಕೋರಿ ವ್ಯಾಪಾರಿ ರವಿಕುಮಾರ್‌ ಅರ್ಜಿ ಸಲ್ಲಿಸಿದ್ದರು. ಈ ದಾಖಲೆಗಳನ್ನು ಬ್ಯಾಂಕ್‌ ಅಧಿಕಾರಿಗಳು ಪರಿಶೀಲಿಸಿದಾಗ ವಂಚನೆ ಕೃತ್ಯ ಬೆಳಕಿಗೆ ಬಂದಿದೆ.

ನಿರ್ಮಾಣ ಹಂತದಲ್ಲಿರುವ ಕಟ್ಟಡಗಳನ್ನು ಗ್ರಾಹಕರಿಗೆ ತೋರಿಸಿ ತಾವೇ ಈ ಕಟ್ಟಡದ ಮಾಲೀಕರೆಂದು ಹೇಳಿಕೊಂಡು ಆರೋಪಿಗಳು, ಗ್ರಾಹಕರಿಂದ ಕೆ.ವೈ.ಸಿ. ದಾಖಲಾತಿಗಳನ್ನು ಪಡೆದುಕೊಂಡು ಬಿಲ್ಡರ್‌ಗಳ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆಯುತ್ತಿದ್ದರು. ನಂತರ ಗ್ರಾಹಕರ ಹೆಸರಿನಲ್ಲಿ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ತಮ್ಮ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಿಕೊಂಡು ಗ್ರಾಹಕರು ಮತ್ತು ಬ್ಯಾಂಕ್‌ಗಳಿಗೆ ಮೋಸ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾವೇ ಬಿಲ್ಡರ್‌ಗಳೆಂದು ನಂಬಿಸಿ ವಂಚನೆ:

ಮೈಸೂರಿನ ಮಂಜುನಾಥ್‌, ಬಸವೇಶ್ವರ ನಗರದಲ್ಲಿ ನೆಲೆಸಿದ್ದ. ಕೆಲ ತಿಂಗಳ ಹಿಂದೆ ಆತನಿಗೆ ಶಿವು ಎಂಬಾತನ ಮೂಲಕ ಸೀರೆ ವ್ಯಾಪಾರಿ ರವಿ ಕುಮಾರ್‌ ಪರಿಚಯವಾಗಿದೆ. ಆಗ ಮಂಜುನಾಥ್‌, ‘ತಾನು ಎಬಿಸಿ ಬಿಲ್ಡ​ರ್‍ಸ್ ಎಂಬುದು ಸೇರಿದಂತೆ ಇತರೆ ರಿಯಲ್‌ ಎಸ್ಟೇಟ್‌ ಕಂಪನಿಗಳ ಮಾಲೀಕ. ಫ್ಲ್ಯಾಟ್‌ ಖರೀದಿಗೆ ಸಾಲ ಸೌಲಭ್ಯ ಸಹ ಕೊಡಿಸುವ ಕೆಲಸ ಮಾಡಿಸುತ್ತೇನೆ. ನಿಮಗೆ ಫ್ಲ್ಯಾಟ್‌ ಬೇಕಿದ್ದರೆ ಸಂಪರ್ಕಿಸುವಂತೆ’ ಹೇಳಿದ್ದನು. ಈ ಮಾತು ನಂಬಿದ ರವಿಕುಮಾರ್‌, ಕೆಲ ದಿನಗಳ ಬಳಿಕ ಫ್ಲ್ಯಾಟ್‌ ಖರೀದಿ ಸಂಬಂಧ ಆರೋಪಿಯನ್ನು ಭೇಟಿಯಾಗಿದ್ದರು.

ನಗರದಲ್ಲಿದ್ದ ಜಿಹಾದಿಗಳ ಪತ್ತೆಗೆ ಸಿಸಿಬಿ ಬಲೆ..

ಆಗ ಫ್ಲ್ಯಾಟ್‌ ಖರೀದಿಸುವುದಾಗಿ ನಂಬಿಸಿ ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ರಾಯನ್‌ ಸನ್‌ ರೈಸ್‌ ಅಪಾರ್ಟ್‌ಮೆಂಟ್‌ ಮಾಲೀಕ ಮಲ್ಲಿಕಾರ್ಜುನ್‌ ಹೆಸರಿನಲ್ಲಿ ರವಿಕುಮಾರ್‌ ಪತ್ನಿ ಹೆಸರಿಗೆ ಆರೋಪಿ ನಕಲಿ ದಾಖಲೆ ಸೃಷ್ಟಿಸಿ ಜಿಪಿಎ ಮಾಡಿಸಿದ್ದ. ಬಳಿಕ ಇದೇ ಫ್ಲ್ಯಾಟ್‌ ಖರೀದಿಗೆ ಎಲ್‌ ಅಂಡ್‌ ಟಿ ಬ್ಯಾಂಕ್‌ನಲ್ಲಿ ರವಿಕುಮಾರ್‌ ಹೆಸರಿನಲ್ಲಿ .28 ಲಕ್ಷ ಹಾಗೂ ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ಅವರ ಪತ್ನಿ ಮಂಜುಳಾ ಹೆಸರಿನಲ್ಲಿ 39.80 ಲಕ್ಷ ರು.ಗೆ ಸೇರಿದಂತೆ 67.80 ಲಕ್ಷ ರು. ಸಾಲ ಪಡೆಯಲಾಯಿತು. ಈ ಹಣವು ಮಂಜುನಾಥ್‌ ಮಾಲೀಕತ್ವದ ಎಬಿಎಸ್‌ ಬಿಲ್ಡರ್‌ ಖಾತೆಗೆ ಜಮಾ ಆಗಿತ್ತು. ಇದಾದ ನಂತರ ಹೆಣ್ಣೂರಿನ ಕೀರ್ತನ ಎನ್‌ಕ್ಲೇವ್‌ ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್‌ ಖರೀದಿ ಸೋಗಿನಲ್ಲಿ ರವಿಕುಮಾರ್‌ ದಾಖಲೆ ಬಳಸಿ ಮತ್ತೊಂದು ಬ್ಯಾಂಕ್‌ನಿಂದ ಆರೋಪಿ 45 ಲಕ್ಷ ರು. ಸಾಲ ಪಡೆದಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಇತ್ತ ಹಣ ನೀಡಿದ್ದರೂ ಫ್ಲ್ಯಾಟ್‌ ಕೊಡದ ಬಗ್ಗೆ ರವಿಕುಮಾರ್‌, ರಾಯನ್‌ ಸನ್‌ ರೈಸ್‌ ಅಪಾರ್ಟ್‌ಮೆಂಟ್‌ ಮಾಲೀಕ ಮಲ್ಲಿಕಾರ್ಜುನ್‌ ಅವನ್ನು ವಿಚಾರಿಸಿದ್ದರು. ಆಗ ತಮ್ಮಲ್ಲಿ ಮಂಜುಳಾ ಹೆಸರಿನಲ್ಲಿ ಯಾವುದೇ ಫ್ಲ್ಯಾಟ್‌ ಮಾರಾಟ ವ್ಯವಹಾರ ನಡೆದಿಲ್ಲ ಎಂದರು. ಇದರಿಂದ ಆತಂಕಗೊಂಡ ರವಿಕುಮಾರ್‌, ತಕ್ಷಣವೇ ಮಂಜುನಾಥ್‌ಗೆ ಕರೆ ಮಾಡಿದಾಗ ತಾಂತ್ರಿಕ ಸಮಸ್ಯೆಯಾಗಿದೆ ಎಂದು ಸುಳ್ಳು ಹೇಳಿದ್ದ. ಅಷ್ಟರಲ್ಲಿ ಬ್ಯಾಂಕ್‌ ಸಾಲ ಸಂಬಂಧ ಸಲ್ಲಿಸಿದ್ದ ದಾಖಲೆಗಳ ಬಗ್ಗೆ ಶಂಕೆಗೊಂಡ ಸಿಂಡಿಕೇಟ್‌ ಬ್ಯಾಂಕ್‌ ವ್ಯವಸ್ಥಾಪಕ ಪಾಂಡ್ಯನ್‌, ರವಿಕುಮಾರ್‌ ಅವರನ್ನು ಕರೆಸಿದ್ದರು. ಈ ವೇಳೆ ವಂಚನೆ ಕೃತ್ಯದ ಬಗ್ಗೆ ರವಿಕುಮಾರ್‌ ಅವರಿಗೆ ಅರಿವಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ಸಾಲಕ್ಕೆ ಸಂಬಂಧಪಟ್ಟಂತೆ ಸಲ್ಲಿಸಿದ್ದ ದಾಖಲೆಗಳನ್ನೇ ಮಂಜುನಾಥ್‌ ಅವರ ಪತ್ನಿ ಕೀರ್ತನ, ಇವರ ಸ್ನೇಹಿತರಾದ ಮಲ್ಲಿಕಾರ್ಜುನ್‌, ರಂಗನಾಥ್‌, ರವಿಕಿರಣ್‌, ದಿಲೀಪ್‌ ಕುಮಾರ್‌ ಹಾಗೂ ಚಂದ್ರು ಸೇರಿದಂತೆ ಮತ್ತಿರರು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೇರೆ ಬೇರೆ ಬ್ಯಾಂಕುಗಳಿಗೆ ಅದೇ ನಕಲಿ ದಾಖಲೆಗಳನ್ನು ನೀಡಿ ಸಾಲ ಪಡೆದಿದ್ದರು. ಅಲ್ಲದೆ, ಒಂದೇ ಫ್ಲ್ಯಾಟ್‌ಗೆ ಬೇರೆ ಬೇರೆ ನಂಬರ್‌ ನೀಡಿ ವ್ಯಕ್ತಿಗಳಿಗೆ ಮಾರಾಟ ಮಾಡಿರುವುದಾಗಿ ಬೆಳಕಿಗೆ ಬಂದಿತು.

ಬ್ಯಾಂಕ್‌ಗಳಿಗೂ ನೊಟೀಸ್‌

ನಕಲಿ ದಾಖಲೆ ಆಧರಿಸಿ ಆರೋಪಿಗಳಿಗೆ ಸಾಲ ನೀಡಿಕೆಯಲ್ಲಿ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ಹಿನ್ನೆಲೆಯಲ್ಲಿ ಬ್ಯಾಂಕುಗಳಿಗೂ ಸಹ ನೋಟಿಸ್‌ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.