ತಮಿಳುನಾಡಿನಲ್ಲಿ ಜಿಹಾದಿಗಳ ಬಂಧನ ಬೆನ್ನಲ್ಲೇ ಇದೀಗ ಬೆಂಗಳೂರಿನಲ್ಲಿ ಜಿಹಾದಿಗಳ ಪತ್ತೆ ಸಿಸಿಬಿ ಪೊಲೀಸರ ತಂಡ ಕಾರ್ಯಾಚರಣೆಗೆ ಇಳಿದಿದೆ. 

ಬೆಂಗಳೂರು[ಜ.10]: ದೇಶಾದ್ಯಂತ ದಾಳಿ ನಡೆಸಲು ಉದ್ದೇಶಿಸಿದ್ದ ಜಿಹಾದಿ ತಂಡವನ್ನು ತಮಿಳುನಾಡಿನ ಪೊಲೀಸರು ಬಂಧಿಸಿದ ಬೆನ್ನಲ್ಲೇ ಚುರುಕುಗೊಂಡಿರುವ ಬೆಂಗಳೂರು ಸಿಸಿಬಿ ಪೊಲೀಸರು ಆ ಸಂಘಟನೆಯ ಮುಖಂಡರನ್ನು ಪತ್ತೆಹಚ್ಚಲು ದೆಹಲಿಗೆ ತೆರಳಿದ್ದಾರೆ.

"

ತಿಂಗಳ ಹಿಂದಷ್ಟೆ ತಮಿಳುನಾಡಿನ ಹಿಂದೂ ಸಂಘಟನೆ ಮುಖಂಡನನ್ನು ಹತ್ಯೆಗೈದ ಬಳಿಕ ಈ ಸಂಘಟನೆಯ ಆರು ಮಂದಿ ಶಂಕಿತರು ಬೆಂಗಳೂರಿನ ವಿವೇಕನಗರ ಸಮೀಪದ ಪಿ.ಜಿ.ಯೊಂದರಲ್ಲಿ ನೆಲೆಸಿದ್ದರು. ಅವರಲ್ಲಿ ಮೂರು ಮಂದಿ ಬೆಂಗಳೂರಿನಲ್ಲಿ ಹಾಗೂ ಒಬ್ಬ ದೆಹಲಿಯಲ್ಲಿ ಸೆರೆಯಾಗಿದ್ದು, ಇನ್ನುಳಿದವರು ತಪ್ಪಿಸಿಕೊಂಡಿದ್ದಾರೆ. ಅವರಿಗೆ ಆಶ್ರಯ ಕಲ್ಪಿಸುವಲ್ಲಿ ಬೆಂಗಳೂರಿನ ಸ್ಲಿಪರ್‌ ಸೆಲ್‌ಗಳು ನೆರವು ನೀಡಿದ್ದವು. ಹೀಗೆ ನೆರವು ನೀಡಿರುವವರ ಪತ್ತೆಗೂ ಸಿಸಿಬಿ ತನ್ನ ಕಾರ್ಯಾಚರಣೆ ಬಿರುಸುಗೊಳಿಸಿದೆ ಎಂದು ಗೊತ್ತಾಗಿದೆ.

ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಮೂವರ ವಿಚಾರಣೆ ವೇಳೆ ರಾಜ್ಯದಲ್ಲಿ ಆ ಸಂಘಟನೆಯ ನಂಟಿನ ಬಗ್ಗೆ ಮಾಹಿತಿ ಸಿಕ್ಕಿದೆ. ಕೆಲ ದಿನಗಳ ಹಿಂದೆ ಸಂಘಟನೆಯ ಮುಖಂಡ ಮೋಹಿದೀನ್‌ ಖ್ವಾಜಾ ನೇತೃತ್ವದಲ್ಲಿ ಸಭೆ ನಡೆದಿದ್ದು, ಬಳಿಕ ಪಶ್ಚಿಮ ಬಂಗಾಳಕ್ಕೆ ಖ್ವಾಜಾ ಮತ್ತು ಆತನ ಮೂವರು ಸಹಚರರು ತೆರಳಿದ್ದರು. ಖ್ವಾಜಾನನ್ನು ಗುರುವಾರ ದೆಹಲಿಯಲ್ಲಿ ಬಂಧಿಸಲಾಗಿದೆ.

ಬಾಕ್ಸಲ್ಲಿ 3 ಪಿಸ್ತೂಲ್‌:

ತಮಿಳುನಾಡಿನಲ್ಲಿ ಹಿಂದೂ ಪರ ಸಂಘಟನೆಗಳ ಮುಖಂಡರನ್ನು ಗುರಿಯಾಗಿಸಿಕೊಂಡು ಖ್ವಾಜಾ ನೇತೃತ್ವದ ಸಂಘಟನೆ ದುಷ್ಕತ್ಯ ಎಸಗಿದೆ. ಕಳೆದ ಡಿಸೆಂಬರ್‌ನಲ್ಲಿ ಆ ರಾಜ್ಯದ ಪ್ರಮುಖ ಬಲಪಂಥೀಯ ಸಂಘಟನೆಯಾದ ‘ಹಿಂದೂ ಮಕ್ಕಳ ಕಚ್ಚಿ’ ಮುಖಂಡನ ಕೊಲೆ ನಡೆದಿತ್ತು. ಈ ಹತ್ಯೆಯಲ್ಲಿ ಪಾಲ್ಗೊಂಡಿದ್ದ ಮೂವರು ಬೆಂಗಳೂರಿಗೆ ಓಡಿಬಂದು ಆಶ್ರಯ ಪಡೆದಿದ್ದರು. ಕೆಲ ದಿನಗಳ ಬಳಿಕ ಅವರಿಗೆ ಕೊರಿಯರ್‌ ಮೂಲಕ ಒಣ ಹಣ್ಣಿನ ಡಬ್ಬಿಯಲ್ಲಿಟ್ಟು ಮೂರು ಪಿಸ್ತೂಲ್‌ಗಳು ಬಂದಿದ್ದವು ಎಂದು ಸಿಸಿಬಿ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಅಲ್‌ ಉಮ್ಮಾ ಸಂಘಟನೆ ಬಗ್ಗೆ ಶಂಕೆ

ಸೆರೆಯಾದ ಬೆಂಗಳೂರಿಗರು ತಮಿಳುನಾಡಿನ ನಿಷೇಧಿತ ಉಗ್ರ ಸಂಘಟನೆಯಾದ ಅಲ್‌ ಉಮ್ಮಾದ ಶಂಕಿತ ಸದಸ್ಯರಾದ ಮಹಮ್ಮ ದ್‌ ಹನೀಫ್‌ ಖಾನ್‌, ಇಮ್ರಾನ್‌ ಖಾನ್‌, ಮಹಮ್ಮದ್‌ ಸೈಯದ್‌ ಎಂದು ತಿಳಿದುಬಂದಿದೆ. 2013ರಲ್ಲಿ ಬೆಂಗಳೂರಿನಲ್ಲಿ ಬಿಜೆಪಿ ಕಚೇರಿ ಬಳಿ ಬಾಂಬ್‌ ಸ್ಫೋಟಿಸಿದ ಪ್ರಕರಣದಲ್ಲೂ ಇದೇ ಸಂಘಟನೆಯ ಸದಸ್ಯರು ಬಂಧಿತರಾಗಿದ್ದರು. ಅವರು ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

"

4 ಶಂಕಿತ ಐಸಿಸ್‌ ಉಗ್ರರ ಬಂಧನ : ದಾಳಿ ಸಂಚು ಬಯಲು...

ತಮಿಳುನಾಡಿನಲ್ಲಿ ಹಿಂದೂ ಪರ ಸಂಘಟನೆಯ ಮುಖಂಡರನ್ನು ಕೊಂದು ಅಲ್‌ ಉಮ್ಮಾದ ಆರು ಮಂದಿ ನಗರದಲ್ಲಿ ತಲೆಮರೆಸಿಕೊಂಡಿದ್ದರು. ಇವರಲ್ಲಿ ಮೂವರು ಕೆಲವೇ ದಿನಗಳ ಕಾಲ ತಂಗಿದ್ದು, ನಂತರ ಬೇರೆಡೆಗೆ ಪರಾರಿಯಾಗಿದ್ದಾರೆ. ಒಂದು ತಿಂಗಳ ಕಾಲ ಇಲ್ಲೇ ನೆಲೆಸಿದ್ದ ಮೂವರು ಈಗ ಸಿಕ್ಕಿಬಿದ್ದಿದ್ದು, ತಪ್ಪಿಸಿಕೊಂಡಿರುವ ಇನ್ನುಳಿದವರ ಪತ್ತೆಗೆ ತನಿಖೆ ನಡೆದಿದೆ ಎಂದು ಮೂಲಗಳು ಹೇಳಿವೆ.

ನಗರದಲ್ಲಿ ದುಷ್ಕೃತ್ಯಕ್ಕೆ ಸಂಚು?

ಈಗ ಸಿಕ್ಕಿಬಿದ್ದಿರುವ ತಮಿಳುನಾಡು ಮೂಲದ ಮತೀಯ ಸಂಘಟನೆಯ ಶಂಕಿತರು ಬೆಂಗಳೂರಿನಲ್ಲಿ ಸಹ ದುಷ್ಕೃತ್ಯಕ್ಕೆ ಸಂಚು ರೂಪಿಸಿದ್ದರೇ ಎಂಬ ಬಗ್ಗೆ ಸಿಸಿಬಿ ತನಿಖೆ ನಡೆಸುತ್ತಿದೆ.

ಒಂದು ತಿಂಗಳಿಂದ ನಗರದಲ್ಲಿ ಆ ಮೂವರು ನೆಲೆಸಿದ್ದರು. ಮೇಲಾಗಿ ಪಿಸ್ತೂಲ್‌ಗಳನ್ನು ಸಹ ಅವರು ತರಿಸಿಕೊಂಡಿದ್ದಾರೆ. ಸಂಘಟನೆಯ ಮುಖಂಡನ ನೇತೃತ್ವದಲ್ಲಿ ಸಭೆ ಕೂಡಾ ನಡೆದಿದೆ. ಎಲ್ಲ ಬೆಳವಣಿಗೆ ಗಮನಿಸಿದರೆ ನಗರದಲ್ಲೂ ದುಷ್ಕೃತ್ಯಕ್ಕೆ ಅವರು ಸಿದ್ಧತೆ ನಡೆಸಿರುವ ಬಗ್ಗೆ ಶಂಕೆ ಮೂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.