Koppal news: ರಾಜ್ಯದಲ್ಲಿ 2.58 ಲಕ್ಷ ಸರ್ಕಾರಿ ಹುದ್ದೆ ಖಾಲಿ!

ರಾಜ್ಯಾದ್ಯಂತ ಸರ್ಕಾರದ ವಿವಿಧ ಇಲಾಖೆಯಲ್ಲಿ 258709 ಹುದ್ದೆ ಖಾಲಿ ಇವೆ! ಶೇ. 30ರಷ್ಟುಹುದ್ದೆಗಳು ಖಾಲಿ ಇವೆಯೆಂದು 7ನೇ ವೇತನ ಆಯೋಗದ ವರದಿಯಲ್ಲಿ ಉಲ್ಲೇಖಿಸಿದೆ. ರಾಜ್ಯ ಸರ್ಕಾರದ 2022- 23ನೇ ಸಾಲಿನ ಬಜೆಟ್‌ ಲೆಕ್ಕಾಚಾರದ ಆಧಾರದಲ್ಲಿ ಈ ಮಾಹಿತಿಯನ್ನೊಳಗೊಂಡ ಗೆಜೆಟ್‌ ಪ್ರಕಟ ಮಾಡಲಾಗಿದೆ.

2.58 lakh government posts are vacant across the state rav

ಸೋಮರಡ್ಡಿ ಅಳವಂಡಿ

 ಕೊಪ್ಪಳ (ಜ.21) : ರಾಜ್ಯಾದ್ಯಂತ ಸರ್ಕಾರದ ವಿವಿಧ ಇಲಾಖೆಯಲ್ಲಿ 258709 ಹುದ್ದೆ ಖಾಲಿ ಇವೆ! ಶೇ. 30ರಷ್ಟುಹುದ್ದೆಗಳು ಖಾಲಿ ಇವೆಯೆಂದು 7ನೇ ವೇತನ ಆಯೋಗದ ವರದಿಯಲ್ಲಿ ಉಲ್ಲೇಖಿಸಿದೆ.

ರಾಜ್ಯ ಸರ್ಕಾರದ 2022- 23ನೇ ಸಾಲಿನ ಬಜೆಟ್‌ ಲೆಕ್ಕಾಚಾರದ ಆಧಾರದಲ್ಲಿ ಈ ಮಾಹಿತಿಯನ್ನೊಳಗೊಂಡ ಗೆಜೆಟ್‌ ಪ್ರಕಟ ಮಾಡಲಾಗಿದೆ. ರಾಜ್ಯಾದ್ಯಂತ 769981 ಮಂಜೂರಾದ ಹುದ್ದೆಗಳಿವೆ. ಈ ಪೈಕಿ 511272 ಹುದ್ದೆಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಸುಮಾರು ವರ್ಷಗಳಿಂದ 258709 ಹುದ್ದೆ ಖಾಲಿ ಇವೆ. ವರ್ಷದಿಂದ ವರ್ಷಕ್ಕೆ ಖಾಲಿಯಾಗುತ್ತಿದ್ದರೂ ಭರ್ತಿಯಾಗುತ್ತಿರುವುದು ಮಾತ್ರ ಅಪರೂಪ ಎನ್ನುವಂತಾಗಿದೆ.

KOPPAL NEWS: ರಸ್ತೆ, ಮೇಲ್ಸೇತುವೆಗೆ ₹55 ಕೋಟಿ ಅನುದಾನ: ಸಿ.ಸಿ.ಪಾಟೀಲ್

7ನೇ ವೇತನ ಆಯೋಗ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಆಯೋಗವು ತನ್ನ ವರದಿ ಸಲ್ಲಿಸಬೇಕಿದೆ. ಹೀಗಾಗಿ ರಾಜ್ಯದಲ್ಲಿರುವ ಸರ್ಕಾರಿ ನೌಕರರ ಅಂಕಿಯನ್ನು ಕಲೆ ಹಾಕಿದ್ದು, ಇದರಲ್ಲಿ ಖಾಲಿ ಇರುವ ಹುದ್ದೆಗಳ ಮಾಹಿತಿಯನ್ನು ಗೆಜೆಟ್‌ ಮೂಲಕವೇ ಅಧಿಕೃತವಾಗಿ ಪ್ರಕಟ ಮಾಡಲಾಗಿದೆ.

7ನೇ ವೇತನ ಆಯೋಗದ ಜಂಟಿ ಕಾರ್ಯದರ್ಶಿ ಜಿ.ಬಿ. ಹೇಮಣ್ಣ ಅವರು ವಿಶೇಷ ರಾಜ್ಯಪತ್ರವನ್ನು ಜ. 17ರಂದು ಬಿಡುಗಡೆ ಮಾಡಿದ್ದಾರೆ. ರಾಜ್ಯಾದ್ಯಂತ ಇರುವ ಸುಮಾರು 43 ಇಲಾಖೆಯ ಮಾಹಿತಿಯನ್ನೊಳಗೊಂಡು ಈ ಲೆಕ್ಕಾಚಾರ ನೀಡಲಾಗಿದೆ. ಕೆಲವೊಂದು ಇಲಾಖೆಯಲ್ಲಿ ಶೇ. 30ರಷ್ಟುಹುದ್ದೆ ಖಾಲಿ ಇದ್ದರೆ ಇನ್ನು ಕೆಲ ಇಲಾಖೆಯಲ್ಲಿ ಶೇ. 50ಕ್ಕೂ ಅಧಿಕ ಸ್ಥಾನಗಳು ಖಾಲಿ ಇವೆ.

ಕೃಷಿ ಇಲಾಖೆಯಲ್ಲಿ 10324 ಮಂಜೂರಾದ ಹುದ್ದೆಗಳಿವೆ. ಇದರಲ್ಲಿ ಕೇವಲ 4008 ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂದರೆ 6316 ಹುದ್ದೆ ಖಾಲಿ ಇವೆ. ಅಂದರೆ ಶೇ. 60ಕ್ಕೂ ಅಧಿಕ ಹುದ್ದೆ ಖಾಲಿ ಉಳಿದಿವೆ.

ಪಶುಸಂಗೋಪನಾ ಇಲಾಖೆಯಲ್ಲಿ 18553 ಮಂಜೂರಾದ ಹುದ್ದೆಗಳು. 8581 ಹುದ್ದೆ ಮಾತ್ರ ಭರ್ತಿಯಾಗಿವೆ. 9972 ಹುದ್ದೆಗಳು ಭರ್ತಿಯಾಗಿಲ್ಲ. ಹಿಂದುಳಿದ ವರ್ಗಗಳ ಇಲಾಖೆಯಲ್ಲಿ 15287 ಹುದ್ದೆ ಮಂಜೂರಾತಿಯಾಗಿವೆ. ಇದರಲ್ಲಿ ಕೇವಲ 7224 ಹುದ್ದೆಗಳು ಮಾತ್ರ ಭರ್ತಿಯಾಗಿವೆ. 8063 ಹುದ್ದೆ ಖಾಲಿ ಇವೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಯಲ್ಲಿ 77 ಹುದ್ದೆ ಮಂಜೂರಾತಿ ಇದ್ದರೂ ಕೇವಲ 2 ಹುದ್ದೆ ಭರ್ತಿಯಾಗಿವೆ. ಉಳಿದ ಅಷ್ಟುಹುದ್ದೆ ಖಾಲಿ ಇವೆ. ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯಲ್ಲಿ 281862 ಮಂಜೂರಾದ ಹುದ್ದೆಗಳಿದ್ದರೂ 215803 ಹುದ್ದೆ ಮಾತ್ರ ಭರ್ತಿಯಾಗಿವೆ. 66059 ಹುದ್ದೆ ಖಾಲಿ ಇವೆ. ಹೀಗೆ ರಾಜ್ಯದ ಸುಮಾರು 43 ಇಲಾಖೆಯಲ್ಲಿ ಇದೇ ರೀತಿ ಪರಿಸ್ಥಿತಿ ಇದೆ. ಬಹುತೇಕ ಇಲಾಖೆಯಲ್ಲಿ ಶೇ. 50ಕ್ಕೂ ಅಧಿಕ ಹುದ್ದೆ ಮಾತ್ರ ಭರ್ತಿಯಾಗಿವೆ.

ಹೆಚ್ಚಿದ ಒತ್ತಡ:

ಹೀಗೆ ಇಲಾಖೆಯಲ್ಲಿ ಶೇ. 30ರಿಂದ 50ರಷ್ಟುಹುದ್ದೆ ಖಾಲಿ ಇರುವುದರಿಂದ ಕಾರ್ಯನಿರ್ವಹಿಸುತ್ತಿರುವವರಿಗೆ ಕೆಲಸ ಒತ್ತಡ ವಿಪರೀತ ಹೆಚ್ಚಳವಾಗಿದೆ. ಇತ್ತೀಚಿನ ದಿನಗಳಲ್ಲಿ ಕೆಲಸದ ಪ್ರಮಾಣವೂ ಹೆಚ್ಚಳವಾಗುತ್ತಿರುವುದು ಒಂದು ಕಡೆಯಾದರೆ ಮತ್ತೊಂದೆಡೆ ಹುದ್ದೆ ಖಾಲಿ ಇರುವುದು ಸರ್ಕಾರಿ ನೌಕರರ ಆರೋಗ್ಯದ ಮೇಲೆ ಕೆಟ್ಟಪರಿಣಾಮ ಬೀರುತ್ತಿದೆ.

ಇಷ್ಟುಹುದ್ದೆಗಳು ಖಾಲಿ ಇದ್ದರೂ ಆಡಳಿತದಲ್ಲಿ ಯಾವುದೇ ತೊಂದರೆಯಾಗದಂತೆ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಶಕ್ತಿಮೀರಿ ಕೆಲಸ ಮಾಡುತ್ತಿದ್ದಾರೆ ಎನ್ನುವ ಅರ್ಥದಲ್ಲಿ ವಿಶ್ಲೇಷಣೆ ಮಾಡುತ್ತಾರೆ ನೌಕರರ ಸಂಘದ ಪದಾಧಿಕಾರಿಗಳು.

ಬಿಜೆಪಿ ಆಡಳಿತದಲ್ಲಿ ಶಾಸಕರು ಬ್ರೋಕರ್‌ಗಳಾಗಿದ್ದಾರೆ: ಡಿ.ಕೆ.ಶಿವಕುಮಾರ್‌

ಗುತ್ತಿಗೆ ನೇಮಕ:

ಹೀಗೆ ಖಾಲಿ ಇರುವ ಹುದ್ದೆಗಳಲ್ಲಿ ಬಹುತೇಕ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ. ಹೀಗೆ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡವರು ಕಾಯಂ ನೌಕರರಂತೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವುದಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.

Latest Videos
Follow Us:
Download App:
  • android
  • ios