ಕೋಲಾರ: ಬಂಗಾರಪೇಟೆಯಲ್ಲಿ 2.50 ಕೋಟಿ ಹಣ ಪತ್ತೆ..!
ಜಿಯೋನ್ ಹಿಲ್ಸ್ ಗಾಲ್ಫ್ ರೆಸಾರ್ಟ್‌ನಲ್ಲಿ ಕೋಟಿ ಕೋಟಿ ಹಣ ಗೋಣಿ ಚೀಲದಲ್ಲಿ ಪತ್ತೆಯಾಗಿರುವುದರ ಬಗ್ಗೆ ಮಾಹಿತಿ ಅರಿತು ಐಟಿ ಅಧಿಕಾರಿಗಳು, ಚುನಾವಣಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಮಾಹಿತಿ ಕಲೆಹಾಕುತ್ತಿದ್ದಾರೆ.
ಕೋಲಾರ(ಮೇ.04): ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲೇ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕು ಹೊರವಲಯದಲ್ಲಿರುವ ಜಿಯೋನ್ ಹಿಲ್ಸ್ ಗಾಲ್ಫ್ ರೆಸಾರ್ಟ್‌ನಲ್ಲಿ 2.50 ಕೋಟಿ ಹಣ ಪತ್ತೆಯಾಗಿದೆ.
ಪಟ್ಟಣದ ಪ್ರಭಾವಿ ರಾಜಕಾರಣಿಯೊಬ್ಬರ ಲೆಕ್ಕಪತ್ರಗಳನ್ನು ನೋಡಿಕೊಳ್ಳುತ್ತಿದ್ದ ಆಂದ್ರಪ್ರದೇಶದ ಗುಂಟೂರು ನಿವಾಸಿ ಆಡಿಟರ್ ರಮೇಶ್ ಎಂಬುವರ ವಿಲ್ಲಾದಲ್ಲೆ 2.50 ಕೋಟಿ ನಗದು ಹಣ ಪತ್ತೆಯಾಗಿದ್ದು, ಖಚಿತ ಮಾಹಿತಿ ಮೇರೆಗೆ ಕೆಜಿಎಫ್ ಎಸ್ಪಿ ಡಾ.ಧರಣಿದೇವಿ ನೇತೃತ್ವದಲ್ಲಿ ಪೊಲೀಸರು ದಾಳಿ ಮಾಡುತ್ತಿದ್ದಂತೆ ಆರೋಪಿ ಆಡಿಟರ್ ರಮೇಶ್ ಕಾರಿನಲ್ಲಿ ಪರಾರಿಯಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಆಡಿಟರ್ ರಮೇಶ್ ಗಾಲ್ಫ್‌ನಲ್ಲೇ ವಿಲ್ಲಾ ಪಡೆದು ವಾಸ ಮಾಡುತ್ತಿದ್ದು, ಇವರು ಪಟ್ಟಣದ ರಾಷ್ಟ್ರೀಯ ಪಕ್ಷದ ಪ್ರಭಾವಿ ರಾಜಕಾರಣಿಯೊಬ್ಬರ ಹಾಗೂ ಅವರ ಮಗನ ವ್ಯವಹಾರಗಳ ಎಲ್ಲಾ ಲೆಕ್ಕಪತ್ರಗಳನ್ನು ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಕೆಟ್ಟುನಿಂತ ಪ್ಯಾಸೆಂಜರ್ ಆಟೋದಲ್ಲಿ 1 ಕೋಟಿ ರೂ. ಹಣ ಪತ್ತೆ: ಹಣಕ್ಕೆ ದಾಖಲೆ ಇಲ್ವಂತೆ!
ಸಂಜೆ ಆಡಿಟರ್ ರಮೇಶ್ ತನ್ನ ವಿಲ್ಲಾದಲ್ಲಿ ಅನಧಿಕೃತವಾಗಿ ಕೋಟಿ ಕೋಟಿ ಹಣ ಸಂಗ್ರಹಿಸಿಟ್ಟಿರುವ ಬಗ್ಗೆ ಹಾಗೂ ಈ ಹಣ ವಿಧಾನಸಭೆ ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಇಡಲಾಗಿತ್ತು ಎಂಬ ಮಾಹಿತಿ ಬಂದ ಮೇರೆಗೆ ಪೊಲೀಸರು ದಾಳಿ ನಡೆಸಿದರು.
ಪೊಲೀಸರು ಗಾಲ್ಫ್‌ದೊಳಗೆ ಬರುತ್ತಿದ್ದನ್ನು ಕಂಡು ಆಡಿಟರ್ ರಮೇಶ್ ಕಾರೊಂದರಲ್ಲಿ ಪರಾತಿಯಾಗಿದ್ದಾನೆ. ಮತ್ತೊಂದು ಕಾರಿನಡಿಕ್ಕಿಯಲ್ಲಿ ಮೂರು ಮೂಟೆಯಲ್ಲಿ ಹಣವನ್ನು ಇರಿಸಲಾಗಿತ್ತು ಹಾಗೂ ವಿಲ್ಲಾದಲ್ಲಿಯೂ ಪರಿಶೀಲಿಸಿದಾಗ ಅಲ್ಲಿಯೂ ಕೋಟಿ ಕೋಟಿ ಹಣ ಪತ್ತೆಯಾಗಿದೆ. ಈ ಹಣ ಯಾರಿಗೆ ಸೇರಿದ್ದು ಎಂಬುದು ಇನ್ನೂ ಪತ್ತೆಯಾಗಿಲ್ಲ. ಇನ್ನು ಎಲ್ಲೆಲ್ಲಿ, ಯಾವ್ಯಾವ ಹಳ್ಳಿಗೆ ಹಣ ಹೋಗಬೇಕು ಎಂದು ಲೀಸ್ಟ್ ಸಹ ಮಾಡಿದ್ದ ಚೀಟಿ ದಾಳಿ ವೇಳೆ ಪತ್ತೆಯಾಗಿದ್ದು, ಮತದಾರರಿಗೆ ಹಂಚಿಕೆ ಮಾಡಲು ಅಕ್ರಮವಾಗಿ ಹಣ ಸಂಗ್ರಹ ಮಾಡಲಾಗಿತ್ತು ಅನ್ನೋದು ಖಚಿತವಾಗಿದೆ. ಮತದಾರರಿಗೆ ಹಂಚಲು ಇಂತಹ ಬೂತ್‌ಗೆ ಇಷ್ಟು ಹಣ ಅವರ ಮೊಬೈಲ್ ಸಂಖ್ಯೆ ಸಹ ನಮೋದಿಸಲಾಗಿತ್ತು ಎಂದು ತಿಳಿದು ಬಂದಿದೆ.
ಜಿಯೋನ್ ಹಿಲ್ಸ್ ಗಾಲ್ಫ್ ರೆಸಾರ್ಟ್‌ನಲ್ಲಿ ಕೋಟಿ ಕೋಟಿ ಹಣ ಗೋಣಿ ಚೀಲದಲ್ಲಿ ಪತ್ತೆಯಾಗಿರುವುದರ ಬಗ್ಗೆ ಮಾಹಿತಿ ಅರಿತು ಐಟಿ ಅಧಿಕಾರಿಗಳು, ಚುನಾವಣಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಮಾಹಿತಿ ಕಲೆಹಾಕುತ್ತಿದ್ದಾರೆ.