ಬೆಂಗಳೂರಿನ ಹಲಸೂರು ಗೇಟ್‌ ಪೊಲೀಸ್‌ ಠಾಣೆಯ ಮುಂದೆ ಕೆಟ್ಟುನಿಂತ ಪ್ರಯಾಣಿಕರ ಆಟೋದಲ್ಲಿ ಬರೋಬ್ಬರಿ 1 ಕೋಟಿ ರೂ. ಹಣ ಪತ್ತೆಯಾಗಿದೆ.

ಬೆಂಗಳೂರು (ಏ.13): ಬೆಂಗಳೂರಿನಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವ ಆಟೋದಲ್ಲಿ ಬರೋಬ್ಬರಿ 1 ಕೋಟಿ ರೂಪಾಯಿ ದಾಖಲೆಗಳಿಲ್ಲದ ಹಣ ಸಾಗಾಟ ಮಾಡವಾಗ ದುರಾದೃಷ್ಟವೆಂಬಂತೆ ಪೊಲೀಸ್‌ ಠಾಣೆ ಮುಂದೆಯೇ ಆಟೋ ಕೆಟ್ಟುನಿಂತಿದೆ. ಇನ್ನು ಆಟೋದಲ್ಲಿದ್ದ ಪ್ರಯಾಣಿಕರು ಮತ್ತು ಆಟೋ ಚಾಲಕನ ನಡವಳಿಕೆಗಳನ್ನು ನೋಡಿದ ಪೊಲೀಸರು ಆಟೋವನ್ನು ಪರಿಶೀಲನೆ ಮಾಡಿದಾಗ ದಾಖಲೆಗಳಿಲ್ಲದ ಸಾಗಿಸುತ್ತಿದ್ದ 1 ಕೋಟಿ ಹಣ ಸಿಕ್ಕಿದ್ದು, ವಶಪಡಿಸಿಕೊಂಡಿದ್ದಾರೆ.

ಇನ್ನು ಬೆಂಗಳೂರಿನ ಹಲಸೂರು ಗೇಟ್‌ ಪೊಲೀಸ್‌ ಠಾಣೆಯ ಮುಂದೆ ಈ ಘಟನೆ ನಡೆದಿದೆ. ಸುರೇಶ್ ಮತ್ತು ಪ್ರವೀಣ್ ಎನ್ನುವವರು ಆಟೋದಲ್ಲಿ ಹಣವನ್ನು ತುಂಬಿದ ಕಂತೆ ಕಂತೆ ನೋಟಿನ ಬ್ಯಾಗ್‌ಗಳನ್ನು ಇಟ್ಟುಕೊಂಡು ಆಟೋದಲ್ಲಿ ಹಣ ಸಾಗಿಸುತ್ತಿದ್ದರು. ಆದರೆ, ಅವರ ದುರಾದೃಷ್ಟ ಎಂಬಂತೆ ಆಟೋ ಪೊಲೀಸ್‌ ಠಾಣೆಯ ಮುಂದೆಯೇ ಕೆಟ್ಟು ನಿಂತಿದೆ. ಅಲ್ಲಿಂದ ಆಟೋವನ್ನು ತೆಗೆದಕೊಂಡು ಹೋಗಲು ಪ್ರಯಾಣಿಕರು ನಡೆದುಕೊಳ್ಳುತ್ತಿದ್ದ ರೀತಿ ನೋಡಿದರೆ ಪೊಲೀಸರಿಂದ ತಪ್ಪಿಸಿಕೊಳ್ಳಲೇ ಹೀಗೆ ಮಾಡುತ್ತಿದ್ದಾರೆ ಎಂಬಂತೆ ಭಾಸವಾಗಿದೆ.

ಎರಡೂ ಪಕ್ಷಗಳಿಂದ ನನ್ನ ಮುಗಿಸಲು ಯತ್ನ: ನಾನು ಮಾಡಿದ ತಪ್ಪೇನು?

ಪೊಲೀಸರಿಂದ ಬ್ಯಾಗ್‌ಗಳ ಪರಿಶೀಲನೆ: ಆಟೋದಲ್ಲಿನ ಪ್ರಯಾಣಿಕರ ವರ್ತನೆಯನ್ನು ಗಮನಿಸಿ ಆಟೋ ಚಾಲಕನ ಮೇಲೆ ದೌರ್ಜನ್ಯ ಮಾಡಲು ಮುಂದಾದವರನ್ನು ಪ್ರಶ್ನೆ ಮಾಡಿದ್ದಾರೆ.ಈ ವೇಳೆ ಪೊಲೀಸರ ಮುಂದೆ ಸರಿಯಾಗಿ ಉತ್ತರಿಸದೇ ತಡಬಡಾಯಿಸಿದ್ದಾರೆ. ಇಲ್ಲಿ ಏನೋ ಅನಧಿಕೃತ ಚಟುವಟಿಕೆ ನಡೆಯುತ್ತಿದೆ ಎಂದು ಅನುಮಾನಗೊಂಡ ಪೊಲೀಸರು ಆಟೋದಲ್ಲಿ ಇಟ್ಟು ಸಾಗಿಸುತ್ತಿದ್ದ ಬ್ಯಾಗ್‌ಗಳನ್ನು ಪರಿಶೀಲನೆ ಮಾಡಿದ್ದಾರೆ.ಈ ವೇಳೆ ಬ್ಯಾಗ್ ನಲ್ಲಿ 500 ರೂ, ಮುಖಬೆಲೆಯ ಹಲವು ಕಂತೆಗಳಿಂದ ಕೂಡಿದ ಒಂದು ಕೋಟಿ ಹಣ ಪತ್ತೆಯಾಗಿದೆ. ಇಬ್ಬರನ್ನು ವಶಕ್ಕೆ ಪಡೆದು ದಾಖಲೆ ಪರಿಶೀಲನೆ ಮಾಡಿದ್ದಾರೆ. ಆದರೆ, ಸಮರ್ಪಕ ದಾಖಲೆಗಳು ಸಿಗದ ಹಿನ್ನೆಲೆಯಲ್ಲಿ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಆದಾಯ ತೆರಿಗೆ ಇಲಾಖೆಗೆ ಹಣ ರವಾನೆ: ಕೇಂದ್ರ ವಲಯದ ಡಿಸಿಪಿ ಶ್ರೀನಿವಾಸ್ ಗೌಡ ಮಾಧ್ಯಮಗಳೊಂದಿಗೆ ಮಾತನಾಡಿ, ಆಟೋದಲ್ಲಿ ದಾಖಲೆಯಿಲ್ಲದೇ ಸಾಗಣೆ ಮಾಡುತ್ತಿದ್ದ 1 ಕೋಟಿ ರೂ. ಹಣವನ್ನು ವಶಪಡಿಸಿಕೊಂಡು ಆದಾಯ ತೆರಿಗೆ (ಐಟಿ) ಇಲಾಖೆಗೆ ಕೇಸ್ ಕೊಟ್ಟಿದ್ದೇವೆ. ಆಟೋದಲ್ಲಿ ಹೋಗುತ್ತಿದ್ದ ಪ್ರಯಾಣಿಕರ ಮೇಲೆ ಅನುಮಾನ ಬಂದು ನಮ್ಮ ಸಿಬ್ಬಂದಿ ಪರಿಶೀಲನೆ ಮಾಡಿದ್ದರಿಂದ ಸಿಕ್ಕಿದ ಹಣವನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಐಟಿಗೆ ಕೇಸನ್ನು ಟ್ರಾನ್ಸ್ ಫರ್ ಮಾಡಿದ್ದೇವೆ. ಹಣ ಸಾಗಣೆಗೆ ಸಂಬಂಧಿಸಿದಂತೆ ಮುಂದಿನ ತನಿಖೆಯನ್ನು ಅವರು ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಯಡಿಯೂರಪ್ಪ 8 ದಿನ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿದ್ರೆ ಬಿಜೆಪಿ 50 ಸೀಟನ್ನೂ ಗೆಲ್ಲೊದಿಲ್ಲ!

ಐಡಿ ಇಲಾಖೆಯಿಂದಲೇ ತನಿಖೆ: ಈ ಹಣವು ಹಲಸೂರು ಗೇಟ್ ಹಾಗೂ ಎಸ್ ಜೆ ಪಾರ್ಕ್ ಎರಡು ಠಾಣಾ ವ್ಯಾಪ್ತಿ ಮಧ್ಯದಲ್ಲಿ ಸಿಕ್ಕಿದೆ. ಸದ್ಯಕ್ಕೆ ಯಾವುದೇ ಕೇಸ್ ಮಾಡದೇ ಆದಾಯ ತೆರಿಗೆ ಇಲಾಖೆಗೆ ಕೇಸ್ ಟ್ರಾನ್ಸ್ ಫರ್ ಮಾಡಲಾಗಿದೆ. ಇನ್ನು ಹಲಸೂರು ಗೇಟ್‌ ಠಾಣೆ ಪೊಲೀಸರು ನಾವು ಈ ಹಣ ಸಿಕ್ಕ ಪ್ರಕರಣದ ಬಗ್ಗೆ ಯಾವುದೇ ತನಿಖೆ ಮಾಡುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೇ ಮುಂದಿನ ತನಿಖೆ ನಡೆಸಲಿದ್ದಾರೆ. ಅಗತಯವಿದ್ದಲ್ಲಿ ಹಣವನ್ನು ಸಾಗಣೆ ಮಾಡುತ್ತಿದ್ದವರ ಮನೆಗಳ ಮೇಲೂ ದಾಳಿ ಮಾಡಬಹುದು ಎಂದು ಕೇಂದ್ರ ಡಿಸಿಪಿ ಶ್ರೀನಿವಾಸ್ ಗೌಡ ಮಾಹಿತಿ ನೀಡಿದರು.