ಮಂಗಳೂರು(ಜು.29): ರಾಜ್ಯ ಮಾತ್ರವಲ್ಲ ದೇಶಾದ್ಯಂತ ಸಂಚಲನÜ ಮೂಡಿಸಿ ಅಚ್ಚರಿಗೆ ಕಾರಣವಾಗಿದ್ದ ಕಾಫಿ ಡೇ ಮಾಲೀಕ, ಮಾಜಿ ಸಿಎಂ ಎಸ್‌.ಎಂ. ಕೃಷ್ಣ ಅವರ ಅಳಿಯ ಸಿದ್ಧಾರ್ಥ ಆತ್ಮಹತ್ಯೆ ಪ್ರಕರಣಕ್ಕೆ ಜು.31ಕ್ಕೆ ಒಂದು ವರ್ಷ ಪೂರ್ತಿಯಾಗುತ್ತದೆ. ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ಹಾಗೂ ಪೊಲೀಸ್‌ ತನಿಖೆಯಿಂದ ಸಿದ್ಧಾಥ್‌ರ್‍ ಸಾವು ಆತ್ಮಹತ್ಯೆ ಎಂಬುದು ದೃಢಪಟ್ಟಿದೆ. ಆದರೆ ಆತ್ಮಹತ್ಯೆಗೆ ಕಾರಣವೇನು ಎಂಬುದು ಇನ್ನೂ ಪತ್ತೆಯಾಗಿಲ್ಲ.

ಬೆಂಗಳೂರಿನಿಂದ ಹೊರಟಿದ್ದ ಸಿದ್ಧಾರ್ಥ, ಸಕಲೇಶಪುರ ಮೂಲಕ ಚಿಕ್ಕಮಗಳೂರಿಗೆ ಬಂದು ಅಲ್ಲಿಂದ ಕಾರಿನಲ್ಲಿ ಜು.29ರಂದು ಮಂಗಳೂರಿಗೆ ಆಗಮಿಸಿದ್ದರು. ಸಂಜೆ ವೇಳೆ ಕೇರಳ ಸಂಪರ್ಕದ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಜಪ್ಪಿನಮೊಗರು ನೇತ್ರಾವತಿ ಸೇತುವೆಯಿಂದ ಸಿದ್ಧಾರ್ಥ ದಿಢೀರ್‌ ಕಣ್ಮರೆಯಾಗಿದ್ದರು. ಅವರು ನದಿಗೆ ಧುಮುಕಿರಬಹುದು ಎಂಬ ಸಂಶಯದಲ್ಲಿ ಇಡೀ ಜಿಲ್ಲಾಡಳಿತವೇ ಲಕ್ಷಗಟ್ಟಲೆ ವ್ಯಯಿಸಿ ಹುಡುಕಾಟ ನಡೆಸಿತ್ತು.

ಅಕ್ರಮ ಗೋಸಾಗಾಟ: ದ.ಕ ನಿರ್ಗಮನ ಡಿಸಿ ಸಿಂಧು ರೂಪೇಶ್‌ಗೆ ಕೊಲೆ ಬೆದರಿಕೆ..!

ಎರಡು ದಿನಗಳ ಬಳಿಕ ಜು.31ರಂದು ಸಿದ್ಧಾರ್ಥ ಮೃತದೇಹ 4 ಕಿ.ಮೀ. ದೂರದ ಹೊಯಿಗೆ ಬಜಾರ್‌ ಎಂಬಲ್ಲಿ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಇದು ನದಿಗೆ ಹಾರಿ ಆತ್ಮಹತ್ಯೆಯಂತೆ ಕಂಡುಬಂದರೂ ಸಿದ್ಧಾರ್ಥ ಸಾವಿನ ಬಗ್ಗೆ ಸಾಕಷ್ಟುಅನುಮಾನ, ಜಿಜ್ಞಾಸೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಪ್ರತ್ಯೇಕ ತನಿಖಾಧಿಕಾರಿಯಿಂದ ತನಿಖೆಗೆ ಸರ್ಕಾರ ಸೂಚಿಸಿತ್ತು.

ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯ(ಆರ್‌ಎಫ್‌ಎಸ್‌ಎಲ್‌) ವರದಿ, ಫೆäರೋನ್ಸಿಕ್‌ ತಜ್ಞರ ವರದಿ, ಮರಣೋತ್ತರ ವರದಿ ಸೇರಿದಂತೆ ಹಲವು ಆಯಾಮದ ತನಿಖಾ ವರದಿಗಳನ್ನು ತರಿಸಿಕೊಂಡ ಪೊಲೀಸ್‌ ಇಲಾಖೆ ವಿಸ್ತೃತ ತನಿಖೆಗೆ ನಿರ್ಧರಿಸಿತ್ತು. 2019 ಆಗಸ್ಟ್‌ 23ರಂದು ಮಂಗಳೂರಿನ ಆರ್‌ಎಫ್‌ಎಸ್‌ಎಲ್‌ ನೀಡಿದ ವರದಿಯಲ್ಲಿ ಸಿದ್ಧಾರ್ಥನ ಸಾವು ಆತ್ಮಹತ್ಯೆಯೇ ಎಂಬುದು ದೃಢಪಟ್ಟಿತ್ತು. ಆಗ ಪೊಲೀಸ್‌ ಕಮಿಷನರ್‌ ಆಗಿದ್ದ ಡಾ.ಪಿ.ಎಸ್‌.ಹರ್ಷ ಅವರು ಪ್ರಕರಣದ ಆಳವಾದ ತನಿಖೆಗೆ ಮಂಗಳೂರು ದಕ್ಷಿಣ ಎಸಿಪಿ ಕೋದಂಡರಾಮ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿದ್ದರು.

ಬಿಬಿಎಂಪಿಯಿಂದ ದೂರು ದಾಖಲು: ಕಟ್ಟಡ ನಕ್ಷೆ ರದ್ದು

ತನಿಖೆ ಇನ್ನೂ ಬಾಕಿ: ಸಿದ್ಧಾರ್ಥ ಆತ್ಮಹತ್ಯೆ ಮಾಡಿ ಒಂದು ವರ್ಷವಾದರೂ ನಂತರದ ದಿನಗಳಲ್ಲಿ ಮಂಗಳೂರಿನಲ್ಲಿ ಸಂಭವಿಸಿ ಸಿಎಎ ವಿರೋಧಿ ಪ್ರತಿಭಟನೆ, ಬಳಿಕ ಬಂದೆರಗಿದ ಕೊರೋನಾ ಕಾಟ ಇತ್ಯಾದಿ ಕಾರಣಗಳಿಂದ ತನಿಖೆ ನಿಧಾನಗತಿ ಆಯಿತು ಎನ್ನುತ್ತವೆ ಪೊಲೀಸ್‌ ಮೂಲಗಳು.

ಐಟಿ ಅಧಿಕಾರಿಗಳ ಕಿರುಕುಳ ಕುರಿತು ಸಿದ್ಧಾರ್ಥ ಬರೆದಿದ್ದರು ಎನ್ನಲಾದ ಕೈಬರಹÜ ಪತ್ರದ ಸಾಚಾತನ, ಕೌಟುಂಬಿಕ ಒಡನಾಟ, ಶೇರು ವಹಿವಾಟು, ಬ್ಯಾಂಕ್‌ ಖಾತೆ ವಿವರ, ರಾಜಕೀಯ ಬೆದರಿಕೆ, ಒತ್ತಡ, ಫೋನ್‌ ಕರೆ, ಐಟಿ ನೋಟಿಸ್‌ಗಳ ಬಗ್ಗೆ ಎರಡನೇ ಹಂತದಲ್ಲಿ ತನಿಖೆ ನಡೆಯುತ್ತಿದೆ. ಈ ಬಗ್ಗೆ ಕಂಪನಿಯ ಲೆಕ್ಕಪರಿಶೋಧಕರಿಗೂ ಲೆಕ್ಕಪತ್ರದ ಮಾಹಿತಿ ಬಯಸಿ ಪೊಲೀಸರು ನೋಟಿಸ್‌ ಜಾರಿಗೊಳಿಸಿದ್ದರು. ಪ್ರಕರಣ ಕುರಿತಂತೆ ತನಿಖಾ ತಂಡ ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಗೆ ತೆರಳಿ ತನಿಖೆ ಕೈಗೊಂಡಿತ್ತು. ತನಿಖೆಯ ಪ್ರಗತಿ ಬಗ್ಗೆ ಪ್ರಶ್ನಿಸಿದರೆ ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ ಎಂದಷ್ಟೇ ಪೊಲೀಸ್‌ ಅಧಿಕಾರಿಗಳು ಹೇಳುತ್ತಿದ್ದಾರೆ. ಹಾಗಾಗಿ ಸಿದ್ಧಾರ್ಥ ಸಾವಿಗೆ ಕಾರಣ ಏನು ಎಂಬುದು ಸದ್ಯಕ್ಕೆ ನಿಗೂಢವಾಗಿ ಉಳಿದಿದೆ.

ಆತ್ಮಹತ್ಯೆಯ ಹಾಟ್‌ಸ್ಪಾಟ್‌ಗೆ ಈಗ ಬೇಲಿ!

ಸಿದ್ಧಾರ್ಥ ಆತ್ಮಹತ್ಯೆ ಬಳಿಕ ನೇತ್ರಾವತಿ ಸೇತುವೆ ಆತ್ಮಹತ್ಯೆಯ ಹಾಟ್‌ಸ್ಪಾಟ್‌ ಆಗಿ ಪರಿವರ್ತನೆಗೊಂಡಿತ್ತು. ಸಿದ್ಧಾರ್ಥ ಆತ್ಮಹತ್ಯೆ ಮಾಡಿಕೊಂಡ ಒಂದೇ ತಿಂಗಳಲ್ಲಿ ಹೊರ ಜಿಲ್ಲೆಯ ವ್ಯಕ್ತಿಯೊಬ್ಬ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದನು. ನಂತರ ಯುವತಿ ಆತ್ಮಹತ್ಯೆ ಮಾಡಿಕೊಂಡರೆ, ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿ ಸ್ಥಳೀಯರಿಂದ ಬಚಾವ್‌ ಆದ ಘಟನೆ ನಡೆದಿತ್ತು. ಇದುವರೆಗೆ ಒಂದು ವರ್ಷದಲ್ಲಿ ಸುಮಾರು 8ಕ್ಕೂ ಅಧಿಕ ಆತ್ಮಹತ್ಯೆ ಪ್ರಕರಣ ಇಲ್ಲಿ ನಡೆದಿದೆ.

ಈ ಹಿನ್ನೆಲೆಯಲ್ಲಿ ಶಾಸಕ ವೇದವ್ಯಾಸ್‌ ಕಾಮತ್‌ ಮುತುವರ್ಜಿಯಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾÃ(ಮೂಡಾ)ದಿಂದ 50 ಲಕ್ಷ ರು. ವೆಚ್ಚದಲ್ಲಿ ಸೇತುವೆಯ ಎರಡೂ ಬದಿಗಳಲ್ಲಿ ಪಾರದರ್ಶಕ ಬಲೆ ಹಾಗೂ ತಂತಿ ಬೇಲಿ ಅಳವಡಿಸುವ ಕಾರ್ಯ ಆರಂಭವಾಗಿದೆ. 5 ಲಕ್ಷ ರು.ಗಳಲ್ಲಿ ಸಿಸಿ ಕ್ಯಾಮರಾ ಕೂಡ ಅಳವಡಿಸಲಾಗುತ್ತಿದೆ.

ಕೋವಿಡ್‌ಗೆ ಭಯ ಪಡುವ ಅವಶ್ಯಕತೆಯಿಲ್ಲ, ಧೈರ್ಯವಾಗಿರಿ: ಕೊರೋನಾ ಗೆದ್ದ ಶಾಸಕ ಶಿವಣ್ಣ

ಸಿದ್ಧಾರ್ಥ ಆತ್ಮಹತ್ಯೆ ಪ್ರಕರಣ ಈಗ ತನಿಖೆಯಲ್ಲಿದೆ. ಆದ್ದರಿಂದ ಅದು ಬಿಟ್ಟು ಹೆಚ್ಚೇನೂ ಹೇಳಲು ಸಾಧ್ಯವಿಲ್ಲ ಎಂದು  ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ವಿಕಾಶ್‌ ಕುಮಾರ್‌ ವಿಕಾಶ್‌ ತಿಳಿಸಿದ್ದಾರೆ.

-ಆತ್ಮಭೂಷಣ್‌