ಗೆಳೆಯನ ಹುಟ್ಟುಹಬ್ಬಕ್ಕೆ ಬೈಕ್‌ನಲ್ಲಿ ಜಾಲಿ ರೈಡ್ ಹೋಗಿ ಜೀವ ತೆತ್ತ ಯುವತಿ..!
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಯಲಹಂಕ ಮೇಲ್ಸೇತುವೆಯಲ್ಲಿ ನಡೆದ ಘಟನೆ
ಬೆಂಗಳೂರು(ಅ.19): ಗೆಳೆಯನ ಹುಟ್ಟುಹಬ್ಬಕ್ಕೆ ಜಾಲಿ ರೈಡ್‌ಗೆ ಬಂದಾಗ ರಸ್ತೆ ವಿಭಜಕ್ಕೆ ಬೈಕ್ ಡಿಕ್ಕಿಯಾಗಿ ಯುವತಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟು, ಆಕೆಯ ಸ್ನೇಹಿತ ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಯಲಹಂಕ ಮೇಲ್ಸೇತುವೆಯಲ್ಲಿ ಮಂಗಳವಾರ ನಡೆದಿದೆ. ಆರ್.ಟಿ.ನಗರದ ನಿವಾಸಿ ಸನಾ ಸಾಹೇಬ (18) ಮೃತ ದುರ್ದೈವಿ. ಈ ಘಟನೆಯಲ್ಲಿ ಗಾಯಗೊಂಡಿರುವ ಮೃತಳ ಸ್ನೇಹಿತ ಜಿಶ್ಯಾನ್ (18) ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದಾನೆ. ತನ್ನ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಗೆಳತಿ ಜತೆ ಜಿಶ್ಯಾನ್ ಜಾಲಿ ರೈಡ್‌ಗೆ ಬಂದಾಗ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಖಾಸಗಿ ಕಾಲೇಜಿನಲ್ಲಿ ಮೃತ ಸನಾ ಪಿಯುಸಿ ಓದುತ್ತಿದ್ದರೆ, ಜಿಶ್ಯಾನ ತನ್ನ ತಂದೆಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಒಂದೇ ಏರಿಯಾದಲ್ಲಿ ವಾಸವಾಗಿದ್ದರಿಂದ ಇಬ್ಬರು ಬಾಲ್ಯ ಸ್ನೇಹಿತರಾಗಿದ್ದರು. ಮಂಗಳವಾರ ತನ್ನ ಹುಟ್ಟುಹಬ್ಬ ಹಿನ್ನಲೆಯಲ್ಲಿ ಗೆಳೆಯನ ಡ್ಯೂಕ್ ಬೈಕ್ ಪಡೆದ ಜಿಶ್ಯಾನ್, ಕೆಐಎ ರಸ್ತೆಯಲ್ಲಿ ಜಾಲಿ ರೈಡ್‌ಗೆ ಮಧ್ಯಾಹ್ನ 1.30ಕ್ಕೆ ಬಂದಿದ್ದ. ಆಗ ಅತಿವೇಗವಾಗಿ ಬೈಕ್ ಓಡಿಸಿಕೊಂಡು ಬಂದ ಜಿಶ್ಯಾನ್, ಯಲಹಂಕದ ವೆಂಕಟಲಾ ಮೇಲ್ಸೇತುವೆ ಬಳಿ ನಿಯಂತ್ರಣ ಕಳೆದುಕೊಂಡಿದ್ದಾನೆ. ಆಗ ಬೈಕ್ ರಸ್ತೆ ವಿಭಜಕ್ಕೆ ಅಪ್ಪಳಿಸಿದೆ. ಈ ಘಟನೆಯಲ್ಲಿ ಆತನ ಕೈ ತುಂಡಾಗಿದ್ದು, ಹಿಂಬದಿ ಕುಳಿತಿದ್ದ ಸನಾ ತಲೆಗೆ ಪೆಟ್ಟಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ. ಕೂಡಲೇ ಗಾಯಾಳುವನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಖಾಸಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಜಿಶ್ಯಾನ್ ಚಿಕಿತ್ಸೆ ಪಡೆದಿದ್ದು, ಆತನ ಪರಿಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಸಂಬಂಧ ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Bengaluru: ಡೆಡ್ಲಿ ರಸ್ತೆಗುಂಡಿಯಿಂದ ಮತ್ತೊಂದು ಅವಘಡ
ರಸ್ತೆ ವಿಭಜಕ ಎತ್ತರಿಸಲು ಎನ್‌ಎಚ್‌ಎಐಗೆ ಪತ್ರ
ಯಲಹಂಕ ಮೇಲ್ಸೇತುವೆಯ ರಸ್ತೆ ವಿಭಜಕದ ಎತ್ತರಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) ಪತ್ರ ಬರೆಯಲಾಗಿದೆ ಎಂದು ಉತ್ತರ ವಿಭಾಗ (ಸಂಚಾರ) ಡಿಸಿಪಿ ಡಾ. ಸವಿತಾ ತಿಳಿಸಿದ್ದಾರೆ. ಮೇಲ್ಸೇತುವೆಯಲ್ಲಿ ಒಂದು ಪಥದಿಂದ ಮತ್ತೊಂದು ಪಥಕ್ಕೆ ವಾಹನಗಳು ತೆರಳುತ್ತಿವೆ. ಇದರಿಂದ ಅಪಘಾತ ಹೆಚ್ಚಾಗಲು ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೇಲ್ಸೇತುವೆಯಲ್ಲಿ ಕಬ್ಬಿಣದ ನಿಯಂತ್ರಕ ಅಳವಡಿಕೆ ಅಥವಾ ರಸ್ತೆ ವಿಭಜಕ ಎತ್ತರಿಸುವಂತೆ ಎನ್‌ಎಚ್‌ಐಗೆ ಪತ್ರ ಬರೆದು ಮನವಿ ಮಾಡಲಾಗಿತ್ತು. ಈಗ ಮೇಲ್ಸೇತುವೆಯಲ್ಲಿ ರಸ್ತೆ ವಿಭಜಕ್ಕೆ ಎತ್ತರಿಸುವ ಕಾಮಗಾರಿ ಆರಂಭವಾಗಿದೆ. ಅಷ್ಟರಲ್ಲಿ ಮಂಗಳವಾರ ಬೈಕ್ ಅಪಘಾತವಾಗಿ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ ಎಂದು ಅವರು ಹೇಳಿದ್ದಾರೆ.