Bengaluru: ಡೆಡ್ಲಿ ರಸ್ತೆಗುಂಡಿಯಿಂದ ಮತ್ತೊಂದು ಅವಘಡ

  • ಗುಂಡಿ ತಪ್ಪಿಸುವಾಗ ಬಸ್‌ ಡಿಕ್ಕಿ: ಮಹಿಳೆ ಸಾವು
  • ಹಿಂಬದಿಯಿಂದ ಗುದ್ದಿದ ಬಸ್‌
  • ಬಲಬದಿಗೆ ಬಿದ್ದ ಮಹಿಳೆ ಕಾಲ ಮೇಲೆ ಹರಿದ ಬಸ್‌
  • ಸುಜಾತ ಥಿಯೇಟರ್‌ ಬಳಿ ಘಟನೆ
  • ರಸ್ತೆ ಗುಂಡಿ ಮುಚ್ಚದ ಪಾಲಿಕೆ ವಿರುದ್ಧ ಆಪ್‌, ಕೆಎಸ್‌ಆರ್‌, ಕನ್ನಡ ಪರ ಸಂಘಟನೆ ಧರಣಿ
Another accident patholes onroad at Bangalore rav

ಬೆಂಗಳೂರು (ಅ.18) ; ರಸ್ತೆ ಗುಂಡಿ ತಪ್ಪಿಸಲು ಏಕಾಏಕಿ ದ್ವಿಚಕ್ರ ವಾಹನ ಬ್ರೇಕ್‌ ಹಾಕಿದ್ದರಿಂದ ಹಿಂಬದಿಯಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದು ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ಮಲ್ಲೇಶ್ವರ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗಾಯತ್ರಿ ನಗರ ನಿವಾಸಿ ಉಮಾ(46) ಮೃತಪಟ್ಟಿದ್ದು,  ಈಕೆಯ ಪುತ್ರಿ ವನಿತಾ(22) ಅವರಿಗೆ ಸಣ್ಣ ಗಾಯಗಳಾಗಿದೆ. ಸೋಮವಾರ ಬೆಳಗ್ಗೆ 9.30ರ ಸುಮಾರಿಗೆ ವಾಟಾಳ್‌ ನಾಗರಾಜ್‌ ರಸ್ತೆಯ ಲುಲು ಮಾಲ್‌ ಬಳಿ ಈ ದುರ್ಘಟನೆ ನಡೆದಿದೆ. ಘಟನೆ ಸಂಬಂಧ ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ಮಾರುತಿಯನ್ನು ಬಂಧಿಸಲಾಗಿದೆ.

ಕೊಂಬೆ ಬಿದ್ದು ಚಾಲಕ ಮೃತಪಟ್ಟರೂ ವಿಮೆ ಹಣ ಕೊಡ್ಬೇಕು: ಹೈಕೋರ್ಟ್‌

ಉಮಾ ಅವರು ಭಾನುವಾರ ಶ್ರೀನಗರದಲ್ಲಿರುವ ಪುತ್ರಿ ವನಿತಾ ಮನೆಗೆ ಹೋಗಿದ್ದರು. ಸೋಮವಾರ ಬೆಳಗ್ಗೆ ವನಿತಾ ಜತೆಗೆ ದ್ವಿಚಕ್ರ ವಾಹನದಲ್ಲಿ ಮನೆಗೆ ವಾಪಾಸಾಗುತ್ತಿದ್ದರು. 9.30ರ ಸುಮಾರಿಗೆ ವಾಟಾಳ್‌ ನಾಗರಾಜ್‌ ರಸ್ತೆಯ ಸುಜಾತ ಥಿಯೇಟರ್‌ ಬಳಿ ಹೋಗುವಾಗ ರಸ್ತೆ ಗುಂಡಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ವನಿತಾ ರಸ್ತೆ ಗುಂಡಿ ತಪ್ಪಿಸುವ ಭರದಲ್ಲಿ ಬ್ರೇಕ್‌ ಹಾಕಿದ್ದಾರೆ. ಈ ವೇಳೆ ಮೆಜೆಸ್ಟಿಕ್‌ನಿಂದ ಶಿವಮೊಗ್ಗ ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವನಿತಾ ಎಡಭಾಗಕ್ಕೆ ಬಿದ್ದಿದ್ದಾರೆ. ಹಿಂಬದಿ ಕುಳಿತಿದ್ದ ಉಮಾ ಬಲಭಾಗಕ್ಕೆ ಬಿದ್ದಿದ್ದಾರೆ. ಈ ವೇಳೆ ಉಮಾ ಅವರ ಬಲ ತೊಡೆಗೆ ಗಂಭೀರ ಗಾಯವಾಗಿದೆ. ಕೂಡಲೇ ಸ್ಥಳೀಯರು ನೆರವಿಗೆ ಧಾವಿಸಿ ಇಬ್ಬರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು.

ಅಪಘಾತದ ಸುದ್ದಿ ತಿಳಿದ ಕೂಡಲೇ ಸಂಚಾರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್‌ ಜಪ್ತಿ ಮಾಡಿದ್ದು, ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಗಾಯಾಳು ವನಿತಾ ನೀಡಿದ ದೂರಿನ ಮೇರೆಗೆ ಮಲ್ಲೇಶ್ವರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಕೆಎಸ್‌ಆರ್‌ಟಿಸಿ ಚಾಲಕ ಮಾರುತಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಂಡಿಯಲ್ಲೇ ಹೊರಳಾಡಿ ಪಾಲಿಕೆ ವಿರುದ್ಧ ಆಕ್ರೋಶ

ಅಪಘಾತದ ವಿಚಾರ ತಿಳಿದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಪಕ್ಷ, ಆಮ್‌ ಆದ್ಮಿ ಪಕ್ಷ (ಎಎಪಿ) ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಘಟನಾ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. ಬಿಬಿಎಂಪಿ ನಿರ್ಲಕ್ಷ್ಯದಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಪಾಲಿಕೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ರಸ್ತೆ ಗುಂಡಿಗಳ ಮೇಲೆ ಹೊರಳಾಡಿ ಪಾಲಿಕೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನಾಕಾರರು ಪೊಲೀಸ್‌ ವಶಕ್ಕೆ: ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಆಗ್ರಹಿಸಿ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಒಂದು ಹಂತದಲ್ಲಿ ಪ್ರತಿಭಟನಾಕಾರರು ರಸ್ತೆ ತಡೆಗೆ ಮುಂದಾದರು. ಈ ವೇಳೆ ಪೊಲೀಸರು ವಾಹನಗಳ ಸಂಚಾರ ಅಡಚಣೆಯಾಗದಂತೆ ಒಂದು ಕಡೆ ಕುಳಿತು ಪ್ರತಿಭಟನೆ ಮಾಡುವಂತೆ ಸೂಚಿಸಿದರು. ಆಗ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಕೆಲ ಕಾಲ ಮಾತಿನಚಕಮಕಿ ನಡೆಯಿತು. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಅರಿತ ಪೊಲೀಸರು, ಕೂಡಲೇ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಕರೆದೊಯ್ದರು.

ಕೆಎಸ್‌ಆರ್‌ಟಿಸಿ ಬಸ್‌ ಅಪಘಾತದಲ್ಲಿ ತಾಯಿ-ಮಗಳು ಗಾಯಗೊಂಡಿದ್ದಾರೆ. ಹಿಂಬದಿ ಕುಳಿತಿದ್ದ ತಾಯಿ ಉಮಾ ಸ್ಥಿತಿ ಗಂಭೀರವಾಗಿದೆ. ಘಟನೆ ಸಂಬಂಧ ಬಸ್‌ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

-ಕುಲದೀಪ್‌ ಕುಮಾರ್‌ ಜೈನ್‌, ಸಂಚಾರ ಪಶ್ಚಿಮ ವಿಭಾಗದ ಡಿಸಿಪಿ.

ಅಪಘಾತದ ಬಗ್ಗೆ ತನಿಖೆ: ಸಿಎಂ

ನಗರದ ಲುಲು ಮಾಲ್‌ ಬಳಿ ರಸ್ತೆಗುಂಡಿಯ ಕಾರಣಕ್ಕಾಗಿ ಮಹಿಳೆಯೊಬ್ಬರು ಅಪಘಾತಕ್ಕೊಳಗಾಗಿ ತೀವ್ರ ಗಾಯಗೊಂಡಿರುವ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸೋಮವಾರ ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಬೆಂಗಳೂರಲ್ಲಿ ಅಪಘಾತವಾಗಿ ಮಹಿಳೆಗೆ ತೀವ್ರ ಗಾಯವಾಗಿದೆ ಎಂಬ ಮಾಹಿತಿ ಬಂದಿದೆ. ಅಪಘಾತಕ್ಕೆ ಕಾರಣವೇನು ಎಂಬ ಮಾಹಿತಿ ಪಡೆದು ಸಂಪೂರ್ಣ ತನಿಖೆ ಮಾಡಿಸುತ್ತೇವೆ. ಪರಿಹಾರ ಕೊಡುವ ಬಗ್ಗೆಯೂ ತೀರ್ಮಾನ ತೆಗೆದುಕೊಳ್ಳಲಾಗುವುದು. ತನಿಖೆಯ ಬಳಿಕ ಕಾರಣ ಏನು ಎಂಬುದು ತಿಳಿಯುತ್ತದೆ. ಎಲ್ಲಾ ವಿವರವನ್ನು ಪಡೆದು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

Latest Videos
Follow Us:
Download App:
  • android
  • ios