ಕೊಡಗು: ನಿಗೂಢವಾಗಿ ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯ ಶೂ, ಬ್ಯಾಗ್ ಪತ್ತೆ
* ನಿಗೂಢವಾಗಿ ಕಣ್ಮರೆಯಾಗಿದ್ದ ವಿದ್ಯಾರ್ಥಿನಿಯ ಶೂ, ಬ್ಯಾಗ್ ಪತ್ತೆ.
* ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಸಿದ್ದಾಪುರದಲ್ಲಿ ಪತ್ತೆ.
* ಕಳೆದ 7 ದಿನಗಳ ಹಿಂದೆ ನಾಪತ್ತೆಯಾಗಿದ್ದ ಪಿಯುಸಿ ವಿದ್ಯಾರ್ಥಿನಿ ಸಂಧ್ಯಾ(17).
ಕೊಡಗು, [ಫೆ.10]: ಕಳೆದ 7 ದಿನಗಳ ಹಿಂದೆ ನಾಪತ್ತೆಯಾಗಿದ್ದ ಪಿಯುಸಿ ವಿದ್ಯಾರ್ಥಿನಿ ಸಂಧ್ಯಾ(17)ಳ ಶೂ ಬ್ಯಾಗ್ ಪತ್ತೆಯಾಗಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸಿದ್ದಾಪುರದ ಕಾಫಿ ತೋಟದಲ್ಲಿ ಪತ್ತೆಯಾಗಿದೆ.
ಎಂದಿನಂತೆ ಇಂದು [ಭಾನುವಾರ] ಕಾರ್ಮಿಕರು ತೋಟದಲ್ಲಿ ಕಾಫಿ ಕುಯ್ಲು ಸಂದರ್ಭ ಸಂಧ್ಯಾಳ ಶೂ,ಬ್ಯಾಗ್ ಪತ್ತೆಯಾಗಿದೆ. ಇನ್ನು ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಅವಳ ಪತ್ತೆಗೆ ಪೋಲಿಸರು ಬಲೆ ಬೀಸಿದ್ದಾರೆ.
ನೆಲ್ಯಹುದಿಕೇರಿ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ. ವ್ಯಾಸಂಗ ಮಾಡುತ್ತಿರುವ ಸಂಧ್ಯಾ ಜ. 4 ರಂದು ಮಧ್ಯಾಹ್ನ 3.30 ಗಂಟೆಗೆ ಕಾಲೇಜು ಮುಗಿಸಿ ಬಸ್ಸು ಇಳಿದು ತೋಟದ ಮನೆ ಕಡೆ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ನಿಗೂಢವಾಗಿ ನಾಪತ್ತೆಯಾಗಿದ್ದಳು.
ಘಟನೆ ವಿವರ:
ಹಾದಿಯುದ್ದಕ್ಕೂ ತನ್ನ ಚಿಕ್ಕಮ್ಮನ ಮಗ ಕಿಶೋರ್ ಎಂಬಾತನೊಂದಿಗೆ ಮೊಬೈಲ್ ನಲ್ಲಿ ಮಾತನಾಡಿಕೊಂಡು ಬಂದಿದ್ದಾಳೆ. ತಾನೀಗ ಮನೆ ಸಮೀಪವಿರುವ ಕೆರೆ ಬಳಿಗೆ ಬಂದಿರುವುದಾಗಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಕಿಶೋರ್ ಗೆ ತಿಳಿಸಿದ್ದಾಳೆ.
ಅಷ್ಟರಲ್ಲಿ ಕಿಶೋರ್ ಗೆ ಅವಳ ಬಾಯಿಯನ್ನು ಬಲವಂತವಾಗಿ ಮುಚ್ಚಿಸಿ ಅಪಹರಣ ಮಾಡುವ ರೀತಿಯ ಶಬ್ಧ ಕೇಳಿಬಂದಿದೆ. ಅಲ್ಲದೇ ಮೊಬೈಲ್ ಕರೆ ಕೂಡ ಕಟ್ ಆಗಿದೆ.
ಕೂಡಲೇ ಕಿಶೋರ್ ತನ್ನ ತಾಯಿಗೆ ವಿಷಯ ತಿಳಿಸಿ ಕೆರೆ ಬಳಿ ಹೋಗಿ ನೋಡಲು ತಿಳಿಸಿದ್ದರು. ಆಕೆಯ ತಂದೆ ಹಾಗೂ ಇನ್ನಿತರರು ಕೆರೆಯ ಬಳಿ ಬಂದು ನೋಡಿದಾಗ ಸಂಧ್ಯಾಳ ಸುಳಿವು ಕಂಡುಬಂದಿರಲಿಲ್ಲ.
ಮನೆಗೂ ಹಿಂತಿರುಗದೇ ಕೆರೆಯ ಬಳಿಯೂ ಕಾಣಿಸಿದ ಸಂಧ್ಯಾ ಇದ್ದಕ್ಕಿದ್ದಂತೆ ನಿಗೂಢವಾಗಿ ಕಣ್ಮರೆಯಾಗಿದ್ದು ತೋಟದ ಎಲ್ಲರನ್ನೂ ದಿಗ್ಭ್ರಮಣೆಗೊಳಿತ್ತು. ತೋಟದ ಕಾರ್ಮಿಕರು ಕೆಲಸಕ್ಕೆ ರಜೆ ಮಾಡಿ ಎಲ್ಲೆಡೆ ಹುಡುಕಾಟ ನಡೆಸಿದ್ದರೂ ಪ್ರಯೋಜನವಾಗಿರಲ್ಲ.
ಹೀಗಾಗಿ ಆಕೆ ಕೆರೆಯಲ್ಲಿ ಮುಳುಗಿರಬಹುದೆಂಬ ಶಂಕೆಯಿಂದ ಮಡಿಕೇರಿ ಆಗ್ನಿಶಮಕದಳದ ಸಿಬ್ಬಂದಿಗಳು ಕೆರೆಯಲ್ಲಿ ಸಂಧ್ಯಾಳ ಶೋಧನೆಯಲ್ಲಿ ತೊಡಗಿದರಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಸಂಧ್ಯಾಳನ್ನ ಯಾರಾದರೂ ಅಪಹರಿಸಿರಬಹುದೆಂಬ ಶಂಕಿಸಲಾಗಿತ್ತು. ಇದೀಗ ಬ್ಯಾಗ್, ಶೂ ಪತ್ತೆಯಾಗಿರುವುದನ್ನು ನೋಡಿದ್ರೆ ಕಿಡ್ನಾಪ್ ಆಗಿರುವುದು ಖಚಿತವಾದಂತಿದೆ.