Asianet Suvarna News Asianet Suvarna News

ಸೌದಿಯಿಂದ 167 ಕನ್ನಡಿಗರು ತವರಿಗೆ: ಮಾನವೀಯತೆ ಮೆರೆದ ಅನಿವಾಸಿ ಉದ್ಯಮಿಗಳು

ಸೌದಿ ಅರೇಬಿಯಾದ ದಮ್ಮಾಮ್‌ನಲ್ಲಿ ಸಿಲುಕಿ ತೀರ ಸಂಕಷ್ಟದ ಪರಿಸ್ಥಿತಿಯಲ್ಲಿದ್ದ 167 ಕನ್ನಡಿಗರನ್ನು ತಾವೇ ಖರ್ಚು ಭರಿಸಿ ಚಾರ್ಟರ್‌ ಫ್ಲೈಟ್‌ ಮೂಲಕ ತಾಯ್ನಾಡಿಗೆ ತಲುಪಿಸುವ ಮೂಲಕ ಅಲ್ಲಿನ ಅನಿವಾಸಿ ಭಾರತೀಯ ಉದ್ಯಮಿಗಳಿಬ್ಬರು ಮಾನವೀಯತೆ ಮೆರೆದಿದ್ದಾರೆ.

167 people reach karnataka from Saudi Arabia
Author
Bangalore, First Published Jun 13, 2020, 7:49 AM IST

ಮಂಗಳೂರು(ಜೂ.13): ಸೌದಿ ಅರೇಬಿಯಾದ ದಮ್ಮಾಮ್‌ನಲ್ಲಿ ಸಿಲುಕಿ ತೀರ ಸಂಕಷ್ಟದ ಪರಿಸ್ಥಿತಿಯಲ್ಲಿದ್ದ 167 ಕನ್ನಡಿಗರನ್ನು ತಾವೇ ಖರ್ಚು ಭರಿಸಿ ಚಾರ್ಟರ್‌ ಫ್ಲೈಟ್‌ ಮೂಲಕ ತಾಯ್ನಾಡಿಗೆ ತಲುಪಿಸುವ ಮೂಲಕ ಅಲ್ಲಿನ ಅನಿವಾಸಿ ಭಾರತೀಯ ಉದ್ಯಮಿಗಳಿಬ್ಬರು ಮಾನವೀಯತೆ ಮೆರೆದಿದ್ದಾರೆ.

ದಮ್ಮಾಮ್‌ ವಿಮಾನ ನಿಲ್ದಾಣದಿಂದ ಬುಧವಾರ ರಾತ್ರಿ ಸುಮಾರು 10.30ಕ್ಕೆ ಹೊರಟ ದುಬೈ ಏರ್‌ ಜಿಎಫ್‌-7272 ವಿಮಾನ ತಡರಾತ್ರಿ 1.30ರ ವೇಳೆಗೆ ಮಂಗಳೂರಿಗೆ ಬಂದಿದೆ. ವಿಮಾನ ಸೇಫಾಗಿ ಮಂಗಳೂರಿಗೆ ಲ್ಯಾಂಡ್‌ ಆದಾಗ ಆ ಕನ್ನಡಿಗರ ಮೊಗದಲ್ಲಿ ತಾಯ್ನಾಡಿಗೆ ಬಂದ ಸಂಭ್ರಮ. ಚಾರ್ಟರ್‌ ವಿಮಾನದ ಕುರಿತು ಜಿಲ್ಲಾಡಳಿತಕ್ಕೆ ಮೊದಲೇ ಮಾಹಿತಿ ರವಾನಿಸಲಾಗಿತ್ತು. ವಿಮಾನ ಆಗಮಿಸಿದ ಕೂಡಲೆ ಸರ್ಕಾರದ ಮಾರ್ಗಸೂಚಿಯಂತೆ ಅವರನ್ನು ನಗರದ ವಿವಿಧ ಹೊಟೇಲ್‌ಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸೌದಿ ಅರೇಬಿಯಾದಲ್ಲಿ ತೀವ್ರ ಸಂಕಷ್ಟದಲ್ಲಿದ್ದ ಕರಾವಳಿ ಮೂಲದ ನಿವಾಸಿಗರನ್ನು ವಂದೇ ಭಾರತ್‌ ಮಿಷನ್‌ ಅಡಿಯಲ್ಲಿ ಸ್ವದೇಶಕ್ಕೆ ಮರಳಿಸಲು ಸರ್ಕಾರದ ಮಟ್ಟದಲ್ಲಿ ವ್ಯವಹರಿಸಲಾಗಿತ್ತಾದರೂ ಅದಕ್ಕೆ ಸೂಕ್ತ ಸ್ಪಂದನೆ ಸಿಕ್ಕಿರಲಿಲ್ಲ. ಈ ಸಂದರ್ಭ ಅಲ್ಲಿನ ಅನಿವಾಸಿ ಭಾರತೀಯರ ನೆರವಿಗೆ ಬಂದವರು ಸೌದಿ ಅರೇಬಿಯಾದ ಇಬ್ಬರು ಉದ್ಯಮಿಗಳು- ಸ್ಯಾಕೋ ಕಂಪೆನಿಯ ನಿರ್ದೇಶಕರಾದ ಅಲ್ತಾಫ್‌ ಹುಸೇನ್‌ ಮತ್ತು ಬಶೀರ್‌ ಸಾಗರ್‌. ರಾಯಭಾರಿ ಕಚೇರಿ ಜತೆ ಚರ್ಚಿಸಿ ಈ ಚಾರ್ಟರ್‌ ಫ್ಲೈಟ್‌ ಏರ್ಪಾಡು ಮಾಡಿದ್ದರು. ಎಲ್ಲ 167 ಪ್ರಯಾಣಿಕರ ಒಟ್ಟು ಪ್ರಯಾಣವೆಚ್ಚ ಸುಮಾರು 60 ಲಕ್ಷ ರು.ಗಳನ್ನು ತಮ್ಮ ಕಂಪೆನಿಯಿಂದಲೇ ಭರಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಈ ಪ್ರಕ್ರಿಯೆಯಲ್ಲಿ ಎನ್‌ಆರ್‌ಐ ಸೆಲ್‌ನ ಮಾಜಿ ಉಪಾಧ್ಯಕ್ಷೆ ಆರತಿ ಕೃಷ್ಣ ಸಹಕಾರ ನೀಡಿದ್ದಾರೆ.

ಎಲ್ಲಾ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮೋದಿ ಸಭೆ: ಮತ್ತೆ ಲಾಕ್‌ಡೌನ್ ಆಗುತ್ತಾ?

ಗರ್ಭಿಣಿಯರು, ಹಿರಿಯರು: 55 ಗರ್ಭಿಣಿಯರು, 61 ಹಿರಿಯ ನಾಗರಿಕರು, ವೈದ್ಯಕೀಯ ತುರ್ತು ಚಿಕಿತ್ಸೆ ಅವಶ್ಯಕತೆಯುಳ್ಳ 20 ಮಂದಿ, ಹೆತ್ತವರ ಸಾವಿನ ಹಿನ್ನೆಲೆಯಲ್ಲಿ ತಾಯ್ನಾಡಿಗೆ ಬರಲು ಕಾತರಿಸುತ್ತಿದ್ದ ನಾಲ್ವರು, 35 ಮಂದಿ ಹಸುಗೂಸುಗಳು ಮತ್ತು ಮಕ್ಕಳು ಈ ವಿಮಾನದಲ್ಲಿ ಮಂಗಳೂರಿಗೆ ಬಂದಿಳಿದಿದ್ದಾರೆ. ಇವರಲ್ಲಿ ಹೆಚ್ಚಿನವರು ದಕ್ಷಿಣ ಕನ್ನಡ ಜಿಲ್ಲೆಯವರೇ ಆಗಿದ್ದಾರೆ.

ಸಂಬಂಧಿಕರಲ್ಲ: ಈ ಪ್ರಯಾಣಿಕರಾರ‍ಯರೂ ಅಲ್ತಾಫ್‌ ಹುಸೇನ್‌ ಮತ್ತು ಬಶೀರ್‌ ಸಾಗರ್‌ ಅವರ ಸಂಬಂಧಿಕರಲ್ಲ. ಇವರಿಬ್ಬರೂ ಮಂಗಳೂರು ಮೂಲದವರಾಗಿರುವುದರಿಂದ ತಮ್ಮವರೆನ್ನುವ ಕಾರಣಕ್ಕೆ ತುಳುನಾಡಿನ ಜನರ ನೋವಿಗೆ ಸ್ಪಂದಿಸಿದ್ದಾರೆ. ತೀವ್ರ ಸಂಕಷ್ಟದಲ್ಲಿದ್ದವರನ್ನೇ ಹುಡುಕಿ ವಿಮಾನ ಹತ್ತಿಸಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಮತ್ತೆ 17 ಪಾಸಿಟಿವ್‌, ನಾಲ್ವರು ಡಿಸ್ಚಾರ್ಜ್

‘‘ಈ ವಿಶೇಷ ಬಾಡಿಗೆ ವಿಮಾನದಲ್ಲಿ ತಮ್ಮ ಸಂಸ್ಥೆಯ ಯಾವುದೇ ಸಿಬ್ಬಂದಿ ಅಥವಾ ಸಂಬಂಧಿಕರು ಪ್ರಯಾಣ ಬೆಳೆಸಿಲ್ಲ. ಬದಲಾಗಿ ಸಂಕಷ್ಟದಲ್ಲಿನ ಕನ್ನಡಿಗರಿಗಾಗಿಯೇ ಈ ಬಾಡಿಗೆ ವಿಮಾನವನ್ನು ಕಳುಹಿಸಿಕೊಡಲಾಗಿತ್ತು. ಎಲ್ಲ ಪ್ರಯಾಣಿಕರ ಪ್ರಯಾಣ ವೆಚ್ಚವನ್ನು ನಮ್ಮ ಕಂಪೆನಿಯೇ ಭರಿಸಿದೆ ಎಂದು ಅಲ್ತಾಫ್‌ ಹಾಗೂ ಬಶೀರ್‌ ಸಾಗರ್‌ ತಿಳಿಸಿದ್ದಾರೆ.

ವಿದೇಶಗಳಲ್ಲಿ ಇನ್ನೂ ಸಾವಿರಾರು ಮಂದಿ ಸಂಕಷ್ಟದಲ್ಲಿ

ವಂದೇ ಭಾರತ್‌ ಮಿಷನ್‌ ಅಡಿಯಲ್ಲಿ ವಿದೇಶಗಳಿಂದ ಈವರೆಗೆ ಮಂಗಳೂರಿಗೆ ಬಂದದ್ದು ಕೇವಲ 2 ವಿಮಾನಗಳು. ಕರಾವಳಿಯ ಸಾವಿರಾರು ಮಂದಿ ಸೌದಿ ಅರೇಬಿಯಾ, ಕುವೈಟ್‌, ಕತಾರ್‌ ಮತ್ತಿತರ ದೇಶಗಳಲ್ಲಿ ಇನ್ನೂ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಹಲವು ಬಾರಿ ನಾವು ಭಾರತೀಯ ಸಚಿವರನ್ನು ಸಂಪರ್ಕಿಸಿದರೂ ವಿಮಾನ ಏರ್ಪಾಡು ಮಾಡಿಲ್ಲ. ಕುವೈಟ್‌ಗೆ ವಿಮಾನ ನಿಗದಿಪಡಿಸಿದ್ದರೂ ಕೊನೆ ಕ್ಷಣದಲ್ಲಿ ರದ್ದುಗೊಳಿಸಿದ್ದಾರೆ. ಇನ್ನೂ ಎಷ್ಟುಸಮಯ ನಾವು ಈ ಸಂಕಷ್ಟದಲ್ಲಿರಬೇಕು ಎಂದು ಹೆಸರು ಹೇಳಲಿಚ್ಛಿಸದ ಕುವೈಟ್‌ನ ಅನಿವಾಸಿ ಭಾರತೀಯರೊಬ್ಬರು ಅಳಲು ತೋಡಿಕೊಂಡಿದ್ದಾರೆ.

Follow Us:
Download App:
  • android
  • ios