Asianet Suvarna News Asianet Suvarna News

BDA ಬ್ರಹ್ಮಾಂಡ ಭ್ರಷ್ಟಾಚಾರ ಬಯಲು: 300 ಅಲ್ಲ, 1,500 ಕೋಟಿ ಅಕ್ರಮ ಪತ್ತೆ!

*  ಎಸಿಬಿ ತನಿಖೆಯಲ್ಲಿ ಬಿಡಿಎ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆ
* ಮಹತ್ವದ ಪುರಾವೆಗಳು ಪತ್ತೆ
*  ಮೂಲೆ ನಿವೇಶನ ಅಕ್ರಮ ಪರಭಾರೆ, ಬದಲಿ ನಿವೇಶನ ಹಂಚಿಕೆ 

1500 Crore Rs Scam in Bengaluru Development Authority grg
Author
Bengaluru, First Published Feb 12, 2022, 4:31 AM IST

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು(ಫೆ.12): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ(Bengaluru Development Authority) ನಡೆದಿರುವುದು 200-300 ಕೋಟಿ ರು. ಮೌಲ್ಯದ ಭೂ ಹಗರಣವಲ್ಲ(Land Scam). ಅದು ಬರೋಬ್ಬರಿ 1500 ಕೋಟಿ ರು.ಗಳಿಗೂ ಮಿಗಿಲಾಗಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳದ (ACB) ತನಿಖೆಯಲ್ಲಿ ಪುರಾವೆ ಪತ್ತೆಯಾಗಿರುವ ಮಹತ್ವದ ಸಂಗತಿ ಬೆಳಕಿಗೆ ಬಂದಿದೆ.

ಮೂಲೆ ನಿವೇಶನ ಅಕ್ರಮ ಪರಭಾರೆ, ನಕಲಿ ಫಲಾನುಭವಿಗಳು, ಬದಲಿ ನಿವೇಶನ, ಹಸಿರು ವಲಯದಲ್ಲಿ ಪ್ರತಿಷ್ಠಿತ ರಿಯಲ್‌ ಎಸ್ಟೇಟ್‌ ಕಂಪನಿಗಳಿಗೆ(Real Estate Companies) ವಿಲ್ಲಾ ನಿರ್ಮಾಣಕ್ಕೆ ಅವಕಾಶ ಹೀಗೆ ನಾನಾ ವಿಧದಲ್ಲಿ ಖಾಸಗಿ ವ್ಯಕ್ತಿಗಳ ಜತೆ ಸೇರಿ ಬಿಡಿಎ ಅಧಿಕಾರಿಗಳು ಅಕ್ರಮ(Illegal) ಎಸಗಿದ್ದಾರೆ ಎಂದು ಎಸಿಬಿ ಹೇಳಿದೆ.

BDA Scam: ನಕಲಿ ದಾಖಲೆ, ಲಂಚಾವತಾರ, 3 ತಿಂಗಳಲ್ಲಿ 100 ಕ್ಕೂ ಹೆಚ್ಚು ದೂರುಗಳು ದಾಖಲು

60 ಮಂದಿ ಭಾಗಿ:

ಮೂರು ತಿಂಗಳ ಹಿಂದೆ ಅಕ್ರಮ ಭೂ ವ್ಯವಹಾರಗಳ ದೂರುಗಳ ಹಿನ್ನೆಲೆಯಲ್ಲಿ ನಗರದ ಅರಮನೆ ರಸ್ತೆಯಲ್ಲಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ(BDA) ಕೇಂದ್ರ ಹಾಗೂ ನಗರದ ವಿವಿಧೆಡೆ ಇರುವ ವಲಯ ಕಚೇರಿಗಳ ಮೇಲೆ ದಾಳಿ ಎಸಿಬಿ ದಾಳಿ(ACB Raid) ನಡೆಸಿತು. ಆ ದಾಳಿ ವೇಳೆ ಅಪಾರ ಪ್ರಮಾಣದ ಕಡತಗಳನ್ನು ವಶಕ್ಕೆ ಪಡೆದಿದ್ದ ಎಸಿಬಿ, ಬಿಡಿಎ ಭೂ ಹಗರಣ ಶೋಧನೆ ಆರಂಭಿಸಿತು. ಇದುವರೆಗೆ ತನಿಖೆಯಲ್ಲಿ 1500 ಕೋಟಿ ರು. ಅಧಿಕ ಮೌಲ್ಯದ ಅಕ್ರಮ ನಡೆದಿರುವುದಕ್ಕೆ ಸಾಕ್ಷ್ಯಗಳು ಪತ್ತೆಯಾಗಿವೆ. ಅಲ್ಲದೆ ಈ ಹಗರಣದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಸೇರಿ 60 ಮಂದಿ ಪಾಲ್ಗೊಂಡಿದ್ದಾರೆ ಎಂದು ಎಸಿಬಿ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

ಒಂದು ಊರಿನಲ್ಲಿ .185 ಕೋಟಿ ಗುಳುಂ:

ಕೆಂಗೇರಿ ಹೋಬಳಿ ಭೀಮನಕುಪ್ಪೆಯಲ್ಲಿ ಅರ್ಕಾವತಿ ಬಡಾವಣೆ ನಿರ್ಮಾಣ ಸಂಬಂಧ 262 ಎಕರೆ ಭೂ ಸ್ವಾಧೀನದಲ್ಲಿ ಬಿಡಿಎ ಕೆಲ ಅಧಿಕಾರಿಗಳು ದೊಡ್ಡ ಪ್ರಮಾಣದ ಅಕ್ರಮ ನಡೆದಿಸಿರುವುದು ಪತ್ತೆಯಾಗಿದೆ. ಈ ಗ್ರಾಮದ ಸರ್ಕಾರಿ ಭೂಮಿಯನ್ನೇ ಖಾಸಗಿ ಜಮೀನು ಎಂದು ತೋರಿಸಿ ಸರ್ಕಾರದಿಂದ 185 ಕೋಟಿ ರು. ಭೂ ಪರಿಹಾರವನ್ನು ಅಧಿಕಾರಿಗಳು ಪಡೆದಿದ್ದಾರೆ. ಇದಕ್ಕಾಗಿ ಭಾರಿ ಕರಾಮತ್ತು ನಡೆಸಿ 71 ವ್ಯಕ್ತಿಗಳ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿದ್ದಾರೆ.

ಅರ್ಕಾವತಿ ಬಡಾವಣೆ ಭೂ ಸ್ವಾಧೀನದ(Land Acquisition) ಬಗ್ಗೆ ಪರಿಶೀಲಿಸಿದಾಗ 71 ಜನರ ಹೆಸರಿನಲ್ಲಿ ನಕಲಿ ದಾಖಲೆಗಳು ಸಿಕ್ಕಿವೆ. ಈ ಸಂಬಂಧ ವಿವರಣೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅದೇ ರೀತಿ ಕೆಂಗೇರಿ ಹೋಬಳಿ ಮತ್ತೊಂದು ಕನ್ನಹಳ್ಳಿ ಗ್ರಾಮದಲ್ಲಿ ಸಹ 15 ಕೋಟಿ ರು. ಮೌಲ್ಯದ ಭೂ ಅಕ್ರಮ ನಡೆದಿದೆ. ನಗರ ಹೊರವಲಯದ ಅರೆ ಗ್ರಾಮೀಣ ಪ್ರದೇಶದಲ್ಲಿ ಕೆಂಪೇಗೌಡ, ಅರ್ಕಾವತಿ ಹಾಗೂ ಶಿವರಾಮ ಕಾರಂತ ಬಡಾವಣೆಗಳ ಅಭಿವೃದ್ಧಿ ಯೋಜನೆಯಲ್ಲಿ ಕೋಟ್ಯಂತರ ರು. ಭೂ ಪರಿಹಾರ ಹೆಸರಿನಲ್ಲಿ ಅನ್ಯರ ಪಾಲಾಗಿರುವ ಬಗ್ಗೆ ಅನುಮಾನವಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

ಬಿಡಿಎ ನಿವೇಶನದಲ್ಲಿ ಖಾಸಗಿ ಶಾಲೆಗಳು:

ಶೈಕ್ಷಣಿಕ ಸೇವೆ ಹೆಸರಿನಲ್ಲಿ ಬಿಡಿಎ ನಿವೇಶನ ಪಡೆದ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು, ಅದನ್ನು ವಾಣಿಜ್ಯಕ್ಕೆ ಬಳಸಿಕೊಂಡಿವೆ. ಒಪ್ಪಂದ ಮೀರಿ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದಾರೆ. ಈ ರೀತಿ ರಾಜಾಜಿನಗರದ ಪ್ರತಿಷ್ಠಿತ ಖಾಸಗಿ ಶಾಲೆ ಸೇರಿದಂತೆ ಇತರೆ ಶಿಕ್ಷಣ ಸಂಸ್ಥೆಗಳಿವೆ. ಇದುವರೆಗೆ ಆ ಖಾಸಗಿ ಶಾಲೆಗಳ ಮೇಲೆ ಬಿಡಿಎ ಯಾವುದೇ ರೀತಿ ಕಾನೂನು ಕ್ರಮ ಜರುಗಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಸೈಟ್‌ಗಳ ದಾಖಲೆಗಳೇ ಇಲ್ಲ

ನಗರದ ಕೆಲವು ಬಿಡಿಎ ಲೇಔಟ್‌ಗಳಲ್ಲಿ ಮಾರಾಟ ಅಥವಾ ಮಂಜೂರಾಗದೆ ಉಳಿದ ಕೋಟ್ಯಂತರ ಮೌಲ್ಯದ ಸುಮಾರು 60ಕ್ಕೂ ಹೆಚ್ಚಿನ ನಿವೇಶನಗಳನ್ನು(Sites) ನಕಲಿ ದಾಖಲೆ ಸೃಷ್ಟಿಸಿ ಅಧಿಕಾರಿಗಳು ನುಂಗಿದ್ದಾರೆ ಎಂದು ಎಸಿಬಿ ತನಿಖೆಯಲ್ಲಿ ಬಯಲಾಗಿದೆ.

BDA Corruption: ಸರ್ಕಾರದ ಜಾಗ ಗುಳುಂ ಮಾಡೋಕೆ ಅಧಿಕಾರಿಗಳದ್ದೇ ಸಾಥ್!

ಬಿಡಿಎ ಲೇಔಟ್‌ಗಳಲ್ಲಿ ಹಳೇ ದಿನಾಂಕ ತೋರಿಸಿ ವಿಲೇವಾರಿಯಾಗದೆ ಉಳಿದ ನಿವೇಶನಗಳನ್ನು ತಮಗೆ ಬೇಕಾದ ಹಾಗೂ ಬೇನಾಮಿ ಹೆಸರಿನಲ್ಲಿ ಅಧಿಕಾರಿಗಳು ಪರಭಾರೆ ಮಾಡಿದ್ದಾರೆ. ಈ ವಿಲೇವರಿಯಾಗದ ನಿವೇಶನಗಳ ಸಂಬಂಧ ಸಬ್‌ ರಿಜಿಸ್ಟ್ರರ್‌ ಕಚೇರಿಗಳಲ್ಲಿ ದಾಖಲೆಗಳನ್ನು ತಪಾಸಣೆ ನಡೆಸಿದಾಗ ಸತ್ಯ ಗೊತ್ತಾಯಿತು. ಕೆಲವರು ಈ ನಿವೇಶಗಳಲ್ಲಿ ಮನೆ ಹಾಗೂ ವಾಣಿಜ್ಯ ಕಟ್ಟಡ ಕಟ್ಟಿದ್ದಾರೆ ಎಂದು ಎಸಿಬಿ ತಿಳಿಸಿದೆ.

ಹಸಿರು ವಲಯದಲ್ಲಿ ವಿಲ್ಲಾಗಳ ನಿರ್ಮಾಣ

ಬೆಂಗಳೂರಿನ(Bengaluru) ಪೂರ್ವ ವಿಭಾಗವು ಹಸಿರು ವಲಯ ಪಟ್ಟಿಗೆ ಸೇರುತ್ತದೆ. ಹೀಗಿದ್ದರೂ ಹೆಣ್ಣೂರು ಸಮೀಪ ಪ್ರತಿಷ್ಠಿತ ರಿಯಲ್‌ ಎಸ್ಟೇಟ್‌ ಕಂಪನಿ ಗಾಲ್ಫ್‌ ಮೈದಾನ ನಿರ್ಮಾಣದ ನೆಪದಲ್ಲಿ 460 ವಿಲ್ಲಾಗಳನ್ನು ಅಕ್ರಮವಾಗಿ ನಿರ್ಮಿಸಿದ್ದು, ಒಂದೊಂದು ವಿಲ್ಲಾವು 3-4 ಕೋಟಿ ರು. ಬೆಲೆ ಬಾಳುತ್ತವೆ. ಈ ಅಕ್ರಮದಲ್ಲಿ ಬಿಡಿಎ ಅಧಿಕಾರಿಗಳು ಸಹ ಫಲಾನುಭವಿಗಳಾಗಿದ್ದಾರೆ ಎಂಬ ಶಂಕೆ ಇದೆ. ಗಾಲ್ಫ್‌ ಮೈದಾನಕ್ಕೆ ಅನುಮತಿ ಪಡೆದು ವಿಲ್ಲಾ ಅಭಿವೃದ್ಧಿ ಪಡಿಸಿದ ಆ ರಿಯಲ್‌ ಎಸ್ಟೇಟ್‌ ಕಂಪನಿ ಸಾರ್ವಜನಿಕ ಪ್ರಕಟಣೆ ನೀಡಿ ಮಾರಾಟ ಮಾಡಿದ್ದರೂ ಬಿಡಿಎ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಎಸಿಬಿ ಮೂಲಗಳು ತಿಳಿಸಿವೆ.
 

Follow Us:
Download App:
  • android
  • ios