Asianet Suvarna News

ಗದಗ: ತುಂಗಭದ್ರಾ ದಡದಲ್ಲಿ 150 ಟಿಪ್ಪರ್‌ ಅಕ್ರಮ ಮರಳು ವಶ

* ಜಿಲ್ಲಾಧಿಕಾರಿ, ಎಸ್ಪಿ ನೇತೃತ್ವದಲ್ಲಿ ಭಾರೀ ಕಾರ್ಯಾಚರಣೆ
* ಕಾರ್ಯಾಚರಣೆಗೆ 120ಕ್ಕೂ ಹೆಚ್ಚು ಪೊಲೀಸರ ನಿಯೋಜನೆ
* ನದಿ ದಂಡೆಯಲ್ಲಿರುವ ಕೆಲವು ಗ್ರಾಮಗಳಲ್ಲಿ ಅಕ್ರಮ ಮರಳು ಸಂಗ್ರಹ 
 

DC SP Raid on Illegal Sand Racket at Mundargi in Gadag grg
Author
Bengaluru, First Published Jun 16, 2021, 11:28 AM IST
  • Facebook
  • Twitter
  • Whatsapp

ಮುಂಡರಗಿ(ಜೂ.16): ತಾಲೂಕಿನ ಸಿಂಗಟಾಲೂರು (ಮಲ್ಲಾಪುರ) ಗ್ರಾಮದ ಹತ್ತಿರವಿರುವ ತುಂಗಭದ್ರಾ ನದಿ ದಂಡೆಯಲ್ಲಿ ಜಿಲ್ಲಾಧಿಕಾರಿ, ಎಸ್ಪಿ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿದ್ದ 12 ಲಕ್ಷ ರು. ಮೌಲ್ಯದ 150 ಟಿಪ್ಪರ್‌ ಮರಳನ್ನು ವಶಪಡಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು ಸುದ್ದಿಗಾರರೊಂದಿಗೆ ಮಾತನಾಡಿ, ಮುಂಡರಗಿ ತಾಲೂಕಿನ ತುಂಗಭದ್ರಾ ನದಿ ದಂಡೆಯಲ್ಲಿರುವ ಕೆಲವು ಗ್ರಾಮಗಳಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿರುವ ಬಗ್ಗೆ ಮಾಹಿತಿ ಬಂದಿತ್ತು. ಈ ಬಗ್ಗೆ ಪೊಲೀಸ್‌ ಇಲಾಖೆಯೂ ಸೇರಿದಂತೆ ಸಂಬಂಧಪಟ್ಟ ಎಲ್ಲ ಇಲಾಖೆಗಳೂ ಸೇರಿಕೊಂಡು ದಾಳಿ ನಡೆಸಿದರೆ ಇದು ಯಶಸ್ವಿಯಾಗುತ್ತದೆ ಎನ್ನುವ ಉದ್ದೇಶದಿಂದ ಮಂಗಳವಾರ ಬೆಳಗ್ಗೆ ತಾವು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸೇರಿ ದಿಢೀರ್‌ ದಾಳಿ ನಡೆಸಿದ್ದು, ತಾಲೂಕಿನ ಸಿಂಗಟಾಲೂರು, ಶೀರನಹಳ್ಳಿ, ಗಂಗಾಪುರ, ಕಕ್ಕೂರ, ಹೆಸರೂರ ಸೇರಿದಂತೆ ಒಟ್ಟು 6 ಗ್ರಾಮಗಳಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿರುವುದಾಗಿ ಮಾಹಿತಿ ಬಂದಿದ್ದು, ಮೊದಲನೆಯದಾಗಿ ಸಿಂಗಟಾಲೂರು ಗ್ರಾಮದಿಂದ ದಾಳಿ ಪ್ರಾರಂಭಿಸಲಾಗಿದೆ ಎಂದರು.

ಈಗಾಗಲೇ ಸಿಂಗಟಾಲೂರು ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿರುವ ಮರಳು ವಶಕ್ಕೆ ಪಡೆದು ಸ್ಥಳಾಂತರಿಸುವ ಕಾರ್ಯ ಮುಕ್ತಾಯದ ಹಂತಕ್ಕೆ ತಲುಪಿದ್ದು, ಹಂತ ಹಂತವಾಗಿ ಒಂದೊಂದು ಗ್ರಾಮಕ್ಕೆ ತೆರಳಿ ಅಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿರುವ ಮರಳನ್ನು ವಶಪಡಿಸಿಕೊಳ್ಳಲಾಗುವುದು. ಎಲ್ಲ ಗ್ರಾಮಗಳಲ್ಲಿಯೂ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

'ಬಿಜೆಪಿ ಸರ್ಕಾರಗಳು ಜನರ ನೆಮ್ಮದಿ ಕಿತ್ತುಕೊಂಡಿವೆ'

ಎಲ್ಲ ಗ್ರಾಮಗಳೂ ಸೇರಿ ಸುಮಾರು ನೂರಕ್ಕೂ ಹೆಚ್ಚು ಟಿಪ್ಪರ್‌ ಅಕ್ರಮ ಮರಳು ಸಿಗುವ ಸಾಧ್ಯತೆ ಇದೆ, ಸಂಪೂರ್ಣ ಕಾರ್ಯಾಚರಣೆ ಮುಗಿದ ನಂತರವೇ ಸಂಪೂರ್ಣ ಮಾಹಿತಿ ದೊರೆಯುತ್ತದೆ. ವಶಪಡಿಸಿಕೊಂಡಿರುವ ಮರಳನ್ನು ಒಂದೆಡೆ ಸಂಗ್ರಹಿಸುತ್ತಿದ್ದು, ನಂತರ ಅದನ್ನು ಸರ್ಕಾರದ ನಿಯಮದ ಪ್ರಕಾರ ಸಾಗಿಸಲು ವ್ಯವಸ್ಥೆ ಮಾಡಲಾಗುವುದು.

ಮರಳು ಗುತ್ತಿಗೆದಾರರು ಸರ್ಕಾರದ ನಿಯಮದ ಪ್ರಕಾರ ಮರಳು ಸಂಗ್ರಹ ಮಾಡಿದ್ದನ್ನು ಹೊರತುಪಡಿಸಿ, ಎಲ್ಲೆಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದಾರೆ ಅದನ್ನು ಪತ್ತೆ ಮಾಡಿ ಅಕ್ರಮವಾಗಿರುವ ಎಲ್ಲ ಮರಳನ್ನೂ ಸಹ ವಶಕ್ಕೆ ಪಡೆಯಲು ಸೂಚಿಸಲಾಗಿದೆ. ಅಕ್ರಮವಾಗಿ ಸಂಗ್ರಹಿಸಿದವರ ಬಗ್ಗೆ ಮಾಹಿತಿ ಇದೆಯೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ, ಇದುವರೆಗೂ ಅಕ್ರಮವಾಗಿ ಸಂಗ್ರಹಿಸಿದವರ ಕುರಿತು ಮಾಹಿತಿ ದೊರೆತಿಲ್ಲ, ಈ ಬಗ್ಗೆ ಪೊಲೀಸ್‌ ಇಲಾಖೆಗೆ ಸೂಚಿಸಿದ್ದು, ಅವರು ತನಿಖೆ ನಡೆಸುತ್ತಿದ್ದು, ತನಿಖೆಯ ನಂತರ ಮಾಹಿತಿ ದೊರೆಯಬಹುದು ಎಂದರು.

ಎಸ್ಪಿ ಯತೀಶ ಎನ್‌. ಮಾತನಾಡಿ, ಕಂದಾಯ ಇಲಾಖೆ, ಪೊಲೀಸ್‌ ಇಲಾಖೆ ಹಾಗೂ ಗ್ರಾಪಂ ಅಧಿಕಾರಿಗಳು ಸೇರಿ ಸಮನ್ವಯತೆಯಿಂದ ನದಿ ದಂಡೆಯ 6 ಗ್ರಾಮಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಈ ಸಂದರ್ಭದಲ್ಲಿ ದೊರೆತ ಅಕ್ರಮ ಮರಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದ್ದು, ಈ ಕಾರ್ಯಾಚರಣೆಗಾಗಿ 120ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ತಹಸೀಲ್ದಾರ್‌ ಆಶಪ್ಪ ಪೂಜಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಸಂತೋಷ ಬೆಣಕಟ್ಟಿ, ಉಮೇಶ ಹಾಗೂ ಸಿಪಿಐ ಸುನೀಲ… ಸವದಿ, ಆರ್‌.ಐ. ಮುತ್ತು ಪಾಟೀಲ ಸೇರಿದಂತೆ ಅನೇಕ ಸಿಬ್ಬಂದಿ ಉಪಸ್ಥಿತರಿದ್ದರು.
 

Follow Us:
Download App:
  • android
  • ios