Asianet Suvarna News Asianet Suvarna News

Lalbagh Flower Show: ಫಲಪುಷ್ಪ ಪ್ರದರ್ಶನದಲ್ಲಿ ಕಿಕ್ಕಿರಿದ ಜನ: 15 ಸಾವಿರಕ್ಕೂ ಹೆಚ್ಚು ಜನರಿಂದ ವೀಕ್ಷಣೆ

ಶನಿವಾರ ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನಕ್ಕೆ ಜನಸಾಗರವೇ ಹರದು ಬಂದಿತ್ತು. ತಂಡೋಪತಂಡವಾಗಿ ಆಗಮಿಸಿ ಉದ್ಯಾನದಲ್ಲಿ ಪುಷ್ಪ ರಾಶಿಯ ಸೊಬಗನ್ನು ಸವಿದರು.

15 Thousand Peoples Visit Bengaluru Lalbagh Flower Show in a Single Day gvd
Author
First Published Jan 22, 2023, 8:31 AM IST

ಬೆಂಗಳೂರು (ಜ.22): ಶನಿವಾರ ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನಕ್ಕೆ ಜನಸಾಗರವೇ ಹರದು ಬಂದಿತ್ತು. ತಂಡೋಪತಂಡವಾಗಿ ಆಗಮಿಸಿ ಉದ್ಯಾನದಲ್ಲಿ ಪುಷ್ಪ ರಾಶಿಯ ಸೊಬಗನ್ನು ಸವಿದರು. ಲಾಲಾಬಾಗ್‌ ಉದ್ಯಾನದ ನಾಲ್ಕು ಪ್ರವೇಶ ದ್ವಾರಗಳಲ್ಲೂ ಹೆಚ್ಚಿನ ಟಿಕೆಟ್‌ ಕೌಂಟರ್‌ಗಳನ್ನು ತೆರೆಯಲಾಗಿತ್ತು. ಸಸಿಗಳನ್ನು ಖರೀದಿಸಲು ಮಾರಾಟ ಮಳಿಗೆಗಳ ಬಳಿ ಜನಸಂದಣಿ ಹೆಚ್ಚಾಗಿತ್ತು. ಲಾಲ್‌ಬಾಗ್‌ ಮುಖ್ಯ ಗೇಟಿನ ರಸ್ತೆಯಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.

ಗಾಜಿನ ಮನೆಯಲ್ಲಿ ಮುಖ್ಯ ಆಕರ್ಷಣೆಯಿದ್ದುದರಿಂದ ಜನರ ನೂಕುನುಗ್ಗಲು ಸಾಮಾನ್ಯವಾಗಿತ್ತು. ಗಾಜಿನಮನೆ ಹಿಂಭಾಗದಲ್ಲಿ ರಚಿಸಲಾಗಿರುವ ಬೆಂಗಳೂರು ಇತಿಹಾಸದ ಪೆವಿಲಿಯನ್‌ನಲ್ಲಿ ಲಾಲ್‌ಬಾಗ್‌ ಬಟಾನಿಕಲ್‌ ಗಾರ್ಡನ್‌ ಸೇರಿದಂತೆ ರಾಜ್ಯದ ನಾಲ್ಕು ಪ್ರಮುಖ ಬಟಾನಿಕಲ್‌ ಗಾರ್ಡನ್‌, ನಂದಿ ಗಿರಿಧಾಮ, ಕೆಮ್ಮಣ್ಣುಗುಂಡಿ ಮತ್ತು ಊಟಿ ಗಿರಿಧಾಮಗಳು, ಕಬ್ಬನ್‌ಪಾರ್ಕ್, ಕೊಪ್ಪಳದ ಪಂಪಾವನ ಹಾಗೂ ದಾವಣಗೆರೆ, ಮೈಸೂರಿನ ಗಾಜಿನಮನೆ ಮಾದರಿಗಳು ಜನರ ಮೆಚ್ಚುಗೆಗೆ ಪಾತ್ರವಾದವು.

ರಾಜಧಾನಿಯಲ್ಲಿ ಫಲಪುಷ್ಪ ಪ್ರದರ್ಶನ ಆರಂಭ: ಬೆಂಗಳೂರಿನ ಇತಿಹಾಸ ಪ್ರದರ್ಶನ

ವಿದೇಶಿ ಹೂವುಗಳ ಪ್ರದರ್ಶನವೂ ಗಮನ ಸೆಳೆಯಿತು. ಆದರೆ, ಆ ಹೂವುಗಳ ಕುರಿತು ಮಾಹಿತಿ ಒದಗಿಸುವ ಯಾವುದೇ ಫಲಕಗಳನ್ನು ಹಾಕದಿರುವುದು ಹಲವರ ನಿರಾಶೆಗೆ ಕಾರಣವಾಯಿತು. ವಿದೇಶಿ ಹೂವುಗಳ ಬಗ್ಗೆ ಕಿರು ಮಾಹಿತಿ ಫಲಕವನ್ನು ಹಾಕಿದ್ದರೆ ಇನ್ನಷ್ಟುಚೆನ್ನಾಗಿರುತ್ತಿತ್ತು. ಜೊತೆಗೆ ಬೆಂಗಳೂರು ಇತಿಹಾಸದ ಮಾಹಿತಿಯೂ ಸಿಗುವಂತೆ ಕಿರು ಪರಿಚಯದ ಫಲಕಗಳು ಅಳವಡಿಸಬೇಕಿತ್ತು ಎಂದು ಕಮಲಾನಗರದ ನಿವಾಸಿ ಶೋಭಾ ಎಸ್‌.ಪಾಟೀಲ್‌ ಅವರು ಪ್ರತಿಕ್ರಿಯಿಸಿದರು.

ಇಕೆಬಾನ ಉದ್ಘಾಟನೆ: ಇಕೆಬಾನ, ಪುಷ್ಪ ಭಾರತಿ, ಪುಷ್ಪ ರಂಗೋಲಿ ತರಕಾರಿ ಕೆತ್ತನೆ, ಡೆಚ್‌ ಹೂವಿನ ಜೋಡಣೆ, ಒಣಹೂವಿನ ಜೋಡಣೆ, ಥಾಯ್‌ ಆರ್ಚ್‌, ಜಾನೂರು ಮತ್ತು ಬೋನ್ಸಾಯ್‌ ಗಿಡಗಳ ಪ್ರದರ್ಶನವನ್ನು ಅದಮ್ಯ ಚೇತನಾ ಟ್ರಸ್ಟ್‌ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್‌ ಉದ್ಘಾಟಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಿನ ಕಲೆ, ಸಂಸ್ಕೃತಿ ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಜೊತೆಗೆ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ವೇದಿಕೆ ಕಲ್ಪಿಸಿಕೊಡುವ ಮೂಲಕ ಅವರ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹೇಳಿದರು.

ಇಕೆಬಾನ, ಪುಷ್ಪಭಾರತಿ, ಪುಷ್ಪ ರಂಗೋಲಿ ಸೇರಿದಂತೆ ಮುಂತಾದ ಪ್ರದರ್ಶನ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಭಾರತೀಯ ಸಂಸ್ಕೃತಿಯ ಮೇಲಿನ ಕಾಳಜಿ, ಸಂಯಮ, ಅಭಿರುಚಿ ಇರುವುದು ಅವರು ರಚಿಸಿರುವ ಕಲಾಕೃತಿಗಳಲ್ಲಿ ಕಂಡು ಬರುತ್ತಿದೆ ಎಂದು ಶ್ಲಾಘಿಸಿದರು.

ಸಸ್ಯಕಾಶಿಯಲ್ಲಿ ಇಂದಿನಿಂದ ಫಲಪುಷ್ಪ ಪ್ರದರ್ಶನ: ಬೆಂಗಳೂರಿನ ಇತಿಹಾಸ ಅನಾವರಣ

11 ಲಕ್ಷ ರು. ಸಂಗ್ರಹ: ಗಣರಾಜ್ಯೋತ್ಸವ ಅಂಗವಾಗಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನಕ್ಕೆ ಶನಿವಾರ 15,139 ವಯಸ್ಕರು, 1825 ಮಂದಿ ಮಕ್ಕಳು ಸೇರಿದಂತೆ 16,964 ಮಂದಿ ವೀಕ್ಷಣೆಗೆ ಭೇಟಿ ನೀಡಿದ್ದಾರೆ. ಟಿಕೆಟ್‌ ಮಾರಾಟದಿಂದಾಗಿ 11,14,565 ರು.ಸಂಗ್ರಹವಾಗಿದೆ ಎಂದು ತೋಟಗಾರಿಕೆ ಇಲಾಖೆ ಮಾಹಿತಿ ನೀಡಿದೆ.

ಈ ಬಾರಿ ಫಲಪುಷ್ಪ ಪ್ರದರ್ಶನವು ಬೆಂಗಳೂರು ಇತಿಹಾಸವನ್ನು ಬಿಂಬಿಸುವುದರ ಜತೆಗೆ ನಗರದ ಸುತ್ತ ಇರುವಂತಹ ವಿವಿಧ ಕಲೆಯ ಪ್ರತಿಭೆಗಳಿಗೆ ಅವಕಾಶ ಮಾಡಿಕೊಟ್ಟಿರುವುದು ಸಂಸತದ ಸಂಗತಿ.
- ತೇಜಸ್ವಿನಿ ಅನಂತಕುಮಾರ್‌, ಅದಮ್ಯ ಚೇತನಾ ಟ್ರಸ್ಟ್‌ ಅಧ್ಯಕ್ಷೆ

Follow Us:
Download App:
  • android
  • ios