Asianet Suvarna News Asianet Suvarna News

ರಾಜಧಾನಿಯಲ್ಲಿ ಫಲಪುಷ್ಪ ಪ್ರದರ್ಶನ ಆರಂಭ: ಬೆಂಗಳೂರಿನ ಇತಿಹಾಸ ಪ್ರದರ್ಶನ

ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆ ಆಯೋಜಿಸಿರುವ 11 ದಿನಗಳ 213ನೇ ಫಲಪುಷ್ಪ ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ದೊರೆತಿದ್ದು, ಮೊದಲ ದಿನ ವೀಕ್ಷಕರ ಸಂಖ್ಯೆ ತುಸು ಕಡಿಮೆ ಇತ್ತು. 

Lalbagh Flower Show 2023 History Of The Garden City Bengaluru Unfolds In Flowers gvd
Author
First Published Jan 21, 2023, 8:26 AM IST

ಬೆಂಗಳೂರು (ಜ.21): ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆ ಆಯೋಜಿಸಿರುವ 11 ದಿನಗಳ 213ನೇ ಫಲಪುಷ್ಪ ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ದೊರೆತಿದ್ದು, ಮೊದಲ ದಿನ ವೀಕ್ಷಕರ ಸಂಖ್ಯೆ ತುಸು ಕಡಿಮೆ ಇತ್ತು. ಇದೇ ಮೊದಲ ಬಾರಿಗೆ ಮೈಸೂರು ಉದ್ಯಾನ ಕಲಾಸಂಘವನ್ನು ಕೈಬಿಟ್ಟು ತೋಟಗಾರಿಕೆ ಇಲಾಖೆಯೇ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಿರುವುದು ವಿಶೇಷ. ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಹೂವಿನ ರಚನೆಗಳಿಗಿಂತ ಹೆಚ್ಚು ಬೆಂಗಳೂರು ಇತಿಹಾಸ ಸಾರುವ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 

ಆಯೋಜಕರು ಈ ಬಾರಿ ಗಾಜಿನ ಮನೆಯಲ್ಲಿ ಬೆಂಗಳೂರಿನ ವಿಶೇಷತೆಗಳನ್ನು ಒಳಗೊಂಡ ಬೃಹತ್‌ ಕಲಾಕೃತಿ ಮತ್ತು ಕೆಂಪೇಗೌಡ ಗೋಪುರವೊಂದನ್ನು ನಿರ್ಮಿಸಿ, ದೇಸಿಯ ಹೂವುಗಳೊಂದಿಗೆ ವಿದೇಶಿ ಹೂಗಳ ಜೋಡಣೆ ಮಾಡಿದ್ದಾರೆ. ಗಾಜಿನ ಮನೆಯಲ್ಲಿ ತಂಪು ವಾತಾವರಣ ಸೃಷ್ಟಿಸಿ ಹೂವುಗಳು ತಾಜಾ ಆಗಿರುವಂತೆ ಕಾಪಾಡುವ ಉದ್ದೇಶದಿಂದ ಫಾಗರ್ಸ್‌ ವ್ಯವಸ್ಥೆ ಮಾಡಲಾಗಿದೆ. ಗಾಜಿನಮನೆ ಹಿಂಭಾಗದಲ್ಲಿ ರಚಿಸಲಾಗಿರುವ ಬೆಂಗಳೂರು ಇತಿಹಾಸದ ಪೆವಿಲಿಯನ್‌ನಲ್ಲಿ ವಿವಿಧ ಬಟಾನಿಕಲ್‌ ಗಾರ್ಡನ್‌, ಗಾಜಿನಮನೆ ಮಾದರಿಗಳನ್ನು ನಿರ್ಮಿಸಿರುವುದು ಆಕರ್ಷಕವಾಗಿದೆ.  ಉದ್ಯಾನ ನಗರಿ ಎಂದು ಬೆಂಗಳೂರು ಎಂದು ಪ್ರಪ್ರಥಮವಾಗಿ ಉಲ್ಲೇಖಿಸಿರುವ ಬೇಗೂರು ಶಾಸನವೂ ನೋಡುಗರಲ್ಲಿ ಕುತೂಹಲ ಮೂಡಿಸುತ್ತಿದೆ.

Lalbagh Flower Show: ಸಸ್ಯಕಾಶಿಯಲ್ಲಿ ಇಂದಿನಿಂದ ಫಲಪುಷ್ಪ ಪ್ರದರ್ಶನ: ಬೆಂಗಳೂರಿನ ಇತಿಹಾಸ ಅನಾವರಣ

1500 ವರ್ಷಗಳ ಇತಿಹಾಸ ಅನಾವರಣ: ಬೆಂಗಳೂರು ನಗರದ 1,500 ವರ್ಷಗಳ ಭವ್ಯ ಇತಿಹಾಸವನ್ನು ಲಾಲ್‌ಬಾಗ್‌ ಗಾಜಿನಮನೆಯಲ್ಲಿ ಹೂಗಳ ಕಲಾಕೃತಿಗಳಿಂದ ನಿರ್ಮಿಸಲಾಗಿದೆ. ಬೃಹತ್‌ ಲಾಲ್‌ಬಾಗ್‌ ಬಂಡೆ, ವೃಷಭಾವತಿ ನದಿಯ ಮೂಲ, ಬೆಂಗಳೂರು ಪ್ರದೇಶದಲ್ಲಿ ಪ್ರಾರಂಭವಾದ ಜನವಸತಿ ಪ್ರದೇಶ, ರೋಮನ್‌ ಕಾಲದ ನಾಣ್ಯಗಳು, ಬೆಂಗಳೂರಿನ ಹೆಸರನ್ನು ಪ್ರಪ್ರಥಮವಾಗಿ ಉಲ್ಲೇಖಿಸುವ ಬೇಗೂರು ಶಾಸನದ ಪ್ರತಿಕೃತಿ, ಕೆಂಪೇಗೌಡರ ಕಾಲದ ಬೆಂಗಳೂರಿನ ಗಡಿ ಗೋಪುರಗಳು, ದೇವಾಲಯಗಳು, ಟಿಪ್ಪು ಕಾಲದ ಬೇಸಿಗೆ ಅರಮನೆ, ಬ್ರಿಟಿಷ್‌ ಆಡಳಿತಾವಧಿಯ ಹೈಕೋರ್ಚ್‌, ಮೈಸೂರು ಒಡೆಯರ ಆಡಳಿತಾವಧಿಯ ಬೆಂಗಳೂರು ಅರಮನೆ ಸೇರಿ ಸ್ವಾತಂತ್ರ್ಯೋತ್ತರ ಬೆಂಗಳೂರು ನಗರ ಕುರಿತು ಸುಮಾರು 30 ಸಾವಿರಕ್ಕೂ ಹೆಚ್ಚು ವಿವಿಧ ಆಕರ್ಷಕ ಹೂಗಳನ್ನು ಬಳಸಿ ಕಲಾಕೃತಿಗಳನ್ನು ನಿರ್ಮಿಸಲಾಗಿದೆ.

ಪ್ರವೇಶ ದರ: ಫಲಪುಷ್ಪ ಪ್ರದರ್ಶನಕ್ಕೆ ಪ್ರವೇಶ ದರ ವಯಸ್ಕರಿಗೆ .70, ರಜಾ ದಿನಗಳಲ್ಲಿ .75, 12 ವರ್ಷದ ಒಳಗಿನ ಮಕ್ಕಳಿಗೆ .30 ಶಾಲಾ ಮಕ್ಕಳಿಗೆ ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಪ್ರತಿ ದಿನ ಬೆಳಗ್ಗೆ 7ರಿಂದ ಸಂಜೆ 6.30ರವರೆಗೆ.

ಹಲವು ವರ್ಷಗಳಿಂದ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ ನೋಡುತ್ತಿದ್ದೇನೆ. ಪುಷ್ಪಗಳಲ್ಲಿ ರಚಿಸಲಾದ ಕಲಾಕೃತಿಗಳನ್ನು ವೀಕ್ಷಿಸುವುದೇ ಚೆಂದ. ಬೆಂಗಳೂರು ಇತಿಹಾಸವನ್ನು ಹೂವುಗಳಿಂದ ಕಟ್ಟಿಕೊಟ್ಟಿರುವುದು ಅದ್ಭುತವಾಗಿದೆ.
-ಭವ್ಯಾ, ಬೆಂಗಳೂರು.

Bengaluru: ಜ.19ರಿಂದ ಗಣರಾಜ್ಯೋತ್ಸವ ಪ್ರಯುಕ್ತ ಫಲಪುಷ್ಪ ಪ್ರದರ್ಶನ: ಲಾಲ್‌ಬಾಗ್‌ನಲ್ಲಿ ಸಿದ್ಧತೆ

ಬೆಂಗಳೂರಿನವರೇ ಆದ ನಾನು ಕಳೆದ 25 ವರ್ಷಗಳಿಂದ ವರ್ಷಕ್ಕೆ ಎರಡಾವರ್ತಿ ಪುಷ್ಪ ಪ್ರದರ್ಶನ ವೀಕ್ಷಿಸುತ್ತಿದ್ದೇನೆ. ಪ್ರತಿ ಬಾರಿಯೂ ವಿಶಿಷ್ಟಅನುಭವ ನೀಡುತ್ತಿದೆ. ಈ ಬಾರಿಯೂ ಬೆಂಗಳೂರು ಇತಿಹಾಸ ಗಮನ ಸೆಳೆದಿದ್ದರೂ ಹೂವಿನ ಆಕರ್ಷಣೆ ಕಡಿಮೆ ಇದೆ. ಇನ್ನು ಹೆಚ್ಚು ಹೂವುಗಳನ್ನು ಬಳಸಿದ್ದರೆ ಚೆನ್ನಾಗಿರುತ್ತಿತ್ತು.
-ರಾಧಾ, ಜೆ.ಪಿ.ನಗರ.

Follow Us:
Download App:
  • android
  • ios