ಬೆಂಗಳೂರು(ಏ. 15) ಕರ್ನಾಟಕದಲ್ಲಿ ಕೊರೋನಾ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ. ಎರಡನೇ ಅಲೆ ಭೀಕರವಾಗುತ್ತಿದ್ದು  ಒಂದೇ ದಿನ 14,738 ಕೊರೋನಾ ಪ್ರಕರಣಗಳು ವರದಿಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 11,09,650ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ 66 ಜನ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 13,112ಕ್ಕೆ ಏರಿಕೆಯಾಗಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಇಂದು 10,497 ಮಂದಿಗೆ ಸೋಂಕು ದೃಢಪಟ್ಟಿದೆ.

ಬೆಂಗಳೂರಿನಲ್ಲಿಯೇ ಹತ್ತು ಸಾವಿರ ಸೋಂಕು ದಾಖಲಾಗಿದ್ದು ಸರ್ಕಾರ ಕೊರೋನಾ ನಿಷೇಧಾಜ್ಞೆ ಹೊರಡಿಸಿದ್ದರೂ ಯಾವ  ಪ್ರಯೋಜನ ಕಂಡುಬಂದಿಲ್ಲ.  ಬೆಂಗಳೂರಿನಲ್ಲಿ ಸೋಂಕಿಗೆ 30 ಮಂದಿ ಬಲಿಯಾಗಿದ್ದಾರೆ.

ಶವ ಸಂಸ್ಕಾರಕ್ಕೆ ಸರತಿ ಸಾಲು... ಬೆಂಗಳೂರಿನದ್ದೇ ದೃಶ್ಯ

3,591 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 9,99,958ಕ್ಕೆ ಏರಿಕೆಯಾಗಿದೆ. ಇನ್ನು 96,561 ಸಕ್ರೀಯ ಪ್ರಕರಣಗಳಿವೆ.

ಭಾನುವಾರ ಸಿಎಂ ಯಡಿಯೂರಪ್ಪ ಸರ್ವಪಕ್ಷ ಸಭೆ ನಡೆಸಲಿದ್ದಾರೆ. ಟಫ್ ರೂಲ್ಸ್ ಗೆ ತಜ್ಞರ ಸಮಿತಿ ವರದಿ ನೀಡಿದೆ. ರಾಜ್ಯದ  ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದ್ದು ಏಪ್ರಿಲ್ 17 (ಶನಿವಾರ) ಮತದಾನ ನಡೆಯಲಿದ್ದು, ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣಾ ಪ್ರಚಾರದಲ್ಲಿ ಜನ ಸೇರಿದ್ದರ ಬಗ್ಗೆಯೂ ಟೀಕೆ ವ್ಯಕ್ತವಾಗಿತ್ತು.

 ಬೆಂಗಳೂರು, ಉಡುಪಿ-ಮಣಿಪಾಲ್, ತುಮಕೂರು, ಬೀದರ್, ಮಂಗಳೂರು, ತುಮಕೂರು ಸೇರಿ ಎಂಟು ಜಿಲ್ಲಾ ಕೇಂದ್ರದಲ್ಲಿ ಕೊರೋನಾ ನಿಷೇಧಾಜ್ಞೆ ಜಾರಿಯಲ್ಲಿದೆ. ಇದನ್ನೇ ವಿಸ್ತರಣೆ ಮಾಡುತ್ತಾರೋ ಅಥವಾ ಅನಿವಾರ್ಯವಾಗಿ ಲಾಕ್ ಡೌನ್ ಮೊರೆ ಹೋಗಬೇಕಾಗುತ್ತದೆಯೋ ಭಾನುವಾರ ತೀರ್ಮಾನವಾಗಲಿದೆ.