ಬೆಂಗಳೂರು [ಮಾ.20]:  ದಿನ ಕಳೆದಂತೆ ಉಲ್ಬಣಿಸುತ್ತಿರುವ ಮಾರಕ ಕೊರೋನಾ ಸೋಂಕು ಹರಡುವುದನ್ನು ನಿಯಂತ್ರಿಸಲು ರಾಜ್ಯ ಸರ್ಕಾರದ ಜತೆಗೆ ಸ್ಥಳೀಯ ಆಡಳಿತ ಸಹ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಇಡೀ ದೇಶದಲ್ಲೇ ಕೊರೋನಾಗೆ ಮೊದಲ ಬಲಿಯಾದ ಕಲಬುರಗಿ ಸೇರಿದಂತೆ ರಾಜ್ಯದ 14 ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇದರೊಂದಿಗೆ ರಾಜ್ಯದ ಅರ್ಧಭಾಗದಲ್ಲಿ 144 ಸೆಕ್ಷನ್‌ ಜಾರಿಯಾದಂತಾಗಿದೆ.

ಕಲಬುರಗಿ, ರಾಯಚೂರು, ಬೀದರ್‌, ಯಾದಗಿರಿ, ಕೋಲಾರ, ಶಿವಮೊಗ್ಗ, ದಾವಣಗೆರೆ, ಮೈಸೂರು, ಕೊಪ್ಪಳ, ಉಡುಪಿ ಸೇರಿದಂತೆ 10 ಜಿಲ್ಲೆಗಳಲ್ಲಿ 144 ಸೆಕ್ಷನ್‌ ಜಾರಿಗೊಳಿಸಲಾಗಿದೆ. ಇನ್ನು ಕೊಡಗು, ಹಾಸನ, ಚಿತ್ರದುರ್ಗ, ಧಾರವಾಡ ಸೇರಿದಂತೆ 4 ಜಿಲ್ಲೆಗಳಲ್ಲಿ 144(3) ಸೆಕ್ಷನ್‌ ಅನ್ನು ವಿಧಿಸಲಾಗಿದೆ. ಇದರ ಜತೆಗೆ ವಿದೇಶಿ ಪ್ರವಾಸಿಗರು ಹೆಚ್ಚಾಗಿ ಕಂಡು ಬರುವ ಬಳ್ಳಾರಿ ಜಿಲ್ಲೆಯ ಹಂಪಿ, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡುವಿನಲ್ಲಿರುವ ಟಿಬೆಟಿಯನ್‌ ಕಾಲೋನಿ ಹಾಗೂ ಹಾವೇರಿಯ ಶಿಗ್ಗಾಂವ ತಾಲೂಕಿನಲ್ಲೂ 144(3) ಸೆಕ್ಷನ್‌ ಜಾರಿಗೊಳಿಸಲಾಗಿದೆ.

ಹುಬ್ಬಳ್ಳಿಯಲ್ಲಿ ಕೊರೋನಾ ಭೀತಿ: ಮೂವರ ಮೇಲೆ ತೀವ್ರ ನಿಗಾ..

ಈ ಮೂಲಕ ಸಾರ್ವಜನಿಕರು ಗುಂಪು ಗುಂಪಾಗಿ ಸೇರುವುದಕ್ಕೆ ನಿರ್ಬಂಧ ವಿಧಿಸಲಾಗಿದ್ದು, ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ ಜನ ಗುಂಪಾಗಿ ಸೇರುವುದನ್ನು ನಿರ್ಬಂಧಿಸಲಾಗಿದೆ. ಇನ್ನು ಸೆಕ್ಷನ್‌ 144(3) ಅಡಿಯಲ್ಲಿ ಅಂತಿಮ ಸಂಸ್ಕಾರ ಹಾಗೂ ಮದುವೆ ಕಾರ್ಯಗಳಿಗೆ ವಿನಾಯ್ತಿ ನೀಡಲಾಗಿದ್ದು, 50 ಜನರ ಸೇರಲು ಅವಕಾಶ ಕಲ್ಪಿಸಿಕೊಡಲಾಗಿದೆ.