ಬಳ್ಳಾರಿ(ಮೇ.13): ಇಲ್ಲಿನ ಕೊರೋನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿರುಗುಪ್ಪ ತಾಲೂಕಿನ ಹೊಸಹಳ್ಳಿ ಗ್ರಾಮದ ಬಾಲಕ ಗುಣಮುಖನಾಗಿ ಮಂಗಳವಾರ ಬಿಡುಗಡೆಯಾಗಿದ್ದಾನೆ. ಇದರಿಂದ ಗುಣಮುಖರಾದವರ ಸಂಖ್ಯೆ 12ಕ್ಕೇರಿದ್ದು, ಇನ್ನು ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ 40 ದಿನಗಳ ಹಿಂದೆ 14 ವರ್ಷದ ಬಾಲಕನನ್ನು ಇಲ್ಲಿನ ಕೊರೋನಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸತತ ವೈದ್ಯಕೀಯ ಪರೀಕ್ಷೆ ನಡೆಸಿದಾಗ್ಯೂ ಬಾಲಕನ ಗಂಟಲುದ್ರವ ಪರೀಕ್ಷೆಯಲ್ಲಿ ಪಾಸಿಟಿವ್‌ ಬರುತ್ತಿತ್ತು. ಹೀಗಾಗಿ ಬಾಲಕನನ್ನು ಆಸ್ಪತ್ರೆಯಲ್ಲಿಯೇ ಉಳಿಸಿಕೊಳ್ಳುವುದು ವೈದ್ಯರಿಗೆ ಅನಿವಾರ್ಯವಾಗಿತ್ತು. ಓರ್ವನೇ ಆಸ್ಪತ್ರೆಯಲ್ಲಿಯೇ ಇದ್ದು ಬಾಲಕ ಖಿನ್ನನಾಗಿದ್ದ. ಇದು ವೈದ್ಯರಿಗೆ ನುಂಗದ ತುತ್ತಾಗಿ ಪರಿಣಮಿಸಿತ್ತು. ಬಾಲಕನ ತಂದೆ ನಂಜನಗೂಡಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಬಾಲಕನ ತಾಯಿಯ ತವರು ಮನೆಗೆ ಬಾಲಕ ಬಂದಾಗ ವೈರಸ್‌ ಇರುವುದು ದೃಢಪಟ್ಟಿತ್ತು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಎನ್‌. ಬಸರೆಡ್ಡಿ ಅವರು ಗುಣಮುಖ ಬಾಲಕನಿಗೆ ಹೂಗುಚ್ಚ ನೀಡಿ ಬೀಳ್ಕೊಟ್ಟರು. ವೈದ್ಯಕೀಯ ಸಿಬ್ಬಂದಿ ಚಪ್ಪಾಳೆ ತಟ್ಟಿ ಅಭಿನಂದಿಸಿದರು.

ಗಂಗಾವತಿಯಿಂದ ಕಂಪ್ಲಿಗೆ ಆಟೋದಲ್ಲಿ ತೆರಳಿದ್ದವನಿಗೆ ಕೊರೋನಾ: ಆತಂಕದಲ್ಲಿ ಜನತೆ

ಇದೇ ವೇಳೆ ಮಾತನಾಡಿದ ಡಾ. ಎನ್‌.ಬಸರೆಡ್ಡಿ, ಬಾಲಕ ಅತಿ ಹೆಚ್ಚು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರು. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದೆವು. ಬಾಲಕ ಖಿನ್ನತೆಗೆ ಒಳಗಾಗದಂತೆ ನೋಡಿಕೊಂಡೆವು. ಬಾಲಕ ಮತ್ತೆ 14 ದಿನಗಳ ಕಾಲ ಹೋಂ ಕ್ವಾರಂಟೈನ್‌ ಆಗಲಿದ್ದು ಮತ್ತು 14 ದಿನಗಳ ಕಾಲ ಸೆಲ್ಪ್‌ ರಿಪೋಟಿಂಗ್‌ ಮಾಡಲಾಗುವುದು ಎಂದು ತಿಳಿಸಿದರು.

ಗುಣಮುಖ ಬಾಲಕ ಮಾತನಾಡಿ, 40 ದಿನಗಳ ಕಾಲ ವೈದ್ಯರು ಚೆನ್ನಾಗಿ ನೋಡಿಕೊಂಡರು. ಮೊದ ಮೊದಲು ಆತಂಕಗೊಂಡಿದ್ದೆ. ವೈದ್ಯರು ಹಾಗೂ ಸಿಬ್ಬಂದಿ ಧೈರ್ಯ ತುಂಬಿದರು ಎಂದು ತಿಳಿಸಿದ್ದಾನೆ. 

ವಿಡ್‌ ನೋಡಲ್‌ ಅಧಿಕಾರಿ ಡಾ. ಯೋಗನಂದಾ ರೆಡ್ಡಿ, ಆರ್‌.ಎಂ.ಓ. ಡಾ. ಮಲ್ಲಿಕಾರ್ಜನ್‌, ಡಾ. ಅನಿಲ್‌, ಡಾ. ಲಿಂಗರಾಜು, ಡಾ.ವಿಶ್ವನಾಥ್‌, ಡಾ. ಚಂದ್ರಬಾಬು, ಡಾ. ಹುಗ್ಲಿ ವಿಶ್ವನಾಥ್‌, ಡಾ. ಭಾವನ, ಗುಮಾಸ್ತೆ ದೇಸಾಯಿ, ಡಾ. ಸುನೀಲ್‌, ಶಾಂತಾಬಾಯಿ, ಡಾ.ಉಮಾಮಹೇಶ್ವರಿ, ಡಾ.ಚಿತ್ರಶೇಖರ ಮತ್ತಿತರರಿದ್ದರು.