ಉಡುಪಿ(ಜೂ.23): ಉಡುಪಿ ಜಿಲ್ಲೆಯಲ್ಲಿ ಸೋಮವಾರ ಒಬ್ಬರು ಪೊಲೀಸ್‌ ಸಿಬ್ಬಂದಿ ಸೇರಿದಂತೆ 14 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1077ಕ್ಕೇರಿದೆ.

ಸೋಂಕು ಪತ್ತೆಯಾದ 14 ಮಂದಿಯಲ್ಲಿ 7 ಮಹಿಳೆಯರು, 6 ಪುರುಷರು ಮತ್ತು 7 ವರ್ಷ ಬಾಲಕರು. ಅವರಲ್ಲಿ 8 ಮಂದಿ ಮಹಾರಾಷ್ಟ್ರದಿಂದ ಬಂದವರು, 4 ಮಂದಿ ಮುಂಬೈಯಿಂದ ಬಂದ ಸೋಂಕಿತನ (ಪಿ6843) ಸಂಪರ್ಕದಲ್ಲಿದ್ದವರು, ಒಬ್ಬರು ಸ್ಥಳೀಯ ಪೊಲೀಸ್‌ ಸಿಬ್ಬಂದಿ ಮತ್ತು 26 ವರ್ಷ ವಯಸ್ಸಿನ ಶಿರೂರು ಪ್ರಾಥಮಿಕ ಆರೋಗ್ಯ ಕೇಂದ್ರ ದಾದಿ.

ಸೋಂಕಿನ ಮೂಲವೇ ನಿಗೂಢ: ಸಮುದಾಯಕ್ಕೆ ಕೊರೋನಾ!

ಸೋಮವಾರ ಒಟ್ಟು 67 ಮಾದರಿಗಳ ವರದಿಗಳು ಬಂದಿದ್ದು, ಅವುಗಳಲ್ಲಿ 53 ನೆಗೆಟಿವ್‌, 14 ಪಾಸಿಟಿವ್‌ ಆಗಿವೆ. ಜಿಲ್ಲೆಯಲ್ಲಿ ಇದುವರೆಗೆ 961 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದು, ಸದ್ಯ ಜಿಲ್ಲೆಯಲ್ಲಿ 114 ಸಕ್ರಿಯ ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಮವಾರ ಮತ್ತೆ 12 ಮಂದಿಯ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಅವರಲ್ಲಿ 6 ಮಂದಿ ಶೀತ ಜ್ವರ, 2 ಮಂದಿ ಮುಂಬೈಯಿಂದ ಬಂದವರು, 2 ಮಂದಿ ಕೊರೋನಾ ಶಂಕಿತರು, ಒಬ್ಬರು ಕೊರೋನಾ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದವರು, ಒಬ್ಬರು ಉಸಿರಾಟದ ತೊಂದರೆ ಇರುವವರಾಗಿದ್ದಾರೆ.

ಒಬ್ಬನಿಂದ 4 ಮಂದಿಗೆ ಸೋಂಕು

ಜೂನ್‌ 14ರಂದು ಮುಂಬೈಯಿಂದ ಬಂದ 32 ವರ್ಷ ವಯಸ್ಸಿನ ಯುವಕ (ಪಿ6843) ತಮ್ಮ ಮನೆಯ 4 ಮಂದಿಗೆ ಸೋಂಕು ಹರಡಿದ್ದು, ಈಗ ಆತಂಕಕ್ಕೆ ಕಾರಣವಾಗಿದೆ.

ಆತನ ಸಂಬಂಧಿಕರಾದ 39 ವರ್ಷ, 20 ವರ್ಷ, 19 ವರ್ಷ ಮತ್ತು 15 ವರ್ಷ ವಯಸ್ಸಿನ 4 ಮಂದಿ ಮಹಿಳೆಯರಿಗೆ ಸೋಂಕು ತಗಲಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರೊಂದಿಗೆ ಸಂಪರ್ಕದಲ್ಲಿದ್ದ ಇನ್ನೂ ಅನೇಕ ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ.

ಪೊಲೀಸ್‌ ಸಿಬ್ಬಂದಿಗೆ ಸೋಂಕು

ಕೊರೋನಾ ವಾರಿಯರ್‌ ಆಗಿ ಕೆಲಸ ಮಾಡುತ್ತಿರುವ ಬೈಂದೂರು ಪೊಲೀಸ್‌ ಠಾಣೆಯ 39 ವರ್ಷ ವಯಸ್ಸಿನ ಕಾನ್‌ಸ್ಟೆಬಲ್‌ ಒಬ್ಬರಿಗೆ ಕೊರೋನಾ ಸೋಂಕು ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಅವರ ಮನೆಯನ್ನು ಸೀಲ್‌ಡೌನ್‌ ಮಾಡಲಾಗಿದ್ದು, ಮನೆಯವರನ್ನೂ ಮತ್ತು ಸಹದ್ಯೋಗಿ ಪೊಲೀಸ್‌ ಸಿಬ್ಬಂದಿಯನ್ನೂ ಪರೀಕ್ಷೆಗೊಳಪಡಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಪೊಲೀಸ್‌ ಠಾಣೆಯನ್ನು ಬಂದ್‌ ಮಾಡಲಾಗಿದ್ದು, ಸಂಪೂರ್ಣ ಸ್ಯಾನಿಟೈಸೇಷನ್‌ ಮಾಡಲಾಗಿದೆ. ಇನ್ನೊಮ್ಮೆ ಸ್ಯಾನಿಟೈಸ್‌ ಮಾಡಿ ಠಾಣೆಯನ್ನು ಪುನರಾರಂಭ ಮಾಡಲಾಗುತ್ತದೆ ಎಂದು ಕುಂದಾಪುರದ ಎಎಸ್ಪಿ ಹರಿರಾಮ್‌ ಶಂಕರ್‌ ಹೇಳಿದ್ದಾರೆ.

11 ಪೊಲೀಸರು, 4 ಆರೋಗ್ಯ ಸಿಬ್ಬಂದಿಗೆ ಸೋಂಕು!

ತಮ್ಮ ಮನೆ, ಕುಟುಂಬವನ್ನು ದೂರವಿಟ್ಟು, ಸಮಾಜಕ್ಕಾಗಿ ಕೊರೋನಾ ಸೋಂಕು ತಡೆಯುವಲ್ಲಿ ಹಗಲಿರುಳು ಶ್ರಮಿಸುತ್ತಿರುವ ಜಿಲ್ಲೆಯ 11 ಮಂದಿ ಕೊರೋನಾ ವಾರಿಯರ್ಸ್‌ ಗಳಿಗೆ ಸೋಂಕು ತಗಲಿರುವುದು ಕಳವಳಕ್ಕೆ ಕಾರಣವಾಗಿದೆ.

ಜಿಲ್ಲೆಯ ಗಡಿಗಳ ಚೆಕ್‌ಪೋಸ್ವ್‌ಗಳಲ್ಲಿ ಕೆಲಸ ಮಾಡಿದ ಒಟ್ಟು 11 ಮಂದಿ ಪೊಲೀಸ್‌ ಸಿಬ್ಬಂದಿಗೆ ಸೋಂಕು ತಗಲಿದ್ದು, ಅವರಲ್ಲಿ ಈಗಾಗಲೇ 10 ಮಂದಿ ಗುಣಮುಖರಾಗಿದ್ದಾರೆ. ಸೋಮವಾರ ಒಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲದೆ ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಆರೋಗ್ಯ ಕಾರ್ಯಕರ್ತೆಯರು, ಉಡುಪಿ ಕೋವಿಡ್‌ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಲ್ಯಾಬ್‌ ಟೆಕ್ನಿಷಿಯನ್‌ ಮತ್ತು ಈಗ ಶಿರೂರು ಪ್ರಾ.ಆ.ಕೇಂದ್ರದ ದಾದಿಯೊಬ್ಬರಿಗೆ ಸೋಂಕು ಪತ್ತೆಯಾಗಿದೆ.