Asianet Suvarna News Asianet Suvarna News

ಸೋಂಕಿನ ಮೂಲವೇ ನಿಗೂಢ: ಸಮುದಾಯಕ್ಕೆ ಕೊರೋನಾ!

ಸಮುದಾಯಕ್ಕೆ ಕೊರೋನಾ| ಬೆಂಗಳೂರು ಸೇರಿ ಕೆಲ ಜಿಲ್ಲೆಗಳಲ್ಲಿ ಪತ್ತೆಯಾಗಿರುವ ಹಲವು ಸೋಂಕಿನ ಮೂಲವೇ ತಿಳಿಯುತ್ತಿಲ್ಲ| ರಾಜಧಾನಿಯ 123 ಕೇಸಿನ ಮೂಲ ನಿಗೂಢ, ಇದರಿಂದ ಸಮುದಾಯಕ್ಕೆ ಹರಡಿರುವುದು ದೃಢ| ರ‍ಯಂಡಮ್‌ ಪರೀಕ್ಷೆ ಆಗದಿದ್ದರೆ ದೊಡ್ಡ ಮಟ್ಟದಲ್ಲಿ ಸಮುದಾಯಕ್ಕೆ ಸೋಂಕು: ಡಾ.ಮಂಜುನಾಥ್‌

Community Transmission Origin Of Coronavirus In Several People Is Unknown in Karnataka
Author
Bangalore, First Published Jun 23, 2020, 7:24 AM IST

ಬೆಂಗಳೂರು(ಜೂ.23): ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕು ಸಮುದಾಯಕ್ಕೆ ಪಕ್ಕಾ ವ್ಯಾಪಿಸಿದೆ. ಅಷ್ಟೇ ಅಲ್ಲ, ರಾಜ್ಯದ ಇನ್ನೂ ಕೆಲವು ಜಿಲ್ಲೆಗಳಲ್ಲೂ ಸೋಂಕು ಸಮುದಾಯಕ್ಕೆ ಹಬ್ಬುವ ಹಂತ ಆರಂಭವಾಗಿದೆ.

ಹೀಗಂತ ತಜ್ಞರು ಎಚ್ಚರಿಸುತ್ತಾರೆ. ಇದಕ್ಕೆ ಮುಖ್ಯ ಕಾರಣ ಸೋಂಕಿನ ಮೂಲ ತಿಳಿಯುತ್ತಿಲ್ಲ. ಈ ಹಿಂದೆ ಯಾರಿಗೆ ಸೋಂಕು ಬಂದರೂ ಅದು ಯಾರ ಸಂಪರ್ಕದಿಂದ ಬಂದಿದೆ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಿತ್ತು. ಆದರೆ, ಇತ್ತೀಚೆಗೆ ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಸೋಂಕಿನ ಮೂಲ ಪತ್ತೆಯಾಗುತ್ತಲೇ ಇಲ್ಲ. ಉದಾಹರಣೆಗೆ ಕಳೆದ ಎರಡು ದಿನಗಳಿಂದ ನಗರದಲ್ಲಿ ಶತಕ ಮೀರಿದ ಸಂಖ್ಯೆಯಲ್ಲಿ ದೃಢಪಡುತ್ತಿರುವ ‘ಕೋವಿಡ್‌-19’ ಪ್ರಕರಣಗಳಲ್ಲಿ ಅರ್ಧಕ್ಕೂ ಹೆಚ್ಚು ಜನರಿಗೆ ಸೋಂಕಿನ ಮೂಲವೇ ಪತ್ತೆಯಾಗಿಲ್ಲ.

ದೇಶದಲ್ಲಿ ಸಮುದಾಯಕ್ಕೆ ಹಬ್ಬಿದೆ ಕೊರೋನಾ, ಸತ್ಯ ಒಪ್ಪಿಕೊಳ್ಳಿ: ಕೇಂದ್ರಕ್ಕೆ ತಜ್ಞರ ಸಲಹೆ!

ಅಷ್ಟೇ ಅಲ್ಲ, ಕಲಬುರಗಿ, ಬಳ್ಳಾರಿ, ಬೀದರ್‌ ಸೇರಿದಂತೆ ಕೆಲವು ಜಿಲ್ಲೆಗಳಲ್ಲೂ ಕಳೆದ ಕೆಲ ದಿನಗಳಿಂದ ಸೋಂಕಿನ ಮೂಲ ಪತ್ತೆಯಾಗದ ಪ್ರಕರಣಗಳು ವರದಿಯಾಗತೊಡಗಿದ್ದು, ಇಲ್ಲಿಯೂ ಸಮುದಾಯಕ್ಕೆ ಹಡುತ್ತಿದೆಯೇ ಎಂಬ ಆತಂಕ ಸೃಷ್ಟಿಯಾಗಿದೆ.

ಬೆಂಗಳೂರಲ್ಲಿ ಅತ್ಯಧಿಕ:

ಬೆಂಗಳೂರಿನಲ್ಲಿ ಕಳೆದ ಶನಿವಾರ ದೃಢಪಟ್ಟಿದ್ದ 94 ಪ್ರಕರಣಗಳಲ್ಲಿ ಏಳು ಜನರಿಗೆ, ಭಾನುವಾರ ಪತ್ತೆಯಾದ 196 ಪ್ರಕರಣಗಳಲ್ಲಿ 64 ಜನರಿಗೆ, ಸೋಮವಾರ ದೃಢಪಟ್ಟ126 ಪ್ರಕರಣಗಳ ಪೈಕಿ 52 ಜನರಿಗೆ ಸೋಂಕಿನ ಮೂಲ ಪತ್ತೆಯಾಗಿಲ್ಲ. ಇದರೊಂದಿಗೆ ಈ ಮೂರು ದಿನಗಳಲ್ಲಿ ಒಟ್ಟು 123 ಜನರಿಗೆ ಸೋಂಕಿನ ಮೂಲ ಪತ್ತೆಯಾಗಿಲ್ಲ. ತಜ್ಞರು ಕೂಡ ಈ ಅಂಕಿ ಅಂಶಗಳನ್ನೇ ಆಧಾರವಾಗಿಟ್ಟುಕೊಂಡು ಬೆಂಗಳೂರಿನಲ್ಲಿ ಸಮುದಾಯಕ್ಕೆ ಕೊರೋನಾ ಸೋಂಕು ಹಬ್ಬಲು ಆರಂಭವಾಗಿದೆ ಎಂದು ಹೇಳುತ್ತಿದ್ದಾರೆ.

ಇನ್ನು, ಕಳೆದ ಮೂರ್ನಾಲ್ಕು ದಿನಗಳಿಂದ ಬಳ್ಳಾರಿಯಲ್ಲಿ 15 ಪ್ರಕರಣ, ಬೀದರ್‌ನಲ್ಲಿ 10, ಕಲಬುರಗಿಯಲ್ಲಿ 8, ಹಾವರಿಯಲ್ಲಿ 6 ಕೊರೋನಾ ಸೋಂಕು ಪ್ರಕರಣಗಳಿಗೆ ಸೋಂಕಿನ ಮೂಲ ಪತ್ತೆಯಾಗಿಲ್ಲ. ಈ ಅಂಕಿ ಅಂಶಗಳು ಆರೋಗ್ಯ ಇಲಾಖೆಯು ಪ್ರಕಟಿಸುವ ದೈನಂದಿನ ‘ಕೋವಿಡ್‌-19’ ವರದಿಯಲ್ಲಿ ಕಾಣಬಹುದಾಗಿದೆ. ಅಲ್ಲದೆ, ಬೆಂಗಳೂರಿನ ಪಾದರಾಯನಪುರ, ನಂಜನಗೂಡಿನ ಔಷಧ ಕಂಪನಿ ಮತ್ತು ಉತ್ತರ ಕರ್ನಾಟಕ ಕೆಲ ಭಾಗಗಳಿಗೆ ಕೋವಿಡ್‌ ಸೋಂಕು ಹೇಗೆ ಪ್ರವೇಶಿಸಿತು ಎಂಬುದು ಇದುವರೆಗೂ ಪತ್ತೆಯಾಗಿಲ್ಲ.

ಎಚ್ಚರ.. ಸಮುದಾಯಕ್ಕೆ ಹರಡುತ್ತಿದೆ ಕೊರೋನಾ, ನಿಯಂತ್ರಣಕ್ಕೆ 11 ಶಿಫಾರಸು!

ಸಾಮುದಾಯಿಕ ಸೂಚನೆ- ಡಾ| ಮಂಜುನಾಥ್‌:

ರಾಜ್ಯದಲ್ಲಿ ಸಮುದಾಯಕ್ಕೆ ಕೊರೋನಾ ಸೋಂಕು ಹರಡುತ್ತಿರುವ ಬಗ್ಗೆ ಮಾತನಾಡಿದ ಸರ್ಕಾರದ ಕೊರೋನಾ ನಿಯಂತ್ರಣ ಟಾಸ್ಕ್‌ ಫೋರ್ಸ್‌ ಸದಸ್ಯರೂ ಆದ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ. ಮಂಜುನಾಥ್‌ ಅವರು, ‘ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಸೋಂಕಿನ ಮೂಲ ಪತ್ತೆಯಾಗದ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಇದು ಸಮುದಾಯಕ್ಕೆ ಹರಡುತ್ತಿರುವ ಸೂಚನೆಯಾಗಿದೆ. ಹಾಗಾಗಿ ನಗರದಲ್ಲಿ ಸೋಂಕು ಸಮುದಾಯಕ್ಕೆ ಹರಡಿದೆ ಎಂಬುದು ನನ್ನ ಅನಿಸಿಕೆಯಾಗಿದೆ. ಆದರೆ, ಇದನ್ನು ಪರಿಶೀಲನೆ ನಡೆಸಿ ಅಧಿಕೃತವಾಗಿ ಐಸಿಎಂಆರ್‌ ದೃಢಪಡಿಸಬೇಕಾಗುತ್ತದೆ’ ಎಂದು ಹೇಳಿದ್ದಾರೆ.

‘ಬೇರೆ ಬೇರೆ ದೇಶಗಳಿಗೆ ಕೊರೋನಾ ಕಾಲಿಟ್ಟು 6 ತಿಂಗಳು ಕಳೆದಿದೆ. ಆದರೆ, ಭಾರತಕ್ಕೆ ಪ್ರವೇಶಿಸಿ 4 ತಿಂಗಳಾಗಿದ್ದು, ಈಗ ಸೋಂಕಿನ ಪ್ರಮಾಣ ಉತ್ತುಂಗಕ್ಕೇರಲು ಈಗ ಆರಂಭಿಸಿದೆ. ಇನ್ನು ಮುಂದೆ ದಿನೇ ದಿನೇ ಸೋಂಕಿತರ ಸಂಖ್ಯೆ ಇನ್ನಷ್ಟುಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಹೊರಗಿನಿಂದ ಬಂದವರು ಮಾತ್ರವಲ್ಲ ಮಾರುಕಟ್ಟೆ, ಬೀದಿ ವ್ಯಾಪಾರಿಗಳು, ಆಟೋ, ಕ್ಯಾಬ್‌ ಚಾಲಕರು, ಡಿಲೆವರಿ ಬಾಕ್ಸ್‌, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಚಾಲಕರು, ಕಂಟಕ್ಟರ್‌ಗಳು, ಪ್ರಯಾಣಿಕರು, ಆರೋಗ್ಯ ಕಾರ್ಯಕರ್ತರು ಸೇರಿದಂತೆ ಸಮುದಾಯದೊಳಗಿನ ಎಲ್ಲ ವರ್ಗದ ಜನರನ್ನೂ ರಾರ‍ಯಂಡಮ್‌ ಟೆಸ್ಟ್‌ ಮಾಡಬೇಕಾಗಿದೆ. ಆಗ ಮಾತ್ರ ಸೋಂಕು ವ್ಯಾಪಿಸುತ್ತಿರುವ ತೀವ್ರತೆ ತಿಳಿದು, ಯಾವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತದೆ. ರಾರ‍ಯಂಡಮ್‌ ಪರೀಕ್ಷೆ ಆಗದಿದ್ದರೆ ದೊಡ್ಡ ಮಟ್ಟದಲ್ಲಿ ಸಮುದಾಯಕ್ಕೆ ಸೋಂಕು ಹರಡಲಿದೆ’ ಎಂದು ಎಚ್ಚರಿಸಿದ್ದಾರೆ.

ಬಲಗೊಳ್ಳುತ್ತಿದೆ ವೈರಸ್‌:

‘ಕರ್ನಾಟಕ ಸೇರಿದಂತೆ ದೇಶದಲ್ಲಿ ವೈರಸ್‌ ಹೊಸ ರೂಪದಲ್ಲಿ ಬಲಗೊಳ್ಳುತ್ತಾ ಸಾಗಿದೆ. ಇದೇ ಸೋಂಕು ಹೆಚ್ಚಾಗಲು ಕಾರಣವಾಗಿದೆ. ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಲ್ಲಿ ಉತ್ತಂಗಕ್ಕೇರುವ ಸಾಧ್ಯತೆ ಇದೆ. ಪ್ರಕೃತಿ ಶಕ್ತಿ ಎಲ್ಲಕ್ಕಿಂತಲೂ ದೊಡ್ಡದು. ಸೋಂಕು ಸಮುದಾಯಕ್ಕೆ ಹಬ್ಬಿದಾಗ ಅದರಲ್ಲೂ ಯುವ ಹಾಗೂ ಮಧ್ಯವಯಸ್ಕರಿಗೆ ವ್ಯಾಪಿಸಿದಾಗ ಮಾತ್ರವೇ ಮನುಷ್ಯನ ದೇಹದಲ್ಲಿ ಪ್ರತಿರೋಧಕ ಶಕ್ತಿ ಬೆಳೆಯಲು ಸಾಧ್ಯ. ಸಮುದಾಯಕ್ಕೆ ಹಬ್ಬಿದ ಬಳಿಕವೇ ಇದು ಕಡಿಮೆಯಾಗುವುದು ಕೂಡ. ಈ ಮಧ್ಯೆ, ರೋಗ ನಿರೋಧ ಶಕ್ತಿ ಕಡಿಮೆ ಇರುವ ಮಕ್ಕಳು, ವೃದ್ಧರು ಮತ್ತು ಈಗಾಗಲೇ ರೋಗಗಳಿಂದ ಬಳಲುತ್ತಿರುವವರನ್ನು ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕಿದೆ. ಅವರು ಮನೆಯಿಂದ ಹೊರ ಬರದೆ, ಕಡ್ಡಾಯ ಮಾಸ್ಕ್‌ ಧರಿಸುವುದು, ಸ್ಯಾನಿಟೈಸಿಂಗ್‌, ಶುಚಿತ್ವ ಕಾಪಾಡಿಕೊಳ್ಳಬೇಕು ಎನ್ನುತ್ತಾರೆ’ ಇನ್ನು ಕೆಲ ತಜ್ಞರು.

ಸಮುದಾಯದಲ್ಲಿ ಕೊರೋನಾ ಹರಡುವಿಕೆ ತಡೆಯಲು ಪ್ರೈಮರಿ ಲೆವೆಲ್ ಟೆಸ್ಟ್ ಆರಂಭಿಸಿದ ಕೇರಳ!

ಐಸಿಎಂಆರ್‌ ದೃಢಪಡಿಸಲಿ

ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಸೋಂಕಿನ ಮೂಲ ಪತ್ತೆಯಾಗದ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಇದು ಸಮುದಾಯಕ್ಕೆ ಹರಡುತ್ತಿರುವ ಸೂಚನೆಯಾಗಿದೆ. ಹಾಗಾಗಿ ನಗರದಲ್ಲಿ ಸೋಂಕು ಸಮುದಾಯಕ್ಕೆ ಹರಡಿದೆ ಎಂಬುದು ನನ್ನ ಅನಿಸಿಕೆ. ಆದರೆ, ಇದನ್ನು ಪರಿಶೀಲನೆ ನಡೆಸಿ ಅಧಿಕೃತವಾಗಿ ಐಸಿಎಂಆರ್‌ ದೃಢಪಡಿಸಬೇಕಾಗುತ್ತದೆ.

ಡಾ.ಮಂಜುನಾಥ್‌, ಜಯದೇವ ಹೃದ್ರೋಗ ಸಂಸ್ಥೆ

Follow Us:
Download App:
  • android
  • ios