ಮಂಗಳೂರು(ಮೇ 31): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಕೊರೋನಾ ತಾಂಡವವಾಡುತ್ತಿದೆ. ಶುಕ್ರವಾರ ಒಂದು ದಿನ ಬ್ರೇಕ್‌ ನೀಡಿದ್ದ ಕೊರೋನಾ ಶನಿವಾರ ಮತ್ತೆ ಮಹಾಮಾರಿಯಂತೆ ಅಪ್ಪಳಿಸಿದೆ. ಶನಿವಾರ ಒಂದೇ ದಿನ 14 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ಪಾಸಿಟಿವ್‌ ಪ್ರಕರಣಗಳ ಸಂಖ್ಯೆ 119ಕ್ಕೆ ಏರಿದೆ. ಈ ನಡುವೆ ಐವರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಶನಿವಾರ ಪ್ರಯೋಗಾಲಯದಿಂದ ಒಟ್ಟು 198 ಮಂದಿಯ ವರದಿ ಬಂದಿದ್ದು, 14 ಪಾಸಿಟಿವ್‌ ಆಗಿದ್ದರೆ, 184 ವರದಿಗಳು ನೆಗೆಟಿವ್‌ ಆಗಿವೆ. 14 ಸೋಂಕಿತರಲ್ಲಿ 13 ಮಂದಿ ಮುಂಬೈನಿಂದ ಬಂದು ಕ್ವಾರಂಟೈನ್‌ನಲ್ಲಿ ಇದ್ದವರು. ಉಳಿದ ಒಬ್ಬರಿಗೆ ಸೋಮೇಶ್ವರದ ಸೋಂಕಿತ ಮಹಿಳೆಯ ದ್ವಿತೀಯ ಸಂಪರ್ಕದಿಂದ ಸೋಂಕು ಹರಡಿದೆ. ಇವರೆಲ್ಲರನ್ನು ಚಿಕಿತ್ಸೆಗಾಗಿ ಜಿಲ್ಲಾ ವೆನ್ಲಾಕ್‌ ಕೋವಿಡ್‌ ಆಸ್ಪತ್ರೆಗೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧು ರೂಪೇಶ್‌ ತಿಳಿಸಿದ್ದಾರೆ.

2 ಕುಟುಂಬದ ಐವರಿಗೆ ಸೋಂಕು:

ಮುಂಬೈನಿಂದ ಬಂದ 14 ಮಂದಿಯಲ್ಲಿ ಒಂದು ಕುಟುಂಬದ ಮೂವರಿಗೆ (24, 38, 48 ವರ್ಷದ ಗಂಡಸು), ಇನ್ನೊಂದು ಕುಟುಂಬದ ಇಬ್ಬರಿಗೆ (38 ವರ್ಷದ ಮಹಿಳೆ, 11 ವರ್ಷದ ಬಾಲಕಿ) ಸೋಂಕು ತಗುಲಿದೆ. ಇವರು ಕ್ರಮವಾಗಿ ಮೇ 21 ಹಾಗೂ ಮೇ 18ರಂದು ಮಂಗಳೂರಿಗೆ ಬಂದಿದ್ದರು. ಉಳಿದಂತೆ ಮುಂಬೈನಿಂದ ಆಗಮಿಸಿದವರಲ್ಲಿ 20, 21, 24, 24, 31, 31 ವರ್ಷದ ಯುವಕರಾಗಿದ್ದರೆ, 54, 61 ವರ್ಷ ಪ್ರಾಯದ ಪುರುಷರು, 26, 33, 54 ವರ್ಷದ ಮಹಿಳೆಯರು ಸೇರಿದ್ದಾರೆ. ಸ್ಥಳೀಯ ಒಂದು ಪ್ರಕರಣದಲ್ಲಿ ಸೋಮೇಶ್ವರ ಪಿಲಾರು ಎಂಬಲ್ಲಿನ ದಾರಂದಬಾಗಿಲುವಿನ 17 ವರ್ಷದ ಬಾಲಕನಲ್ಲಿ ಸೋಂಕು ಕಾಣಿಸಿಕೊಂಡಿದೆ.

ಐದು ಮಂದಿ ಗುಣಮುಖ:

ಕೊರೋನಾ ಸೋಂಕಿನಿಂದ ವೆನ್ಲಾಕ್‌ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದ ಐದು ಮಂದಿ ಗುಣಮುಖರಾಗಿದ್ದು, ಶನಿವಾರ ಆಸ್ಪತ್ರೆಯಿಂದ ಡಿಸ್ಚಾಜ್‌ರ್‍ ಆಗಿದ್ದಾರೆ. 29, 31, 33, 35 ವರ್ಷದ ಪುರುಷರು ಹಾಗೂ 55 ವರ್ಷದ ಮಹಿಳೆಯನ್ನು ಮನೆಗೆ ಕಳುಹಿಸಿಕೊಡಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 44 ಮಂದಿ ಗುಣಮುಖರಾದಂತಾಗಿದೆ.

ಡಿಕೆಶಿ ಹಗಲುಗನಸು, ಬಿಎಸ್‌ವೈ ಪೂರ್ಣಾವಧಿ ಸಿಎಂ ಆಗ್ತಾರೆ: ನಳಿನ್

ಇಬ್ಬರಿಗೆ ಐಸಿಯುವಿನಲ್ಲಿ ಚಿಕಿತ್ಸೆ: ಇಬ್ಬರು ರೋಗಿಗಳು ಕೊರೋನಾದೊಂದಿಗೆ ಇತರ ಕಾಯಿಲೆಯಿಂದ ಬಳಲುತ್ತಿರುವುದರಿಂದ ಅವರಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 76 ವರ್ಷದ ವ್ಯಕ್ತಿ ಮಧುಮೇಹ, ಅಧಿಕ ರಕ್ತದ ಒತ್ತಡ, ಹೃದಯ ತೊಂದರೆ ಹಾಗೂ ಕಾಲಿನ ಸೋಂಕಿನಿಂದ ಬಳಲುತ್ತಿದ್ದಾರೆ. 40 ವರ್ಷದ ಮಹಿಳೆ ಮಧುಮೇಹ, ಮೂತ್ರದ ಸೋಂಕು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಇಬ್ಬರಿಗೂ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 119 ಮಂದಿ ಸೋಂಕಿತರಲ್ಲಿ 66 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಕೊರೋನಾ ಕಾರಣದಿಂದ 7 ಮಂದಿ ಇದುವರೆಗೆ ಸಾವಿಗೀಡಾಗಿದ್ದಾರೆ.

ಇಂದು ಸಂಡೇ ಕರ್ಫ್ಯೂ ಇಲ್ಲ

ರಾಜ್ಯದಲ್ಲಿ ಭಾನುವಾರ ಸಂಪೂರ್ಣ ಕಫ್ರ್ಯೂವನ್ನು ರಾಜ್ಯ ಸರ್ಕಾರ ಹಿಂಪಡೆದಿದ್ದು, ಈ ಹಿಂದಿನಂತೆ ಭಾನುವಾರ ಕೂಡ ಎಲ್ಲ ಸೇವೆಗಳು ಜನತೆಗೆ ಲಭಿಸಲಿವೆ. ಬೆಳಗ್ಗೆ 7ರಿಂದ ರಾತ್ರಿ 7 ಗಂಟೆಯವರೆಗೆ ವ್ಯಾಪಾರ ವಹಿವಾಟು ನಡೆಸಲು ಅವಕಾಶವಿದ್ದು, ರಾತ್ರಿ 7ರಿಂದ ನಿಷೇಧಾಜ್ಞೆ ಮುಂದುವರಿಯಲಿದೆ. ಕೊರೋನಾ ಪ್ರಕರಣಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರತಿ ಭಾನುವಾರ ಸಂಪೂರ್ಣ ಕಫ್ರ್ಯೂವನ್ನು ಹೇರಲಾಗಿತ್ತು. ಕಳೆದ ಭಾನುವಾರ ಇದು ಕಟ್ಟುನಿಟ್ಟಾಗಿ ಪಾಲನೆಯಾಗಿತ್ತು. ಆದರೆ ಈ ಭಾನುವಾರ ನಿಷೇಧಾಜ್ಞೆಯನ್ನು ಸರ್ಕಾರ ಹಿಂಪಡೆದಿದೆ.