ಸ್ವಚ್ಚವಿಲ್ಲದ ಪಂಜರ, ತಾಯಿ ನಾಯಿಯಿಂದ ಬೇರ್ಪಡಿಸಿ ಮರಿಗಳ ಪ್ರದರ್ಶನ, ಗಾಯಗೊಂಡ ಪ್ರಾಣಿಗಳಿಗೆ ಸೂಕ್ತ ಚಿಕಿತ್ಸೆ ನೀಡದ್ದಕ್ಕೆ ಕ್ರಮ: ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ. ತ್ರಿಲೋಕಚಂದ್ರ 

ಬೆಂಗಳೂರು(ಜ.12): ನಗರದಲ್ಲಿ ಅನಧಿಕೃತವಾಗಿ ಸಾಕು ಪ್ರಾಣಿ ಮತ್ತು ಪಕ್ಷಿಗಳನ್ನು ಮಾರಾಟ ಮಾಡುತ್ತಿದ್ದ ಮಳಿಗೆಗಳ ಮೇಲೆ ದಾಳಿ ನಡೆಸಿದ ಬಿಬಿಎಂಪಿ ಹಾಗೂ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು 16 ಜಾತಿಯ 1,344 ಪ್ರಾಣಿ, ಪಕ್ಷಿಗಳನ್ನು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ಪ್ರಾಣಿ ಮತ್ತು ಪಕ್ಷಿಗಳ ಪೈಕಿ 823 ವಿದೇಶಿ ತಳಿಗಳಾಗಿದ್ದು, 521 ದೇಶಿ ತಳಿಯವಾಗಿದೆ. ಸಾಕು ಪ್ರಾಣಿಗಳ ಮಾರಾಟಗಾರಿಗೆ ಕಡ್ಡಾಯವಾಗಿ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಳ್ಳುವಂತೆ ಸೂಚನೆ ನೀಡಲಾಗಿತ್ತು. ಆದರೂ ನಗರದ ಬಹುತೇಕ ಸಾಕು ಪ್ರಾಣಿ ಮಾರಾಟಗಾರರು ನೋಂದಣಿ ಮಾಡಿಕೊಂಡಿಲ್ಲ. ಈ ಬಗ್ಗೆ ಸಾಕಷ್ಟುಸಂಸ್ಥೆಗಳು ಪಶುಸಂಗೋಪನೆ ಇಲಾಖೆ ಹಾಗೂ ಬಿಬಿಎಂಪಿ ಪಶುಪಾಲನಾ ವಿಭಾಗಕ್ಕೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಬುಧವಾರ ಬಿಬಿಎಂಪಿಯ ಪಶುಪಾಲನಾ ವಿಭಾಗ, ಪಶುಸಂಗೋಪನೆ ಇಲಾಖೆ ಹಾಗೂ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ಅಧಿಕಾರಿಗಳ ನೇತೃತ್ವದಲ್ಲಿ ಏಕ ಕಾಲಕ್ಕೆ ನಗರದ ವಿವಿಧ ಭಾಗದಲ್ಲಿ ಕಾರ್ಯಾಚರಣೆ ನಡೆಸಿ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಸಾಕು ಪ್ರಾಣಿ ಮತ್ತು ಪಕ್ಷಿಗಳನ್ನು ವಶಕ್ಕೆ ಪಡೆಯಲಾಗಿದೆ.

ಜ.15ರೊಳಗೆ 108 ವಾರ್ಡಲ್ಲಿ Namma Clinic ಆರಂಭ; ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌

ಒಟ್ಟು ಏಳು ತಂಡಗಳನ್ನು ರಚನೆ ಮಾಡಿಕೊಂಡು ಪರಿಶೀಲನೆ ನಡೆಸಲಾಯಿತು. ಈ ವೇಳೆ ಸ್ವಚ್ಚವಿಲ್ಲದ ಪಂಜರಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಾಣಿಗಳನ್ನು ಇಟ್ಟಿರುವುದು. ತಾಯಿ ನಾಯಿಯಿಂದ ಬೇರ್ಪಡಿಸಿದ ನಾಯಿ ಮರಿಗಳನ್ನು ಮಾರಾಟಕ್ಕೆ ಪ್ರದರ್ಶಿಸುವುದು. ಆಹಾರ ಅಥವಾ ನೀರಿನ ಸೌಕರ್ಯವಿಲ್ಲದಿರುವುದು. ಗಾಯಗೊಂಡ ಪ್ರಾಣಿಗಳಿಗೆ ಸೂಕ್ತಚಿಕಿತ್ಸೆ ನೀಡದಿರುವುದು ಪರಿಶೀಲನೆ ವೇಳೆ ಕಂಡು ಬಂದಿದೆ. ಚಿಕಿತ್ಸೆಯ ಅಗತ್ಯವಿರುವ ಹಾಗೂ ಗಂಭೀರ ಸ್ಥಿತಿಯಲ್ಲಿರುವ ಪ್ರಾಣಿಗಳನ್ನು ರಕ್ಷಿಸಿ, ಅಧಿಕೃತವಾಗಿ ಘೋಷಿಸಿರುವ ಪ್ರಾಣಿ ರಕ್ಷಣಾಗೃಹಗಳಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ನಗರದಲ್ಲಿ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಸಾಕು ಪ್ರಾಣಿ-ಪಕ್ಷಿ ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿ 1,344 ಬಗೆಯ ಪ್ರಾಣಿ ಪಕ್ಷಿಗಳನ್ನು ವಶಕ್ಕೆ ಪಡೆಯಲಾಗಿದೆ. ಅನಧಿಕೃತ ಮಾರಾಟಗಾರರಿಗೆ ದಂಡ ವಿಧಿಸಿ ಕಾನೂನು ಕ್ರಮ ಜರುಗಿಸಲಾಗುವುದು ಅಂತ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ. ತ್ರಿಲೋಕಚಂದ್ರ ತಿಳಿಸಿದ್ದಾರೆ. 

ವಶಕ್ಕೆ ಪಡೆದ ಪ್ರಾಣಿ ಪಕ್ಷಿಗಳ ವಿವರ

ಪ್ರಾಣಿ/ಪಕ್ಷಿ ಸಂಖ್ಯೆ
ಆಫ್ರಿಕನ್‌ ಪ್ಯಾರೆಟ್‌ 94
ಪ್ಯಾಟ್ರಿಜ್‌ 12
ಲವ್‌ ಬರ್ಡ್ಸ್ 302
ಫಿಂಚ್‌್ಸ 389
ಟರ್ಕಿ 1
ಕಾಕ್‌ಟೈಲ್‌ 21
ಆಫ್ರಿಕನ್‌ ಕ್ರೋವ್‌ 3
ರೆಡ್‌ ಇಯರಡ್‌ ಸ್ಲೈಡರ್‌ 1
ಪಾರಿವಾಳ 196
ಮೊಲ 108
ಬಾತುಕೋಳಿ 11
ಹಮ್‌ಸ್ಟರ್‌ 38
ಕೋಳಿ 103
ನಾಯಿ 34
ಬೆಕ್ಕು 12
ಇಲಿ 19
ಒಟ್ಟು 1,344