ಕಾರವಾರ: ಶಾಪಿಂಗ್‌ಗೆ ತೆರಳುತ್ತಿದ್ದ ತಂದೆ-ಮಗಳು, ಬೈಕ್‌ಗೆ ಬಸ್ ಡಿಕ್ಕಿ, ಸ್ಥಳದಲ್ಲೇ ಪುತ್ರಿ ಸಾವು
ದ್ವಿಚಕ್ರ ವಾಹನಕ್ಕೆ ಸೀಬರ್ಡ್ ಬಸ್ ಡಿಕ್ಕಿ ಹೊಡೆದ ಪರಿಣಾಮ ಪುತ್ರಿ ಸಾವನ್ನಪ್ಪಿದ್ದು, ತಂದೆಗೆ ಗಂಭೀರವಾದ ಗಾಯ.
ಕಾರವಾರ(ಡಿ.31): ಹೊಸ ವರ್ಷಕ್ಕೆ ಕೌಂಟ್‌ಡೌನ್ ದಿನದಂದೇ ಕಾರವಾರದ ಬಿಣಗಾದಲ್ಲಿ ಅಪಘಾತ ಸಂಭವಿಸಿದ ಪರಿಣಾಮ ಓರ್ವ ಯುವತಿ ಮೃತಪಟ್ಟ ಘಟನೆ ನಡೆದಿದೆ. ದ್ವಿಚಕ್ರ ವಾಹನಕ್ಕೆ ಸೀಬರ್ಡ್ ಬಸ್ ಡಿಕ್ಕಿ ಹೊಡೆದ ಪರಿಣಾಮ ಪುತ್ರಿ ಸಾವನ್ನಪ್ಪಿದ್ದು, ತಂದೆಗೆ ಗಂಭೀರವಾದ ಗಾಯಗಳಾಗಿದೆ. ಲವಿಟಾ ಜಾರ್ಜ್ ಫೆರ್ನಾಂಡೀಸ್ (13) ದುರ್ಘಟನೆಯಲ್ಲಿ ಸಾವಿಗೀಡಾದ ಬಾಲಕಿಯಾಗಿದ್ದಾಳೆ. ಬಾಲಕಿ ತಂದೆ ಜಾರ್ಜ್ ಫೆರ್ನಾಂಡೀಸ್ (41)ಗೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಟ್ಟೆ ಖರೀದಿಸುವ ಉದ್ದೇಶದಿಂದ ತಂದೆ- ಮಗಳು ಕಾರವಾರಕ್ಕೆ ಬರುತ್ತಿದ್ದರು. ಇದೇ ವೇಳೆ ಬೆಂಗಳೂರಿನಿಂದ ಕಾರವಾರಕ್ಕೆ ಬರುತ್ತಿದ್ದ ಸೀಬರ್ಡ್ ಬಸ್, ಆ್ಯಕ್ಟಿವಾ ಬೈಕ್‌ನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ತಲೆ ರಸ್ತೆಗೆ ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಭಾರತದಲ್ಲಿ ಸೀಟ್ ಬೆಲ್ಟ್ ಧರಿಸದೇ 16,397, ಹೆಲ್ಮೆಟ್ ಧರಿಸದೇ 47,000 ಸಾವು
ಗಂಭೀರವಾಗಿ ಗಾಯಗೊಂಡಿರುವ ಬಾಲಕಿ ತಂದೆ ಕಾರವಾರ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಕಾರವಾರ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತಕ್ಕೆ ಕಾರಣವಾದ ಸೀಬರ್ಡ್ ಬಸ್ ಅನ್ನು ಅಡ್ಡ ಹಾಕಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಆಕ್ಸಿಡೆಂಟ್ ನಡೆದ ಹಿನ್ನೆಲೆಯಲ್ಲಿ ಐಆರ್‌ಬಿ ವಿರುದ್ಧ ನಾಗರಿಕ ಹಿತರಕ್ಷಣಾ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ಅವೈಜ್ಞಾನಿಕ ಕಾಮಗಾರಿಯ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಸಮಿತಿ ಎಚ್ಚರಿಕೆ ನೀಡಿದೆ.