ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕಾ ಪ್ರದೇಶಾಭಿವೃದ್ಧಿಗೆ 1,249 ಎಕರೆ ಜಮೀನು ಗುರುತು
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆ.ಐ.ಎ.ಡಿ.ಬಿ) ವತಿಯಿಂದ ಮಂಡ್ಯ ಜಿಲ್ಲೆಯಲ್ಲಿ ಹೊಸದಾಗಿ ಕೈಗಾರಿಕಾ ಪ್ರದೇಶಾಭಿವೃದ್ಧಿಗಾಗಿ ಒಟ್ಟು 1,249.22 ಎಕರೆ ಜಮೀನನ್ನು ಗುರುತಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.
ಮಂಡ್ಯ : ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆ.ಐ.ಎ.ಡಿ.ಬಿ) ವತಿಯಿಂದ ಮಂಡ್ಯ ಜಿಲ್ಲೆಯಲ್ಲಿ ಹೊಸದಾಗಿ ಕೈಗಾರಿಕಾ ಪ್ರದೇಶಾಭಿವೃದ್ಧಿಗಾಗಿ ಒಟ್ಟು 1,249.22 ಎಕರೆ ಜಮೀನನ್ನು ಗುರುತಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.
ಕಾಂಗ್ರೆಸ್ ಶಾಸಕ ಮಧು ಜಿ.ಮಾದೇಗೌಡರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಮಂಗಳವಾರ ಲಿಖಿತ ಉತ್ತರ ನೀಡಿರುವ ಸಚಿವರು, ಕೆ.ಐ.ಎ.ಡಿ.ಬಿ. ಮಂಡಳಿಯ 384ನೇ ಸಭೆಯ ಅನುಮೋದನೆಯಂತೆ ಮಳವಳ್ಳಿ ತಾಲೂಕು ಬಿ.ಜಿ.ಪುರ ಹೋಬಳಿ, ಬಾಚನಹಳ್ಳಿ, ಪಂಡಿತಹಳ್ಳಿ, ಮಂಚನಹಳ್ಳಿ ಮತ್ತು ಮಂಚನಾಪುರ ಗ್ರಾಮಗಳಲ್ಲಿ ಒಟ್ಟು 1249.22 ಎಕರೆ ಜಮೀನನ್ನು ಹೊಸದಾಗಿ ಕೈಗಾರಿಕಾ ಪ್ರದೇಶಾಭಿವೃದ್ಧಿ ಪಡಿಸಲು ಕೆಐಎಡಿ ಕಾಯ್ದೆ 1966 ಕಲಂ 3(1), 1(3) ಮತ್ತು 28(1) ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲು ಬಾಕಿ ಇದೆ ಎಂದು ತಿಳಿಸಿದ್ದಾರೆ.
ಮಂಡಳಿಯಿಂದ ಮಂಡ್ಯ ಜಿಲ್ಲೆಯಲ್ಲಿ ಈಗಾಗಲೇ ತೂಬಿನಕೆರೆ (141 ಎಕರೆ), ಸೋಮನಹಳ್ಳಿ (154 ಎಕರೆ), ಗೆಜ್ಜಲಗೆರೆ (78.30 ಎಕರೆ), ಮತ್ತು ಹೆಬ್ಬಾಳ 2ನೇ ಹಂತ (193.43 ಎಕರೆ), ಕೈಗಾರಿಕಾ ಕೈಗಾರಿಕಾ ಪ್ರದೇಶಗಳಲ್ಲಿ ಒಟ್ಟು 566.76 ಎಕರೆ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
1,671.02 ಕೋಟಿ ರು. ಹೂಡಿಕೆ:
ಕಳೆದ 5 ವರ್ಷಗಳಲ್ಲಿ ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ ಹಾಗೂ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಸಭೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಒಟ್ಟು 30 ಬಂಡವಾಳ ಹೂಡಿಕೆ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗಳಿಂದ ಒಟ್ಟು 1,671.02 ಕೋಟಿ ರು. ಬಂಡವಾಳ ಹೂಡಿಕೆ ಆಗಲಿದೆ ಹಾಗೂ 4,809 ಉದ್ಯೋಗ ಸೃಷ್ಟಿ ಆಗಲಿದೆ ಎಂದು ಉತ್ತರಿಸಿದ್ದಾರೆ.
ಗೌರವಧನ ಪರಿಷ್ಕರಣೆ ಇಲ್ಲ:
ನಗರ ಸ್ಥಳೀಯ ಸಂಸ್ಥೆಗಳ ಮಹಾಪೌರರು, ಉಪ ಮಹಾಪೌರರು, ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರ ಮಾಸಿಕ ಗೌರವ ಧನ ಹೆಚ್ಚಿಸುವ ಪ್ರಸ್ತಾವನೆಯು ಸರ್ಕಾರದ ಪರಿಶೀಲನೆಯಲ್ಲಿ ಇರುವುದಿಲ್ಲ ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಉತ್ತರಿಸಿದ್ದಾರೆ.
ಶಾಸಕ ಮಧು ಜಿ.ಮಾದೇಗೌಡ ಅವರು 2016ರ ನಂತರ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರ ಗೌರವಧನ ಪರಿಷ್ಕರಣೆ ಆಗದಿರುವ ಬಗ್ಗೆ ಸಚಿವರ ಗಮನ ಸೆಳೆದಿದ್ದರು.
ಇದಕ್ಕೆ ಲಿಖಿತ ಉತ್ತರ ನೀಡಿರುವ ಸಚಿವರು, ಗೌರವಧನ ಪರಿಷ್ಕರಿಸುವುದಕ್ಕಾಗಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆ ಎರಡು ಬಾರಿ (2023ರ ಮೇ 02 ಮತ್ತು 2024ರ ಜ. 23) ತಿರಸ್ಕರಿಸಿದೆ. ಹಾಗಾಗಿ, ಪ್ರಸ್ತುತ ಗೌರವಧನ ಪರಿಷ್ಕರಣೆಯ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿ ಇರುವುದಿಲ್ಲ ಎಂದಿದ್ದಾರೆ.