ಎನ್‌.ಎಲ್‌.ಶಿವಮಾದು

ಬೆಂಗಳೂರು(ನ.05): ನಗರದಲ್ಲಿ ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳದ ಸಾವಿರಾರು ಮನೆ ಮಾಲೀಕರಿಂದ ಮಾಸಿಕ ಸರಾಸರಿ 3 ಕೋಟಿಯನ್ನು ದಂಡ ವಸೂಲಿ ಮಾಡುತ್ತಿದ್ದರೂ ಜನರು ಮಾತ್ರ ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳುವಲ್ಲಿ ನಿರ್ಲಕ್ಷ್ಯ ಮುಂದುವರಿಸಿದ್ದಾರೆ.

ನಗರದಲ್ಲಿ 30/40 ಅಡಿ ನಿವೇಶನದಲ್ಲಿ ಮನೆಗಳನ್ನು ನಿರ್ಮಿಸುವ ಪ್ರತಿಯೊಬ್ಬರೂ ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳಬೇಕು ಎಂಬ ನಿಯಮವಿದ್ದರೂ ಪಾಲಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಇತ್ತೀಚಿನ ದಿನಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳದವರಿಗೆ ನೀರಿನ ಸಂಪರ್ಕವೇ ಕಲ್ಪಿಸುತ್ತಿಲ್ಲ. ಆದರೆ, ಈಗಾಗಲೇ ಸಂಪರ್ಕ ಪಡೆದಿದ್ದು, ಅಳವಡಿಸಿಕೊಳ್ಳದವರಿಗೆ ದಂಡ ವಿಧಿಸಲಾಗುತ್ತಿದೆ.

ಮಾಸಿಕ ಸರಾಸರಿ 50 ಸಾವಿರ ಮನೆಗಳಿಗೆ ದಂಡ ವಿಧಿಸಲಾಗುತ್ತಿದ್ದು, ಕಳೆದ 4 ತಿಂಗಳಿನಲ್ಲಿಯೇ 12.13 ಕೋಟಿ ದಂಡ ವಿಧಿಸಲಾಗಿದೆ. ಜೂನ್‌ನಲ್ಲಿ .3.05 ಕೋಟಿ, ಜುಲೈನಲ್ಲಿ 3.22 ಕೋಟಿ, ಆಗಸ್ಟ್‌ನಲ್ಲಿ 3.04 ಕೋಟಿ ಮತ್ತು ಸೆಪ್ಟಂಬರ್‌ನಲ್ಲಿ 2.82 ಕೋಟಿ ದಂಡವನ್ನು ಬೆಂಗಳೂರು ಜಲಮಂಡಳಿ ವಿಧಿಸಿದೆ.

ದಂಡ ಪ್ರಮಾಣ:

2009ರಲ್ಲಿ 1,200 ಚದರ ಅಡಿಯಲ್ಲಿ ನಿರ್ಮಾಣಗೊಳ್ಳುವ ಎಲ್ಲ ಕಟ್ಟಡಗಳಿಗೂ ಮಳೆ ನೀರು ಕೊಯ್ಲು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು ಸರ್ಕಾರ ಆದೇಶಿಸಿತ್ತು. ನಂತರದ ದಿನಗಳಲ್ಲಿ ಸಾಕಷ್ಟು ಜಾಗೃತಿ ಮೂಡಿಸಲಾಯಿತು. ಬಳಿಕ ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳದ ಕಟ್ಟಡಗಳಿಗೆ 2017ರಿಂದಲೂ ದಂಡ ವಿಧಿಸಲಾಗುತ್ತಿದೆ. ವಸತಿ ಕಟ್ಟಡಗಳಿಗೆ ನೀರು ಮತ್ತು ಒಳಚರಂಡಿ ಸಂಪರ್ಕ ಶುಲ್ಕದ ಒಟ್ಟು ಮೊತ್ತದ ಮೊದಲ ಮೂರು ತಿಂಗಳು ಶೇ.50ರಷ್ಟು ದಂಡ ಮತ್ತು ಮೂರು ತಿಂಗಳ ನಂತರವೂ ಅಳವಡಿಸಿಕೊಳ್ಳದಿದ್ದರೆ ಶೇ.100 ರಷ್ಟು ದಂಡ ವಿಧಿಸಲಾಗುತ್ತದೆ. ವಾಣಿಜ್ಯ ಕಟ್ಟಡಗಳಿಗೆ ಮೊದಲ ಮೂರು ತಿಂಗಳು 100 ರಷ್ಟು ಮತ್ತು ನಂತರದಲ್ಲಿ ಶೇ.200 ರಷ್ಟು ದಂಡ ವಸೂಲು ಮಾಡಲಾಗುತ್ತದೆ.

ಚಿಕ್ಕಬಳ್ಳಾಪುರ : ನೀರಿನ ಸಮಸ್ಯೆ ನೀಗಿಸಲು ಹೊಸ ಕ್ರಮ

ಮಳೆ ನೀರಿನಿಂದಲೇ 15 ಟಿಎಂಸಿ ಲಭ್ಯ:

ನಗರದಲ್ಲಿ ಮಳೆ ನೀರು ಕೊಯ್ಲು ಅಳವಡಿಸಿಕೊಂಡರೆ ನೀರಿನ ವಿಚಾರದಲ್ಲಿ ಬೆಂಗಳೂರು ನಗರ ಸ್ವಾವಲಂಬಿಯಾಗಬಹುದು. ನಗರದಲ್ಲಿ ವಾರ್ಷಿಕ ಸರಾಸರಿ 80 ಸೆಂ.ಮೀ. ಮಳೆ ಬೀಳುತ್ತದೆ. ಅಂದರೆ ಸುಮಾರು 15 ಟಿಎಂಸಿ ಆಗಲಿದೆ. ನಗರದ ಎಲ್ಲ ಕೆರೆಗಳನ್ನು ಅಚ್ಚುಕಟ್ಟಾಗಿ ಇರಿಸಿದರೆ 35 ಟಿಎಂಸಿ ನೀರು ಸಂಗ್ರಹಿಸಬಹುದು. ಆದರೆ, ನಗರದಲ್ಲಿನ ಕೆರೆಗಳ ಸಾಮರ್ಥ್ಯ 35 ಟಿಎಂಸಿಯಿಂದ ಎರಡು ಟಿಎಂಸಿಗೆ ಕುಸಿದಿದೆ ಎಂಬುದನ್ನು ಐಐಎಸ್ಸಿ ವಿಜ್ಞಾನಿ ಟಿ.ವಿ.ರಾಮಚಂದ್ರ ನೇತೃತ್ವದ ಅಧ್ಯಯನ ತಂಡ ಎರಡು ವರ್ಷಗಳ ಹಿಂದೆಯೇ ವರದಿ ನೀಡಿತ್ತು. ಆದರೂ ಜನರು ಮಾತ್ರ ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳಲು ಆಸಕ್ತಿ ತೋರುತ್ತಿಲ್ಲ ಎಂದು ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮ್ಯಾನ್‌ಹೋಲ್‌ ಉಕ್ಕಲು ಕಟ್ಟಡಗಳ ನೀರೇ ಕಾರಣ:

ರಾಜಕಾಲುವೆ ಮತ್ತು ಕೆರೆಗಳಿಗೆ ನೀರು ಹರಿಯದಿರುವುದು ಮತ್ತು ವ್ಯವಸ್ಥಿತವಾಗಿ ಮಳೆ ನೀರು ಸಂಗ್ರಹವಾಗದಿರುವುದೇ ನಗರದಲ್ಲಿ ಮಳೆ ಬಿದ್ದಾಗ ಸಾಕಷ್ಟುಅವಾಂತರ ಸೃಷ್ಟಿಯಾಗುವಂತೆ ಮಾಡುತ್ತಿದೆ. ಅನೇಕ ಕಡೆಗಳಲ್ಲಿ ಕಟ್ಟಡಗಳ ನೀರನ್ನು ನೇರವಾಗಿ ಮ್ಯಾನ್‌ಹೋಲ್‌ಗಳಿಗೆ ಹರಿಯುವಂತೆ ಮಾಡಲಾಗಿದೆ. ಇದರ ಪರಿಣಾಮ ಮಳೆ ಬಿದ್ದ ಸಂದರ್ಭದಲ್ಲಿ ಮ್ಯಾನ್‌ಹೋಲ್‌ಗಳು ಉಕ್ಕಿ ಹರಿಯುತ್ತಿವೆ.

ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳದ ಗ್ರಾಹಕರನ್ನು ಜಲಮಂಡಳಿಯು ಗಂಭೀರವಾಗಿ ಪರಿಗಣಿಸಿದ್ದು, ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳದವರಿಗೆ ಯಾವುದೇ ಕಾರಣಕ್ಕೂ ಸಂಪರ್ಕ ನೀಡದಂತೆಯೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಜಲಮಂಡಳಿ ಪ್ರಧಾನ ಎಂಜಿನಿಯರ್‌ ಶಿವಪ್ರಸಾದ್‌ ತಿಳಿಸಿದ್ದಾರೆ. 

ದಂಡದ ಪ್ರಮಾಣ

ತಿಂಗಳು ದಂಡ (ಕೋಟಿ ) ಅಳವಡಿಸಿಕೊಳ್ಳದ ಗ್ರಾಹಕರು

ಜೂನ್‌ 3.05 55,072
ಜುಲೈ 3.22 53,951
ಆಗಸ್ಟ್‌ 3.04 52,688
ಸೆಪ್ಟಂಬರ್‌ 2.82 51,311
ಒಟ್ಟು 12.13 2,12,022